ಬುಧವಾರ, ಜೂನ್ 3, 2020
27 °C

ಕವಲುದಾರಿ; ’ನಿಧಾನವಾಗಿ ಸಾಗಿರಿ’

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಕವಲುದಾರಿ
ನಿರ್ಮಾಣ: ಅಶ್ವಿನಿ ಪುನೀತ್‌ ರಾಜ್‌ಕುಮಾರ್
ನಿರ್ದೇಶನ: ಹೇಮಂತ್‌ ರಾವ್
ತಾರಾಗಣ: ರಿಷಿ, ಅನಂತ್‌ ನಾಗ್, ಸುಮನ್‌ ರಂಗನಾಥ್‌, ರೋಶನಿ ಪ್ರಕಾಶ್‌, ಅಚ್ಯುತ್‌ ಕುಮಾರ್, ಸಂಪತ್

‘ನನ್ನನ್ನು ಕ್ರೈಮ್‌ ವಿಭಾಗಕ್ಕೆ ವರ್ಗಾಯಿಸಿ’– ಅಪರಾಧ ತನಿಖೆಯ ಬಗ್ಗೆ ಅಪರಿಮಿತ ಆಸಕ್ತಿ ಹೊಂದಿದ ಟ್ರಾಫಿಕ್‌ ಸಬ್‌ ಇನ್‌ಸ್ಪೆಕ್ಟರ್‌ ಶ್ಯಾಮ್ ಹಿರಿಯ ಅಧಿಕಾರಿಯ ಮುಂದೆ ಇಡುವ ಕೋರಿಕೆ ಇದು. ಆಗ ಅಧಿಕಾರಿಗೆ ಕೋಪ ನೆತ್ತಿಗೇರುತ್ತದೆ. ಸಂಚಾರ ವಿಭಾಗದಲ್ಲೇ ಸೇವೆ ಮುಂದುವರಿಸಲು ಖಡಕ್‌ ಸೂಚನೆ ರವಾನಿಸುತ್ತಾನೆ.

ಆ ಮಾತು ಶ್ಯಾಮ್‌ನ ತನಿಖಾ ಮನಸ್ಸನ್ನು ತಣಿಸುವುದಿಲ್ಲ. ರಸ್ತೆ ಕಾಮಗಾರಿ ವೇಳೆ ಮನುಷ್ಯರ ಮೂಳೆಗಳು ದೊರೆಯುತ್ತವೆ. ಅವುಗಳ ಹಿಂದಿನ ರಹಸ್ಯದ ಹುಡುಕಾಟಕ್ಕೆ ಹೊರಟ ಆತ ಅಪರಾಧ ಜಗತ್ತಿನ ಕವಲುದಾರಿಯಲ್ಲಿ ಸಾಗುತ್ತಾನೆ.

ಕ್ರೈಮ್‌ ಥ್ರಿಲ್ಲರ್‌ ಕಥೆಯನ್ನು ‘ಕವಲುದಾರಿ’ಯಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಹೇಮಂತ್‌ ರಾವ್. ಇಂತಹ ಚಿತ್ರಕಥೆ ಹೊಸೆಯಲು ಸಾಕಷ್ಟು ಜಾಣ್ಮೆ ಬೇಕು. ನಿರೂಪಣೆಯ ಶೈಲಿಯೂ ಭಿನ್ನವಾಗಿರಬೇಕು. ಆಗಷ್ಟೇ ಕಥೆ ನೋಡುಗರಿಗೆ ಇಷ್ಟವಾಗುತ್ತದೆ.

ಒಂದು ಕೋನದಲ್ಲಿ ಕ್ರೈಮ್‌ ಥ್ರಿಲ್ಲರ್‌ನಂತೆ, ಮತ್ತೊಂದು ಆಯಾಮದಲ್ಲಿ ಆತ್ಮವಿಮರ್ಶೆಯ ಸೂಜಿಮನೆಯಂತೆ ಕಾಣುವ ಚಿತ್ರಕಥೆಯನ್ನು ವಿಭಿನ್ನ ಶೈಲಿಯಲ್ಲಿ ಹೇಳಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾರೆ ನಿರ್ದೇಶಕರು. ಚಿತ್ರಕಥೆ ನೇಯ್ಗೆಯ ಕುಶಲತೆಯ ಜೊತೆಗೆ ಬಡತನದ ಹಿಂದಿನ ಕ್ರೌರ್ಯದ ಮುಖವನ್ನೂ ತೆರೆದಿಟ್ಟಿದ್ದಾರೆ. ನಡುಹಗಲಿನಲ್ಲಿಯೇ ಭ್ರಷ್ಟ ರಾಜಕಾರಣಿಗಳ ಮುಖಗಳನ್ನು ಬಣ್ಣ, ರೇಖೆಗಳಲ್ಲಿ ಬಿಡಿಸಿಡುತ್ತಾರೆ. ತನಿಖೆಯ ಜಾಡು ಹಿಡಿದು ಶ್ಯಾಮ್‌ ಹೊರಟಾಗ ತೆರೆದುಕೊಳ್ಳುವ ಭ್ರಷ್ಟರ ಲೋಕ ನೋಡುಗರ ಹೃದಯವನ್ನು ತಲ್ಲಣಗೊಳಿಸುತ್ತದೆ.

ಸಿನಿಮಾ ಶುರುವಾಗುವುದು ಪುರಾತತ್ವ ಇಲಾಖೆಯಲ್ಲಿ. ಅಲ್ಲಿ ಕಚೇರಿಯ ನೌಕರನ ಕೊಲೆಯಾಗಿರುತ್ತದೆ. ಅಧಿಕಾರಿ ಗುರುದಾಸ್‌ ನಾಯ್ಡು ಗಡಿಬಿಡಿಯಲ್ಲಿ ಮನೆಗೆ ಬರುತ್ತಾರೆ. ಅವರ ಶರ್ಟ್‌ನ ಮೇಲೆ ರಕ್ತದ ಕಲೆ ಮೂಡಿರುತ್ತದೆ. ಪತ್ನಿ, ಪುತ್ರಿ ಸೇರಿದಂತೆ ಅವರೂ ನಿಗೂಢವಾಗಿ ಕೊಲೆಯಾಗುತ್ತಾರೆ. ಉತ್ಖನನದ ವೇಳೆ ದೊರೆತ ವಿಜಯನಗರ ಅರಸರ ಕಾಲದ ಚಿನ್ನಾಭರಣಗಳೂ ಕಳವಾಗುತ್ತವೆ.

ನಲವತ್ತು ವರ್ಷದ ಬಳಿಕ ಟ್ರಾಫಿಕ್‌ ಸಿಗ್ನಲ್‌ ಬಳಿ ರಸ್ತೆ ಕಾಮಗಾರಿ ನಡೆಯುವಾಗ ನಾಯ್ಡು ಕುಟುಂಬದ ಸದಸ್ಯರ ತಲೆಬುರುಡೆ, ಮೂಳೆಗಳು ದೊರೆಯುತ್ತವೆ. ಶ್ಯಾಮ್ ತನಿಖೆಯ ಜಾಡು ಹಿಡಿಯುತ್ತಾನೆ. ಅವನಿಗೆ ನೆರವಾಗುವುದು ನಿವೃತ್ತ ತನಿಖಾಧಿಕಾರಿ ಮುತ್ತಣ್ಣ. ಶ್ಯಾಮ್‌ ಮತ್ತು ಮುತ್ತಣ್ಣನ ಭಾವಜಗತ್ತು ಒಂದೇ. ಅಧಿಕಾರದ ಲಾಲಸೆಗೆ ಬಿದ್ದ ಫರ್ನಾಂಡೀಸ್‌, ಮೈಲೂರು ಶ್ರೀನಿವಾಸ್‌ ಆಗುವುದು ಕಥೆಯ ಕೇಂದ್ರಬಿಂದು. ಆತ ಯಾರು ಎನ್ನುವುದೇ ಚಿತ್ರದ ತಿರುಳು. ಇದನ್ನು ಚಿತ್ರಮಂದಿರಕ್ಕೆ ಹೋಗಿಯೇ ನೋಡಬೇಕು.

ಮೊದಲಾರ್ಧದಲ್ಲಿ ಚಿತ್ರಕಥೆ ನಿಧಾನಗತಿಯಲ್ಲಿ ಸಾಗುತ್ತದೆ. ದ್ವಿತೀಯಾರ್ಧದಲ್ಲೂ ಈ ಹಳಿಯಿಂದ ವೇಗ ಪಡೆಯುವುದಿಲ್ಲ. ಆದರೆ, ಕಥೆಯ ನಿರೂಪಣಾ ಶೈಲಿ ನೋಡುಗರನ್ನು ಕುರ್ಚಿಯಲ್ಲಿ ಹಿಡಿದು ಕೂರಿಸುತ್ತದೆ. ಪ್ರೇಕ್ಷಕರು ಪರದೆಯಿಂದ ಕಣ್ಣನ್ನು ಆಚೀಚೆ ಸರಿಸಿದರೆ ಕಥೆ ಅರ್ಥೈಸಿಕೊಳ್ಳಲು ತುಸು ಪ್ರಯಾಸಪಡಬೇಕಾಗುತ್ತದೆ. ಸಿನಿಮಾ ನೋಡುಗರ ತಾಳ್ಮೆಯನ್ನು ಹೆಚ್ಚಾಗಿ ಬೇಡುತ್ತದೆ.

ರಿಷಿ ನಟನೆಯ ಹದ ಮೆಚ್ಚುಗೆಗೆ ಅರ್ಹ. ಅನಂತ್‌ ನಾಗ್‌, ಅಚ್ಯುತ್‌ಕುಮಾರ್‌, ಸಂಪತ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಸೊಗಸಾಗಿದೆ. ಚರಣ್‌ ರಾಜ್‌ ಸಂಗೀತ ಸಂಯೋಜನೆಯ ಹಾಡುಗಳು ಚಿತ್ರಮಂದಿರದಲ್ಲಷ್ಟೆ ಕೇಳಲು ಇಂಪಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು