ಸೋಮವಾರ, ಸೆಪ್ಟೆಂಬರ್ 16, 2019
22 °C

ಕೇರಳದಲ್ಲಿ ಕನ್ನಡದ ‘ಹನಿಮೂನ್‌’

Published:
Updated:
Prajavani

ಹನಿಮೂನ್‌ಗೆ ಹೋಗುವ ಜೋಡಿಗಳು ಏಕಾಂತ ಕಳೆಯಲು ಆಯ್ಕೆ ಮಾಡಿಕೊಳ್ಳುವ ಸುಂದರ ತಾಣಗಳ ಪೈಕಿ ಕೇರಳದ ಆಲಪ್ಪುಳ (ಆಲೆಪ್ಪಿ) ಒಂದಾಗಿರುತ್ತದೆ. ಇದೇ ತಾಣದಲ್ಲಿ ಚಿತ್ರೀಕರಣವಾಗಿರುವ ‘ಹನಿಮೂನ್‌’ ವೆಬ್‌ ಸರಣಿ ಸದ್ಯದಲ್ಲೇ ಡಿಜಿಟಲ್‌ ಪ್ಲಾಟ್‌ಫಾರಂನಲ್ಲಿ ಪ್ರಸಾರವಾಗಲಿದೆ. ಇದರಲ್ಲಿ ಏನಪ್ಪಾ ವಿಶೇಷ ಅಂತೀರಾ, ವಿಶೇಷತೆ ಇದೆ; ಏಳು ಎಪಿಸೋಡ್‌ಗಳಲ್ಲಿ ಪ್ರಸಾರವಾಗಲಿರುವ ‘ಹನಿಮೂನ್‌’ ವೆಬ್‌ ಸರಣಿಯು ಶಿವರಾಜ್ ಕುಮಾರ್ ಹಾಗೂ ನಿವೇದಿತಾ ಶಿವರಾಜ್ ಕುಮಾರ್ ಅವರ ಶ್ರೀ ಮುತ್ತು ಸಿನಿ ಸರ್ವಿಸಸ್ ಹಾಗೂ ಸಕ್ಕತ್ ಸ್ಟುಡಿಯೋ ಸಹನಿರ್ಮಾಣದಲ್ಲಿ ತಯಾರಾಗಿರುವ ಕನ್ನಡದ ವೆಬ್‌ ಸರಣಿಯಾಗಿದೆ.

ಹೊಸ ಬಾಳಿಗೆ ಕಾಲಿಟ್ಟ ಜೋಡಿಗಳು ಭಾವನಾತ್ಮಕವಾಗಿ ಬೆಸೆದುಕೊಳ್ಳುವ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ, ಫ್ಯಾಮಿಲಿ ಫ್ಲಾನಿಂಗ್‌ ಮಾಡುವುದರ ಸುತ್ತ ಹೆಣೆದಿರುವ ಈ ವೆಬ್‌ ಸರಣಿಯಲ್ಲಿ, ಆಲಪ್ಪುಳದ ಸ್ಥಳೀಯ ಜನಜೀವನದ ದರ್ಶನವೂ ಆಗಲಿದೆ. ಅಲ್ಲದೆ, ಆಲೆಪ್ಪಿ ಮತ್ತು ಸುತ್ತಮುತ್ತಲಿನ ಸುಂದರ ತಾಣಗಳ ಪ್ರಾಕೃತಿಕ ಸೌಂದರ್ಯ, ಬೋಟ್‌ ಹೌಸ್‌ ಸೊಬಗಿನ ದರ್ಶನವೂ ಆಗಲಿದೆ. ಹನ್ನೆರಡು ದಿನಗಳ ಕಾಲ ಆಲಪ್ಪುಳದಲ್ಲಿ ಶೂಟಿಂಗ್‌ ನಡೆಸಿದ್ದೇವೆ. ಬಾಕಿ ಉಳಿದಿರುವ 6 ದಿನಗಳ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ ಎನ್ನುತ್ತಾರೆ ಸಕ್ಕತ್ ಸ್ಟುಡಿಯೋದ ಆರ್‌.ಜೆ. ಪ್ರದೀಪ.

ನಾಗಭೂಷಣ ಹಾಗೂ ಸಂಜನಾ ಆನಂದ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ವೆಬ್‌ ಸರಣಿಯಲ್ಲಿ ಮಲೆಯಾಳಂನ ಹಲವು ಕಲಾವಿದರು ನಟಿಸಿದ್ದಾರೆ. ಬಹದ್ದೂರ್, ಭರ್ಜರಿ ಹಾಗೂ ಯಜಮಾನ ಸಿನಿಮಾಗಳಿಗೆ ತಮ್ಮ ಕ್ಯಾಮೆರಾ ಕೈಚಳಕ ತೋರಿದ ಶ್ರೀಶ ಕೂಡುವಳ್ಳಿ ಈ ಸರಣಿಯನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರಂತೆ. ವಾಸುಕಿ ವೈಭವ್ ಅವರ ಸಂಗೀತವೂ ‘ಹನಿಮೂನ್‌’ ಸುಂದರಗೊಳಿಸಿದೆಯಂತೆ.

ಶಿವಣ್ಣ ಅವರೊಂದಿಗೆ ನಿರ್ಮಿಸಿರುವ ‘ಹೇಟ್ ಯು ರೋಮಿಯೋ’ ವೆಬ್ ಸರಣಿಯ ಬಿಡುಗಡೆಯ ನಂತರ ‘ಹನಿಮೂನ್‌’ ಸರಣಿಯನ್ನು ಬಿಡುಗಡೆ ಮಾಡಲಾಗುವುದು. ಒಂದು ವರ್ಷದಲ್ಲಿ ಕನಿಷ್ಠ ಎಂಟು ವೆಬ್‌ ಸರಣಿಗಳನ್ನು ನಿರ್ಮಿಸುವ ಗುರಿ ಇದೆ. ಕನ್ನಡದಲ್ಲಿ ವೆಬ್‌ ಸರಣಿಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಉದ್ದೇಶವೂ ಇದೆ. ಈ ವರ್ಷದಲ್ಲಿ ಇನ್ನೂ ಎರಡು ವೆಬ್‌ ಸರಣಿಗಳನ್ನು ನಿರ್ಮಿಸುವ ಯೋಜನೆ ಇದೆ. ಒಂದು ಸರಣಿಯಲ್ಲಿ ಕನ್ನಡದ ಹಿರಿಯ ನಟರೊಬ್ಬರು ಅಭಿನಯಿಸಲಿದ್ದಾರೆ ಎನ್ನುವ ಮಾತು ಸೇರಿಸಿದರು ಪ್ರದೀಪ್‌. ಆದರೆ, ಆ ಹಿರಿಯ ನಟ ಯಾರೆನ್ನುವ ಸೀಕ್ರೆಟ್‌ ಅನ್ನು ತಮ್ಮಲ್ಲೇ ಉಳಿಸಿಕೊಂಡರು. 

‘ಆಲಪ್ಪುಳದ ಜಿಲ್ಲಾಧಿಕಾರಿಯಾಗಿರುವ ಮಂಡ್ಯದ ಸುಹಾಸ್‌ ಅವರ ಸಹಕಾರವನ್ನು ನಾವು ಎಂದೂ ಮರೆಯುವುದಿಲ್ಲ. ಇಲ್ಲಿಂದ ಯಾರೇ ಕನ್ನಡಿಗರು ಅಲ್ಲಿ ಚಿತ್ರೀಕರಣಕ್ಕೆ ಹೋದರೆ ಸುಹಾಸ್‌ ತುಂಬು ಮನಸಿನಿಂದ ಸಹಕಾರ ಕೊಡುತ್ತಾರೆ. ಅವರಿಗೆ ಕನ್ನಡ ಸಿನಿಮಾಗಳೆಂದರೆ ತುಂಬಾ ಇಷ್ಟವಂತೆ. ಅಲೆಪಿಯನ್ನು ಇನ್ನಷ್ಟು ಅತ್ಯುತ್ತಮ ಪ್ರವಾಸಿ ತಾಣವಾಗಿ ಪ್ರಚುರಪಡಿಸಲು ಅವರು ಸಿಕ್ಕಿದ ಎಲ್ಲ ಅವಕಾಶವನ್ನೂ ಬಳಸಿಕೊಳ್ಳುತ್ತಿದ್ದಾರಂತೆ’ ಎಂದು ಹೇಳಲು ಪ್ರದೀಪ್‌ ಮರೆಯಲಿಲ್ಲ. 

Post Comments (+)