ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೋಜಿ’ ಹಾಗೂ ‘ಆರ್‌ಕರಿಯಾಮ್’: ಕೋವಿಡ್ ಕಾಲಕ್ಷೇಪದ ಎರಡು ಮಾದರಿಗಳು

Last Updated 3 ಜೂನ್ 2021, 19:30 IST
ಅಕ್ಷರ ಗಾತ್ರ

ಕೋವಿಡ್ ವ್ಯಾಪಿಸಿದ ಮೇಲೆ ಜನಪ್ರಿಯ ಸಿನಿಮಾದವರೆಲ್ಲ ಮತ್ತೆ ಬರತಾದ ಕಾಲ ಎಂದು ಕಾಯುತ್ತಿದ್ದರೆ, ಮಲಯಾಳಂ ಚಿತ್ರರಂಗದಲ್ಲಿ ಈ ಕಾಲವನ್ನೇ ‘ಕಾಲಕ್ಷೇಪ’ವಾಗಿಸಿ ಚಿತ್ರಗಳನ್ನು ಮಾಡುವ ಉತ್ಕಟತೆ ಕಾಣುತ್ತಿದೆ. ‘ಜೋಜಿ’ ಹಾಗೂ ‘ಆರ್‌ಕರಿಯಾಮ್’ ಎರಡು ತಾಜಾ ಉದಾಹರಣೆಗಳು.

‘ಕುಂಬಳಂಗಿ ನೈಟ್ಸ್’ ತರಹದ ಕಾವ್ಯಾತ್ಮಕವಾದ ಮನುಷ್ಯಾನುಸಂಧಾನದ ಸಿನಿಮಾ ಕೊಟ್ಟ ನಿರ್ದೇಶಕ ದಿಲೀಶ್ ಪೋಥನ್, ಶೇಕ್ಸ್‌ಪಿಯರ್‌ನ ‘ಮೆಕ್‌ಬೆತ್‌’ನ ಆತ್ಮ ಎತ್ತಿಕೊಂಡು ‘ಜೋಜಿ’ ಕಟ್ಟಿದ್ದಾರೆ. ಮಕ್ಕಳನ್ನೆಲ್ಲ ಅಂಕೆಯಲ್ಲಿಟ್ಟುಕೊಂಡ ಕಟ್ಟುಮಸ್ತು ತಂದೆ ಹಾಸಿಗೆ ಹಿಡಿಯುತ್ತಾನೆ. ಅವನ ಅನಾರೋಗ್ಯದ ಕುದಿಯಲ್ಲೇ ತಮ್ಮ ಇಷ್ಟಾರ್ಥ ಸಿದ್ಧಿಗೆ ಹಪಹಪಿಸುವ ಮಕ್ಕಳು. ಅಯೋಗ್ಯ ಎನಿಸಿಕೊಂಡ, ಎಂಜಿನಿಯರಿಂಗ್ ಕಾಲೇಜ್‌ ಡ್ರಾಪ್‌ಔಟ್‌ ಆದ ಚಿಕ್ಕ ಮಗ ಇಂತಹ ಸಂದರ್ಭದಲ್ಲಿ ಪರಮಯೋಗ್ಯನಾಗಿ ಮೆದುಳನ್ನು ಓಡಿಸಿ ಕೃತ್ರಿಮವನ್ನು ಹೊಸೆಯುವ ಪರಿಯನ್ನು ದಿಲೀಶ್ ಎಂದಿನ ತಮ್ಮ ತಣ್ಣದನಿಯಲ್ಲಿ ಹೇಳಿದ್ದಾರೆ.

ಹತಾಶ ಆಧುನಿಕ ಮನಸ್ಸುಗಳು ಹಾಗೂ ಅಂಕೆಯಲ್ಲಿಡುವ ಲಾಗಾಯ್ತಿನ ಯಾಜಮಾನ್ಯ ಧೋರಣೆಯನ್ನು ನಿರ್ದೇಶಕರು ಮುಖಾಮುಖಿಯಾಗಿಸುವಲ್ಲಿ ನಿರುದ್ವೇಗದ ರೂಪಕಗಳನ್ನು ಸೃಜಿಸಿರುವುದು ನಾಟುತ್ತದೆ. ಪ್ರತಿನಾಯಕನ ಸಕಲೇಷ್ಟ ಭಾವಗಳನ್ನೂ, ಕ್ರೋಧವನ್ನೂ ಆವಿರ್ಭವಿಸಿಕೊಂಡಂತೆ ನಟ ಫಹಾದ್ ಫಾಸಿಲ್ ನಟಿಸಿದ್ದಾರೆ. ಅವರ ಕಣ್ಣುಗಳಲ್ಲಿ ಕಾಣುವ ಷಡ್ಯಂತ್ರದ ಜೇಡರಬಲೆ, ಅಸ್ಥಿರವಾದ ಆಂಗಿಕ ಚಲನೆಗಳು ನಿರ್ದೇಶಕರ ಸೂಕ್ಷ್ಮ ಕಟ್ಟುವಿಕೆಗೆ ಉದಾಹರಣೆಗಳು.

ಸನು ವರ್ಗೀಸ್ ಚೊಚ್ಚಲ ನಿರ್ದೇಶನದ ‘ಆರ್‌ಕರಿಯಾಮ್’ (ಯಾರಿಗ್ಗೊತ್ತು) ಸಮಾಜೋ–ರಾಜಕೀಯ ಗಟ್ಟಿತನದ ದೃಷ್ಟಿಯಲ್ಲಿ ‘ಜೋಜಿ’ಗಿಂತ ಮೇಲೇಳುತ್ತದೆ. ಮುಂಬೈನಲ್ಲಿ ನೆಲೆಸಿದ ಮಗಳು–ಅಳಿಯ. ಬೋರ್ಡಿಂಗ್ ಸ್ಕೂಲ್‌ನಲ್ಲಿ ಓದುತ್ತಿರುವ ಮೊಮ್ಮಗಳು. ವ್ಯವಹಾರದ ಆರ್ಥಿಕ ಸಂಕಷ್ಟಕ್ಕೆ ಅಳಿಯ ಸಿಲುಕಿದ ಹೊತ್ತಲ್ಲೇ ಕೋವಿಡ್‌ ಕಾರಣಕ್ಕೆ ಲಾಕ್‌ಡೌನ್‌ ಆಗುತ್ತದೆ. ಆಗ ಮಗಳು–ಅಳಿಯ ಕೇರಳದ ತವರಿಗೆ ಬರುತ್ತಾರೆ. ಅವರನ್ನು ಬರಮಾಡಿಕೊಳ್ಳುವ ಇಳಿವಯಸ್ಸಿನ ವ್ಯಕ್ತಿಯೇ ಕಥನದ ಕೇಂದ್ರ ಪಾತ್ರ. ಮೊಮ್ಮಗಳು ಬೋರ್ಡಿಂಗ್ ಶಾಲೆಯಲ್ಲೇ ಉಳಿಯುವ ಅನಿವಾರ್ಯ. ಅವಳನ್ನು ಕರೆತರಲು ಅಮ್ಮನ ಇನ್ನಿಲ್ಲದ ಯತ್ನ. ಹೀಗೆ ಸಹಜವಾಗಿ ಎಲ್ಲರೂ ನಿತ್ಯ ವ್ಯಾಪಾರದಲ್ಲಿ ತೊಡಗಿಕೊಂಡು, ತವರಿನಲ್ಲಿ ಲಾಕ್‌ಡೌನ್ ಕಾಲದ ಸುಖ ಉಣ್ಣಬಹುದು ಎಂದು ನಾವು ಭಾವಿಸುವ ಹೊತ್ತಿಗೇ ನಿರ್ದೇಶಕರು ಭಯಂಕರ ಟ್ವಿಸ್ಟ್‌ ಸೃಷ್ಟಿಸುತ್ತಾರೆ.

ಈ ಎಲ್ಲ ಪಾತ್ರಗಳಿಗೂ ಒಂದೊಂದು ಗುಟ್ಟಿದೆ. ಮಗಳ ಈ ಗಂಡ ಎರಡನೆಯವನು. ಮೊದಲ ಗಂಡ ಹತನಾಗಿದ್ದಾನೆ. ಅಳಿಯನ ಆರ್ಥಿಕ ಸಂಕಷ್ಟ ಕರಗಿಸಲು ಮುಂದಾಗುವ ಮಾವ ಆ ಹತಕಥನದ ಖಳ ತಾನೇ ಎಂದು ಹೇಳುವ ಮೂಲಕ ದೊಡ್ಡ ಗುಟ್ಟನ್ನು ರಟ್ಟು ಮಾಡುತ್ತಾನೆ. ಒಂದೆಡೆ ತನ್ನ ಕಷ್ಟ ಕರಗಿತು ಎಂದುಕೊಳ್ಳುವ ಅಳಿಯನ ಮನದಲ್ಲಿ ಇನ್ನೊಂದು ಪಾಪಪ್ರಜ್ಞೆಯ ಗುಂಗಿಹುಳು. ಅನುಮಾನ ಮಡುಗಟ್ಟಿಸುವ ಭಯ. ಹೀಗೆ ಸಹಜವಾಗಿ ವರ್ತಿಸುವ ಪಾತ್ರಗಳ ಒಳಗಿನ ಅಸಹಜ ಗುಟ್ಟುಗಳು ಹಾಗೂ ಆ ಸಿಕ್ಕುಗಳನ್ನು ಬಿಡಿಸಲು ಹೊರಟ ಹಾದಿಯಲ್ಲಿ ಇದಿರಾಗುವ ‘ಎಲ್ಲವೂ ದೈವೇಚ್ಛೆ’ ಎಂಬ ನಂಬಿಕೆಯ ಸಾಲು–ಸಿನಿಮಾದ ಮನೋವ್ಯಾಪಾರದ ಮೌಲ್ಯವನ್ನು ಹೆಚ್ಚಿಸಿದೆ. ಬಿಜು ಮೆನನ್, ಪಾರ್ವತಿ, ಶರಾಫುದ್ದೀನ್ ಮೂವರೂ ಪಾತ್ರಗಳ ಒಳತೋಟಿಗಳನ್ನು ದಾಟಿಸುವ ಪರಿಯೇ ಅನನ್ಯ. ಸಸ್ಪೆನ್ಸ್ ಥ್ರಿಲ್ಲರ್ ಅನ್ನು ಹೀಗೆ ಮುರಿದುಕಟ್ಟುವ, ದುರಿತಕಾಲದಲ್ಲಿ ಗತದ ಸಿಕ್ಕುಗಳನ್ನು ಬಿಡಿಸುತ್ತಾ ಕೂರುವ ಭಾವ ಸಂವೇದನೆ ಆಸಕ್ತಿಕರ.

ಯಾವ ಹೊತ್ತಿನಲ್ಲೂ ನಡೆಯಬಹುದಾದ ಈ ಚಿತ್ರಕತೆಗಳನ್ನು ಕೋವಿಡ್ ಸಂದರ್ಭಕ್ಕೆ ಒಗ್ಗಿಸಿ ಹೇಳಿರುವ ಕ್ರಮದಲ್ಲಿ ಇರುವ ಜಾಣ್ಮೆಗೆ ಶಹಬ್ಬಾಸ್ ಹೇಳಬೇಕು. ನಿರ್ದೇಶಕ ಸನು ಹಿಂದಿ ಚಿತ್ರಗಳಿಗೆ ಸಿನಿಮಾಟೊಗ್ರಾಫರ್ ಆಗಿ ಕೆಲಸ ಮಾಡಿದವರು. ‘ಬಧಾಯಿ ಹೋ’ ಚಿತ್ರದ ಸೂಕ್ಷ್ಮ ಸಂವೇದನಾ ಹಾಸ್ಯವನ್ನು ಕಂಡು ಅವರೂ ಸಾಕಷ್ಟು ಕಲಿತಿದ್ದಾರೆ.

ಕಾಲಕ್ಷೇಪವನ್ನು ಕೋವಿಡ್‌ ಕಾಲದಲ್ಲೂ ಸಿನಿಮಾದಲ್ಲಿ ಹೇಗೆ ಅಳವಡಿಸಬಹುದು ಎನ್ನುವುದಕ್ಕೆ ಇವೆರಡೂ ಚಿತ್ರಗಳು ಒಳ್ಳೆಯ ಉದಾಹರಣೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT