ಗುರುವಾರ , ಏಪ್ರಿಲ್ 22, 2021
22 °C

ಕತ್ರಿನಾ ಹೇಳುತ್ತಿದ್ದಾರೆ ‘ದೇಸಿ ನಾ’!

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಕತ್ರಿನಾ ಕೈಫ್ ಎಂಬ ಹೆಸರಿನ ಪಕ್ಕ ಬಾರ್ಬಿ ಡಾಲ್ ಎನ್ನುವ ಗುಣವಿಶೇಷಣ ಅಂಟಿಕೊಂಡಿದೆ. ವರ್ಷಗಳು ಉರುಳಿದರೂ ಅದು ಹೋಗುತ್ತಿಲ್ಲ. ಆ ಮುದ್ದುಬೊಂಬೆಯನ್ನು ಹೆಸರಿಗೆ ಅಂಟಿಸಿಕೊಂಡೇ ಇರುವ ಅವರಿಗೆ ಆ ಕುರಿತು ಮುಜುಗರವೇನೂ ಇಲ್ಲ. ‘ನಿಂದಕರು ಇರಬೇಕು’ ಎಂಬ ದಾಸವಾಣಿಯನ್ನು ಕಣ್ಣಿಗೊತ್ತಿಕೊಂಡವರು ಕತ್ರಿನಾ. ಹಾಗಾಗಿಯೇ ಟೀಕೆ-ಟಿಪ್ಪಣಿಗಳ ಮೇಲೆ ಎಷ್ಟು ಬೇಕೋ ಅಷ್ಟು ಕಣ್ಣಾಡಿಸುತ್ತಾರೆ. ಯಾವುದೂ ಮನಸ್ಸಿಗೆ ಗಾಸಿ ಮಾಡಕೂಡದು ಎಂದು ನಿಗಾ ವಹಿಸುತ್ತಾರೆ.

ಬಾಲಿವುಡ್ ಗಲ್ಲಿಗಳಿಗೆ ಕತ್ರಿನಾ ಏಕಾಏಕಿ ಕಾಲಿಡಲಿಲ್ಲ. ಕಾಶ್ಮೀರಿ ಆದರೂ ಬೇರೆ ದೇಶಗಳಲ್ಲಿ ಬೆಳೆದ ಮಗಳಾದದ್ದರಿಂದ ಹಿಂದಿ ಬರುತ್ತಿರಲಿಲ್ಲ. ಮೊದಮೊದಲು ಮಾಡೆಲಿಂಗ್ ಮಾಡಿದರು. ಒಂದೊಂದೇ ಮೆಟ್ಟಿಲು ಏರುತ್ತಾ ಮೂರು ವರ್ಷ ಅಲ್ಲಿ ಮುದ್ದು ಚಹರೆಗೆ ಅಸ್ಮಿತೆಯ ಮೊಹರು ಬೀಳುವಂತೆ ನೋಡಿಕೊಂಡರು. ಆಮೇಲೆ ದಕ್ಷಿಣ ಭಾರತೀಯ ಚಿತ್ರರಂಗದ ಗಾಳಿ ಬೀಸಿದ್ದೇ ಅಲ್ಲಿ ತೂರಿಕೊಂಡರು. ಈ ಬಾರ್ಬಿ ಡಾಲ್ ಕೊನೆಗೂ ಬಾಲಿವುಡ್ ಗೆ ಬೇಕಾಯಿತು. ಆಡಿಷನ್ ಗಳು, ವೈಫಲ್ಯಗಳು, ಹಿಂದಿ ತೊದಲುವ ಹುಡುಗಿ ಎಂಬ ಟೀಕೆ ಎಲ್ಲವನ್ನೂ ನುಂಗಿಕೊಂಡೇ ಅವರು ಅಭಿನಯದ ಲೋಕದ ಗಂಧ ಸವರಿಕೊಂಡಿದ್ದು.

ನೃತ್ಯದಲ್ಲಿ ಕತ್ರಿನಾ ಸದಾ ಸೈ. ಸೌಂದರ್ಯದಲ್ಲಿ ಎರಡು ಮಾತಿಲ್ಲ. ದೇಸಿತನಕ್ಕೆ ಪೂರ್ಣ ಹೊರತಾದ ಮುಖವರ್ಣ. ಹೀಗಾಗಿ ಕತ್ರಿನಾ ಇಲ್ಲಿನವರಾಗಲು ಹೆಚ್ಚೇ ಶ್ರಮ ಪಡಬೇಕಾಯಿತು. ಅವರ ಸಹನಟರಲ್ಲಿ ಒಬ್ಬರು, ‘ಬಹುಶಃ ನಾವೆಲ್ಲ ಎಷ್ಟು ಕಷ್ಟ ಪಟ್ಟಿರುತ್ತೇವೆಯೋ ಅದಕ್ಕಿಂತ ಇಪ್ಪತ್ತೈದು ಪಟ್ಟು ಹೆಚ್ಚು ಕಷ್ಟ ಪಟ್ಟಿರಬಹುದಲ್ಲವೇ’ ಎಂಬ ಪ್ರಶ್ನೆ ಹಾಕಿದ್ದರು.

ಕತ್ರಿನಾ ಮಿತಿ ಅರಿತ ನಟಿ. ಸಣ್ಣದೊಂದು ಐಟಂ ಸಾಂಗ್ ಡಾನ್ಸ್ ನಿಂದ ದೀರ್ಘ ಕಾಲ ನೋಡುಗರು ಕಣ್ಣು ಕೀಲಿಸುವಂತೆ ಮಾಡಬಲ್ಲ ಅವರಿಗೆ ಇಲ್ಲಿನ ಭಾಷೆ, ಭಾವ ಜೀರ್ಣಿಸಿಕೊಳ್ಳಲು ಹೆಚ್ಚೇ ಸಮಯ ಹಿಡಿಯಿತು. ತಮಾಷೆಯಾಗಿ ಕೆಲವರು ಕಾಲೆಳೆದರೂ ಅರ್ಥವಾಗದ ಕಾಲವಿತ್ತು. ಅದೀಗ ಮಾಯ.

ಸಿನಿಮಾ ಮಕಾಡೆಯಾದರೆ ಸಹಜವಾಗಿಯೇ ಅವರಿಗೂ ಸಂಕಟವಾಗುತ್ತದೆ. ಆಗೆಲ್ಲ ಅವರು ಕೆಲವು ನಿಮಿಷ ಕಣ್ಮುಚ್ಚಿ ಒಳ್ಳೆಯದನ್ನು ನೆನಪಿಸಿಕೊಳ್ಳುವರಂತೆ. ಹಳೆಯ ಯಾವುದೋ ಫೋಟೊ ನೋಡಿ, ‘ಆಗ ಸಣ್ಣಗಿದ್ದ ಮಚ್ಚೆ ಈಗ ಸ್ವಲ್ಪ ದಪ್ಪ ಆಗಿದೆಯಲ್ಲ’ ಎಂದೋ, ‘ಒಂದಿಂಚು ಆಗ ದಪ್ಪಗೆ ಇದ್ದಿದ್ದರೆ ನನಗೂ ಇಂಡಿಯನ್ ಲುಕ್ ಬರುತ್ತಿತ್ತೇನೋ’ ಎಂದೋ ಅವರು ಅಂದುಕೊಂಡು ಸುಮ್ಮನಾಗುತ್ತಾರೆ. ಅವರ ಪ್ರಕಾರ ಅದು ಹಳಹಳಿಕೆ ಅಲ್ಲ; ನೆನಪನ್ನು ಕೆದಕಿ, ಭವಿಷ್ಯಕ್ಕೆ ಸಜ್ಜಾಗುವ ರೀತಿ.

ಸಲ್ಮಾನ್ ಖಾನ್, ಕತ್ರಿನಾ ಅವರ ಬಳಿಗೆ ಪದೇ ಪದೇ ಅವಕಾಶದ ಏಣಿ ಹೊತ್ತೊಯ್ದು ಇರಿಸಿದ್ದಾರೆ. ಅದನ್ನು ಚಕಚಕನೆ ಅಲ್ಲದಿದ್ದರೂ, ನಿಧ ನಿಧಾನವಾಗಿ ಏರಿದವರು ಈ ನಟಿ. ‘ಭಾರತ್’ ಹಿಂದಿ ಸಿನಿಮಾದಲ್ಲಿ ಸಲ್ಮಾನ್ ಖಾನ್ ಆವರಿಸಿಕೊಂಡಿದ್ದರೂ, ತೂಕದ ಪಾತ್ರದಲ್ಲಿ ಕತ್ರಿನಾ ಛಾಪು ಮೂಡಿಸಿದ್ದಾರೆ. ಅಭಿನಯ, ಟೈಮಿಂಗ್ ಮೂಲಕ ದೇಸಿ ಆಗಬಹುದಾದ ಛಾತಿ ತಮಗೂ ಇದೆ ಎನ್ನುವುದನ್ನು ರುಜುವಾತುಪಡಿಸಿದ್ದಾರೆ.

ಕತ್ರಿನಾ ಹೆಚ್ಚು ಹೊತ್ತು ಕನ್ನಡಿ ಮುಂದೆ ನಿಂತ ದಿನಗಳು ಹಲವು. ಈಗ ಅವರು ಕಣ್ಮುಚ್ಚಿದರೆ ಸಾಕು, ಮಾಯಾಕನ್ನಡಿಯೊಂದು ತೆರೆದುಕೊಳ್ಳುವುದಂತೆ. ಅದರಲ್ಲಿ ಅವರದ್ದೇ ಚೆಂದದ ಹಳೆಯ ಫೋಟೊಗಳು, ದೃಶ್ಯಗಳು, ಹಾಡುಗಳು, ನೃತ್ಯ, ಫೋಟೊಶೂಟ್ ಎಲ್ಲ ಬಿಚ್ಚಿಕೊಳ್ಳುತ್ತವೆಯಂತೆ. ಆಗ ‘ನಾನು ಇಷ್ಟು ವರ್ಷ ಏನೆಲ್ಲ ಕೆಲಸ ಮಾಡಿದ್ದೇನೆ’ ಎಂಬ ಧನ್ಯತಾಭಾವ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು