‘ಹುಟ್ದಬ್ಬದ ಶುಭಾಶಯ ಗಣಪ’ ಎಂದರು ಭಟ್ರು!

‘ಚೆಲ್ಲಾಟ’ವಾಡುತ್ತಾ ಚಂದನವನಕ್ಕೆ ಕಾಲಿರಿಸಿ ‘ಮುಂಗಾರು ಮಳೆ’ಯಲ್ಲಿ ನೆನೆದು ಇಡೀ ಕರ್ನಾಟಕಕ್ಕೇ ಪ್ರೀತಿಯ ಜ್ವರ ತರಿಸಿದ್ದ ಗೋಲ್ಡರ್‌ಸ್ಟಾರ್ ಗಣೇಶ್ ಅವರಿಗೆ ಇಂದು(ಜುಲೈ 2) ಜನ್ಮದಿನದ ಸಂಭ್ರಮ.
ಈ ಸಂಭ್ರಮದ ಸಂದರ್ಭದಲ್ಲೇ ಗಣೇಶ್ ಅವರ ಮುಂದಿನ ಸಿನಿಮಾಗಳ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ನಿರ್ದೇಶಕ ಯೋಗರಾಜ್ ಭಟ್ ಅವರ ಗಾಳಿಪಟ–2ನೇ ಭಾಗದ ಮೋಷನ್ ಪೋಸ್ಟರ್‌ನಲ್ಲಿ ಗಾಳಿಪಟ ಹಾರಾಡಿಸುತ್ತಾ ಇರುವ ಗಣೇಶ್‌ಗೆ ‘ಹುದ್ದಿಟಹಬ್ಬದ ಶುಶಾಭಯ’ ಎಂದು ಶುಭಕೋರಲಾಗಿದೆ. ಮೊದಲ ಭಾಗದಲ್ಲಿ ಗಣೇಶ್ ಅವರು ಬಣ್ಣಹಚ್ಚಿದ್ದ ‘ಗಣಿ’ ಎಂಬ ಪಾತ್ರವು ಕನ್ನಡ ಅಕ್ಷರಮಾಲೆ ಕಲಿಯಲು ಪಡುತ್ತಿದ್ದ ಹರಸಾಹಸವನ್ನೇ ಆಧಾರವಾಗಿಟ್ಟುಕೊಂಡು ಚಿತ್ರತಂಡವು ಈ ರೀತಿ ಶುಭಕೋರಿದೆ. ‘ಗಣಪನ ಹುಟ್ಟಿದ ಹಬ್ಬದ ಪ್ರಯುಕ್ತ ನಮ್ಮ ಗಾಳಿಪಟ 2 ಚಿತ್ರದ ಮೋಷನ್ ಪೋಸ್ಟರನ್ನು ಇಡೀ ತಂಡ ನಾಡಿನ ಜನತೆಗೆ ಅರ್ಪಿಸುತ್ತಿದ್ದೇವೆ. ಹ್ಯಾಪಿ ಹ್ಯಾಪಿ ಹುಟ್ದಬ್ಬ ಗಣಪ’ ಎಂದು ಯೋಗರಾಜ್ ಭಟ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದರ ಜೊತೆಗೆ ‘ಸಖತ್’ ಸಿನಿಮಾದ ಹೊಸ ಪೋಸ್ಟರ್ ಕೂಡಾ ಬಿಡುಗಡೆಯಾಗಿದ್ದು, ಇದರಲ್ಲಿ ಕುರುಡನ ಪಾತ್ರಕ್ಕೆ ಗಣೇಶ್ ಬಣ್ಣಹಚ್ಚಿದ್ದಾರೆ. ಲಾಕ್‌ಡೌನ್ ನಿರ್ಬಂಧ ಸಡಿಲಿಕೆಯಾಗಿದ್ದು, ಚಿತ್ರೀಕರಣಕ್ಕೆ ಅನುಮತಿ ನೀಡಿರುವುದರಿಂದ ಪ್ರಸ್ತುತ ‘ಸಖತ್’, ‘ತ್ರಿಬಲ್ ರೈಡಿಂಗ್’ ಹಾಗೂ ‘ಗಾಳಿಪಟ–2’ರ ಚಿತ್ರೀಕರಣದಲ್ಲಿ ಗಣೇಶ್ ತಲ್ಲೀನರಾಗಿದ್ದಾರೆ. ಟ್ವಿಟರ್‌ನಲ್ಲಿ ನಟ ರಮೇಶ್ ಅರವಿಂದ್, ಸುದೀಪ್, ಶರಣ್, ನಟಿ ಅಮೂಲ್ಯ, ಪ್ರಣೀತಾ ಸೇರಿದಂತೆ ಚಿತ್ರರಂಗದ ನೂರಾರು ಕಲಾವಿದರು ಹಾಗೂ ಸಾವಿರಾರು ಅಭಿಮಾನಿಗಳು ಗಣೇಶ್ ಅವರಿಗೆ ಶುಭಹಾರೈಸಿದ್ದಾರೆ.
ಗಣೇಶ್ ಅಭಿಮಾನಿಗಳು ಹಾಗೂ ಸ್ನೇಹಿತರೆಲ್ಲರೂ ಅವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ತಯಾರಿ ನಡೆಸಿಕೊಂಡಿದ್ದರೂ, ಸ್ವತಃ ಗಣೇಶ್ ಅವರೇ ತಮ್ಮ ಜನ್ಮದಿನಾಚರಣೆ ಬೇಡವೆಂದು ಮೊದಲೇ ತಿಳಿಸಿದ್ದರು. ‘ಪ್ರತಿ ವರ್ಷವೂ ನನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಆಶೀರ್ವದಿಸುತ್ತಾ ಬಂದಿರುವಿರಿ. ಆದರೆ, ಈ ವರ್ಷ ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಸಿಕ್ಕು ನನ್ನ ಹಲವು ಸಿನಿಮಾ ಸಹೋದ್ಯೋಗಿಗಳು, ಆತ್ಮೀಯರು, ಗೆಳೆಯರು ಬಲಿಯಾಗಿದ್ದು ನೋವು ತರಿಸಿದೆ. ಅದೆಷ್ಟೋ ಜನರ ಜೀವನ ನಲುಗಿ ಹೋಗಿವೆ. ಇಷ್ಟೆಲ್ಲ ನೋವಿನ ನಡುವೆ ಸಂಭ್ರಮಕ್ಕಿದು ಸರಿಯಾದ ಸಮಯವಲ್ಲವೆಂದೆನಿಸಿ ಈ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಇಚ್ಛಿಸಿರುತ್ತೇನೆ’ ಎಂದು ಎರಡು ದಿನಗಳ ಹಿಂದೆಯೇ ಗಣೇಶ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
‘ಜನ್ಮದಿನದಂದು ನಾನು ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿರುತ್ತೇನೆ. ಪ್ರತಿ ವರ್ಷವೂ ಪ್ರೀತಿಯಿಂದ ಜನ್ಮದಿನದ ಆಚರಣೆಗೆ ನೀವು ಪ್ರೀತಿಯಿಂದ ತರುವ ಕೇಕ್, ಹಾರ, ಉಡುಗೊರೆ ಮುಂತಾದವುಗಳಿಗಾಗಿ ಈ ವರ್ಷ ಹಣ ವ್ಯಯಿಸದೆ ಅದೇ ಖರ್ಚಿನ ಮೊತ್ತವನ್ನು ಕೊರೊನಾ ಸಂಕಷ್ಟದಲ್ಲಿರುವ ಮತ್ತಷ್ಟು ಜೀವಗಳಿಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಅದೇ ನನಗೆ ಶ್ರೀರಕ್ಷೆ’ ಎಂದಿದ್ದರು.
ಚೆನ್ನಪಟ್ಟಣದ ಗಣೇಶ್ ಅಭಿಮಾನಿಗಳ ಸಂಘದ ಸದಸ್ಯರು ನಗರದ ಮಾತೃಭೂಮಿ ಸೇವಾ ಫೌಂಡೇಷನ್‌ನ ಅನಾಥಾಶ್ರಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಹಣ್ಣು, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿ ಗಣೇಶ್ ಅವರ ಜನ್ಮದಿನವನ್ನು ಸರಳವಾಗಿ ಆಚರಣೆ ಮಾಡಿದರು.
Wishing you happiness and health @Official_Ganesh ...
A very happy bday to you. 🥂— Kichcha Sudeepa (@KicchaSudeep) July 2, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.