ಬುಧವಾರ, ಆಗಸ್ಟ್ 10, 2022
23 °C
ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರು ಆಕ್ರೋಶ

ನಟ ಚೇತನ್‌ಗಾಗಿ ಕನ್ನಡ ಚಿತ್ರರಂಗದ ಅವಹೇಳನ: ಪತ್ರಕರ್ತನ ವಿರುದ್ಧ ಕಿಡಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅವರ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಭರದಲ್ಲಿ ಆಂಗ್ಲ ಭಾಷಾ ಪತ್ರಕರ್ತರೊಬ್ಬರು ಕನ್ನಡ ಚಿತ್ರರಂಗದ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಾರೆ.

ಸುದೀಪ್ತೊ ಮಂಡಲ್ ಎನ್ನುವ ಪತ್ರಕರ್ತ, ಇತ್ತೀಚೆಗೆ ಚೇತನ್ ಅವರು ಜಾತಿ ವ್ಯವಸ್ಥೆ ಬಗ್ಗೆ ಬರೆದಿದ್ದ ಲೇಖನ ಪ್ರಕಟವಾಗಿರುವ ಡೆಕ್ಕನ್ ಹೆರಾಲ್ಡ್ ವೆಬ್‌ಸೈಟ್ ಲಿಂಕ್‌ನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ, ‘ದಕ್ಷಿಣ ಭಾರತದಲ್ಲಿ ಅತೀ ಕೆಟ್ಟ ಚಿತ್ರೋದ್ಯಮವಾಗಿರುವ ಸ್ಯಾಂಡಲ್‌ವುಡ್‌ನಲ್ಲಿ ಕಡೆಗೂ ಸ್ವಲ್ಪ ಭರವಸೆ ಮೂಡಿದೆ. ಈ ಸ್ಯಾಂಡಲ್‌ವುಡ್ ಎಂಬ ಒಣ ಭೂಮಿಯಲ್ಲಿ ಚೇತನ್ ಅಹಿಂಸಾ ಹೆಚ್ಚು ಅಗತ್ಯವಿರುವ ಮಳೆಗಾಲ‘ ಎಂದು ಬರೆದುಕೊಂಡಿದ್ದರು.

 

ಈ ಬಗ್ಗೆ ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕ ಕನ್ನಡಿಗರು ಮಂಡಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರರಂಗ ನನಗೆ ಹಾಗೂ ಇನ್ನೂ ಅನೇಕರಿಗೆ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ನೀಡಿದೆ. ನನಗಿಂತ ಮೊದಲೇ ನಮ್ಮ ಸ್ಯಾಂಡಲ್‌ವುಡ್ ಅನೇಕ ದಂತಕಥೆಗಳನ್ನು ನಿರ್ಮಿಸಿದೆ. ಅದರ ಬಗ್ಗೆ ನಿಮಗೆ ತಿಳಿದಿಲ್ಲ ಎಂಬುದು ನನಗೆ ಖಾತ್ರಿಯಿದೆ. ಏನೂ ಅಲ್ಲ ಎಂಬ ನನ್ನ ಜೀವನವನ್ನು ಈ ಚಿತ್ರರಂಗ ಇಲ್ಲಿತನಕ ಬೆಳೆಸಿದೆ‘ ಎಂದು ಮಂಡಲ್‌ಗೆ ಎದಿರೇಟು ನೀಡಿದ್ದಾರೆ.

ಇನ್ನೂ ಹಲವರು ಕನ್ನಡ ಚಿತ್ರರಂಗಕ್ಕೆ ಅವಮಾನಕಾರಿಯಾಗಿ ಮಾತನಾಡಿರುವ ಮಂಡಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ. ಅನೇಕ ನಟ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ.

ಅಲ್ಲದೇ ಚೇತನ್ ಅವರನ್ನೂ ರಕ್ಷಿತ್ ಶೆಟ್ಟಿ ಕುಟುಕಿದ್ದಾರೆ. ‘ಚೇತನ್ ಅವರ ಕೆಲಸಗಳ ಬಗ್ಗೆ ನಮಗೆ ಮೆಚ್ಚುಗೆ ಇದೆ. ಆದರೆ, ಕೆಟ್ಟ ಸುಳ್ಳುಗಳಿಂದ ಕೆಡಕನ್ನು ಬಿತ್ತುತ್ತಿರುವ ನಿಮ್ಮ ಮನಸ್ಸನ್ನು ಸ್ವಚ್ಛಗೊಳಿಸಬೇಕಾಗಿದೆ‘ ಎಂದು ಸಲಹೆ ನೀಡಿದ್ದಾರೆ.

ಚೇತನ್ ಅವರು ಜಾತಿ ವ್ಯವಸ್ಥೆ ಬಗ್ಗೆ ಲೇಖನ ಬರೆದು, ವಿಡಿಯೋ ಮಾಡಿ ಬ್ಯಾಹ್ಮಣ್ಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಬ್ರಾಹ್ಮಣ ಸಂಘಟನೆಗಳು ದೂರು ನೀಡಿದ್ದವು. ಲಾಕ್‌ಡೌನ್‌ನಲ್ಲಿ ನಟರೊಬ್ಬರು ಬ್ರಾಹ್ಮಣರಿಗೆ ಮಾತ್ರ ಆಹಾರದ ಕಿಟ್‌ಗಳನ್ನು ಪೂರೈಸಿದ್ದರ ಬಗ್ಗೆ ಚೇತನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ನಿಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು