ಕಾಲಿವುಡ್ ಬೆಂಬಿಡದ ಹಾರರ್ ಭೂತ

ಭಾನುವಾರ, ಮೇ 26, 2019
27 °C

ಕಾಲಿವುಡ್ ಬೆಂಬಿಡದ ಹಾರರ್ ಭೂತ

Published:
Updated:
Prajavani

ತಮಿಳು ಚಿತ್ರರಂಗದಲ್ಲಿ ಹಿಂದಿನಿಂದಲೂ ಹಾರರ್ ಸಿನಿಮಾಗಳು ಸಾಕಷ್ಟು ನಿರ್ಮಾಣವಾಗಿದ್ದರೂ ಈಚೆಗೆ ಅದು ಟ್ರೆಂಡ್‌ ಆಗಿ ಬದಲಾಗಿದೆ. ಸ್ಟಾರ್ ನಟರಿಂದ ಹಿಡಿದು ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ಕಲಾವಿದರು ಕೂಡ ಅಭಿನಯಿಸಿರುವ ಇಂತಹ ಸಿನಿಮಾಗಳು ತಮಿಳು ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿವೆ.

ಭರ್ಜರಿ ಕಲೆಕ್ಷನ್ ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವುದರಿಂದಲೇ ಈ ತರದ ಸಿನಿಮಾಗಳ ಸೀಕ್ವೆಲ್‌ಗಳು ಈಗ ಒಂದರ ಹಿಂದೆ ಒಂದರಂತೆ ತಮಿಳಿನಲ್ಲಿ ನಿರ್ಮಾಣವಾಗುತ್ತಿವೆ. ಈ ವರ್ಷ ಈಗಾಗಲೇ ಇಂತಹ ಹಲವು ಸಿನಿಮಾಗಳು ತೆರೆಕಂಡಿದ್ದು, ಇನ್ನಷ್ಟು ಸಿನಿಮಾಗಳು ನಿರ್ಮಾಣ ಹಂತದಲ್ಲಿರುವುದು ಹೊಸ ಸುದ್ದಿ.

ಸದ್ಯ ಪ್ರದರ್ಶನಗೊಳ್ಳುತ್ತಿರುವ ರಾಘವ ಲಾರೆನ್ಸ್ ನಿರ್ದೇಶನದ ‘ಕಾಂಚನ- 3’ ಕೂಡ ಇದೇ ಸಾಲಿಗೆ ಸೇರುವ ಸಿನಿಮಾ. ಇದು 2007ರಲ್ಲಿ ಬಿಡುಗಡೆಗೊಂಡಿದ್ದ ‘ಮುನಿ’ ಸಿನಿಮಾದ ಸೀಕ್ವೆಲ್. ಈ ಸರಣಿಯ ಎಲ್ಲಾ ಸಿನಿಮಾಗಳನ್ನು ನಿರ್ದೇಶಿಸಿರುವ ರಾಘವ್ ಲಾರೆನ್ಸ್ ಅವರೇ ಪ್ರಮುಖ ಪಾತ್ರದಲ್ಲೂ ನಟಿಸಿರುವುದು ವಿಶೇಷ.

‘ಮುನಿ’ ಸಿನಿಮಾದ ಯಶಸ್ಸಿನಿಂದ ಪ್ರೇರಣೆಗೊಂಡ ರಾಘವ್ 2011ರಲ್ಲಿ ‘ಮುನಿ 2’ ಸಿನಿಮಾ ನಿರ್ಮಿಸಿದ್ದರು. ಈ ಸಿನಿಮಾಕ್ಕೆ ‘ಕಾಂಚನ’ ಎಂದೂ ಹೆಸರಿಟ್ಟಿದ್ದರು. ಇದಕ್ಕೂ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ 2015ರಲ್ಲಿ ‘ಕಾಂಚನ 2’ ನಿರ್ಮಿಸಿದ್ದರು. ಇದೀಗ ತೆರೆಕಂಡಿರುವ ‘ಕಾಂಚನ- 3’ ಸಿನಿಮಾ ‘ಮುನಿ’ ಸರಣಿಯ ನಾಲ್ಕನೇ ಚಿತ್ರ. ಕಾಂಚನ ಸಿನಿಮಾ ‘ಕಲ್ಪನ’ ಹೆಸರಿನಲ್ಲಿ ಕನ್ನಡಕ್ಕೂ ರಿಮೇಕ್ ಆಗಿತ್ತು. 

2005ರಲ್ಲಿ ಪಿ. ವಾಸು ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಚಂದ್ರಮುಖಿ’ ಸಿನಿಮಾ ಕಾಲಿವುಡ್‌ನ ಹಾರರ್‌ ಸಿನಿಮಾಗಳಿಗೊಂದು ಮೈಲುಗಲ್ಲು. ರಜನಿಕಾಂತ್, ಪ್ರಭು, ಜ್ಯೋತಿಕಾ, ನಯನ ತಾರಾ ಮೊದಲಾದ ಸ್ಟಾರ್ ನಟ, ನಟಿಯರ ದಂಡೇ ಈ ಸಿನಿಮಾದಲ್ಲಿತ್ತು. ಈ ಕಾರಣಕ್ಕೆ ಭರ್ಜರಿ ಯಶಸ್ಸು ಕಂಡಿತ್ತು. ಇದೇ ಸಿನಿಮಾ ‘ಆಪ್ತಮಿತ್ರ’ ಹೆಸರಿನಲ್ಲಿ ಕನ್ನಡದಲ್ಲಿ
ನಿರ್ಮಾಣಗೊಂಡಿತ್ತು. ಪಿ. ವಾಸು ಅವರೇ ಇದನ್ನೂ ನಿರ್ದೇಶಿಸಿದ್ದರು. ಇದಕ್ಕೆ ಪ್ರೇರಣೆ 1993ರಲ್ಲಿ ಫಾಜಿಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮಲಯಾಳದ ‘ಮಣಿಚಿತ್ರತಾಳ್’ ಚಿತ್ರ. ಮೋಹನ್ ಲಾಲ್, ಶೋಭನಾ, ಸುರೇಶ್‌ಗೋಪಿ ತಾರಾಗಣದ ಈ ಚಿತ್ರ ಮಾಲಿವುಡ್‌ನಲ್ಲಿ ಆಗ ದೊಡ್ಡ ಸದ್ದು ಮಾಡಿತ್ತು.

‘ಚಂದ್ರಮುಖಿ’ ಸಿನಿಮಾದ ಬಳಿಕ ತಮಿಳಿನಲ್ಲಿ ಹಾರರ್ ಸಿನಿಮಾಗಳ ಪರ್ವಕಾಲ ಆರಂಭವಾಯಿತು ಎನ್ನಬಹುದು. ‘ಮುನಿ’ ಸೇರಿದಂತೆ ಹಲವು ಸಿನಿಮಾಗಳು ಆ ನಂತರ ನಿರ್ಮಾಣಗೊಂಡವು. 2012ರಲ್ಲಿ ಬಿಡುಗಡೆಗೊಂಡಿದ್ದ ‘ಪಿಜ್ಜಾ‘ ಸಿನಿಮಾ ಕೂಡ ಯಶಸ್ಸು ಕಂಡಿತ್ತು. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು.

2014ರಲ್ಲಿ ಸುಂದರ್‌ ಸಿ. ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಅರನ್ಮನೈ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಗೆ ಮಾಡಿತ್ತು. ಹನ್ಸಿಕಾ ಮೋಟ್ವಾನಿ, ಆ್ಯಂಡ್ರಿಯಾ ಇದರಲ್ಲಿ ನಟಿಸಿದ್ದರು.

2018ರಲ್ಲಿ ಬಿಡುಗಡೆಗೊಂಡಿದ್ದ ತ್ರಿಷಾ ಅಭಿನಯದ ‘ಮೋಹಿನಿ’ ಸಿನಿಮಾದ ಯಶಸ್ಸು ಕೂಡ ಕಾಲಿವುಡ್‌ನಲ್ಲಿ ಈ ರೀತಿಯ ಸಿನಿಮಾ ನಿರ್ಮಿಸುವವರಿಗೆ ಸ್ಫೂರ್ತಿಯಾಯಿತು. ಆನಂತರ ಬಿಡುಗಡೆಯಾದ ಸರ್ಜುನ್ ಕೆ.ಎಂ. ನಿರ್ದೇಶನದ ‘ಐರಾ’, ವದಿವುದೆಯನ್ ನಿರ್ದೇಶನದ ‘ಪೊಟ್ಟು’ ಸಿನಿಮಾಗಳಿಗೂ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. 

ರಾಜು ವಿಶ್ವನಾಥ್ ನಿರ್ದೇಶನದ ‘ಲಿಸಾ’, ದಿಲ್‌ಸತ್ಯ ನಿರ್ದೇಶನದ ‘ಮಾಳಿಗೈ’ ಸಿನಿಮಾಗಳು ನಿರ್ಮಾಣ ಹಂತದಲ್ಲಿವೆ. ‘ಮಾಳಿಗೈ’ನಲ್ಲಿ ಆ್ಯಂಡ್ರಿಯಾ ಅವರದು ಪ್ರಮುಖ ಪಾತ್ರ. 2017ರಲ್ಲಿ ಬಿಡುಗಡೆಗೊಂಡಿದ್ದ ಆಂಡ್ರಿಯಾ ನಟನೆಯ ‘ಅವಳ್’ ಸಿನಿಮಾ ಹಿಟ್ ಆಗಿರುವುದು ಇಲ್ಲಿ ಗಮನಾರ್ಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !