ಶನಿವಾರ, ಏಪ್ರಿಲ್ 1, 2023
28 °C

ಮರು ಚಿಂತನೆ ಸೂಕ್ತ...: 'ಹೆಡ್‌ ಬುಷ್‌' ಬಗ್ಗೆ ಸಚಿವ ಸುನಿಲ್‌ ಕುಮಾರ್‌ ಟ್ವೀಟ್‌

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಾಲಿ ಧನಂಜಯ್‌ ಅವರ ನಟನೆ ‘ಹೆಡ್‌ ಬುಷ್‌’ ಸಿನಿಮಾದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕನ್ನಡ–ಸಂಸ್ಕೃತಿ ಮತ್ತು ಇಂಧನ ಸಚಿವ ಸುನಿಲ್ ಕುಮಾರ್‌ ‘ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕೃತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ’ ಎಂದಿದ್ದಾರೆ.

ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾಲಿ ಧನಂಜಯ ಅಭಿನಯದ ಹೆಡ್‌ಬುಷ್ ಚಿತ್ರ ವಿವಾದಕ್ಕೆ ಸಿಲುಕಿದ್ದು, ವೀರಗಾಸೆ ಸಂಸ್ಕೃತಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಬುಧವಾರ ಟ್ವೀಟ್‌ ಮಾಡಿರುವ ಸಚಿವ ಸುನಿಲ್‌ ಕುಮಾರ್‌, ‘ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನವಾಗಿದೆ ಎಂಬ ಚರ್ಚೆ ಮಾಧ್ಯಮ ಹಾಗೂ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕೃತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಅವರು ಹೇಳಿದ್ದಾರೆ.

ಮುಂದುವರಿದು, ‘ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ’ ಎಂದು ಅವರು ತಿಳಿಸಿದ್ದಾರೆ.

‘ಹೆಡ್‌ ಬುಷ್‌ ಸಿನಿಮಾದಲ್ಲಿ ವೀರಗಾಸೆ ಕಲಾವಿದನಿಗೆ ಒದೆಯಲಾಗಿದೆ. ಇದು ವೀರಭದ್ರನಿಗೆ ಮಾಡಿದ ಅಪಮಾನ’ ಎಂದು ಆರೋಪಿಸಲಾಗುತ್ತಿದೆ. ಈ ಕುರಿತ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ನಟ ಡಾಲಿ ಧನಂಜಯ್‌ ಅವರು ಸ್ಪಷ್ಟನೆಯನ್ನೂ ನೀಡಿದ್ದು, 'ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸೆಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ, ಕೂಲಂಕಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.