ಬುಧವಾರ, ಫೆಬ್ರವರಿ 26, 2020
19 °C
ಕನ್ನಡ ರಾಜ್ಯೋತ್ಸವ ವಿಶೇಷ ಕನ್ನಡ ಭಾಷೆ ಮತ್ತು ಚಿತ್ರರಂಗ

ಕನ್ನಡ ಸಿನಿಮಾ ಹಾಡುಗಳಲ್ಲಿ ಇಂಗ್ಲಿಷ್ ಪದ ಬಳಕೆ ಅನಿವಾರ್ಯವೇ?

ಉಮಾಶಂಕರ ಕಾರ್ಯ Updated:

ಅಕ್ಷರ ಗಾತ್ರ : | |

ಟು ಥೌಸೆಂಡ್ ಏಡಿ ಲೇಡಿಯೇ..

ಅಲ್ಟ್ರಾ ಮಾಡರ್ನ್....

ಎವೆರಿ ವೀಕೆಂಡ್ ಡೇಟಿಂಗ್ ಬೀಚಲಿ...

ಪೂರಾ ವೆಸ್ಟರ್ನ್..... 

ಮೇಲಿನ ಹಾಡು ಅಪ್ಪಟ ಕನ್ನಡ ಸಿನಿಮಾ ಹಾಡು. ಕಡಲ ಕಿನಾರೆಯಲ್ಲಿ ರವೀನಾ ಟಂಡನ್ ಸಿಗರೇಟು ಸೇದುತ್ತಾ ಪಾಶ್ಚಿಮಾತ್ಯ ಧಿರಿಸು ಧರಿಸಿ ಹಾಡುತ್ತಿದ್ದರೆ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ರು. 1999ರಲ್ಲಿ ಬಿಡುಗಡೆಯಾ 'ಉಪೇಂದ್ರ' ಸಿನಿಮಾ ನಿರ್ಮಾಪಕನಿಗೆ ಜೇಬು ತುಂಬಿಸಿತು. ಈ ಹಾಡಿನ ಸಾಹಿತ್ಯ ಉಪೇಂದ್ರ ಅವರದ್ದು, ನಿರ್ದೇಶನ ಕೂಡಾ ಉಪೇಂದ್ರ ಅವರದ್ದೇ. ಸಂಗೀತ ನಿರ್ದೇಶಕ ಗುರುಕಿರಣ್. ಈ ಇಬ್ಬರು ಸೇರಿ ಮಾಡಿದ ಹಾಡಿನಲ್ಲಿ ಕನ್ನಡ ಮತ್ತು ಆಂಗ್ಲ ಪದಗಳನ್ನು ಬಳಸಿದ್ದು ಸಿನಿ ಪ್ರೇಕ್ಷಕರಿಗೆ ಹೊಸತನ ಕಾಣಿಸಿತು. ಅಲ್ಲದೆ, ರವೀನಾ ಟಂಡನ್‌‌ರ ಮೈಮಾಟ ನಟನೆ ಆ ಸಿನಿಮಾ ‌ಗೆಲುವು ದಾಖಲಿಸಲು ಕಾರಣವಾಗಿತ್ತು.

ಗುರುಕಿರಣ್ ಸಿನಿಮಾರಂಗಕ್ಕೆ ಪರಿಚಯವಾಗಿದ್ದು 'ಎ' ಸಿನಿಮಾ ಮೂಲಕ ಈ ಸಿನಿಮಾದ ಹಾಡುಗಗಳಲ್ಲಿ ಆಂಗ್ಲ ಮತ್ತು ಕನ್ನಡ ಪದಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಹಾಡುಗಳೆಲ್ಲಾ ಜನಪ್ರಿಯವಾದವು. ಸಿನಿಪ್ರಿಯರು ಮೆಚ್ಚಿ ಚಿತ್ರಮಂದಿರಗಳಿಗೆ ಬಂದರು. ಸಿನಿಮಾ ಗೆದ್ದಿತು.

ನಂತರ ಒಂದರ ಹಿಂದೆ ಒಂದು ಇದೇ ರೀತಿಯ ಹಾಡುಗಳು ಬಂದವು. ಅವೆಲ್ಲಾ ಜನಪ್ರಿಯವಾದವು. ಆದರೆ, ಕನ್ನಡ ಸಿನಿಮಾಗಳಲ್ಲಿ ಇಂಥ ಹಾಡುಗಳು ಬಂದರೆ ಭಾಷೆ ಬೆಳವಣಿಗೆ ಹೇಗೆ ಸಾಧ್ಯ ಎಂದವರೂ ಉಂಟು. ಆದರೆ, ಸಿನಿಮಾ ಗೆದ್ದಿದೆ. ಜನ ಇಷ್ಟಪಟ್ಟಿದ್ದಾರೆ.

ಆದರೆ, ಸಿನಿಮಾ ಗೆದ್ದಿದೆ ಎಂಬ ಕಾರಣಕ್ಕೆ ಪದೇ ಪದೇ ಇಂತಹ ಹಾಡುಗಳು ಬಂದರೆ, ಕನ್ನಡ ಭಾಷೆ ಬೆಳವಣಿಗೆಗೆ ಕನ್ನಡ ಚಿತ್ರರಂಗದ ಜವಾಬ್ದಾರಿ ಕೂಡ ಇದೆಯಲ್ಲವೆ.  ಕನ್ನಡ ಭಾಷೆ, ನಾಡು ನುಡಿಗೆ ಕನ್ನಡ ಚಿತ್ರರಂಗ ಮಹತ್ತರವಾದ ಕೊಡುಗೆಯನ್ನು ಕೊಟ್ಟಿರುವುದು ಇತಿಹಾಸದಲ್ಲಿದೆ. ಇದಕ್ಕೆ ಸಾಕ್ಷಿ ಡಾ.ರಾಜ್ ಕುಮಾರ್ ಅವರ ಗೋಕಾಕ್ ಚಳವಳಿ. ಈ ಚಳವಳಿ ನಡೆಸಿ ಇಡೀ ನಾಡಿನ ಜನತೆಯನ್ನುಎಚ್ಚರಿಸಿದವರು ಕನ್ನಡ ಚಿತ್ರರಂಗದ ಮೇರು ಪರ್ವತ ಡಾ.ರಾಜ್. ಆ ಸಮಯದಲ್ಲಿ ರಾಜ್ಯದಲ್ಲಿ ಹಲವರು ಕನ್ನಡ ಭಾಷೆಯ ಬೆಳವಣಿಗೆಗೆ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ.

ಎಂಬತ್ತರ ದಶಕದಿಂದ ಈಚೆಗೆ ಇಂಗ್ಲೀಷ್ ಹಾಗೂ ಕನ್ನಡ ಪದಗಳನ್ನು ಸೇರಿಸಿ ಹಾಡುಗಳನ್ನು ಬರೆಯಲು ಆರಂಭಿಸಲಾಯಿತು. ಅದು ಇಲ್ಲಿಯವರೆಗೂ ಮುಂದುವರಿದಿದೆ.

ನೊನೊನೊ ಟೆನ್ಷನ್  ....ನೊ ನೊನೊ ಟೆನ್ಷನ್...ಲೈಫ್ ಒಂಥರಾ - ಚಿತ್ರ ಸಾಹಿತಿ ಕವಿರಾಜ್ 

ಇಂಗ್ಲೀಷ್ ಪದಗಳನ್ನು  ಸಿನಿಮಾ ಹಾಡುಗಳನ್ನು ಬಳಸುವುದರಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುವುದಿಲ್ಲ. ಬೇರೆ ಭಾಷೆಗಳನ್ನು ಉತ್ತೇಜಿಸಿದಂತಾಗುತ್ತದೆ. ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಬೇಕಾದರೆ ಸಿನಿಮಾ ಮಾಧ್ಯಮ ಕೂಡ ಜವಾಬ್ದಾರಿ ಸ್ಥಾನದಲ್ಲಿ ಇದ್ದು ತನ್ನ ಕೊಡುಗೆಯನ್ನು ಕೊಡಬೇಕಾಗಿದೆ ಎಂದು ಕನ್ನಡಪರ ಹೋರಾಟಗಾರರು ಒತ್ತಾಯಿಸುತ್ತಲೇ ಬಂದಿದ್ದಾರೆ.

ಈ ಕುರಿತು ಸಿನಿಮಾ ಸಾಹಿತಿ ಕವಿರಾಜ್ ಅವರನ್ನು ಮಾತನಾಡಿಸಿದಾಗ ಅವರ ಅಭಿಪ್ರಾಯ ಈ ರೀತಿ ಇದೆ, ಚಿತ್ರರಂಗ ಅನ್ನೋದು ಸಮಾಜದ ಒಳಗೆ ಇರುವಂತಹದ್ದು, ಸಿನಿಮಾ ಅನ್ನೋ ಸಣ್ಣ ಕಿಟಕಿಯಿಂದ ಸಮಾಜವನ್ನು ನೋಡುವ ಯತ್ನ ಅಷ್ಟೆ. ಸಮಾಜ ಇಲ್ಲದೆ ಸಿನಿಮಾ ಇಲ್ಲ. ಹಾಗೆಯೇ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ಕೊಡಬೇಕು. ಆದರೆ, ಕೆಲವೊಮ್ಮೆ ನನಗೆ ಸಿನಿಮಾ ನಿರ್ದೇಶಕರಿಂದ ಇಂತಹ ಸನ್ನಿವೇಶಕ್ಕೆ ಈ ರೀತಿ ಹಾಡು ಬೇಕು ಎಂದು ಕೇಳುತ್ತಾರೆ. ಆ ಸನ್ನಿವೇಶ ಕೇಳಿದಾಗ ಆ ಗೀತೆಯನ್ನು ಬರೆಯಲೇಬೇಕು. ಹಳ್ಳಿಯ ಸನ್ನಿವೇಶದಲ್ಲಿ ನಾಯಕ ಹಾಡು ಹಾಡುತ್ತಿದ್ದರೆ, ಜಾನಪದ ಸೊಗಡು ಇರುವಂತಹ ಸಾಹಿತ್ಯ, ಗ್ರಾಮೀಣ ಭಾಗದಲ್ಲಿ ಮಾತನಾಡುವ ಮಾತುಗಳನ್ನೇ ಸೇರಿಸಿ ಬರೆಯಲೇ ಬೇಕು. ಅಲ್ಲಿಗೆ ಇಂಗ್ಲೀಷ್ ಪದಗಳನ್ನು ಸೇರಿಸಿ ಹಾಡು ಬರೆದರೆ ಅದನ್ನು ನಿರ್ದೇಶಕರು ತಿರಸ್ಕರಿಸಬಹುದು. ಅವರು ಹೇಳಿದಂತೆ ಕೇಳಬೇಕಾಗುವುದು ನಮ್ಮ ಕರ್ತವ್ಯವಾಗುತ್ತದೆ. ಅದರಲ್ಲೂ ನಾನು ಕನ್ನಡ ಪ್ರೇಮಿ. ಸುಮಾರು 2 ಸಾವಿರ ಹಾಡುಗಳನ್ನು ಬರೆದಿದ್ದೇನೆ. ಆ ಹಾಡುಗಳಲ್ಲಿ 100 ಹಾಡುಗಳು ಮಾತ್ರ ಇಂಗ್ಲೀಷ್ ಮತ್ತು ಕನ್ನಡ ಪದಗಳ ಜೋಡಿಸಿ ಬರೆದಿದ್ದೇನೆ. ಉಳಿದ 1900 ಹಾಡುಗಳು ಮಾತ್ರ ಸಂಪೂರ್ಣ ಕನ್ನಡ ಭಾಷೆಯ ಪದಗಳನ್ನೇ ಬಳಸಿ ಬರೆದಂತಹವು. ಅವು ಜನಪ್ರಿಯವಾಗಿವೆ. ನನ್ನ ಈಗಿನ ಇತ್ತೀಚೆಗಿನ ಸಿನಿಮಾ ' ಎಲ್ಲಿದ್ದೇ ಇಲ್ಲೀ ತನಕ' ಸಿನಿಮಾದಲ್ಲಿ 'ಹೈಟು ಆರಡಿ' ಅನ್ನೋ ಹಾಡಿದೆ. ಇದನ್ನು ಹೊರತುಪಡಿಸಿ ಉಳಿದ ಹಾಡುಗಳು ಸಂಪೂರ್ಣ ಕನ್ನಡ ಪದಗಳೇ ಇರುವಂತಹವು.

ಇಲ್ಲಿ ಗಮನಿಸಬೇಕಾಗಿರುವುದು ಸಿನಿಮಾ ಸಾಹಿತ್ಯದಲ್ಲಿ ಆಂಗ್ಲ ಪದಗಳನ್ನು ಬಳಸಿದರೆ 'ಕ್ಯಾಚಿ'ಯಾಗಿರುತ್ತೆ ಅಂತ ನಿರ್ದೇಶಕರು ಕೇಳಿದಾಗ ನಾನು ಬರೆಯದೆ ಇರಲಾಗದು. ಅದಕ್ಕಾಗಿ ನಾನು 100 ಗೀತೆಗಳಲ್ಲಿ ಕನ್ನಡ ಭಾಷೆಯಲ್ಲಿ ಆಂಗ್ಲ ಪದಗಳನ್ನು ಸೇರಿಸಿದ್ದೇನೆ.

ಪುನೀತ್ ರಾಜ್ ಕುಮಾರ್ ನಟನೆಯ 'ಅರಸು' ಚಿತ್ರದ ನೊ ನೊ ನೋ ಟೆನ್ಷನ್ ನೊ ನೊ ನೋ ಟೆನ್ಷನ್.. ಲೈಫ್ ಒಂಥರಾ ಟೆಂಪ್ಟೇಷನ್... ಅನ್ನೋ ಹಾಡು ಬರೆದೆ. ಅದು ಜನಪ್ರಿಯವಾಯಿತು. ನಿರ್ದೇಶಕ ಮಹೇಶ್ ಬಾಬು ಕೂಡ ಸಂತೋಷಪಟ್ಟರು. ಇಲ್ಲಿ ಸಿನಿಮಾ ವ್ಯಾಪಾರವಾಗಿರುವಾಗ ಅದರ ಗೆಲುವಿನ ಕುರಿತು ನಾವು ಯೋಚಿಸಬೇಕು. ಊಟಕ್ಕೆ ಉಪ್ಪಿನಕಾಯಿಯಂತೆ ಅಲ್ಲೋ ಇಲ್ಲೊ ಒಂದು ಹಾಡಿಗೆ ಆಂಗ್ಲ ಪದ ಬಳಕೆಯನ್ನು ಮಾಡಬೇಕು. ಅದನ್ನು ಬಿಟ್ಟು ಉಪ್ಪಿನ ಕಾಯಿಯೇ ಊಟವಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಎಲ್ಲಾ ಹಾಡುಗಳಲ್ಲಿ ಆಂಗ್ಲ ಪದಗಳನ್ನು ಬಳಸುವುದು ನನ್ನ ಪ್ರಕಾರ ತಪ್ಪು ಎಂದು ತಮ್ಮ ಪರಿಸ್ಥಿತಿಯನ್ನು ವಿವರಿಸಿದರು.

ಇದಲ್ಲದೆ, ಕವಿರಾಜ್ 'ಕಂಕಣ' ಅನ್ನೋ ಸಂಘಟನೆ ಕಟ್ಟಿದ್ದಾರೆ. ಅದರ ಮೂಲಕ ರಾಜ್ಯದ ಎಲ್ಲಾ ನಗರಗಳಲ್ಲಿ ಕನ್ನಡ ಭಾಷೆಯನ್ನೇ ಹೆಚ್ಚಾಗಿ ಬಳಸಬೇಕು ಅನ್ನೋ ವಿಚಾರವನ್ನು ಪ್ರಚುರಪಡಿಸುತ್ತಿದ್ದಾರೆ. 250 ಸದಸ್ಯರಿರುವ ಈ ಸಂಘಟನೆಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್, ವಕೀಲರು, ವಿವಿಧ ಕ್ಷೇತ್ರಗಳ ಜನರು ಸ್ವಯಂಪ್ರೇರಿತರಾಗಿ ಸೇರಿಕೊಂಡು ನಗರದೆಲ್ಲೆಡೆ ಕನ್ನಡ ಭಾಷೆಯನ್ನು ಬಳಸಬೇಕು ಎಂದು ಒತ್ತಾಯಿಸುವ ಮೂಲಕ ಕನ್ನಡ ಸೇವೆ ಮಾಡುತ್ತಿದ್ದಾರೆ. ಆ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ.

ಈ ಟಚ್ಚಲಿ ಏನೋ ಇದೆ...ಕಣ್ಣಂಚಲಿ ಸುಳಿ ಮಿಂಚಿದೆ... ಮನದ ಮರದ ಕೋಗಿಲೆ ಕೂ ಎಂದಿದೆ..

ದಮ್ ಚಿತ್ರದ ಈ ಹಾಡಿನ ಸಾಹಿತ್ಯ ಡಾ.ವಿ.ನಾಗೇಂದ್ರ ಪ್ರಸಾದ್ ಅವರದ್ದು, ಈ ಹಾಡಿನಲ್ಲಿ ನಾಯಕಿ ರಕ್ಷಿತಾ ನರ್ತಿಸುತ್ತಾ ಸೇತುವೆಯ ಮೇಲೆ ಬರುತ್ತಿದ್ದರೆ ಸುದೀಪ್ ಮತ್ತೊಂದು ಕಡೆ ತಮ್ಮ ಶೈಲಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಈ ಹಾಡಿಗೆ ಟಚ್ ಸೇರಿದ ಬಗ್ಗೆ, ಜನಪ್ರಿಯವಾದ ಬಗ್ಗೆ ಸಂಗೀತ ನಿರ್ದೇಶಕ ಗುರುಕಿರಣ್ ಅವರನ್ನು ಮಾತನಾಡಿಸಿದಾಗ, ಈ ಹಾಡಿನ ಮೊದಲ ಪದ ಆಂಗ್ಲ ಪದ. ಟಚ್ ಅನ್ನೋ ಪದವನ್ನು ತೆಗೆದುಹಾಕಿದರೆ, ಇದಕ್ಕೆ ಲಯವೇ ಸಿಗುತ್ತಿರಲಿಲ್ಲ. ಹಾಗಾಗಿ ಈ ಹಾಡಿನ ಆರಂಭದಲ್ಲಿ 'ಟಚ್' ಕ್ಯಾಚಿಯಾಗಿದ್ದರಿಂದ ಆ ಪದವನ್ನು ಸೇರಿಸಲಾಯಿತು.

ಆಗ ಲಯಕ್ಕೆ ತಕ್ಕಹಾಗೆ ಹಾಡು ಸಂಯೋಜನೆ ಮಾಡಿದೆ. ಅದನ್ನು ಬಿಟ್ಟು ಈ ಸ್ಪರ್ಶದಲ್ಲಿ ಏನೋ ಇದೆ ಎಂದಿದ್ದರೆ ಅದೊಂದು ಮಾಮೂಲಿ ಹಾಡಾಗುತ್ತಿತ್ತೇನೋ. ಆದರೆ, ಟಚ್ ಸೇರಿಸಿದಾಗ ಇದು ಒಂದು ಬಗೆ ಹೊಸತನ ಅದರಲ್ಲಿ ಕೇಳಿಸಿತು . ಸಿನಿಮಾ ನಿರ್ದೇಶಕ ಬಂದು ನನಗೆ ಸನ್ನಿವೇಶ ವಿವರಿಸುತ್ತಾರೆ. ಅಲ್ಲದೆ, ನಾಯಕನ ಕ್ಯಾರೆಕ್ಟರ್ ವಿವರಿಸುತ್ತಾರೆ. ಆ ಕ್ಯಾರೆಕ್ಟರ್‌‌ಗೆ ತಕ್ಕಹಾಗೆ ನಾನು ಸಾಹಿತ್ಯ ಹುಡುಕಿ ಹಾಡು ಸಿದ್ಧಪಡಿಸುತ್ತೇನೆ. ಈಗ ರೌಡಿ ಕ್ಯಾರೆಕ್ಟರ್‌‌ಗೆ ಕನ್ನಡ ಪದಗಳನ್ನು ಬಳಸಿದರೆ ಅದು ನಾಟಕೀಯವಾಗುತ್ತೆ. ಅದಕ್ಕೆ 'ಕೆಂಚಾಲೋ ಮಂಚಾಲೋ ಎಂಗೌಳಾ ನಿನ್ ಡೌವ್‌‌ಗಳು' ಅನ್ನೋ ಹಾಡು ಸಿದ್ದವಾಯಿತು. ಹಾಗಂತ ಕನ್ನಡ ಭಾಷೆಯ ಬೆಳವಣಿಗೆಗೆ ಸಹಕರಿಸುವುದಿಲ್ಲ ಅಂತಲ್ಲ. ನಾನು ಹುಟ್ಟಿರುವುದು ಕನ್ನಡ ನೆಲದಲ್ಲಿ ನಾನು ಊಟ ಮಾಡುತ್ತಿರುವುದು ಕನ್ನಡ ನೆಲದಲ್ಲಿ, ಹಾಗಾಗಿ ಇಲ್ಲಿ ನನ್ನ ಭಾಷೆ ಕನ್ನಡವೆ ಆಗಿದೆ. ನನ್ನ ಹೊಸ ಚಿತ್ರ 'ಆಯುಷ್ಮಾನ್ ಭವ'ದಲ್ಲಿ ಒಂದು ಹಾಡಿದೆ, ಆ ಹಾಡು ಸಮುದ್ರದಲ್ಲಿ ದೋಣಿಯಲ್ಲಿ ನಾಯಕ ನಾಯಕಿ ಹಾಡುತ್ತಿರುವುದು. ಈ ಹಾಡಿಗೆ ತುಳು ಪದಗಳನ್ನು ಬಳಸಿದ್ದೇನೆ. ಅದೇ ಹಾಡಿನಲ್ಲಿ ಮಲಯಾಳಂ ಭಾಷೆಯ ಜಾನಪದ ಪದಗಳನ್ನು ಬಳಸಿದ್ದೇನೆ. ಅದು ಕೇರಳದಲ್ಲಿ ಚಿತ್ರೀಕರಣ ಮಾಡಿರುವುದರಿಂದ ಕೇರಳದ ಭಾಷೆ ಮಳಯಾಳಂ ಆ ಭಾಷೆಯ ಪದಗಳನ್ನು ಜೋಡಿಸಿದ್ದೇನೆ. ಇದು ಚಿತ್ರ ನಿರ್ದೇಶಕರು ನಮಗೆ ಸನ್ನಿವೇಶ ವಿವರಿಸಿದಾಗ ನಾನು ಅದನ್ನು ನನ್ನ ಸಂಗೀತದ ದೃಷ್ಟಿಯಿಂದ ನೋಡಿ ಅದಕ್ಕೆ ಪದಗಳನ್ನು ಅಳವಡಿಸುವಂತೆ ಸಾಹಿತಿಗಳ ಬಳಿ ಕೇಳಿ ಅಳವಡಿಸಿಕೊಂಡು ಸಂಗೀತ ನೀಡುತ್ತೇನೆ. ಹಾಗಾದಾಗ ಆ ಚಿತ್ರ ಗೆಲುವು ಪಡೆಯಲು ಸಹಕಾರಿಯಾಗುತ್ತೆ. ನಿರ್ಮಾಪಕನಿಗೂ ಹಣ ತಂದುಕೊಡುತ್ತೆ ಎನ್ನುತ್ತಾರೆ ಗುರುಕಿರಣ್.

ವಾಣಿಜ್ಯ ಮಂಡಳಿಗೆ ತನ್ನದೇ ಆದ ಮಿತಿಗಳಿವೆ

ಕನ್ನಡ ಸಿನಿಮಾಗಳಲ್ಲಿ ಆಂಗ್ಲ ಪದಗಳನ್ನು ಬಳಸುವುದನ್ನು ಆರಂಭದಲ್ಲಿಯೇ ಕಡಿವಾಣ ಹಾಕಬೇಕಾಗಿರುವುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಯಾಕೆಂದರೆ ಶೀರ್ಷಿಕೆ ನೋಂದಾಯಿಸಲು ವಾಣಿಜ್ಯ ಮಂಡಳಿಗೆ ಬರುವ ನಿರ್ಮಾಪಕರು ಇಲ್ಲಿಂದಲೇ ಚಟುವಟಿಕೆಗಳು ಆರಂಭಿಸುತ್ತಾರೆ. ಇಲ್ಲಿಯೂ ಕನ್ನಡ ಭಾಷೆಯ ಬೆಳವಣಿಗೆಗೆ ಹಿಂದೆ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿರುವುದು ಉಂಟು. ಆದರೆ, ಈ ಕುರಿತು ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯರಾಮನ್ ಡಿ.ಆರ್. ಅವರನ್ನು ಸಂಪರ್ಕಿಸಿದಾಗ ವಾಣಿಜ್ಯ ಮಂಡಳಿ ಈ ವಿಷಯದಲ್ಲಿ ಇಕ್ಕಟ್ಟಿಗೆ ಸಿಲುಕಿಕೊಂಡಿದೆ ಎಂಬುದು ತಿಳಿದುಬಂತು.

ನಿರ್ದೇಶಕರು ಆಂಗ್ಲ ಪದಗಳನ್ನೇ ಶೀರ್ಷಿಕೆಯಾಗಿ ಇಟ್ಟುಕೊಂಡೇ ಬರುತ್ತಾರೆ. ಇದನ್ನು ನೋಂದಾಯಿಸಿ ಸರ್ ಅಂತಾರೆ, ಬೇಡಪ್ಪ ಇದನ್ನು ಬದಲಾಯಿಸಿ ಅಂದರೆ, ಇಲ್ಲ ಸರ್, ಇದು ಕ್ಯಾಚಿಯಾಗಿದೆ ಅದಕ್ಕಾಗಿ ಇದನ್ನೇ ರಿಜಿಸ್ಟರ್ ಮಾಡಿ ಎನ್ನುತ್ತಾರೆ. ಈ ವಿಷಯದಲ್ಲಿ ನಾವು ಸಲಹೆ ಕೊಡಬಹುದು. ಅದನ್ನು ಬಿಟ್ಟು ನಾವು ಬಲವಂತ ಮಾಡಲಾಗದು. ಇದೇ ರೀತಿ ಎಷ್ಟೊ ಸಿನಿಮಾಗಳಿಗೆ ಬುದ್ಧಿವಾದ ಹೇಳಿದ್ದಕ್ಕೇ ನ್ಯಾಯಾಲಯದ ಮೆಟ್ಟಿಲು ಹತ್ತಿ ವಿಚಾರಣೆ ಎದುರಿಸುತ್ತಿದ್ದೇವೆ. ಈಗಲೂ ಪ್ರಕರಣಗಳು ನ್ಯಾಯಾಲಯಗಳಲ್ಲಿ ಇವೆ. ಆದ್ದರಿಂದ ನಮಗೂ ಕನ್ನಡ ಭಾಷೆಯ ಬಗ್ಗೆ ಗೌರವ ಇದೆ. ಅದನ್ನು ಉಳಿಸಿಕೊಳ್ಳುವ ಪರದಾಡುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮ ರಾಜ್ಯದಲ್ಲಿ ವಿಚಿತ್ರ ಸನ್ನಿವೇಶ ಇದೆ. ಕೇರಳದಲ್ಲಿ ಮಳಯಾಳಂ ಚಿತ್ರ ಬಿಟ್ಟರೆ ಬೇರೆ ಚಿತ್ರಗಳನ್ನು ಜನ ನೋಡುವುದಿಲ್ಲ. ತಮಿಳುನಾಡಿನಲ್ಲಿ ತಮಿಳು, ಆಂಧ್ರದಲ್ಲಿ ತೆಲುಗು ನೋಡುತ್ತಾರೆ. ಆದರೆ, ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೆಲ್ಲಾ ಚಿತ್ರಗಳು ಹಿಟ್ ಆಗುತ್ತವೆ. ಈ ವಿಚಿತ್ರ ಪರಿಸ್ಥಿತಿಗೆ ಅಳಬೇಕೋ ನಗಬೇಕೋ ತಿಳಿಯುತ್ತಿಲ್ಲ. ಎಲ್ಲಾ ನಿರ್ದೇಶಕರು, ನಿರ್ಮಾಪಕರು ಹಣ ಗಳಿಕೆಯ ಉದ್ದೇಶದಿಂದಲೇ ಸಾಹಿತಿಗಳ ಬಳಿ ಹೋಗುತ್ತಾರೆ. ಒಬ್ಬರಲ್ಲ ಅಂದರೆ, ಮತ್ತೊಬ್ಬರ ಬಳಿ ಹೋಗುತ್ತಾರೆ.  ಕನ್ನಡ ಚಿತ್ರರಂಗದಲ್ಲಿ ಹಣಗಳಿಕೆ ಮುಖ್ಯ ಉದ್ದೇಶ, ಈ ಉದ್ದೇಶದಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ಕಾರಣದಿಂದಲೇ ರಾಜ್ಯದಲ್ಲಿ ಕನ್ನಡವನ್ನು ಬಿಟ್ಟು ಇತರೆ ಭಾಷೆ ಚಿತ್ರಗಳು ಗೆಲ್ಲುತ್ತಿವೆ ಎನ್ನುತ್ತಾರೆ ಜಯರಾಮನ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು