ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಷೇತ್ರಪತಿ’ ಚಿತ್ರದಲ್ಲಿ ಉತ್ತರ ಕರ್ನಾಟಕ ಸೊಗಡು

Published 6 ಜುಲೈ 2023, 23:46 IST
Last Updated 6 ಜುಲೈ 2023, 23:46 IST
ಅಕ್ಷರ ಗಾತ್ರ

ವಿನಾಯಕ ಕೆ.ಎಸ್.

* ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದ್ದೇಕೆ? ಸಿದ್ಧತೆ ಹೇಗಿದೆ?

ಸಿನಿಮಾ ಜುಲೈ 28ಕ್ಕೆ ಬಿಡುಗಡೆಗೊಳ್ಳಬೇಕಿತ್ತು. ಆದರೆ ಚಿತ್ರದ ಕೆಲಸದ ವೇಗ ನೋಡಿದಾಗ ಪೂರ್ಣಗೊಳ್ಳಲು ಸ್ವಲ್ಪ ಹೆಚ್ಚು ಸಮಯ ಬೇಕು ಎನ್ನಿಸಿತು. ಅಲ್ಲದೇ ಒಂದಷ್ಟು ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಹೀಗಾಗಿ ಆ.18ಕ್ಕೆ ತೆರೆಗೆ ಬರುತ್ತಿದ್ದೇವೆ.

* ‘ಕ್ಷೇತ್ರಪತಿ’ ಯಾವ ಜಾನರ್‌ನ ಕಥೆ? 

ಒಬ್ಬ ಸಾಮಾನ್ಯನ ಹೋರಾಟದ ಕಥೆ. ಉತ್ತರ ಕರ್ನಾಟಕದಿಂದ ಈ ಹೋರಾಟ ಪ್ರಾರಂಭವಾಗುತ್ತದೆ. ತಂದೆ ಮತ್ತು ಮಗನನ್ನು ಇಟ್ಟುಕೊಂಡು ಒಂದು ಸಾರ್ವತ್ರಿಕ ಸಮಸ್ಯೆಯನ್ನು ಹೇಳುತ್ತ ಹೋಗುತ್ತೇವೆ. ಉತ್ತರ ಕರ್ನಾಟಕದ ಭಾಗಕ್ಕೆ ಹೆಚ್ಚು ಆಪ್ತವಾಗುವ ವಿಷಯ. ನಾನು ಮತ್ತು ಚಿತ್ರದ ನಿರ್ದೇಶಕ ಶ್ರೀಕಾಂತ್‌ ಇಬ್ಬರೂ ಅಲ್ಲೇ ಹುಟ್ಟಿ ಬೆಳೆದವರು. ಹೀಗಾಗಿ ಉತ್ತರ ಕರ್ನಾಟಕದ ಸಂಸ್ಕೃತಿ, ಸೊಗಡು ಮತ್ತು ಭಾಷೆಯನ್ನು ಬಹಳ ಅಧಿಕೃತವಾಗಿ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. 

* ಸಿನಿಮಾ ಉತ್ತರ ಕರ್ನಾಟಕದಲ್ಲಿಯೇ ಚಿತ್ರೀಕರಣಗೊಂಡಿದೆಯೇ?

ಹೌದು. ಶೇಕಡ 95ರಷ್ಟು ಭಾಗ ಗದಗ, ತಿಮ್ಮಾಪುರ, ಲಕ್ಕುಂಡಿಯಲ್ಲಿ ಚಿತ್ರೀಕರಣಗೊಂಡಿದೆ. ನಮಗೆಲ್ಲ ಗೊತ್ತಿರುವ ಸಮಸ್ಯೆಯದೇ ಕಥೆಯನ್ನು ಸಿನಿಮಾ ಒಳಗೊಂಡಿದೆ. ಅಚ್ಯುತ್‌ ಕುಮಾರ್‌, ನಾಯಕಿ ಅರ್ಚನಾ ಜೋಯಿಸ್‌ ಹೊರತುಪಡಿಸಿ ಉಳಿದವರೆಲ್ಲರೂ ಉತ್ತರ ಕರ್ನಾಟಕದ ರಂಗಭೂಮಿ ಕಲಾವಿದರು. ‘ನಾಗಮಂಡಲ’, ‘ಹುಲಿಯಾ’ ಸೇರಿದಂತೆ ಕೆಲ ಚಿತ್ರಗಳಷ್ಟೇ ಉತ್ತರ ಕರ್ನಾಟಕ ಭಾಷೆಯ ಸೊಗಡಿತ್ತು. ಹೀಗಾಗಿ ಒಂದು ಗಟ್ಟಿಯಾದ ವಿಷಯ ಇಟ್ಟುಕೊಂಡು ಕಮರ್ಷಿಯಲ್‌ ಆಗಿ ‘ಕ್ಷೇತ್ರಪತಿ’ ಕಥೆ ಹೇಳಿದ್ದೇವೆ.

* ಉತ್ತರ ಕರ್ನಾಟಕವನ್ನೇ ಕೇಂದ್ರೀಕರಿಸಿ, ಬಿಡುಗಡೆ ಮಾಡುವಿರೇ?

ಕಥೆ ಸಾರ್ವತ್ರಿಕವಾಗಿದೆ. ಹೀಗಾಗಿ ರಾಜ್ಯದೆಲ್ಲೆಡೆ ಸಿನಿಮಾ ಬಿಡುಗಡೆ ಮಾಡುತ್ತೇವೆ. ಶೇಕಡಾ 5ರಷ್ಟು ಬೆಂಗಳೂರಿನಲ್ಲಿಯೂ ಚಿತ್ರೀಕರಣ ಮಾಡಿದ್ದೇವೆ. ಅಲ್ಲದೇ ರಾಜಧಾನಿಯಲ್ಲಿಯೂ ಸಾಕಷ್ಟು ಉತ್ತರ ಕರ್ನಾಟಕದ ಜನರಿದ್ದಾರೆ. ಪ್ರಚಾರ ಕಾರ್ಯಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಾಡುತ್ತೇವೆ. ಇಲ್ಲಿ ದೊಡ್ಡ ಪ್ರಚಾರ ಕಾರ್ಯಕ್ರಮ ನಡೆಸುವ ಯೋಚನೆಯಿದೆ.

* ‘ಗುಲ್ಟು’ ನಂತರ ತುಸು ಹೆಚ್ಚೇ ವಿರಾಮ ತೆಗೆದುಕೊಂಡಿದ್ದು ಏಕೆ?

ಕಥೆಗಳ ಆಯ್ಕೆಗೆ ಸಮಯ ತೆಗೆದುಕೊಂಡೆ. ‘ಗುಲ್ಟು’ ಬಳಿಕ ಎರಡು ಕಥೆಗಳೊಂದಿಗೆ ಪ್ರಯಾಣ ಮಾಡಿದೆ. ಆದರೆ ಒಂದು ಕಥೆ ಬೇರೆ ನಾಯಕನಿಗೆ ಸಿನಿಮಾವಾಯ್ತು. ಇನ್ನೊಂದು ಕಥೆ ಮುಂದಕ್ಕೆ ಹೋಗಲಿಲ್ಲ. ಕಾಯುತ್ತ ಕುಳಿತರೆ ಸಮಯ ಕಳೆದು ಹೋಗುತ್ತದೆ ಎಂದು ನಂತರ ‘ಧರಣಿಮಂಡಲ’ ಮತ್ತು ‘ಹೊಂದಿಸಿ ಬರೆಯಿರಿ’ ಒಪ್ಪಿಕೊಂಡೆ. ಎರಡೂ ಸಿನಿಮಾಗಳು ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸ್ವಲ್ಪ ವಿಫಲವಾದವು. ‘ಹೊಂದಿಸಿ ಬರೆಯಿರಿ’ ಬಿಡುಗಡೆಯಾದ ಮೂರು ವಾರಕ್ಕೆ ಸುಮಾರು 45 ಚಿತ್ರಗಳು ಬಿಡುಗಡೆಗೊಂಡಿದ್ದವು. ‘ಧರಣಿಮಂಡಲ’ ಬಿಡುಗಡೆ ಸಮಯ ಕೂಡ ಒಂದು ರೀತಿ ಕೋವಿಡ್‌ ಕ್ಲಿಯರೆನ್ಸ್‌ ಸಮಯ ಎಂಬಂತೆ ಆಗಿತ್ತು. 

* ‘ಗುರುದೇವ್‌ ಹೊಯ್ಸಳ’ದ ನಂತರ ನಿಮ್ಮ ಬೇಡಿಕೆ ಹೆಚ್ಚಾಗಿದೆಯೆ?

‘ಹೊಯ್ಸಳ’ ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಸಿಕ್ಕಿತ್ತು. ‘ಹೊಂದಿಸಿ ಬರೆಯಿರಿ’ ಒಟಿಟಿಯಲ್ಲಿ ಬರುವ ವೇಳೆಗೆ ‘ಹೊಯ್ಸಳ’ ಚಿತ್ರಮಂದಿರದಲ್ಲಿತ್ತು. ಹೆಚ್ಚು ಜನರು ನನ್ನನ್ನು ಗುರುತಿಸಿದರು. ಒಳ್ಳೆಯ ಮೈಲೇಜ್‌ ಸಿಕ್ಕಿತು. ಬೇಡಿಕೆ ಹೆಚ್ಚಳಕ್ಕಿಂತ ಬರುವ ಕಥೆಗಳ ಬಜೆಟ್‌ ಗಾತ್ರ ಹೆಚ್ಚಾಗಿದೆ. ದೊಡ್ಡ ಬಜೆಟ್‌ನ ಕಥೆಗಳು ಬರುತ್ತಿವೆ. 

* ನಿಮ್ಮ ಮುಂದಿನ ಚಿತ್ರಗಳು?

ಕೆಆರ್‌ಜಿ ಸ್ಟುಡಿಯೋಸ್‌ ಜೊತೆ ‘ಕಿರಿಕ್‌ et–11’ ಚಿತ್ರೀಕರಣ ಪ್ರಾರಂಭವಾಗುತ್ತಿದೆ. ‘ಫ್ಯಾಮಿಲಿ ಮ್ಯಾನ್‌’ ವೆಬ್‌ ಸರಣಿ ಬರಹಗಾರ ಇದರ ನಿರ್ದೇಶಕರು. ಭಾವನಾತ್ಮಕ ಪಯಣದೊಂದಿಗೆ ನಗಿಸುವ ಕಥೆಯನ್ನು ಹೊಂದಿರುವ ಚಿತ್ರ. ‘ನೋಡಿದವರು ಏನಂತಾರೆ?’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ‘ಗುಲ್ಟು’ ಜನಾರ್ದನ್‌ ಚಿಕ್ಕಣ್ಣ ಜೊತೆ ಇನ್ನೊಂದು ಸಿನಿಮಾ ಮಾಡುವ ತಯಾರಿ ನಡೆಯುತ್ತಿದೆ. ಯಾವ ರೀತಿ ಕಥೆ ಆಯ್ಕೆ ಮಾಡಿಕೊಳ್ಳಬೇಕೆಂಬ ಚರ್ಚೆ ನಡೆಯುತ್ತಿದೆ. ಇದಲ್ಲದೆ ಇನ್ನೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಕೂಡ ಕೇಳಿರುವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT