ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಮಾಡಿದ್ರೆ ಸರಿಹೋಗ್ತಾನಾ?

Last Updated 9 ಜನವರಿ 2020, 19:30 IST
ಅಕ್ಷರ ಗಾತ್ರ

‘ನಮ್ಮ ಮಗನಿಗೆ ಎಷ್ಟು ಹೇಳಿದ್ರೂ ಜವಾಬ್ದಾರಿ ಮಾತ್ರ ಬರುತ್ತಿಲ್ಲ’ ಎಂದು ಹೆತ್ತವರು ಒಂಚೂರು ದುಃಖದಿಂದ ತಮ್ಮ ಸ್ನೇಹಿತರಲ್ಲಿ ಹೇಳಿದಾಗ, ‘ಮದುವೆ ಮಾಡ್ರೀ ಸರಿಹೋಗ್ತಾನೆ’ ಎಂದು ಹೇಳುವುದಿದೆ. ಮದುವೆಯಾಗಿ ಬರುವ ಪತ್ನಿ, ತಂದೆ–ತಾಯಿಯಿಂದ ಆಗದ ಕೆಲಸವನ್ನು ಮಾಡುತ್ತಾಳೆ ಎಂಬುದು ಈ ಮಾತಿನ ಹಿಂದಿರುವ ನಂಬಿಕೆ.

ಊರಿನ ಉಢಾಳನೊಬ್ಬನನ್ನು ಕಥೆಯ ಕೇಂದ್ರಭಾಗದಲ್ಲಿ ಇಟ್ಟು, ‘ಮದುವೆ ಮಾಡ್ರೀ ಸರಿಹೋಗ್ತಾನೆ...’ ಎನ್ನುವ ಶೀರ್ಷಿಕೆಯೊಂದಿಗೆ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಗೋಪಿ ಕೆರೂರ್. ಇವರು ಈ ಹಿಂದೆ ‘ರಂಕಲ್ ರಾಟೆ’ ಎನ್ನುವ ಸಿನಿಮಾ ನಿರ್ದೇಶಿಸಿದ್ದರು. ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

‘ರಂಕಲ್ ರಾಟೆ ಚಿತ್ರ ಮಾಡಿದ ನಂತರ ಸ್ವಲ್ಪ ಬಿಡುವು ಇತ್ತು. ಆಗ ನಾನು ಒಂದು ಕಥೆ ಸಿದ್ಧಪಡಿಸಿದ್ದೆ. ಆ ಕಥೆಯನ್ನು ನನ್ನ ಹೆಂಡತಿ ಬಳಿ ಹೇಳಿದೆ. ನಂತರ, ಚಿತ್ರದ ಶೀರ್ಷಿಕೆಯನ್ನೂ ಅವಳಲ್ಲಿ ಹೇಳಿದೆ. ನಾನು ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ಪತ್ನಿ, ಎಷ್ಟು ಮದುವೆ ಮಾಡಿದ್ರೆ ಸರಿಹೋಗ್ತಾನೆ ಅಂತ ಕೇಳಿದಳು. ಜೊತೆಯಲ್ಲೇ, ಸಿನಿಮಾ ಕಥೆ ಚೆನ್ನಾಗಿದೆ ಅಂತಲೂ ಹೇಳಿದ್ದಳು’ ಎಂದು ಸಿನಿಮಾ ಕಥೆಗೆ ಪತ್ನಿಯ ಅಂಕಿತ ಸಿಕ್ಕ ಪ್ರಸಂಗ ವಿವರಿಸಿದರು ಗೋಪಿ.

ಪತ್ನಿಯಿಂದ ಮೊಹರು ಲಭಿಸಿದ ನಂತರ ಗೋಪಿ ಅವರು ಮಾಡಿದ ಕೆಲಸ ನಿರ್ಮಾಪಕರನ್ನು ಕಂಡು, ಅವರಲ್ಲಿ ಕಥೆ ಹೇಳಿದ್ದು. ‘ಇದು ಉತ್ತರ ಕರ್ನಾಟಕ ಭಾಷೆಯ ಸಿನಿಮಾ. ಕನ್ನಡದ ಈ ಉಪಭಾಷೆಯನ್ನು ಬಳಸಿ ಹಲವು ಸಿನಿಮಾಗಳು ಬಂದಿವೆ. ಆದರೆ ಅವೆಲ್ಲ ಕಲಾತ್ಮಕ ಸಿನಿಮಾಗಳು. ನನಗೆ ತಿಳಿದಂತೆ, ಕಮರ್ಷಿಯಲ್ ಸಿನಿಮಾ ಬಂದಿಲ್ಲ’ ಎಂಬ ಮಾತು ಸೇರಿಸಿದರು.

ಗೋಪಿ ಅವರು ಒಂದು ಶಪಥ ಮಾಡಿದ್ದಾರಂತೆ. ತಾವು ಎಷ್ಟೇ ಸಿನಿಮಾ ಮಾಡಿದರೂ ನಾಯಕ ಮತ್ತು ನಾಯಕಿಯ ಪಾತ್ರಕ್ಕೆ ಹೊಸಬರನ್ನೇ ಆಯ್ಕೆ ಮಾಡಿಕೊಳ್ಳುತ್ತಾರಂತೆ. ಈ ಶಪಥಕ್ಕೆ ಅನುಗುಣವಾಗಿ ಅವರು ಈ ಸಿನಿಮಾ ನಾಯಕ ಹಾಗೂ ನಾಯಕಿಯ ಪಾತ್ರವನ್ನೂ ಹೊಸಬರಿಗೇ ನೀಡಿದ್ದಾರೆ. ನಾಯಕನ ಪಾತ್ರಕ್ಕೆ ಶಿವ ಚಂದ್ರಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾಯಕಿಯಾಗಿ ಆರಾಧ್ಯಾ ಅವರು ಬಣ್ಣ ಹಚ್ಚಿದ್ದಾರೆ. ಈ ಚಿತ್ರದ 60 ದಿನಗಳ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರವನ್ನು ಫೆಬ್ರುವರಿಯಲ್ಲಿ ತೆರೆಗೆ ತರುವ ಆಲೋಚನೆ ಸಿನಿತಂಡದ್ದು.

‘ಉತ್ತರ ಕರ್ನಾಟಕದ ಜನಜೀವನವನ್ನು ತಮಾಶೆಯ ಮಾದರಿಯಲ್ಲಿ ಹೇಳುವ ಸಿನಿಮಾ ಇದು. ಸತ್ವಯುತವಾದ‌ ನಟರು ಇದರಲ್ಲಿ ಇದ್ದಾರೆ. ನನ್ನದು ಇದರಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರ. ಊರಲ್ಲಿ ಚಿಕ್ಕಪುಟ್ಟ ರಾಜಕೀಯ ಮಾಡಿಕೊಂಡು, ಯಾರದ್ದೋ ಒಲೆಯಲ್ಲಿ ಬೇಳೆ ಬೇಯಿಸಿಕೊಳ್ಳುವ ಪಾತ್ರ ಇದು’ ಎಂದರು ನಟ ಕೃಷ್ಣಮೂರ್ತಿ ಕವತ್ತಾರ್.

ನಟಿ ಚಿತ್ಕಲಾ ಬಿರಾದಾರ ಅವರೂ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ‘ಈ ಚಿತ್ರದಲ್ಲಿ ಉತ್ತರ ಕರ್ನಾಟಕ ಶೈಲಿಯ ಭಾಷೆ ಇದೆ. ಬಾದಾಮಿ ಬಳಿ ಚಿತ್ರೀಕರಣ ನಡೆದಿದೆ’ ಎಂದರು ಚಿತ್ಕಲಾ.

ನಾಯಕ ಶಿವ ಚಂದ್ರಕುಮಾರ್ ಅವರಿಗೆ ಇದು ಮೊದಲ ಸಿನಿಮಾ. ‘ಈ ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಆಗುತ್ತಿದ್ದೇನೆ. ಆಡಿಷನ್‌ ಮೂಲಕ ಈ ಪಾತ್ರಕ್ಕೆ ನಾನು ಆಯ್ಕೆಯಾದೆ. ವಿಟ್ಠಲ ಎನ್ನುವ ಹೆಸರಿನ ಉಢಾಳನ ಪಾತ್ರ ನನ್ನದು. ಆತ ಪ್ರೀತಿಯಲ್ಲಿ ಬಿದ್ದ ನಂತರ, ಊರ ಜನರ ಮನಸ್ಸನ್ನು ಗೆಲ್ಲುವ ವಿಚಾರ ಚಿತ್ರದಲ್ಲಿದೆ’ ಎಂದರು ಶಿವ ಚಂದ್ರಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT