ತೈಮೂರ್‌ಗೆ ಅಮ್ಮನೇ ಡಯೆಟಿಷಿಯನ್!

ಬುಧವಾರ, ಜೂನ್ 19, 2019
25 °C

ತೈಮೂರ್‌ಗೆ ಅಮ್ಮನೇ ಡಯೆಟಿಷಿಯನ್!

Published:
Updated:
Prajavani

ಬಾಲಿವುಡ್‌ ಜೋಡಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಮಗ ತೈಮೂರ್ ಅಲಿ ಖಾನ್ ಹೊರಗೆ ಬಂದರೆ ಸಾಕು ಕ್ಯಾಮೆರಾಗಳ ಫ್ಲ್ಯಾಷ್ ಲೈಟ್‌ಗಳು ಸದ್ದು ಮಾಡತೊಡಗುತ್ತವೆ. ತೈಮೂರ್ ಕೂತಿರಲಿ, ನಿಂತಿರಲಿ ಅವನ ಬಗ್ಗೆ ದಿನಕ್ಕೊಂದು ಸುದ್ದಿಯಂತೂ ಇದ್ದೇ ಇರುತ್ತದೆ. 

ಮೂರು ವರ್ಷದವನಾಗಿರುವ ತೈಮೂರ್ ಬಗ್ಗೆ ಅಮ್ಮ ಕರೀನಾ ಕಪೂರ್ ತುಂಬಾ ಕಾಳಜಿ ವಹಿಸುತ್ತಾರೆ. ಅದರಲ್ಲೂ ವಿಶೇಷವಾಗಿ ತೈಮೂರ್ ಜತೆಗೆ ಯಾವುದಾದರೂ ಪಾರ್ಟಿಗಳಿಗೆ ಹೋದಾಗ ತೈಮೂರ್ ಎಲ್ಲಿ ಏನು ತಿನ್ನುತ್ತಾನೆ ಅನ್ನುವ ಬಗ್ಗೆ ನಿಗಾ ವಹಿಸುವುದೇ ಕರೀನಾ ಕೆಲಸವಾಗಿಬಿಟ್ಟಿದೆ. ಅದಕ್ಕಾಗಿಯೇ ಕರೀನಾ ತನ್ನ ಮಗನಿಗಾಗಿ ಹೊರಗಿನ ಊಟ–ತಿಂಡಿಗೆ ಬ್ರೇಕ್ ಹಾಕಿದ್ದಾರಂತೆ. 

‘ತೈಮೂರ್‌ನನ್ನು ಕರೆದುಕೊಂಡು ಹೊರಗೆ ಹೋದಾಗ ಅವನಿಗೆ ಹೊರಗಿನ ಊಟ ತಿನ್ನಲು ಬಿಡೋದಿಲ್ಲ. ಅದು ತಪ್ಪು ಅಂತ ನನಗೆ ಗೊತ್ತು. ಆದರೂ ತಾಯಿಯಾಗಿ ಅವನು ಹೊರಗಿನ ಊಟ ತಿನ್ನುವುದು ನನಗಿಷ್ಟವಿಲ್ಲ. ಆದರೆ, ಸೈಫ್ ಆಗಾಗ ತೈಮೂರ್‌ಗೆ ಚಿಪ್ಸ್ ತಿನ್ನಲು ಬಿಡುತ್ತಾರೆ’ ಎನ್ನುತ್ತಾರೆ ಕರೀನಾ. 

ತೈಮೂರ್ ಆಹಾರ ಮತ್ತು ಆರೋಗ್ಯದ ಬಗ್ಗೆ ಸಾಮಾನ್ಯ ತಾಯಂದಿರಂತೆಯೇ ಕಾಳಜಿ ವಹಿಸುವ ಕರೀನಾ, ಆತನಿಗಾಗಿ ಮನೆಯಲ್ಲೇ ಕಿಚಡಿ, ಇಡ್ಲಿ ಮತ್ತು ದೋಸೆ ಮಾಡಿಕೊಡುತ್ತಾರೆ. ಮುಖ್ಯವಾಗಿ ತೈಮೂರ್‌ಗಾಗಿ ಪ್ರತಿ ತಿಂಗಳು ಡಯೆಟ್‌ ಪ್ಲಾನಿಂಗ್ ಮಾಡುವುದು ಕರೀನಾ ಮರೆಯುವುದಿಲ್ಲ. ಪ್ರತಿ ತಿಂಗಳೂ ತೈಮೂರ್ ಡಯೆಟ್ ಚಾರ್ಟ್‌ ಬದಲಾಗುತ್ತಲೇ ಇರುತ್ತದೆ. 

‘ಪ್ರತಿ ತಿಂಗಳೂ ಕೂತು ತೈಮೂರ್ ಡಯೆಟ್ ಪ್ಲಾನಿಂಗ್ ಮಾಡ್ತೀನಿ. ಈ ತಿಂಗಳು ಯಾವ ಹಣ್ಣು ಮತ್ತು ತರಕಾರಿ ತಿನ್ನಬೇಕು ಅನ್ನುವುದನ್ನು ಪಟ್ಟಿಮಾಡುತ್ತೇನೆ.  ತೈಮೂರ್ ಕೂಡಾ ಇದನ್ನು ಎಂಜಾಯ್ ಮಾಡ್ತಾನೆ. ಇತ್ತೀಚೆಗೆ ಅವನಿಗೆ ಊಟದಲ್ಲಿ ಪಾಲಕ್ ಸೊಪ್ಪು ಹಾಕಿ ಅಡುಗೆ ಮಾಡಿಕೊಟ್ಟಿದ್ದೆ. ಮೊದಮೊದಲು ಅವನು ಅದನ್ನು ಇಷ್ಟಪಡಲಿಲ್ಲ. ಅದು ಅವನ ಗಂಟಲಿನಿಂದ ಕೆಳಗೆ ಇಳಿಯುತ್ತಲೇ ಇರಲಿಲ್ಲ. ಆದರೆ, ಈಗ ಪಾಲಕ್ ಅಡುಗೆಯನ್ನು ತೈಮೂರ್ ಇಷ್ಟಪಟ್ಟು ತಿನ್ನುವಂತಾಗಿದ್ದಾನೆ’ ಎಂದು ವಿವರಿಸುತ್ತಾರೆ ಕರೀನಾ. 

 ತೈಮೂರ್ ಹುಟ್ಟಿದ ನಂತರ ತುಸು ದಪ್ಪಗಾಗಿದ್ದ ಕರೀನಾ ಈಗ ಮತ್ತೆ ಮೊದಲಿನಂತೆ ದೇಹಾಕೃತಿ ಪಡೆಯಲು ಕಸರತ್ತು ನಡೆಸತೊಡಗಿದ್ದಾರೆ. ಒಂದು ವರ್ಷದಿಂದ ಕಟ್ಟುನಿಟ್ಟಾಗಿ ಆಹಾರ ಪಥ್ಯ ಮಾಡಿ, ಜಿಮ್‌ನಲ್ಲಿ ಬೆವರು ಹರಿಸುತ್ತಿರುವ ಕರೀನಾ, ಬಹುತೇಕ ಮೊದಲಿನ ತೂಕಕ್ಕೇ ಮರಳಿದ್ದಾರೆ. 

‘ಗುಡ್‌ನ್ಯೂಸ್’ಚಿತ್ರದ ಮೂಲಕ ಕರೀನಾ ಮತ್ತೆ ಬೆಳ್ಳಿತೆರೆಗೆ ಮರಳಲಿದ್ದು, ಚಿತ್ರ ಇದೇ ವರ್ಷ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಕರೀನಾ, ಅಕ್ಷಯ್‌ಕುಮಾರ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !