ಬುಧವಾರ, ಸೆಪ್ಟೆಂಬರ್ 22, 2021
23 °C

‘ಆದಿಪುರುಷ್‌’ ಚಿತ್ರದಲ್ಲಿ ಸೀತೆಯಾಗಿ ಕಿಯಾರಾ ಅಡ್ವಾಣಿ ನಟನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿರ್ದೇಶಕ ಓಂ ರಾವುತ್‌ ಮತ್ತು ನಟ ಪ್ರಭಾಸ್‌ ಕಾಂಬಿನೇಷನ್‌ನಡಿ ‘ಆದಿಪುರುಷ್’ ಚಿತ್ರ ನಿರ್ಮಾಣವಾಗುತ್ತಿರುವುದು ಈಗಾಗಲೇ ಘೋಷಣೆಯಾಗಿದೆ. ಇದರಲ್ಲಿ ಪ್ರಭಾಸ್‌ ರಾಮನಾಗಿ ಬಣ್ಣ ಹಚ್ಚಿದರೆ; ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರದ್ದು ಲಂಕೇಶನ ಪಾತ್ರ. ಹಾಗಿದ್ದರೆ ಸೀತೆಯ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರದ್ದು.

‘ಮಹಾನಟಿ’ ಚಿತ್ರದ ಖ್ಯಾತಿಯ ಕೀರ್ತಿ ಸುರೇಶ್‌ ಸೀತೆಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಸಿನಿಮಾ ಘೋಷಣೆಯಾದ ವೇಳೆ ಹರಡಿತ್ತು. ಈಗ ಚಿತ್ರತಂಡ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಅವರನ್ನು ಸೀತೆಯ ಪಾತ್ರದಲ್ಲಿ ನಟಿಸುವಂತೆ ಕೋರಿದೆ ಎಂಬ ಸುದ್ದಿ ಹೊರಬಿದ್ದಿದೆ.

3ಡಿ ತಂತ್ರಜ್ಞಾನದಡಿ ನಿರ್ಮಾಣವಾಗುತ್ತಿರುವ ಚಿತ್ರ ಇದು. ಇತ್ತೀಚೆಗೆ ಓಂ ರಾವುತ್‌ ಅವರು, ಕಿಯಾರಾಗೆ ಸ್ಕ್ರಿಪ್ಟ್‌ ಅನ್ನು ವಿವರಿಸಿದ್ದಾರೆ. ಇದನ್ನು ಕೇಳಿ ಆಕೆಯೂ ಇಂಪ್ರೆಸ್‌ ಆಗಿದ್ದು, ನಟಿಸಲು ಒಪ್ಪಿಗೆ ಸೂಚಿಸಿದ್ದಾರಂತೆ. ಆದರೆ, ಚಿತ್ರತಂಡದೊಟ್ಟಿಗೆ ಇನ್ನೂ ಅಧಿಕೃತ ಒಪ್ಪಂದ ಮಾಡಿಕೊಂಡಿಲ್ಲ.

ಕಿಯಾರಾ ಬಾಲಿವುಡ್‌ನ ಬಹುಬೇಡಿಕೆ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಆಕೆಗೆ ಒಳ್ಳೆಯ ಹೆಸರು ತಂದುಕೊಟ್ಟ ಚಿತ್ರ ‘ಕಬೀರ್ ಸಿಂಗ್’. ಈ ಚಿತ್ರದ ಮೂಲಕ ಈಕೆ ಬಿಟೌನ್‌ನ ‘ಕ್ರೇಜಿ ಹೀರೊಯಿನ್’ ಎನ್ನಿಸಿಕೊಂಡಿದ್ದಾರೆ. ಸಿನಿಮಾದ ಜೊತೆ ಜೊತೆಗೆಯೇ ಆಕೆ ‘ಲಸ್ಟ್ ‌ಸ್ಟೋರಿ’, ‘ಗಿಲ್ಟಿ’ ವೆಬ್‌ ಸರಣಿಯಲ್ಲಿ ನಟಿಸುವ ಮೂಲಕ ಅಭಿಮಾನಿ ಬಳಗವನ್ನು ವೃದ್ಧಿಸಿಕೊಂಡಿದ್ದಾರೆ. ಹಾಗಾಗಿಯೇ, ಅವರಿಗೆ ‘ಆದಿಪುರುಷ್‌’ ಚಿತ್ರದಲ್ಲಿ ನಟಿಸಲು ಅವಕಾಶ ಹುಡುಕಿಕೊಂಡು ಬಂದಿದೆ.

ಕಿಯಾರಾ ನಟಿಸಿರುವ ‘ಲಕ್ಷ್ಮಿ ಬಾಂಬ್‌, ‘ಶೇರ್‌ಷಾ’ ಹಾಗೂ ‘ಇಂದೂ ಕಿ ಜವಾನಿ’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ‘ಬೋಲ್ ಬುಲೈಯಾ 2’ ಚಿತ್ರದಲ್ಲಿಯೂ ಆಕೆ ನಟಿಸುತ್ತಿದ್ದಾರೆ. ಆದರೆ, ಇನ್ನೂ ಇದರ ಶೂಟಿಂಗ್‌ ಆರಂಭಗೊಂಡಿಲ್ಲ.

ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಲಿರುವ ‘ಆದಿಪುರುಷ್‌’ ಸಿನಿಮಾ ಹಲವು ಭಾಷೆಗಳಿಗೆ ಡಬ್‌ ಆಗಿ ಬಿಡುಗಡೆಯಾಗಲಿದೆ. ಹಾಗಾಗಿ, ವಿವಿಧ ಭಾಷೆಯ ಪ್ರೇಕ್ಷಕರನ್ನು ಸೆಳೆಯುವ ಸವಾಲು ಚಿತ್ರತಂಡದ ಮುಂದಿದೆ. ಹಾಗಾಗಿ, ಆಯಾ ಭಾಷೆಯ ಪ್ರಸಿದ್ಧ ನಟರು ಇದರಲ್ಲಿ ನಟಿಸುವ ಸಾಧ್ಯತೆಯಿದೆ.

ವರ್ಷಾಂತ್ಯಕ್ಕೆ ಚಿತ್ರದ ಪಾತ್ರವರ್ಗ ಮತ್ತು ತಂತ್ರಜ್ಞರ ಪಟ್ಟಿ ಹೊರಬೀಳುವ ನಿರೀಕ್ಷೆಯಿದೆ. ಟಿ ಸೀರಿಸ್‌ನ ಭೂಷಣ್‌ ಕುಮಾರ್‌ ಇದಕ್ಕೆ ಬಂಡವಾಳ ಹೂಡಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ಸೆಟ್ಟೇರಲಿದ್ದು, 2022ಕ್ಕೆ ಬಿಡುಗಡೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು