ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬರ್‌ ಒನ್‌ ಪಟ್ಟಕ್ಕೆ ಕನ್ನಡತಿಯರ ಪೈಪೋಟಿ

Last Updated 24 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕನ್ನಡ ಸಿನಿಮಾಗಳಲ್ಲಿ ಮಿಂಚುವ ನಟಿಯರು ನೆರೆಯ ತೆಲುಗು, ತಮಿಳು ಚಿತ್ರರಂಗದತ್ತ ದೃಷ್ಟಿ ಹರಿಸುವುದು ಸರ್ವೇ ಸಾಮಾನ್ಯ. ಈ ರೇಸ್‌ನಲ್ಲಿ ಬೆರಳೆಣಿಕೆಯಷ್ಟು ಹೀರೊಯಿನ್‌ಗಳಿಗಷ್ಟೇ ಯಶಸ್ಸು ಲಭಿಸುತ್ತದೆ. ಈ ಯಶಸ್ಸನ್ನು ದೀರ್ಘಕಾಲ ಉಳಿಸಿಕೊಳ್ಳುವುದು ನಿಜಕ್ಕೂ ಸವಾಲು.

ಕನ್ನಡತಿಯರು ಟಾಲಿವುಡ್‌ ಸೆಳೆತಕ್ಕೆ ಏಕೆ ಸಿಲುಕುತ್ತಾರೆ ಎನ್ನುವುದು ಬಹುತೇಕರ ಪ್ರಶ್ನೆ. ಅಲ್ಲಿ ಸಿಗುವ ದೊಡ್ಡ ಮೊತ್ತದ ಸಂಭಾವನೆ, ಪ್ರಚಾರವೇ ಈ ಮೋಹಕ್ಕೆ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ. ಅಲ್ಲದೇ, ಸಿನಿಮಾವೊಂದು ಗಲ್ಲಾಪೆಟ್ಟಿಗೆಯಲ್ಲಿ ಗೆಲುವು ಕಂಡರೆ ಅಲ್ಲಿನ ಎಲ್ಲಾ ಸ್ಟಾರ್‌ನಟರ ಜೊತೆಗೂ ನಟಿಸಲು ಸುಲಭವಾಗಿ ಅವಕಾಶ ಸಿಗುತ್ತದೆ ಎಂಬುದು ನಟಿಯರ ಅಂಬೋಣ.

ಒಂದು ಕಾಲದಲ್ಲಿ ಕನ್ನಡತಿ ಸೌಂದರ್ಯ ತೆಲುಗಿನಲ್ಲಿ ಮನೆ ಮಾತಾಗಿದ್ದರು. ಕೆಲವರು ಟಾಲಿವುಡ್‌ನ ಬಾಗಿಲು ಬಡಿದು ಬಂದರೆ; ಮತ್ತೆ ಕೆಲವರು ಅಲ್ಲಿಯೇ ಗಟ್ಟಿಯಾಗಿ ನೆಲೆಯೂರಿದ್ದಾರೆ. ಅಂತಹವರಲ್ಲಿ ಮೊದಲಿಗೆ ಕೇಳಿಬರುವ ಹೆಸರು ‘ಬಾಹುಬಲಿ’ ಚಿತ್ರದ ಖ್ಯಾತಿಯ ಅನುಷ್ಕಾ ಶೆಟ್ಟಿಯದ್ದು.

ರಮ್ಯಾ, ಪ್ರಣೀತಾ ಸುಭಾಷ್‌, ಕೃತಿ ಕರಬಂಧ, ಸಂಜನಾ ಗರ್ಲಾನಿ, ಸಂಚಿತಾ ಪಡುಕೋಣೆ, ನಂದಿತಾ ಶ್ವೇತಾ, ಹರಿಪ್ರಿಯಾ, ನಭಾ ನಟೇಶ್‌, ಪ್ರಿಯಾಮಣಿ ಹೀಗೆ ತೆಲುಗಿನಲ್ಲಿ ನಟಿಸಿದ ಕನ್ನಡದ ನಟಿಯರ ಪಟ್ಟಿ ದೊಡ್ಡದಿದೆ. ಇತ್ತೀಚೆಗೆ ರಚಿತಾ ರಾಮ್ ‘ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ, ಈ ಎಲ್ಲರಿಗೂ ಪೂಜಾ ಹೆಗ್ಡೆ ಹಾಗೂ ರಶ್ಮಿಕಾ ಮಂದಣ್ಣ ಅವರಷ್ಟು ಯಶಸ್ಸು ಲಭಿಸಿಲ್ಲ.

ಪ್ರಸ್ತುತ ತೆಲುಗಿನಲ್ಲಿ ಕಾಜಲ್‌ ಅಗರ್‌ವಾಲ್, ಸಮಂತಾ ಅಕ್ಕಿನೇನಿ, ಅನುಷ್ಕಾ ಶೆಟ್ಟಿ, ರಾಕುಲ್‌ ಪ್ರೀತಿ ಸಿಂಗ್, ತಮನ್ನಾ ಭಾಟಿಯಾ ಅವರ ಅಬ್ಬರ ಕಡಿಮೆಯಾಗಿದೆ. ಈಗ ಪೂಜಾ ಹೆಗ್ಡೆ ಮತ್ತು ರಶ್ಮಿಕಾ ಮಂದಣ್ಣ ಅವರದ್ದೇ ಕಾರುಬಾರು. ಒಂದರ್ಥದಲ್ಲಿ ಕನ್ನಡತಿಯರ ನಡುವೆಯೇ ಟಾಲಿವುಡ್‌ನಲ್ಲಿ ನಂಬರ್‌ ಒನ್‌ ನಟಿಯ ಪಟ್ಟಕ್ಕೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ರಶ್ಮಿಕಾಗಿಂತಲೂ ಮೊದಲೇ ಪೂಜಾ ತೆಲುಗಿಗೆ ಕಾಲಿಟ್ಟವರು. ಹಿಂದಿ, ತಮಿಳು ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮಹೇಶ್‌ಬಾಬು ಜೊತೆಗೆ ನಟಿಸಿದ ‘ಮಹರ್ಷಿ’ ಚಿತ್ರದ ಗೆಲುವು ಅವರ ನಟನೆಯ ದಿಕ್ಕನ್ನೇ ಬದಲಾಯಿಸಿತು. ಕಳೆದ ವರ್ಷ ತೆರೆಕಂಡ ಹಿಂದಿಯ ‘ಹೌಸ್‌ಫುಲ್‌ 4’ ಸಿನಿಮಾದಲ್ಲಿನ ನಟನೆಯೂ ಪ್ರೇಕ್ಷಕರ ಮೆಚ್ಚುಗೆ ಗಟ್ಟಿಸಿತು.

ಅಲ್ಲು ಅರ್ಜುನ್‌ ಜೊತೆಗೆ ನಟಿಸಿದ ‘ಅಲಾ ವೈಕುಂಠಪುರಮುಲೋ’ ಚಿತ್ರ ಸೂಪರ್‌ ಹಿಟ್‌ ಆಗಿದ್ದು ಅವರ ಅದೃಷ್ಟದ ಬಾಗಿಲನ್ನು ತೆರೆದಿದೆ. ಈಗ ಅವರು ‘ಕಭಿ ಈದ್‌ ಕಭಿ ದಿವಾಳಿ’ ಚಿತ್ರದ ಮೂಲಕ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಜೊತೆಗೆ ಹೆಜ್ಜೆಹಾಕಲು ಸಜ್ಜಾಗಿದ್ದಾರೆ. ಆಕೆಯ ಬಣ್ಣದ ಬುಟ್ಟಿಯಲ್ಲಿ ‘ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್’, ‘ಜಾನ್‌’ ಚಿತ್ರಗಳೂ ಇವೆ.

ರಶ್ಮಿಕಾ ತೆಲುಗಿಗೆ ಎಂಟ್ರಿ ಪಡೆದಿದ್ದು ‘ಚಲೋ’ ಚಿತ್ರದ ಮೂಲಕ. ಇದು ಆಕೆಗೆ ಯಶಸ್ಸು ತಂದುಕೊಡಲಿಲ್ಲ. ವಿಜಯ್‌ ದೇವರಕೊಂಡ ಜೊತೆಗೆ ನಟಿಸಿದ ‘ಗೀತ ಗೋವಿಂದಂ’ ಚಿತ್ರದ ಯಶಸ್ಸು ಅವರಿಗೆ ಟಾಲಿವುಡ್‌ನಲ್ಲಿ ಭದ್ರನೆಲೆ ಒದಗಿಸಿತು. ‘ದೇವದಾಸ್‌’, ‘ಡಿಯರ್‌ ಕಾಮ್ರೇಡ್‌’ ಚಿತ್ರಗಳಿಂದ ಸೋತು ಕೆಂಗೆಟ್ಟಿದ್ದ ಆಕೆಗೆ ಮಹೇಶ್‌ ಬಾಬು ಜೊತೆಗೆ ನಟಿಸಿದ ‘ಸರಿಲೇರು ನೀಕೆವ್ವರು’ ಚಿತ್ರದ ಯಶಸ್ಸು ಅವಕಾಶದ ಹೆಬ್ಬಾಗಿಲನ್ನು ತೆರೆದಿದೆ. ನಿತಿನ್‌ ಜೊತೆಗೆ ನಟಿಸಿದ ‘ಭೀಷ್ಮ’ ಚಿತ್ರದಲ್ಲಿನ ಆಕೆಯ ನಟನೆಯೂ ಪ್ರೇಕ್ಷಕರ ಮನ ಸೆಳೆದಿದೆ.

ಸದ್ಯ ರಶ್ಮಿಕಾ ಅವರು ಅಲ್ಲು ಅರ್ಜುನ್‌ ನಾಯಕರಾಗಿರುವ ಇನ್ನೂ ಹೆಸರಿಟ್ಟಿರದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿರಂಜೀವಿ ನಟನೆಯ ‘ಆಚಾರ್ಯ’ ಚಿತ್ರದಲ್ಲೂ ಅವರು ರಾಮ್ ಚರಣ್‌ ಅವರಿಗೆ ಜೋಡಿಯಾಗಲಿದ್ದಾರೆ ಎಂಬ ಸುದ್ದಿಯೂ ಇದೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT