ಗುರುವಾರ , ಏಪ್ರಿಲ್ 2, 2020
19 °C

ಒಪ್ಪಿಗೆ ಇಲ್ಲದೆ ರೇಖಾಳ ತುಟಿ ಚುಂಬಿಸಿದ್ದ ಕಮಲ ಹಾಸನ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ. ಬಾಲಚಂದರ್‌ ನಿರ್ದೇಶಿಸಿದ ತಮಿಳು ಚಿತ್ರ ‘ಪುನ್ನಗೈ ಮನ್ನನ್’ ಯಾರಿಗೆ ಗೊತ್ತಿಲ್ಲ ಹೇಳಿ. 1986ರಲ್ಲಿ ತೆರೆಕಂಡ ಇದರಲ್ಲಿ ಕಮಲಹಾಸನ್‌ ಮತ್ತು ರೇಖಾ ನಟಿಸಿದ್ದರು. ಈ ಚಿತ್ರದಲ್ಲೊಂದು ದೃಶ್ಯವಿದೆ. ಸಮಾಜದ ನಿಂದನೆಗೆ ತುತ್ತಾಗುವ ಪ್ರೇಮಿಗಳು ಬೇರ್ಪಡುವ ದೃಶ್ಯವದು. ಬೇರ್ಪಡುವುದಕ್ಕೂ ಮೊದಲು ಇಬ್ಬರೂ ಪರಸ್ಪರ ತುಟಿ ಚುಂಬಿಸಿಕೊಂಡು ಜಲಪಾತಕ್ಕೆ ಹಾರುತ್ತಾರೆ!

ಮೂವತ್ತ ನಾಲ್ಕು ವರ್ಷದ ಬಳಿಕ ಈ ಚಿತ್ರದಲ್ಲಿನ ‘ತುಟಿ ಚುಂಬನ’ ದೃಶ್ಯದ ಹಿಂದಿನ ರಹಸ್ಯ ಬಹಿರಂಗಗೊಂಡಿದೆ. ‘ಈ ಚುಂಬನಕ್ಕೆ ನನ್ನ ಒಪ್ಪಿಗೆಯೇ ಇರಲಿಲ್ಲ’ ಎಂದು ನಾಯಕಿ ರೇಖಾ ಅವರ ಬಹಿರಂಗ ಹೇಳಿಕೆಯೂ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಮುನ್ನುಡಿ ಬರೆದಿದೆ. ಮತ್ತೊಂದೆಡೆ ನೆಟ್ಟಿಗರು ರೇಖಾ ಅವರ ಬಳಿ ಕಮಲಹಾಸನ್‌ ಕ್ಷಮೆಯಾಚಿಸಬೇಕು ಎಂದು ಆಗ್ರಹ ಮೊಳಗಿಸಿದ್ದಾರೆ.

‘ಆ ಚಿತ್ರಕ್ಕೆ ಸುರೇಶ್ ಕೃಷ್ಣ ಮತ್ತು ವಸಂತ ಸಹ ನಿರ್ದೇಶಕರಾಗಿದ್ದರು. ಕಮಲಹಾಸನ್ ನನ್ನ ತುಟಿಗಳನ್ನು ಚುಂಬಿಸುವ ಬಗ್ಗೆ ನನಗೆ ಎಳ್ಳಷ್ಟೂ ಗೊತ್ತಿರಲಿಲ್ಲ. ಸ್ಕ್ರಿಪ್ಟ್‌ನಲ್ಲಿಯೂ ಆ ಬಗ್ಗೆ ಮಾಹಿತಿ ಇರಲಿಲ್ಲ. ಕಮಲಹಾಸನ್‌ ಏಕಾಏಕಿ ನನ್ನ ತುಟಿ ಚುಂಬಿಸಿದರು. ಬಳಿಕ ನಾನು ಸಹ ನಿರ್ದೇಶಕರ ಬಳಿ ಇದರ ಬಗ್ಗೆ ಕೇಳಿದೆ. ರಾಜನೊಬ್ಬ ಸಣ್ಣಮಗುವಿನಂತೆ ಮುತ್ತಿಟ್ಟಿದ್ದಾನೆ ಎಂದು ಅಂದುಕೊಳ್ಳಿ ಎಂದು ಉತ್ತರಿಸಿದರು. ಜನರು ಈ ದೃಶ್ಯದ ಬಗ್ಗೆ ನನಗೆ ಹಲವಾರು ಬಾರಿ ಪ್ರಶ್ನೆ ಕೇಳಿದ್ದಾರೆ. ಅವರ ಪ್ರಶ್ನೆಗೆ ಉತ್ತರಿಸಲು ಆಗುತ್ತಿರಲಿಲ್ಲ. ಆಗ ನನಗೂ ಬೇಸರವಾಗುತ್ತಿತ್ತು’ ಎಂದು ಹೇಳಿದ್ದಾರೆ ರೇಖಾ.

ಮತ್ತೊಂದೆಡೆ ಒಪ್ಪಿಗೆ ಇಲ್ಲದೆ ಕಮಲಹಾಸನ್‌ ನೀಡಿದ ಆ ‘ಮುತ್ತು’ ಚಿತ್ರದ ಆ ದೃಶ್ಯಕ್ಕೆ ಅನಿವಾರ್ಯವಾಗಿತ್ತು ಎಂದು ರೇಖಾ ಕೂಡ ನಂಬಿದ್ದರಂತೆ. ಕಮಲಹಾಸನ್‌ ಅವರು ರೇಖಾ ಅವರ ತುಟಿಗಳನ್ನು ಚುಂಬಿಸುತ್ತಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು