ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕಿಂಗ್‌ ಸ್ಟಾರ್‌ ಮತ್ತು ಮೇಕಿಂಗ್‌ ಸ್ಟಾರ್‌ ಜುಗಲ್ಬಂದಿ

Last Updated 21 ಡಿಸೆಂಬರ್ 2018, 9:57 IST
ಅಕ್ಷರ ಗಾತ್ರ

ಸಿನಿಮಾ: ಕೆಜಿಎಫ್‌

ನಿರ್ಮಾಣ: ವಿಜಯ್‌ ಕಿರಗಂದೂರು

ನಿರ್ದೇಶನ: ಪ್ರಶಾಂತ್‌ ನೀಲ್‌

ತಾರಾಗಣ: ಯಶ್‌, ಅನಂತ್‌ನಾಗ್‌, ಮಾಳವಿಕಾ, ಶ್ರೀನಿಧಿ ಶೆಟ್ಟಿ, ಬಿ. ಸುರೇಶ್‌, ವಸಿಷ್ಠ ಸಿಂಹ, ಅಯ್ಯಪ್ಪ ಶರ್ಮ, ರಮೇಶ್ ಇಂದಿರಾ, ಅರ್ಚನಾ

ಧಗ ಧಗ ಧಗ ಉರಿವ ಬೆಂಕಿ. ಆ ಧಗೆಯ ಮಧ್ಯವೇ ಸುಯ್ಯನೆ ಸುಳಿದು ಮಾಯವಾಗುವ ತಂಗಾಳಿ. ಮನುಷ್ಯರನ್ನು ಪ್ರಾಣಿಗಳ ಹಾಗೆ ಕಾಣುವ ರಕ್ಕಸರು. ಅವರ ನಡುವೆಯೇ ನೆಲಕ್ಕೆ ಬಿದ್ದ ಬನ್‌ ಅನ್ನು ಎತ್ತಿ ಅನ್ನದ ಮಹತ್ವ ಹೇಳುವ ನಾಯಕ. ಹೆಣ್ಣುಮಗುವಾದರೆ ಕೊಲ್ಲುವ ಜನರು; ಕೈಗಳಿಗೆ ಪಾಪದ ರಕ್ತ ಅಂಟಿದ್ದರೂ ಬಾಲ್ಯದಲ್ಲಿ ಕಳೆದುಕೊಂಡ ಅಮ್ಮನ ಅಕ್ಕರೆಯ ನಂಟನ್ನು ನೆನಪಿಸಿಕೊಂಡು ಹನಿಗಣ್ಣಾಗುವ ಹುಡುಗ...

ಹೀಗೆ ದ್ವೇಷ ಮತ್ತು ಕರುಣೆ ಎರಡೂ ಭಾವಗಳನ್ನು ಹದವಾಗಿ ಬೆರೆಸಿ ‘ಚಿನ್ನದ ಚಿತ್ರ’ ಬರೆದಿದ್ದಾರೆ ನಿರ್ದೇಶಕ ಪ್ರಶಾಂತ್‌ ನೀಲ್‌. ಕಳೆದ ನಾಲ್ಕು ವರ್ಷಗಳ ಪರಿಶ್ರಮ ಪ್ರತಿ ಫ್ರೇಮ್‌ನಲ್ಲಿಯೂ ಕಾಣಿಸುತ್ತದೆ.ಖಂಡಿತವಾಗಿಯೂ ‘ಕೆಜಿಎಫ್‌’ ಕನ್ನಡ ವಾಣಿಜ್ಯ ಸಿನಿಮಾ ಮೇಕಿಂಗ್‌ ಅನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ದಿದೆ.

ಕೋಲಾರದಲ್ಲಿ ಚಿನ್ನದ ಸೆಲೆ ಪತ್ತೆಯಾಗಿದ್ದೂ, ಜೋಪಡಿಯೊಂದರಲ್ಲಿ ಜ್ವಾಲೆಯಂಥ ನಾಯಕ ಹುಟ್ಟಿದ್ದೂ ಒಂದೇ ಗಳಿಗೆಯಲ್ಲಿ. ಅತ್ತ ಕೆಜಿಎಫ್‌ ದುರುಳರ ಪಾಲಾದರೆ ಇತ್ತ ನಾಯಕನೂ ಅಮ್ಮನನ್ನು ಕಳೆದುಕೊಂಡು, ಪವರ್‌ನ ಬೆನ್ನು ಹತ್ತಿ ಮುಂಬೈ ಸೇರುತ್ತಾನೆ. ಆತ ನಡೆದರೆ ಭೂಕಂಪ, ಓಡಿದ್ರೆ ತೂಫಾನ್‌. ಗುಡುಗಿದ್ರೆ ಎದುರಾಳಿಗಳ ಎದೆಯಲ್ಲಿ ಗುಂಡು ಹೊಕ್ಕಂಥ ನಡುಕ. ಕಬ್ಬಿಣದ ತುಂಡಿನಂತಿದ್ದ ಅವನನ್ನು ಮುಂಬೈನ ಬೀದಿಗಳು ಕುಟ್ಟಿ ಕುಟ್ಟಿ ತಲವಾರ್‌ ಆಗಿಸಿವೆ. ಅದಕ್ಕೆ ಕೊಚ್ಚುವುದೊಂದೇ ಗೊತ್ತು.

ಮೊದಲರ್ಧದಲ್ಲಿ ಮುಂಬೈ ಅಲ್ಲಿನ ಬೀದಿಗಳು, ರಾಖಿಯ ವೈಖರಿಯಲ್ಲಿ ಕಳೆದು ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಕಥೆ ಕೆಜಿಎಫ್‌ ಗಣಿಯೊಳಗೆ ಹೊಕ್ಕುತ್ತದೆ. ಅಲ್ಲಿಯವರೆಗೆ ರಾಕಿಂಗ್‌ ಸ್ಟಾರ್‌ ಯಶ್‌ ವಿಜೃಂಬಣೆಯ ಮೇಲಿದ್ದ ಪೋಕಸ್‌ ನಿಧಾನವಾಗಿ ಕಥನ ನಡೆಯುವ ಕ್ಯಾನ್ವಾಸ್‌ ಮೇಲೆ ಸರಿಯುತ್ತದೆ. ಅಲ್ಲಿ ಮೇಕಿಂಗೇ ಸ್ಟಾರ್‌. ಈ ಪಲ್ಲಟದಲ್ಲಿಯೇ ‘ಕೆಜಿಎಫ್‌’ ಕನ್ನಡದ ಮಾಮೂಲಿ ನಾಯಕಪ್ರಧಾನ ಚಿತ್ರಗಳ ಮಾಮೂಲಿ ಜಾಡಿನಿಂದ ಮೇಲಕ್ಕೇರುವುದು.

‘ನರಾಚಿ’ ಎಂಬ ಗಣಿಯಲ್ಲಿ ಸೂರ್ಯವರ್ಧನ್‌ ಎಂಬವನು ತನ್ನ ಚಿನ್ನದ ಸಾಮ್ರಾಜ್ಯ ಕಟ್ಟಿಕೊಂಡಿದ್ದಾನೆ. ಅಲ್ಲಿನ ಇಪ್ಪತ್ತು ಸಾವಿರ ಕಾರ್ಮಿಕರು ಬಂಧಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಅಪ್ಪಣೆಯ ಮೀರಿ ಕೊಂಚ ಮಿಸುಕಿದರೂ ಅವರಿಗೆ ಸಾವೇ ಗತಿ. ಅವರನ್ನು ಕಾಯುವ ರಕ್ಕಸರಿಗೆ ಗುಲಾಮರ ನೆತ್ತರೆಂದರೆ ಮದ್ಯಪಾನದಷ್ಟೇ ಪ್ರೀತಿ. ಆ ಗುಲಾಮರಲ್ಲಿ ಒಬ್ಬ ಕಥೆ ಹೇಳುವವನಿದ್ದಾನೆ. ಪ್ರತಿದಿನ ರಾತ್ರಿ ಬೆಂಕಿಯ ಮುಂದೆ ಕೂತು ಅವನು ಪದ್ಯರೂಪದಲ್ಲಿ ಕಥೆ ಹೇಳುತ್ತಾನೆ. ಆ ಕಥೆಯಲ್ಲಿ ಗುಲಾಮರ ನರಕವಿದೆ. ಆ ನರಕದಿಂದ ಅವರನ್ನು ಪಾರುಮಾಡಲು ಬರುವ ನಾಯಕನ ಕನಸೂ ಇದೆ. ಅವನು ಕಥೆ ಹೇಳುತ್ತಿದ್ದಷ್ಟೂ ಹೊತ್ತು ಕೇಳುವ ಗುಲಾಮರೆಲ್ಲರ ಮನಸಲ್ಲಿ ನಂಬಿಕೆಯ ಚಿಗುರು. ಕಥೆ ಮುಗಿದಾಕ್ಷಣ ವಾಸ್ತವದ ಬೆಂಕಿಗೆ ಆ ನಂಬಿಕೆಯೆಲ್ಲವೂ ಬೂದಿಯಾಗುತ್ತದೆ. ‘ಈ ಕಟ್ಟುಕಥೆ ಯಾವಾದ್ರೂ ನಿಜ ಆಗ್ಲಪ್ಪ ಅನಿಸುತ್ತದೆ’ ಎನ್ನುವ ಅವರ ಮನಸ್ಸಿನ ಆಸೆ ನಿಜವಾಗುತ್ತದೆ. ನರಕದ ಬೆಂಕಿಗೆ ವೈರಿಗಳ ನೆತ್ತರನ್ನು ಸುರಿದು ನಂದಿಸುವ ನಾಯಕ ಬರುತ್ತಾನೆ. ಹೇಗೆ ಬರುತ್ತಾನೆ, ಏನು ಮಾಡುತ್ತಾನೆ ಎಂಬುದನ್ನು ತೆರೆಯ ಮೇಲೆಯೇ ನೋಡಬೇಕು.

ದ್ವಿತೀಯಾರ್ಧದ ದೃಶ್ಯವೈಭವ ಕಥೆಯ ಅಗತ್ಯವನ್ನೂ ಮರೆಸಿಬಿಡುವ ಹಾಗಿದೆ. ಮೊದಲರ್ಧವನ್ನು ಯಶ್‌ ಅಭಿಮಾನಿಗಳಿಗೋಸ್ಕರ ಮೀಸಲಿಟ್ಟಿರುವ ನಿರ್ದೇಶಕರು ದ್ವಿತಿಯಾರ್ಧದಲ್ಲಿ ಮೇಕಿಂಗ್‌ ಅನ್ನೇ ಮುನ್ನೆಲೆಗೆ ತಂದುಬಿಡುತ್ತಾರೆ. ಅಲ್ಲಿ ನಾಯಕನಿಗೆ ಹೆಚ್ಚು ಮಾತೇ ಇಲ್ಲ; ಕ್ಲೋಸಪ್‌ ಶಾಟ್‌ಗಳೂ ಹೆಚ್ಚಿಲ್ಲ. ನೆಲದಿಂದೆದ್ದ ದೂಳು, ಕತ್ತಲಲ್ಲಿ ಹೊಳೆಯುವ ಕಾದ ಕಬ್ಬಿಣದ ರಾಡು, ಸಾವಿರ ಸಾವಿರ ಜನರ ನಡುವೆ ನಾಯಕನಿಗೆಂದೇ ರೂಪುಗೊಳ್ಳುವ ಜಾಡು, ಗನ್ನುಗಳ ಹೊರಡಿಸುವ ಸೌಂಡು ಎಲ್ಲವೂ ಅಲ್ಲಿ ಮಾತಾಡುತ್ತವೆ. ಮೈಮರೆಸುತ್ತವೆ.

ಬೇರೆ ಬೇರೆ ಕಾಲದಲ್ಲಿ ನಡೆದ ಕಥೆಯ ಹಲವು ಎಳೆಗಳನ್ನು ಹಸೆಯಷ್ಟೇ ಬಿಗಿಯಾಗಿ ಹೆಣೆದಿರುವ ನಿರ್ದೇಶಕರ ತಂತ್ರಕ್ಕೆ ಭುವನ್‌ ಗೌಡ ಅವರ ಛಾಯಾಗ್ರಹಣ, ಶ್ರೀಕಾಂತ್‌ ಸಂಕಲನ ಕೊಟ್ಟಿರುವ ಸಾಥ್‌ ತುಂಬ ಹಿರಿದಾಗಿದ್ದು.

ಚಿನ್ನದ ಗಣಿಯ ಸುತ್ತ ಹೆಣೆದುಕೊಂಡಿರುವ ಹಲವು ಖಳರ ದಂಡೇ ಇದೆ. ಅವರು ಅವರ ಮಕ್ಕಳು, ಅಣ್ಣ ತಮ್ಮಂದಿರು, ಅವರ ಸಂಬಂಧ ಎಲ್ಲವನ್ನೂ ನೆನಪಿಟ್ಟುಕೊಳ್ಳುವುದು ಮಗ್ಗಿಬಾಯಿಪಾಠ ಮಾಡಿದಷ್ಟೇ ಕಷ್ಟವಾಗಬಹುದು. ಯಶ್‌ ಬಿಲ್ಡಪ್‌ಗಳಿಗೆಂದೇ ತುರುಕಲಾಗಿರುವ ಎರಡು ದೃಶ್ಯಗಳನ್ನು ಯಾವ ಮುಲಾಜೂ ಇಲ್ಲದೇ ಕತ್ತರಿಸಬಹುದಿತ್ತು.

ದೃಶ್ಯವೈಭವಕ್ಕೆ ಒತ್ತು ಕೊಡಲಾಗುವ ಇಂಥ ಸಿನಿಮಾಗಳಲ್ಲಿ ಹಿನ್ನೆಲೆ ಸಂಗೀತವೇ ಆತ್ಮವಾಗುತ್ತದೆ. ಆ ದೃಷ್ಟಿಯಲ್ಲಿ ಕೆಜಿಎಫ್‌ ಆತ್ಮ ತುಸು ಸೊರಗಿದೆ ಎಂದೇ ಹೇಳಬಹುದು. ಚಿತ್ರಮಂದಿರದಿಂದ ಆಚೆ ಬಂದ ಮೇಲೂ ಗುನುಗಿಕೊಳ್ಳುವಂತ ಒಂದು ಥೀಮ್‌ ಟ್ಯೂನ್‌ ಕಟ್ಟಲು ರವಿ ಬಸ್ರೂರ ಅವರಿಗೆ ಸಾಧ್ಯವಾಗಿಲ್ಲ.

ನಾಯಕಿ ಶ್ರೀನಿಧಿ ಶೆಟ್ಟಿ ಅವರಿಗಿಂತ ಹಾಡೊಂದರಲ್ಲಿ ಬಂದು ಬಳುಕಿ ಹೋಗುವ ತಮನ್ನಾ ಭಾಟಿಯಾ ಅವರೇ ಹೆಚ್ಚು ಬೆಚ್ಚಗಿನ ಭಾವ ಹುಟ್ಟಿಸುತ್ತಾರೆ. ವಸಿಷ್ಠ ಸಿಂಹ, ಅರ್ಚನಾ, ಬಿ. ಸುರೇಶ್‌, ಸಂಪತ್‌ ಇವರೆಲ್ಲರೂ ತೆರೆಯ ಮೇಲೆ ಕಾಣುವ ಕೊಂಚ ಸಮಯದಲ್ಲಿಯೇ ಮನಸಲ್ಲಿ ಛಾಪೊತ್ತುತ್ತಾರೆ.

ಕೆಜಿಎಫ್‌ ಗಣಿಯಲ್ಲಿ ಹೊಳೆದಿರುವ ಕಥೆಯ ಎಳೆಗೆ ಎರಡನೇ ಭಾಗದಲ್ಲಿ ರಾಜಕೀಯದ ಸುಳಿಯೂ ಸೇರಿಕೊಳ್ಳುವ ಸೂಚನೆಯೊಂದಿಗೆ ಮೊದಲ ಅಧ್ಯಾಯ ಮುಗಿಸಿದ್ದಾರೆ ನಿರ್ದೇಶಕರು. ಹಾಗೆಂದು ಈ ಚಿತ್ರಕ್ಕೆ ಅಮೂರ್ತ ಅಂತ್ಯ ಇದೆ ಎಂದೇನೂ ಭಾವಿಸಬೇಕಿಲ್ಲ. ಒಂದು ಪೂರ್ಣ ಚಿತ್ರವನ್ನು ನೋಡಿದ ಅನುಭವವನ್ನೇ ಕೆಜಿಎಫ್‌ ಮೊದಲ ಭಾಗ ನೀಡುತ್ತದೆ. ಹಾಗೆಯೇ ಮುಂದಿನ ಕಥೆ ಇನ್ನೊಂದು ಮಗ್ಗುಲಿಗೆ ಹೊರಳಿಕೊಳ್ಳುವ ಇಶಾರೆಯನ್ನೂ ನೀಡುತ್ತದೆ.

ಒಟ್ಟಾರೆ ಮಾಸ್‌ ಪ್ರೇಕ್ಷಕರು ಮೈಮರೆತು ನೋಡಬಹುದಾದ, ಹಳೆಯ ಜಾಡಿನಲ್ಲಿಯೇ ಸುತ್ತುತ್ತಿರುವ ಕನ್ನಡ ಕಮರ್ಷಿಯಲ್‌ ಸಿನಿಮಾಗೆ ಮೇಕಿಂಗ್‌ನ ಒಂದು ಮಾದರಿಯನ್ನು ಸೃಷ್ಟಿಸಿರುವ ಸಿನಿಮಾ ‘ಕೆಜಿಎಫ್‌’ ಎಂದು ನಿಸ್ಸಂಶಯವಾಗಿ ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT