ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಣ್ಣ ಹೇಳಿದ ಜೀವನ ಪಾಠ

Last Updated 11 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಅಂದು ರಮಣ ಮಹರ್ಷಿ ಅಂಧರ ಆಶ್ರಮದಲ್ಲಿ ಸಂಭ್ರಮ ಮನೆ ಮಾಡಿತ್ತು. ‘ಹ್ಯಾಟ್ರಿಕ್ ಹೀರೊ’ ಶಿವರಾಜ್‌ಕುಮಾರ್‌ ಮೊದಲ ಬಾರಿಗೆ ಅಂಧನಾಗಿ ನಟಿಸಿರುವ ‘ಕವಚ’ ಚಿತ್ರದ ಟೀಸರ್‌ ಬಿಡುಗಡೆಯ ಸಮಾರಂಭ ಅದು. ಮಕ್ಕಳೊಟ್ಟಿಗೆ ಬೆರೆತ ಶಿವಣ್ಣ, ‘ನೀವು ಹೋಗಬೇಕಾದರೆ ಇನ್ನೊಬ್ಬರ ಕವಚ ಆಗಿರಿ’ ಎಂದು ಜೀವನ ಪಾಠ ಹೇಳಿದರು. ಈ ಮಾತು ನೆರೆದಿದ್ದವರ ಹೃದಯ ತಟ್ಟಿತು.

ಶಿವಣ್ಣ ರಿಮೇಕ್‌ ಚಿತ್ರಗಳಲ್ಲಿ ನಟಿಸಿ ಸರಿಸುಮಾರು ಒಂದೂವರೆ ದಶಕ ಕಳೆದಿದೆ. ‘ನಾನು ರಿಮೇಕ್‌ ಚಿತ್ರಗಳಲ್ಲಿ ನಟಿಸುವುದಿಲ್ಲ’ ಎಂದು ಅವರು ಪ್ರತಿಜ್ಞೆ ಮಾಡಿದ್ದರು. ಆದರೆ, ಮಲಯಾಳ ಚಿತ್ರ ‘ಒಪ್ಪಂ’ ನೋಡಿದಾಕ್ಷಣ ಈ ಸಿನಿಮಾದ ರಿಮೇಕ್‌ನಲ್ಲಿ ನಾನು ನಟಿಸಬೇಕು ಎಂದು ಅವರು ನಿರ್ಧರಿಸಿದ್ದು, ಈಗ ಹಳೆಯ ಸುದ್ದಿ. ಚಿತ್ರೀಕರಣ ಪೂರ್ಣಗೊಂಡಿದ್ದು ಸಿನಿಮಾ ಬಿಡುಗಡೆಯ ಹಂತದಲ್ಲಿದೆ. ‘ಒಪ್ಪಂ’ನಲ್ಲಿ ಮೋಹನ್‍ಲಾಲ್‌ ನಟಿಸಿದ್ದ ಪಾತ್ರಕ್ಕೆ ಕನ್ನಡದಲ್ಲಿ ಶಿವಣ್ಣ ಜೀವ ತುಂಬಿದ್ದಾರೆ.

ನಿರ್ಮಾಪಕರ ಅಪೇಕ್ಷೆಯಂತೆ ಅಂಧ ಮಕ್ಕಳು ಚಿತ್ರತಂಡಕ್ಕೆ ಶುಭ ಹಾರೈಸುವುದರೊಂದಿಗೆ ಸಿನಿಮಾದ ಪ್ರಚಾರವನ್ನೂ ಆರಂಭಿಸಲಾಯಿತು. ನಿರ್ದೇಶಕ ಜಿ.ವಿ.ಆರ್. ವಾಸು, ‘ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. ಶಿವಣ್ಣ ಎಲ್ಲಾ ಪಾತ್ರಕ್ಕೂ ಹೊಂದಿಕೊಳ್ಳುತ್ತಾರೆ. ‘ಕಿಲ್ಲಿಂಗ್ ವೀರಪ್ಪನ್’ ಚಿತ್ರದ ಸಮಯದಲ್ಲಿ ಅವರ ನಟನೆ ನೋಡಿದೆ. ಈ ಚಿತ್ರಕ್ಕೆ ಅವರೇ ಸೂಕ್ತ ನಟನೆಂದು ಅಂದೇ ನಿರ್ಧರಿಸಿದ್ದೆ’ ಎಂದು ಹೇಳಿಕೊಂಡರು.

‘ದೇವರ ಮೇಲೆ ಭಾರ ಹಾಕಿ ಈ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಕಣ್ಣಿದ್ದರೂ ಕಣ್ಣು ಕಾಣದಂತೆ ನಟಿಸುವುದು ಕಷ್ಟಕರ. ನಮ್ಮ ಭಾವನೆಗಳನ್ನು ನಾವು ಸುಲಭವಾಗಿ ವ್ಯಕ್ತಪಡಿಸುತ್ತೇವೆ. ಆದರೆ, ಅಂಧರು ಒಳಮನಸ್ಸಿನಿಂದ ಭಾವನೆಗಳನ್ನು ಹೇಳುತ್ತಾರೆ. ಅಪ್ಪಾಜಿ ಕಣ್ಣುಗಳನ್ನು ದಾನ ಮಾಡಿ ಮಾದರಿಯಾಗಿದ್ದಾರೆ’ ಎಂದು ವಿವರಿಸಿದರು ಶಿವರಾಜ್‌ಕುಮಾರ್.

‘ಸಣ್ಣ ಪಾತ್ರದಲ್ಲೂ ಜವಾಬ್ದಾರಿ ಇರುತ್ತದೆ. ಪಾಸಿಟೀವ್ ಮತ್ತು ನೆಗಟಿವ್ ಅನ್ನು ಸಮನಾಗಿ ತೆಗೆದುಕೊಂಡರೆ ಬದುಕು ಸುಂದರವಾಗಿರುತ್ತದೆ. ತುಂಬಾ ಆಸೆಪಟ್ಟು ಪಾತ್ರಕ್ಕೆ ಧ್ವನಿ ನೀಡಿದ್ದೇನೆ’ ಎಂದು ಸಂತಸ ಹಂಚಿಕೊಂಡರು.

‘ಶಿವಣ್ಣ ರೌಡಿ, ಕುರುಡ, ಒಳ್ಳೆಯ ಮಗ, ಪೊಲೀಸ್ ಅಧಿಕಾರಿ, ಕೊಳ್ಳೇಗಾಲದ ಭಾಷೆ ಮಾತನಾಡುತ್ತಲೇ ಎಲ್ಲರಿಗೂ ಇಷ್ಟವಾಗಿದ್ದಾರೆ. ಅವರೊಟ್ಟಿಗೆ ಟಗರು ಚಿತ್ರದಲ್ಲಿ ನಟಿಸಿದ್ದು ನನಗೆ ಬ್ರೇಕ್ ನೀಡಿತು. ರೀಲ್‌ನಲ್ಲಿ ಅಲ್ಲದೆ ರಿಯಲ್‌ ಲೈಫ್‌ನಲ್ಲೂ ಅವರ ಸರಳತನ ನಮಗೆ ಮಾದರಿ’ ಎಂದು ಹೊಗಳಿದರು ‘ಡಾಲಿ’ ಖ್ಯಾತಿಯ ನಟ ಧನಂಜಯ್.

ನಾಯಕಿ ಕೃತಿಕಾ, ಇತಿ ಆಚಾರ್ಯ ಹಾಜರಿದ್ದರು. ರಾಹುಲ್‌ ಶ್ರೀವಾತ್ಸವ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಅರ್ಜುನ್‍ ಜನ್ಯ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಎಂ.ವಿ.ವಿ. ಸತ್ಯನಾರಾಯಣ ಮತ್ತು ಎ. ಸಂಪತ್‌ಕುಮಾರ್‌ ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT