ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್‌ ‘ಪೇ ಪರ್‌ ವ್ಯೂ’ ಯೋಜನೆ ಅಂತ್ಯ?

Published 24 ಮೇ 2024, 0:46 IST
Last Updated 24 ಮೇ 2024, 0:46 IST
ಅಕ್ಷರ ಗಾತ್ರ
ಅಮೆಜಾನ್‌ನ ಪ್ರೈಂ ವಿಡಿಯೊ ಡೈರೆಕ್ಟ್‌(ಪಿವಿಡಿ) ವೇದಿಕೆಯಲ್ಲಿ ‘ಪೇ ಪರ್‌ ವ್ಯೂ’ ಯೋಜನೆ ಗಳಿಕೆ ದೃಷ್ಟಿಯಿಂದ ಒಂದಷ್ಟು ಸಿನಿಮಾಗಳಿಗೆ ಆಮ್ಲಜನಕವಾಗಿತ್ತು. ಪ್ರಮುಖ ಒಟಿಟಿ ವಾಹಿನಿ ಆ ಕಾರ್ಯಕ್ರಮವನ್ನು ನಿಲ್ಲಿಸಲು ಸಜ್ಜಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ...

ಕನ್ನಡ ಸಿನಿಮಾಗಳನ್ನು ಜನ ಚಿತ್ರಮಂದಿರಗಳಿಗೆ ಬಂದು ನೋಡುತ್ತಿಲ್ಲ. ಜನ ಬಾರದ ಸಿನಿಮಾಗಳನ್ನು ಬಿಡುಗಡೆ ನಂತರ ಯಾವ ವೇದಿಕೆಗಳೂ ಖರೀದಿಸುತ್ತಿಲ್ಲ. ಕನ್ನಡ ಚಿತ್ರರಂಗ ಕೋವಿಡ್‌ ಬಳಿಕ ಎದುರಿಸುತ್ತಿರುವ ಗಂಭೀರ ಸಮಸ್ಯೆಯಿದು. ಇಂತಹ ಸಮಯದಲ್ಲಿ ಕೆಲವಷ್ಟು ಸಿನಿಮಾಗಳಿಗೆ ಆದಾಯ ಗಳಿಕೆ ದೃಷ್ಟಿಯಿಂದ ಆಸರೆಯಾಗಿರುವುದು ಅಮೆಜಾನ್‌ನ ಪ್ರೈಂ ವಿಡಿಯೊ ಡೈರೆಕ್ಟ್‌(ಪಿವಿಡಿ) ವೇದಿಕೆ. 

ಏನಿದು ಕಾರ್ಯಕ್ರಮ?

ಇತ್ತೀಚಿನ ವರ್ಷಗಳಲ್ಲಿ ಜನರು ಚಿತ್ರಮಂದಿರಗಳಿಗಿಂತ ಹೆಚ್ಚಾಗಿ ಮನೆಯಲ್ಲೇ ಕುಳಿತು ಸಿನಿಮಾ ನೋಡಲು ಇಷ್ಟಪಡುತ್ತಾರೆ. ಇದನ್ನು ಲಾಭವಾಗಿಸಿಕೊಂಡು ಮೊಬೈಲ್‌, ಟಿವಿ, ಇಂಟರ್‌ನೆಟ್‌ಗಳಲ್ಲಿ ಸಿನಿಮಾ, ವೆಬ್‌ ಸಿರೀಸ್‌ಗಳನ್ನು ನೀಡುವ ಒಟಿಟಿ (ಓವರ್ ದಿ ಟಾಪ್‌) ಮನರಂಜನಾ ವಾಹಿನಿಗಳು ಬಹುಬೇಗ ಜನಪ್ರಿಯಗೊಂಡವು. ವಿದೇಶಿ ಮೂಲದ ಅಮೆಜಾನ್‌, ನೆಟ್‌ಫ್ಲಿಕ್ಸ್‌ಗಳು ನಮ್ಮ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಂತೆ, ನಮ್ಮಲ್ಲಿನ ಮನರಂಜನಾ ವಾಹಿನಿಗಳಾದ ಜೀ, ಕಲರ್ಸ್‌, ಸೋನಿ, ಸ್ಟಾರ್‌ ವಾಹಿನಿಗಳು ತಮ್ಮ ಒಟಿಟಿ ವೇದಿಕೆಗಳ ಬಲವರ್ಧನೆಗೊಳಿಸಿದವು.

ಪ್ರಾರಂಭದಲ್ಲಿ ಸಿನಿಮಾವೊಂದು ಚಿತ್ರಮಂದಿರದಲ್ಲಿ ಬಿಡುಗಡೆಗೆಯಾಗುವ ಮೊದಲೇ, ಅದರ ಒಟಿಟಿ ಪ್ರಸಾರ ಹಕ್ಕನ್ನು ಖರೀದಿಸಲಾಗುತ್ತಿತ್ತು. ಈ ಖರೀದಿಯಲ್ಲಿ ಅಮೆಜಾನ್‌ ಮುಂಚೂಣಿಯಲ್ಲಿತ್ತು. ನೆಟ್‌ಫ್ಲಿಕ್ಸ್‌ ಕನ್ನಡ ಸಿನಿಮಾಗಳಿಗೆ ಮಣೆ ಹಾಕಿದ್ದು ವಿರಳ. ಜೀ, ಕಲರ್ಸ್‌, ಸ್ಟಾರ್‌, ಉದಯ ವಾಹಿನಿಗಳು ಕೂಡ ಸ್ಯಾಟ್‌ಲೈಟ್‌ ಹಕ್ಕಿನ ಜೊತೆಗೆ ಒಟಿಟಿ ಹಕ್ಕನ್ನೂ ಖರೀದಿಸುತ್ತಿದ್ದವು. ಕ್ರಮೇಣವಾಗಿ ಈ ಖರೀದಿ ನಿಂತಿತು. ಪ್ರಸ್ತುತ ಅಮೆಜಾನ್‌ ಹೊರತುಪಡಿಸಿ ಯಾವ ವಾಹಿನಿಯೂ, ಒಟಿಟಿಯೂ ಸ್ಟಾರ್‌ ನಟನಿಲ್ಲದ, ದೊಡ್ಡ ನಿರ್ಮಾಣ ಸಂಸ್ಥೆಯದಲ್ಲದ ಕನ್ನಡ ಸಿನಿಮಾ ಖರೀದಿಸುತ್ತಿಲ್ಲ ಎನ್ನುವ ಸ್ಥಿತಿಗೆ ಬಂದುನಿಂತಿದೆ.

ಈ ಹಂತದಲ್ಲಿ ಅಮೆಜಾನ್‌ ಹೈಬ್ರಿಡ್‌ ಡೀಲ್‌ ಪರಿಚಯಿಸಿತು. ಅಂದರೆ ಅದು ಆರು ತಿಂಗಳು ಅಥವಾ ವರ್ಷದ ಅವಧಿಗೆ ಸಿನಿಮಾದ ಒಟಿಟಿ ಹಕ್ಕನ್ನು ಖರೀದಿಸುತ್ತದೆ. ಆ ಅವಧಿ ಮುಗಿದ ಬಳಿಕ ಸಿನಿಮಾ ಹಕ್ಕು ನಿರ್ಮಾಪಕರಿಗೆ ಮರಳುತ್ತದೆ. ಇದು ಹೆಚ್ಚು ಲಾಭದಾಯಕವಾಗದ ಕಾರಣ ‘ಪೇ ಪರ್‌ ವ್ಯೂ’ ಎಂಬ ಕಾರ್ಯಕ್ರಮ ಪರಿಚಯಿಸಿತು. ಈ ಯೋಜನೆಯಡಿ ಸಿನಿಮಾ ಆಯ್ಕೆಗೊಂಡರೆ ನಿರ್ಮಾಪಕ ಅಮೆಜಾನ್‌ ಪ್ರೈಂನಲ್ಲಿ ಸಿನಿಮಾ ಪ್ರಸಾರ ಮಾಡಬಹುದು. ಒಬ್ಬ ವೀಕ್ಷಕ ಸಿನಿಮಾವನ್ನು ಒಂದು ಗಂಟೆ ವೀಕ್ಷಿಸಿದರೆ ಅಮೆಜಾನ್‌ ನಿರ್ಮಾಪಕನಿಗೆ ₹3–8 ವರೆಗೆ ನೀಡುತ್ತದೆ. ಎರಡು ಗಂಟೆಯ ಸಿನಿಮಾ ಎಂದರೆ ಒಬ್ಬ ಪ್ರೇಕ್ಷಕನಿಂದ ನಿರ್ಮಾಪಕನಿಗೆ ₹6–12 ಬರುತ್ತದೆ. ಇದರ ಡ್ಯಾಶ್‌ಬೋರ್ಡ್‌ ಅನ್ನು ನಿರ್ಮಾಪಕನಿಗೆ ಅಥವಾ ಅಮೆಜಾನ್‌ನಲ್ಲಿ ಸಿನಿಮಾವನ್ನು ಅಪ್‌ಲೋಡ್‌ ಮಾಡುವ ಏಜೆನ್ಸಿಗೆ ನೀಡುತ್ತದೆ. ಅಲ್ಲಿ ಎಷ್ಟು ನಿಮಿಷ ವೀಕ್ಷಣೆಯಾಗಿದೆ, ಎಷ್ಟು ಹಣ ಬಂದಿದೆ ಎಂಬ ಲೆಕ್ಕವಿರುತ್ತದೆ. ಒಮ್ಮೆ ಸಿನಿಮಾ ಅಪ್‌ಲೋಡ್‌ ಆದರೆ ಸುಮಾರು 62 ದೇಶಗಳ ಬಳಕೆದಾರರಿಗೆ ಈ ಸಿನಿಮಾ ವೀಕ್ಷಣೆಗೆ ಸಿಗುತ್ತದೆ.

ರೆಂಟಲ್‌ ಲಾಭದಾಯಕವೇ?

ರೆಂಟಲ್‌ನಲ್ಲಿ ಸಿನಿಮಾ ಹಾಕುವ ಯೋಜನೆಯನ್ನು ಅಮೆಜಾನ್‌ ಜಾರಿಗೆ ತರಲಿದೆ. ಇದೊಂದು ರೀತಿ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡಿದಂತೆ ಒಟಿಟಿಯಲ್ಲಿ ಬಿಡುಗಡೆಯ ಯೋಜನೆ. ಒಂದು ಸಿನಿಮಾ ₹79–199 ಗೆ ರೆಂಟ್‌ಗೆ ಸಿಗುತ್ತದೆ. ಪ್ರೇಕ್ಷಕ ಈ ಮೊತ್ತ ನೀಡಿ ಒಂದು ಸಲ ಅಮೆಜಾನ್‌ ಪ್ರೈಂನಲ್ಲಿ ಆ ಸಿನಿಮಾವನ್ನು ನೋಡಬಹುದು. ಅದರಲ್ಲಿ ಅಮೆಜಾನ್‌ ಒಂದು ಪಾಲು ಇಟ್ಟುಕೊಂಡು ಮಿಕ್ಕಿದ್ದನ್ನು ನಿರ್ಮಾಪಕನ ಖಾತೆಗೆ ಹಾಕುತ್ತದೆ. 

‘ರೆಂಟಲ್‌ ಯೋಜನೆ ಹೊಸತೇನಲ್ಲ. ಈ ಹಿಂದೆಯೇ ಇತ್ತು. ಅಮೆಜಾನ್‌ ತಾನೇ ದುಡ್ಡು ಕೊಟ್ಟು ಹಕ್ಕು ಖರೀದಿಸಿದ ದೊಡ್ಡ ಸ್ಟಾರ್‌ ನಟರ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ಬಿಡುಗಡೆಗೊಂಡ ಬಳಿಕ ರೆಂಟಲ್‌ ಯೋಜನೆಯಡಿ ಹಾಕುತ್ತಿತ್ತು. ಕೆಜಿಎಫ್‌ನಂತಹ ಚಿತ್ರ ಕೆಲ ದಿನಗಳ ಕಾಲ ರೆಂಟಲ್‌ನಲ್ಲಿತ್ತು. ‘ಪೇ ಪರ್‌ ವ್ಯೂ’ ಕಾರ್ಯಕ್ರಮ ನಿಲ್ಲಿಸುತ್ತದೆ ಎಂಬುದೆಲ್ಲ ವದಂತಿಯಷ್ಟೆ. ‘ಪೇ ಪರ್‌ ವ್ಯೂ’ನಲ್ಲಿ ಸಾಕಷ್ಟು ಸಿನಿಮಾಗಳನ್ನು ಅಮೆಜಾನ್‌ ಹಾಕುತ್ತಿಲ್ಲ ಎಂದು ಹಲವರು ಆರೋಪಿಸುತ್ತಾರೆ. ಅಂಥವರಿಗೆ ರೆಂಟಲ್‌ ಯೋಜನೆಯಲ್ಲಿ ಸಿನಿಮಾ ಹಾಕುವ ದಾರಿಯನ್ನು ಮಾಡಿಕೊಡುತ್ತಿದೆ. ನಿಮ್ಮ ಸಿನಿಮಾ ಚೆನ್ನಾಗಿದೆಯೆಂದರೆ ಈ ವಿಭಾಗದಲ್ಲಿ ಹಾಕಿ ಸಾಬೀತುಪಡಿಸಿ ಎಂಬ ಸವಾಲಿನಂತಿದೆ ಇದು. ಒಂದು ರೀತಿ ‘ಪೇ ಪರ್‌ ವ್ಯೂ’ನಲ್ಲಿ ಪ್ರೇಕ್ಷಕನಿಗೆ ₹1ಗೆ ಸಿನಿಮಾ ಸಿಕ್ಕಂತೆ. ಅದನ್ನೇ ನೋಡದವರು ಪ್ರತಿ ಸಿನಿಮಾಗೆ ₹79 ಕೊಟ್ಟು ಸಿನಿಮಾ ನೋಡುತ್ತಾರೆ ಎಂಬುದು ಕಷ್ಟ’ ಎನ್ನುತ್ತಾರೆ ಒಟಿಟಿಗಳಿಗಾಗಿ ಸಿನಿಮಾಗಳನ್ನು ಖರೀದಿಸುವ ಸಂಸ್ಥೆಯಾಗಿರುವ ‘ಜೀರೋ ಬಿಟ್ರೇಟ್‌’ನ ನಿರಂಜನ್‌. 

‘ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಂಡು 60 ದಿನಗಳೊಳಗೆ ಅಮೆಜಾನ್‌ನಲ್ಲಿ ಪ್ರಸಾರಗೊಂಡರೆ ಗಂಟೆಗೆ ₹4 ಸಿಗುತ್ತದೆ. ಅದರ ಬಳಿಕವಾದರೆ ₹3. ದೊಡ್ಡ ಹೀರೊ ಅಥವಾ ಬ್ರ್ಯಾಂಡ್‌ ಇರುವ ನಿರ್ಮಾಣ ಸಂಸ್ಥೆಗಳಿಗೆ ಗಂಟೆಗೆ ₹6–8 ವರೆಗೂ ಕೊಡುತ್ತಾರಂತೆ. ಒಂದು ಸಿನಿಮಾ 10 ಕೋಟಿ ನಿಮಿಷ ವೀಕ್ಷಣೆಯಾದರೆ ನಿರ್ಮಾಪಕನಿಗೆ ಸುಮಾರು ₹65 ಲಕ್ಷ ಬರುತ್ತದೆ. ನಮ್ಮ ‘ಸೀತಾರಾಮ್‌ ಬಿನೋಯ್‌’ ಸಿನಿಮಾ ಈತನಕ ಸುಮಾರು 13 ಕೋಟಿ ನಿಮಿಷ ವೀಕ್ಷಣೆಯಾಗಿರಬಹುದು. ‘ಕೇಸ್‌ ಆಫ್‌ ಕೊಂಡಾಣ’ ಕನ್ನಡ ಮತ್ತು ಮಲಯಾಳದಲ್ಲಿ ಬಿಡುಗಡೆಗೊಂಡಿದೆ. ಎರಡು ತಿಂಗಳಲ್ಲಿ ಸುಮಾರು 5.5 ಕೋಟಿ ನಿಮಿಷ ಸ್ಟ್ರೀಮ್‌ ಆಗಿದೆ. ಇದೊಂದರಿಂದಲೇ ಸಿನಿಮಾಗೆ ಹಾಕಿದ ಬಂಡವಾಳವನ್ನು ಪೂರ್ತಿಯಾಗಿ ತೆಗೆಯಲು ಸಾಧ್ಯವಿಲ್ಲ. ಸಿನಿಮಾ ಪ್ರಸಾರಗೊಂಡು 90 ದಿನಗಳ ನಂತರ ನಿರ್ಮಾಪಕನಿಗೆ ಹಣ ಬರಲು ಪ್ರಾರಂಭವಾಗುತ್ತದೆ’ ಎನ್ನುತ್ತಾರೆ ನಿರ್ದೇಶಕ ಮತ್ತು ನಿರ್ಮಾಪಕ ದೇವಿಪ್ರಸಾದ್‌ ಶೆಟ್ಟಿ.

‘ಅಮೆಜಾನ್‌ಗೆ ಸಿನಿಮಾವನ್ನು ಪಿಚ್‌ ಮಾಡುವ ದೊಡ್ಡ ಸಂಸ್ಥೆಗಳಿಗೆ ‘ಪೇ ಪರ್‌ ವ್ಯೂ’ ನಿಲ್ಲಿಸುವ ಸೂಚನೆ ದೊರೆತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಲಭಿಸಿಲ್ಲ. ‘ಅಬ್ಬಬ್ಬ’, ‘ನಟಭಯಂಕರ’ ಸಿನಿಮಾಗಳು ರೆಂಟಲ್‌ ಮಾದರಿಯಲ್ಲಿ ಈಗಾಗಲೇ ಅಮೆಜಾನ್‌ನಲ್ಲಿ ಬಂದಿದೆ. ಆದರೆ ಆದಾಯದ ದೃಷ್ಟಿಯಿಂದ ಉತ್ತಮ ಎನ್ನಲು ಸಾಧ್ಯವಿಲ್ಲ. ಅಂಕಿಅಂಶಗಳ ಪ್ರಕಾರ ಕನ್ನಡ ಸಿನಿಮಾಕ್ಕೆ ಸುಮಾರು 8 ಲಕ್ಷ ಸಕ್ರಿಯ ವೀಕ್ಷಕರಿದ್ದಾರೆ. ಅಮೆಜಾನ್‌ನಲ್ಲಿ ‘ಪೇ ಪರ್‌ ವ್ಯೂ’ ಯೋಜನೆಯಲ್ಲಿ ಸಿನಿಮಾ ಸ್ವೀಕೃತವಾದರೆ ನಾವೇ ನಿರ್ಮಾಪಕರಿಗೆ ಮುಂಗಡ ಹಣ ಕೊಟ್ಟು ಸಿನಿಮಾ ಖರೀದಿಸುತ್ತೇವೆ. ಆದರೆ ಸಿನಿಮಾ ಸುಲಭಕ್ಕೆ ಸ್ವೀಕೃತವಾಗುತ್ತಿಲ್ಲ. ಈ ವರ್ಷ ಕನ್ನಡ ಆರೆಂಟು ಸಿನಿಮಾಗಳು ಪ್ರೈಮ್‌ನಲ್ಲಿ ಬಂದಿರಬಹುದು’ ಎನ್ನುತ್ತಾರೆ ಪಾಪ್ಟರ್‌ ಮೀಡಿಯಾ ನೆಟವರ್ಕ್‌ನ ಪ್ರತಿನಿಧಿ ನಿಖಿಲ್‌ ಪೈ.

ಕೊನೆಯ ಆಯ್ಕೆ

‘ಪೇ ಪರ್‌ ವ್ಯೂ’(ಪಿವಿಒಡಿ) ಎಂಬುದು ವಿಧಿಯಿಲ್ಲದ ಕೊನೆಯ ಆಯ್ಕೆ. ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ ಸಿನಿಮಾಗಳು ಮಾತ್ರ ಇಲ್ಲಿ ಓಡುತ್ತವೆ. ಔಟ್‌ರೇಟ್‌ ಖರೀದಿ ಮಾಡಬೇಕು. ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಮಂದಿರಗಳಲ್ಲಿಯೂ ಸದ್ದು ಮಾಡಿತ್ತು. ಹೀಗಾಗಿ ಔಟ್‌ರೇಟ್‌ನಷ್ಟೇ ದುಡಿದಿದೆ. ಆದರೆ ಆ ಹಣ ದುಡಿಯಲು 9 ತಿಂಗಳು ಕಾಯಬೇಕಾಯ್ತು. ಎಲ್ಲ ನಿರ್ಮಾಪಕರಿಗೂ ಆ ಶಕ್ತಿ ಇರುವುದಿಲ್ಲ. ಹೆಸರು ಬ್ರ್ಯಾಂಡ್‌ ಇದ್ದರಷ್ಟೆ ಈ ಮಾದರಿ ವರ್ಕ್‌ ಆಗುತ್ತದೆ. ಹೊಸಬರಿಗೆ ಕಷ್ಟ. ಇತರ ಒಟಿಟಿಗಳು ಪಿವಿಒಡಿ ಅವಕಾಶ ನೀಡಿದ್ದರೆ ಒಂದು ರೀತಿ ಸ್ಪರ್ಧೆ ಇರುತ್ತಿತ್ತು. ಆದರೆ ಅಮೆಜಾನ್‌ ಮಾತ್ರ ಇದನ್ನು ನೀಡುತ್ತಿದೆ. ಜನ ಒಟಿಟಿಯಲ್ಲೂ ಕನ್ನಡದ ಸಿನಿಮಾ ನೋಡುವುದಿಲ್ಲ. ಬೇರೆ ಭಾಷೆಯ ಕೆಟ್ಟ ಸಿನಿಮಾ ನೋಡಿ ಹೊಗಳುತ್ತಾರೆ ಎಂಬುದು ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡುವವರಿಗೆ ನೋವಿನ ಸಂಗತಿ. ಇಲ್ಲಿನ ಹೊಸಬರ ಕಂಟೆಂಟ್‌ ಸಿನಿಮಾಗಳನ್ನು ನೋಡಬೇಕು. ಒಟಿಟಿಗೆ ಚಂದಾದಾರದ ಕನ್ನಡಿಗರು ಕನ್ನಡಕ್ಕಿಂತ ಇತರ ಭಾಷೆ ಕಂಟೆಂಟ್‌ ಹೆಚ್ಚು ನೋಡುತ್ತಾರೆ. ಹೀಗಾಗಿ ಒಟಿಟಿಗಳಲ್ಲಿ ಕನ್ನಡಕ್ಕೆ ಬೆಲೆಯಿಲ್ಲ. ವ್ಯಾಪಾರ ಮಾತ್ರವಲ್ಲ ಕನ್ನಡ ಭಾಷೆಯ ದೃಷ್ಟಿಯಿಂದಲೂ ಸಿನಿಮಾ ಉಳಿಯುವುದು ಮಹತ್ವದ್ದು. ಇದಕ್ಕೆ ಸಂಘಟಿತ ಹೋರಾಟವಾಗಬೇಕು. ಚಿತ್ರರಂಗ ಒಟ್ಟಾಗಿ ಕನ್ನಡಿಗರಿಗೆ ಕನ್ನಡ ಸಿನಿಮಾದ ಮೇಲೆ ಅಭಿಮಾನ ಮೂಡಿಸುವ ಯತ್ನವಾಗಬೇಕು. ಒಂದು ಒಳ್ಳೆ ಸಿನಿಮಾ ಬಂದಾಗ ಎಲ್ಲ ತಂಡಗಳು ಒಟ್ಟಾಗಿ ಪ್ರಚಾರಕ್ಕೆ ನಿಲ್ಲಬೇಕು. ಆದರೆ ನಮ್ಮಲ್ಲಿ ಆ ಕೆಲಸ ನಡೆಯುತ್ತಿಲ್ಲ. ಹೀಗಾಗಿ ಪ್ರೇಕ್ಷಕರಿಗೆ ಕನ್ನಡ ಸಿನಿಮಾವೆಂದರೆ ಒಂದು ರೀತಿ ತಾತ್ಸಾರ ಮನೋಭಾವನೆ ಬಂದಿದೆ. ನಮ್ಮಲ್ಲಿಯೂ ಕೆಲವಷ್ಟು ಒಳ್ಳೆಯ ಚಿತ್ರಗಳು ಬರುತ್ತವೆ.  ಒಂದು ರೀತಿ ಈ ಮಾದರಿಯಲ್ಲಿ ಪ್ರೇಕ್ಷಕನಿಗೆ ಉಚಿತವಾಗಿ ಸಿನಿಮಾ ಸಿಕ್ಕಂತೆ. ಅದನ್ನೂ ಒಟಿಟಿಯಲ್ಲಿಯೂ ನೋಡುವುದಿಲ್ಲ ಎಂಬುದು ಬೇಸರದ ಸಂಗತಿ. ಇನ್ನು ರೆಂಟ್‌ ಕೊಟ್ಟು ನೋಡುತ್ತಾರೆ ಎನ್ನುವುದನ್ನು ಯೋಚಿಸಲೂ ಸಾಧ್ಯವಿಲ್ಲ. ಪಿಒವಿಡಿ ‘ನೋಟ’ ಇದ್ದಂಗೆ’ ಎನ್ನುತ್ತಾರೆ ನಿರ್ದೇಶಕ ನಿರ್ಮಾಪಕ ಶಶಾಂಕ್‌. 

10 ಕೋಟಿ ಟಾರ್ಗೆಟ್‌

‘ಒಂದು ಸಿನಿಮಾ ‘ಪೇ ಪರ್‌ ವ್ಯೂ’ನಲ್ಲಿ ಯಶಸ್ವಿ ಎನಿಸಿಕೊಳ್ಳಬೇಕಿದ್ದರೆ ಅಮೆಜಾನ್‌ ಪ್ರಕಾರ 100 ದಶಲಕ್ಷ ನಿಮಿಷ ವೀಕ್ಷಣೆಯಾಗಬೇಕು. ಆಗ ಬೇರೆ ಭಾಷೆಗಳಿಗೂ ಡಬ್‌ ಮಾಡಿ ಹಾಕಲು ಅನುಮತಿ ಸಿಗುತ್ತದೆ. ಕನ್ನಡದ ಸಿನಿಮಾಗಳು ಸರಾಸರಿ 3–4 ಕೋಟಿ ನಿಮಿಷ ವೀಕ್ಷಣೆಯಾ‌ಗಿ ₹15–20 ಲಕ್ಷ ಗಳಿಸುತ್ತವೆ. ಚೆನ್ನಾಗಿರುವ ಸಿನಿಮಾಗಳು ಇಲ್ಲಿ ಹೆಚ್ಚು ವೀಕ್ಷಣೆ ಪಡೆದು ಈಗಲೂ ಟಾಪ್‌–50 ಪಟ್ಟಿಯಲ್ಲಿ ಉಳಿದಿರುತ್ತವೆ. ‘ಲವ್‌ ಮಾಕ್ಟೇಲ್‌’  ‘ದಿಯಾ’ ‘ಸೀತಾರಾಮ್‌ ಬಿನೋಯ್‌’ ‘ಟಗರು ಪಲ್ಯ’ ‘ಕೌಸಲ್ಯ ಸುಪ್ರಜಾ ರಾಮ’...ಹೀಗೆ ಒಂದಷ್ಟು ಸಿನಿಮಾಗಳು ಈ ಮಾದರಿಯಲ್ಲಿಯೇ ದೊಡ್ಡ ಯಶಸ್ಸು ಕಂಡಿವೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡ ‘ಬ್ಲಿಂಕ್‌’ ಸಿನಿಮಾ ಟಾಪ್‌ ಪಟ್ಟಿಯಲ್ಲಿದೆ. ಚಿತ್ರಮಂದಿರಗಳಲ್ಲಿ ಜನ ಬಾರದಿದ್ದರೂ ಆ ವೇಳೆ ಉತ್ತಮವಾಗಿ ಪ್ರಚಾರ ಪಡೆದು ಜನ ಮನ್ನಣೆ ಗಳಿಸಿದ ಚಿತ್ರಗಳನ್ನು ಪ್ರೇಕ್ಷಕರು ಒಟಿಟಿಯಲ್ಲಿ ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಉತ್ತಮ ಪ್ರಚಾರದಿಂದ ಈ ಮಾದರಿಯಲ್ಲಿಯೂ ಉತ್ತಮ ಗಳಿಕೆ ಸಾಧ್ಯ. ಸಾವಿರಾರು ಕೋಟಿ ವಹಿವಾಟು ನಡೆಸುವ ಅಮೆಜಾನ್‌ಗೆ ಭಾರತ ಚಿಕ್ಕ ಮಾರುಕಟ್ಟೆ. ಪ್ರೇಕ್ಷಕರಿಗೆ ಪ್ರತಿ ತಿಂಗಳು ತನ್ನದೇ ಒರಿಜಿನಲ್‌ ಸರಣಿಗಳನ್ನು ನೀಡುತ್ತದೆ. ಒಟಿಟಿ ಜೀವಂತವಾಗಿರಲು ಹೊಸ ಕಂಟೆಂಟ್‌ ಬೇಕೇ ಬೇಕು’ ಎನ್ನುತ್ತಾರೆ ನಿರಂಜನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT