ಸೋಮವಾರ, ಆಗಸ್ಟ್ 8, 2022
22 °C

ಲಾಕ್‌ಡೌನ್ | 15 ಕೆ.ಜಿ ತೂಕ ಇಳಿಸಿಕೊಂಡ ಕೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಮ್ಮ ಹೊಸ ಚಿತ್ರ ‘ಮಿಮಿ’ಯಲ್ಲಿ ಗರ್ಭಿಣಿ ಪಾತ್ರಕ್ಕಾಗಿ 15 ಕೆ.ಜಿ ತೂಕ ಏರಿಸಿಕೊಂಡಿದ್ದ ನಟಿ ಕೃತಿ ಸನೊನ್ ಈಗ ಲಾಕ್‌ಡೌನ್‌ ಅವಧಿಯಲ್ಲಿ ತೂಕ ಇಳಿಸಿಕೊಂಡು, ಸಣ್ಣಗಾಗಿ, ಬಳುಕುವ ಬಳ್ಳಿಯಂತಾಗಿದ್ದಾರೆ. 

ಲಕ್ಷ್ಮಣ್‌ ಉಟೇಕರ್‌ ನಿರ್ದೇಶನದ ಹೊಸ ಚಿತ್ರ ‘ಮಿಮಿ’ಯಲ್ಲಿ ಬಾಡಿಗೆ ತಾಯಿ ಪಾತ್ರದಲ್ಲಿ ನಟಿಸಿರುವ ಕೃತಿ, ಆ ಪಾತ್ರದ ಅಗತ್ಯಕ್ಕೆ ತಕ್ಕಂತೆ 15 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದರು. ‘ತುಂಬಿದ ಗರ್ಭಿಣಿ ಪಾತ್ರಕ್ಕೆ  ಮೈ ಕೈ ತುಂಬಿಕೊಂಡು ದಪ್ಪ ಕಾಣಬೇಕು‘ ಎಂದು ನಿರ್ದೇಶಕ ಲಕ್ಷ್ಮಣ್ ಕೂಡ ಸೂಚಿಸಿದ್ದರು.  

ಈಗ ಚಿತ್ರದ ಶೂಟಿಂಗ್‌ ಮುಗಿದಿದೆ. ಲಾಕ್‌ಡೌನ್ ಅವಧಿಯಲ್ಲಿ ಸೂಕ್ತ ಆಹಾರ ಸೇವನೆ, ವ್ಯಾಯಾಮ, ಜಿಮ್‌ ವರ್ಕೌಟ್‌ ಮೂಲಕ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ‘ಮೊದಲಿನಂತೆ ಸಣ್ಣಗಾಗಲೂ ಇನ್ನು ಬರಿ 1.5 ಕೆ.ಜಿ ಕಡಿಮೆ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿಕೊಂಡಿದ್ದಾರೆ.

ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಈಚೆಗಿನ ಫೋಟೊವೊಂದನ್ನು ಹಂಚಿಕೊಂಡಿರುವ ಅವರು, ತೂಕ ಏರಿಕೆ ಹಾಗೂ ಸಣ್ಣಗಾಗುವ ಪ್ರಕ್ರಿಯೆಯಲ್ಲಿ ಸರಿಯಾದ ಸಲಹೆ ನೀಡಿದ ಡಯೇಟಿಷಿಯನ್‌ ಜವಾನಿ ಕನಕಿಯ ಸಂಗವಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ‘ನೀವಿಲ್ಲದಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ, ಎಲ್ಲರಿಗೂ ನಿಮ್ಮಂಥ ಡಯೇಟಿಷಿಯನ್‌ ಇರಬೇಕು’ ಎಂದು ಪ್ರಶಂಸಿದ್ದಾರೆ. 

ತೂಕ ಏರಿಕೆ ಗುಟ್ಟು
‘ನನ್ನ ದೇಹ ಪ್ರಕೃತಿಯೇ ಸಣ್ಣಗಾಗಿರುವುದರಿಂದ ನನಗೆ ತೂಕ ಹೆಚ್ಚಳ ಮಾಡಿಕೊಳ್ಳಲು ತುಂಬಾ ಕಷ್ಟವಾಯಿತು. ಆದರೆ ದೃಶ್ಯಕ್ಕಾಗಿ ತೂಕ ಏರಿಸಿಕೊಳ್ಳಲೇಬೇಕು ಎಂದು ನಿರ್ದೇಶಕರ ಸೂಚನೆಯಿದ್ದಿದ್ದರಿಂದ ಆಹಾರವನ್ನು ಹೆಚ್ಚು ಸೇವಿಸುತ್ತಿದ್ದೆ‘ ಎಂದು ತೂಕ ಏರಿಕೆ ಹಿಂದಿನ ಕಥೆ ಹೇಳಿಕೊಂಡಿದ್ದಾರೆ.

‘ಕ್ಯಾಲೊರಿ ಜಾಸ್ತಿ ಇರುವ ಆಹಾರ ಸೇವಿಸುತ್ತಿದ್ದೆ. ವರ್ಕೌಟ್‌ ನಿಲ್ಲಿಸಿದೆ. ಪೂರಿ, ಹಲ್ವಾ, ಕಡಲೆಕಾಳುಗಳಂತಹ ತೂಕ ಹೆಚ್ಚು ಮಾಡುವ ಪದಾರ್ಥಗಳನ್ನು ಬೆಳಿಗ್ಗೆ ಉಪಹಾರಕ್ಕೆ ತಿಂದರೆ,  ಪ್ರತಿ ಊಟದ ನಂತರ ಸಿಹಿ ಖಾದ್ಯಗಳನ್ನು ಸೇವಿಸಲು ಆರಂಭಿಸಿದೆ. ಆರಂಭದಲ್ಲಿ ಹೊಸ ಹೊಸ ಅಡುಗೆ ರುಚಿ ನೋಡುವುದು ಖುಷಿಯಾಗುತ್ತಿತ್ತು. ಬಳಿಕ ಒತ್ತಾಯಪೂರ್ವಕವಾಗಿ,  ದಪ್ಪಗಾಗಬೇಕೆಂದು ತಿನ್ನುತ್ತಿದ್ದೆ. ಆಹಾರ ಬಗೆಗಿನ ನನ್ನ ಆಸಕ್ತಿಯೂ ಕಡಿಮೆಯಾಯಿತು’ ಎಂದು ಹೇಳಿದ್ದಾರೆ. 

ಮರಾಠಿ ಸಿನಿಮಾದ ರಿಮೇಕ್‌
‘ಮಿಮಿ’ ಸಿನಿಮಾವು 2011ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮರಾಠಿಯ ‘ಮಲಾ ಆಯಿ ವ್ಯಯ್‌ಚಯ್‌’ ಸಿನಿಮಾದ ರಿಮೇಕ್‌. ಈ ಡ್ರಾಮಾ ಸಿನಿಮಾವನ್ನು ದಿನೇಶ್‌ ವಿಜನ್‌ ನಿರ್ಮಾಣ ಮಾಡುತ್ತಿದ್ದಾರೆ. ಇದರಲ್ಲಿ ಕೃತಿ ಸನೊನ್‌ ಜತೆಗೆ ಪಂಕಜ್‌ ತ್ರಿಪಾಠಿ, ಸಾಯಿ ತಮಂಕರ್‌ ನಟಿಸುತ್ತಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಲಾಕ್‌ಡೌನ್‌ ನಂತರ ತೆರೆ ಕಾಣುವ ಸಾಧ್ಯತೆಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು