ಶುಕ್ರವಾರ, ಆಗಸ್ಟ್ 19, 2022
25 °C

ತೆರಿಗೆ ವಿವಾದ: ಎ.ಆರ್‌. ರೆಹಮಾನ್‌ಗೆ ಮದ್ರಾಸ್‌ ಹೈಕೋರ್ಟ್‌ನಿಂದ ನೋಟಿಸ್ ಜಾರಿ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್ ತನ್ನ ಸಂಭಾವನೆಯ ಮೊತ್ತ ₹ 3.47 ಕೋಟಿಯನ್ನು ತನ್ನದೇ ಟ್ರಸ್ಟ್‌ಗೆ ನೀಡಿರುವ ವಿಷಯ ಈಗ ಮದ್ರಾಸ್‌ ಹೈಕೋರ್ಟ್‌ನ ಮೆಟ್ಟಿಲೇರಿದೆ. ತೆರಿಗೆಯಿಂದ ತಪ್ಪಿಸಿಕೊಳ್ಳಲು ಅವರು ತಂತ್ರ ಹೆಣೆದಿದ್ದಾರೆ ಎಂದು ತೆರಿಗೆ ಇಲಾಖೆಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣ ಸಂಬಂಧ ನ್ಯಾಯಾಲಯವು ರೆಹಮಾನ್‌ಗೆ ನೋಟಿಸ್‌ ಜಾರಿಗೊಳಿಸಿದೆ.

2011–12ನೇ ಸಾಲಿನಡಿ ವೈಯಕ್ತಿಕ ತೆರಿಗೆಯಿಂದ ತಪ್ಪಿಸಿಕೊಳ್ಳಲು ರೆಹಮಾನ್‌ ತನ್ನದೇ ಆದ ಎ.ಆರ್‌. ರೆಹಮಾನ್‌ ಫೌಂಡೇಶನ್‌ಗೆ ಸಂಭಾವನೆಯ ರೂಪದಲ್ಲಿ ಬಂದ ಹಣವನ್ನು ನೀಡಿದ್ದಾರೆ. ಆ ಸಾಲಿನಡಿ ರೆಹಮಾನ್‌ ಅವರ ಐಟಿ ರಿಟರ್ನ್‌ ಅರ್ಜಿಯನ್ನು ಇಲಾಖೆಯು ಪರಿಶೀಲನೆ ನಡೆಸಿದ ವೇಳೆ ಈ ವ್ಯತ್ಯಾಸ ಬೆಳಕಿಗೆ ಬಂದಿದೆ. 

2011ರಲ್ಲಿ ಯುಕೆ ಮೂಲಕ ಲಿಬ್ರಾ ಮೊಬೈಲ್‌ ಕಂಪನಿಯ ಜೊತೆಗೆ ರೆಹಮಾನ್‌ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದರಂತೆ. ಒಪ್ಪಂದದನ್ವಯ ಅವರು ಕಂಪನಿಗೆ ರಿಂಗ್‌ಟೋನ್‌ಗಳನ್ನು ಕಂಪೋಸಿಂಗ್‌ ಮಾಡಿಕೊಟ್ಟಿದ್ದಾರೆ. ಹಾಗಾಗಿ, ಕಂಪನಿಯು ರೆಹಮಾನ್‌ಗೆ ಸಂಭಾವನೆ ರೂಪದಲ್ಲಿಯೇ ₹ 3.47 ಕೋಟಿ ಪಾವತಿಸಿದೆ.

ರೆಹಮಾನ್‌ ಕೆಲಸ ನಿರ್ವಹಿಸಿದ್ದ ಪರಿಣಾಮ ಸಂಭಾವನೆಯ ಮೊತ್ತವು ಅವರ ವೈಯಕ್ತಿಕ ಖಾತೆಗೆ ಜಮೆಯಾಗಿದೆ. ಇದರಲ್ಲಿ ತೆರಿಗೆ ‍ಪಾವತಿಸಿದ ಬಳಿಕ ಉಳಿದ ಹಣವನ್ನು ಟ್ರಸ್ಟ್‌ಗೆ‌ ನೀಡಬಹುದು. ಆದರೆ, ಅವರು ಇಂತಹ ತೀರ್ಮಾನ ತಳೆಯದೇ ಇಡೀ ಮೊತ್ತವನ್ನು ಟ್ರಸ್ಟ್‌ಗೆ ನೀಡಿರುವುದು ತೆರಿಗೆ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಇಲಾಖೆ ತಿಳಿಸಿದೆ.

ರೆಹಮಾನ್‌ ಅವರು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮತ್ತು ಇತರೇ ಸಂಗೀತದ ಕೆಲಸಗಳಿಂದ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅವರು ಸೇವೆಯ ರೂಪದಲ್ಲಿ ಪಡೆಯುವ ಸಂಭಾವನೆಗೆ ತೆರಿಗೆ ಪಾವತಿಸುವುದು ಕಡ್ಡಾಯ. ಆದರೆ, ಅವರು ಸೇವಾ ತೆರಿಗೆ ಪಾವತಿಸಲು ವಿಫಲರಾಗಿದ್ದಾರೆ ಎಂದು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ ಜಿಎಸ್‌ಟಿ ಕಮಿಷನರ್‌ ಮತ್ತು ಸೆಂಟ್ರಲ್‌ ಎಕ್ಸಸೈಜ್‌ ವಿಭಾಗದಿಂದ ಬಾಕಿ ₹ 6.79 ಕೋಟಿ ತೆರಿಗೆ ಮತ್ತು ಅಷ್ಟೇ ಮೊತ್ತದ ದಂಡ ಪಾವತಿಸುವಂತೆ ರೆಹಮಾನ್‌ಗೆ ಆದೇಶ ನೀಡಲಾಗಿತ್ತು. ಇದಕ್ಕೆ ಮದ್ರಾಸ್‌ ಹೈಕೋರ್ಟ್‌ ಮಧ್ಯಂತರ ತಡೆ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು