ಭಾನುವಾರ, ಜನವರಿ 26, 2020
18 °C

'ಕೆಜಿಎಫ್‌ ಚಾಪ್ಟರ್‌ 2' ಫಸ್ಟ್‌ಲುಕ್‌: ಅಭಿಮಾನದ ಕಿಚ್ಚು ಹಚ್ಚಿಸಿದ ಯಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಶಾಂತ್‌ ನೀಲ್ ನಿರ್ದೇಶನದ ‘ರಾಕಿಂಗ್‌ ಸ್ಟಾರ್‌’ ಯಶ್‌ ನಾಯಕನಾಗಿರುವ ‘ಕೆಜಿಎಫ್‌ ಚಾಪ್ಟರ್‌ 1’ ಕನ್ನಡ ಚಿತ್ರರಂಗದಲ್ಲಿ ಹಲವು ಮೈಲಿಗಲ್ಲುಗಳಿಗೆ ನಾಂದಿ ಹಾಡಿದ ಚಿತ್ರ.  ಇಂದು ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದ ನಾಯಕ ಯಶ್‌ ಅವರ ಫಸ್ಟ್‌ಲುಕ್‌ ಅನ್ನು ಹೊಂಬಾಳೆ ಫಿಲ್ಮ್‌ ಬಿಡುಗಡೆಗೊಳಿಸಿದ್ದು ವೈರಲ್‌ ಆಗಿದೆ.

ರಾಕಿ ಭಾಯ್‌ (ಯಶ್‌) ಹುಟ್ಟಿ, ಬೆಳೆದಿದ್ದು ಬಂಗಾರದ ಮಣ್ಣಿನಲ್ಲಿಯೇ. ಆದರೆ, ಆತನಿಗೂ ಅಧಿಕಾರದ ಆಸೆ. ಪವರ್‌ ಬೆನ್ನುಹತ್ತಿ ಆತ ಹೊರಟಿದ್ದು ಮುಂಬೈಯ ಕೊಳೆಗೇರಿಗೆ. ಕಬ್ಬಿಣದ ತುಂಡಿನಂತಿದ್ದ ಅವನ ಮನಸ್ಸನ್ನು ಅಲ್ಲಿನ ಬೀದಿಗಳು ಚೆನ್ನಾಗಿ ಕುಟ್ಟಿದ್ದರಿಂದಲೇ ಆತ ಹರಿತವಾದ ತಲವಾರ್‌ ಆಗಿದ್ದು. ಅದಕ್ಕೆ ಗೊತ್ತಿರುವುದು ಎದುರಾಳಿಗಳನ್ನು ಕೊಚ್ಚುವುದಷ್ಟೇ. ‘ಕೆಜಿಎಫ್‌ ಚಾಪ್ಟರ್ 1’ರ ಮೊದಲಾರ್ಧದಲ್ಲಿ ಎದುರಾಳಿಗಳ ಎದೆ ನಡುಗಿಸುವ ರಾಕಿ ದ್ವಿತೀಯಾರ್ಧದ ವೇಳೆಗೆ ‘ನರಾಚಿ’ ಗಣಿಗೆ ಬರುತ್ತಾನೆ. ಆಗ ಕಥೆ ಮತ್ತೊಂದು ಹಾದಿಗೆ ಹೊರಳುತ್ತದೆ.

ನರಾಚಿ ಗಣಿಯಲ್ಲಿ ಇಪ್ಪತ್ತು ಸಾವಿರ ಕಾರ್ಮಿಕರು ಬಂದಿಗಳಾಗಿರುತ್ತಾರೆ. ಅವರದು ಅಮಾನವೀಯ ಬದುಕು. ನರಾಚಿಯ ಮಾಲೀಕ ಸೂರ್ಯವರ್ಧನ್‌ ಹಾಸಿಗೆ ಹಿಡಿದಾಗ ಅವನ ಮಗ ಗರುಡ ಅಧಿಕಾರಕ್ಕೇರುತ್ತಾನೆ. ಕೊನೆಗೆ, ರಾಕಿ ಭಾಯ್‌ನಿಂದ ಆತ ಹತನಾಗುತ್ತಾನೆ.

ಆತನನ್ನು ಹತ್ಯೆಗೈಯ್ದ ರಾಕಿಯ ಧೈರ್ಯಕ್ಕೆ ಕಾರ್ಮಿಕರು ಬೆರಗಾಗುತ್ತಾರೆ. ರಾಕಿಗೆ ಅವರ ಸಂಪೂರ್ಣ ವಿಶ್ವಾಸ, ಬೆಂಬಲವೂ ದೊರೆಯುತ್ತದೆ. ಗರುಡನ ಹತ್ಯೆ ನಂತರ ರಾಕಿ ನರಾಚಿಯಲ್ಲಿ ಏನೆಲ್ಲಾ ಮಾಡುತ್ತಾನೆ ಎನ್ನುವುದೇ ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದ ಕಥಾಹಂದರ.

ಪ್ರಸ್ತುತ ಬಿಡುಗಡೆಗೊಂಡಿರುವ ಎರಡನೇ ಅಧ್ಯಾಯದ ‘ರಾಕಿಂಗ್‌ ಸ್ಟಾರ್‌’ ಯಶ್‌ ಅವರ ಫಸ್ಟ್‌ಲುಕ್‌ ಕೂಡ ನರಾಚಿ ಗಣಿಯನ್ನೇ ನೆನಪಿಸುತ್ತದೆ. ಬಾಯಲ್ಲಿ ಸಿಗರೇಟು ಹಚ್ಚಿಕೊಂಡು ಕಾರ್ಮಿಕರೊಟ್ಟಿಗೆ ಹಗ್ಗ ಹಿಡಿದು ಮತ್ತೆ ಸಾಮಾಜ್ಯ ಕಟ್ಟಲು ಯಶ್‌ ಖಡಕ್‌ ಲುಕ್‌ ನೀಡಿದ್ದಾರೆ.

ಮೊದಲ ಅಧ್ಯಾಯದಲ್ಲಿ ನಿರ್ದೇಶಕ ಪ್ರಶಾಂತ್‌ ನೀಲ್‌ ಅಧೀರನ ಮುಖ ತೋರಿಸಿರಲಿಲ್ಲ. ಈತ ಸೂರ್ಯವರ್ಧನ್‌ನ ಸಹೋದರ. ಎರಡನೇ ಅಧ್ಯಾಯದಲ್ಲಿ ಈ ಪಾತ್ರಕ್ಕೆ ಸಂಜಯ್‌ ದತ್‌ ಬಣ್ಣ ಹಚ್ಚಿದ್ದಾರೆ. ಹಾಗಾಗಿ, ತೆರೆಯ ಮೇಲೆ ಯಶ್‌ ಮತ್ತು ಸಂಜಯ್‌ ನಡುವಿನ ಜುಗಲ್‌ಬಂದಿ ಕುತೂಹಲ ಮೂಡಿಸಿದೆ.

ಮೊದಲ ಚಾಪ್ಟರ್‌ನಲ್ಲಿನ ರಾಖಿ ಭಾಯ್‌ ಕೇಶವಿನ್ಯಾಸ, ಡ್ರೆಸ್‌ಕೋಡ್‌, ಲುಕ್‌, ಮ್ಯಾನರಿಸಂ, ಡೈಲಾಗ್‌ಗಳಿಗೆ ಅವರ ಅಭಿಮಾನಿಗಳು ಅಕ್ಷರಶಃ ಫಿದಾ ಆಗಿದ್ದರು. ಅಧೀರನ ಪಾತ್ರದಲ್ಲಿ ಸಂಜಯ್‌ದತ್‌ ಅಭಿನಯಿಸುತ್ತಿರುವುದು ಚಿತ್ರದ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ಇನ್ನು ಮೊದಲ ಚಾಪ್ಟರ್‌ನಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟಿದ್ದ ಶ್ರೀನಿಧಿ ಶೆಟ್ಟಿ, ಎರಡನೇ ಚಾಪ್ಟರ್‌ನಲ್ಲೂ ನಾಯಕಿಯಾಗಿ ಮುಂದುವರಿದಿದ್ದಾರೆ. ಡೆಬು ಸಿನಿಮಾದಲ್ಲೇ ಶ್ರೀನಿಧಿ ಅಭಿನಯದಲ್ಲಿ ಭರವಸೆ ಮೂಡಿಸಿದ್ದರು. ಇದರಲ್ಲಿ ಅವರ ನಟನೆ ಮತ್ತು ಪಾತ್ರ ಹೇಗಿರಬಹುದೆಂದು ಪ್ರೇಕ್ಷಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

‘ಕೆಜಿಎಫ್‌ ಚಾಪ್ಟರ್‌–1’ಕ್ಕೆ ಬಹುಕೋಟಿ ಬಂಡವಾಳ ಹೂಡಿದ್ದ ವಿಜಯ್‌ ಕಿರಗಂದೂರು ಅವರೇ ‘ಹೊಂಬಾಳೆ ಫಿಲ್ಮ್ಸ್‌’ ಲಾಂಛನದಡಿ ಎರಡನೇ ಚಾಪ್ಟರ್‌ಗೂ ಬಂಡವಾಳ ಹೂಡಿದ್ದಾರೆ. ಇದು ಕೂಡ ಬಿಗ್‌ಬಜೆಟ್‌ ಸಿನಿಮಾ ಎನ್ನಲಾಗುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು