ಬುಧವಾರ, ಜನವರಿ 22, 2020
28 °C

ಹೊಸಬರ ಪ್ರೇಮಯುದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಚ್ಚು, ಲಾಂಗು, ಗನ್ನುಗಳ ಸದ್ದು ಇಲ್ಲದೆ ಪ್ರೇಮ ಯುದ್ಧವನ್ನು ಬರೀಗಣ್ಣಿನಲ್ಲೇ ನಡೆಸಿದ್ದೇವೆ. ನಾಯಕ– ನಾಯಕಿ ಹೀಗೂ ಪ್ರೀತಿ ಮಾಡಲು ಸಾಧ್ಯವೇ’ ಎನ್ನುವುದು ಈ ಚಿತ್ರದಲ್ಲಿದೆ ಎಂದು ಮಾತಿಗಾರಂಭಿಸಿದರು ‘ಪ್ರೇಮಯುದ್ಧಂ’ ಚಿತ್ರದ ನಿರ್ದೇಶಕ ಶ್ರೀಮಂಜು.

ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ವಹಿಸಿರುವ ಶ್ರೀಮಂಜು ಅವರಿಗೆ ಇದು ಮೊದಲ ಚಿತ್ರ. ‘ಭೂಗತ ಜಗತ್ತಿನ ಕಥೆಯ ಚಿತ್ರ ಮಾಡಲು ನಿರ್ಧರಿಸಿದ್ದವನು, ಇದರಲ್ಲಿ ಪರಿಶುದ್ಧ ಪ್ರೇಮಕಥೆ ಇದ್ದಿದ್ದರಿಂದ ಅದನ್ನು ಬದಿಗಿಟ್ಟು, ಇದನ್ನು ಕೈಗೆತ್ತಿಕೊಂಡೆ. ತಮಿಳು, ತೆಲುಗು ಪ್ರೇಕ್ಷಕರನ್ನು ಸೆಳೆಯಲು ಮತ್ತು ಕಥೆಗೆ ಪೂರಕವಾಗಿ ಶೀರ್ಷಿಕೆ ಇಡಲಾಗಿದೆ. ಮಂಡ್ಯ, ಪಾಂಡವಪುರ, ಬ್ಯಾಡರಹಳ್ಳಿಯ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಗ್ರಾಮೀಣ ಸೊಗಡು ಇದೆ’ ಎಂದು ಮಾತು ವಿಸ್ತರಿಸಿದರು.

‘ಧೀರಂ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸಾಫ್ಟ್‌ವೇರ್‌ ಉದ್ಯೋಗಿ ಅನಿಲ್‌, ಈ ಚಿತ್ರದ ನಾಯಕ. ‘ನನ್ನದು ಶಿವು ಎನ್ನುವ ಪಕ್ಕಾ ಹಳ್ಳಿ ಯುವಕನ ಪಾತ್ರ. ಮುಂದಿನದನ್ನು ಚಿತ್ರದಲ್ಲಿ ನೋಡಿ’ ಎಂದಷ್ಟೇ ಹೇಳಿದ ಅನಿಲ್‌ ಪಾತ್ರದ ಬಗ್ಗೆ ಕುತೂಹಲ ಕಾಯ್ದುಕೊಂಡರು.

‘ಬ್ರಹ್ಮಗಂಟು’, ‘ಪಾಪ ಪಾಂಡು’ ಧಾರಾವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಪಲ್ಲವಿ, ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ ಪ್ರವೇಶಿಸುತ್ತಿದ್ದಾರೆ. ‘ಚಿತ್ರದಲ್ಲಿ ನಟಿಸಲು ಅದರಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ’ ಎಂದರು.

ಟ್ರಾವೆಲ್ಸ್‌ ಸಂಸ್ಥೆ ನಡೆಸುತ್ತಿರುವ ಗುರುಮೂರ್ತಿ ಅವರಿಗೆ ಸಿನಿಮಾ ನಟನಾಗಬೇಕೆಂಬ ಕನಸು ‘ಪ್ರೇಮಯುದ್ಧಂ’ ಸಿನಿಮಾಕ್ಕೆ ಬಂಡವಾಳ ಹೂಡಿಸುವ ಮೂಲಕ ನಿರ್ಮಾಪಕರನ್ನಾಗಿಸಿದೆ. ಚಿತ್ರದಲ್ಲಿರುವ ನಾಲ್ಕು ಹಾಡಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ನಿರ್ದೇಶಿಸಿದ್ದಾರೆ.

ಗಿರೀಶ್ ಚಿಕ್ಕಣ್ಣ ಅವರ ಸಿರಿ ಮ್ಯೂಸಿಕ್‌ ಈ ಚಿತ್ರದ ಹಾಡುಗಳ ಧ್ವನಿಸುರಳಿಯನ್ನು ಹೊರ ತಂದಿದೆ. ಧ್ವನಿಸುರುಳಿಯನ್ನು ‘ಸ್ಪರ್ಶ’ ಚಿತ್ರ ಖ್ಯಾತಿಯ ರೇಖಾ ಬಿಡುಗಡೆ ಮಾಡಿ, ಚಿತ್ರ ತಂಡವನ್ನು ಹಾರೈಸಿದರು.

ಪ್ರತಿಕ್ರಿಯಿಸಿ (+)