ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನಷ್ಟು ರೊಮ್ಯಾನ್ಸ್‌ ಮಾಡಲ್ಲ... ಮನುರಂಜನ್‌ ರವಿಚಂದ್ರನ್‌ ಸಂದರ್ಶನ

Last Updated 28 ಅಕ್ಟೋಬರ್ 2021, 21:00 IST
ಅಕ್ಷರ ಗಾತ್ರ

ಕ್ರಿಕೆಟ್‌ ಆಡುತ್ತಾ ಹಾಯಾಗಿರಬೇಕು ಎಂದುಕೊಂಡಿದ್ದವರು ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನುರಂಜನ್‌ ರವಿಚಂದ್ರನ್‌. ತಂದೆಯ ಪರಂಪರೆಯನ್ನೇ ಮುಂದುವರಿಸಲು ಮನಸ್ಸು ಮಾಡಿದ್ದಾರೆ. ‘ಮುಗಿಲ್‌ ಪೇಟೆ’ ಮೂಲಕ ಮತ್ತೆ ತೆರೆಗೆ ಬರುತ್ತಿದ್ದಾರೆ. ‘ಸಿನಿಮಾ ಪುರವಣಿ’ಯೊಂದಿಗೆ ಅವರ ಮಾತುಕತೆ ಹೀಗಿತ್ತು...

ಸಿನಿಮಾ ಪ್ರವೇಶ ಹೇಗಾಯಿತು?

ನಾನು ನಟನಾಗಬೇಕು ಅಂತ ಯೋಚಿಸಿದವನೇ ಅಲ್ಲ. ಕ್ರಿಕೆಟ್‌ ಆಟಗಾರ ಆಗಬೇಕು ಎಂದು ಯೋಚಿಸುತ್ತಾ ಹಾಗೇ ಆಡುತ್ತಾ ಬೆಳೆದವನು. ನನಗೆ ಮಂದಹಾಸ ಬೀರಲೂ ತುಂಬಾ ಮುಜುಗರ ಇತ್ತು. ಆದರೆ ಪಿಯುಸಿ ಮುಗಿದ ಬಳಿಕ ನಟನೆ ನನ್ನ ಬದುಕಾಗಬೇಕು ಎಂದು ನಿರ್ಧಾರ ಮಾಡಿದೆ. ಅದಕ್ಕಾಗಿ ಚೆನ್ನೈಗೆ ಹೋಗಿ ನಟನೆ ಕಲಿತೆ. ಡ್ಯಾನ್ಸ್‌, ಫೈಟ್‌ ಎಲ್ಲವನ್ನೂ ಕಲಿತು ಸರಿಯಾದ ತರಬೇತಿಯ ಬಳಿಕ ಈ ಕ್ಷೇತ್ರ ಪ್ರವೇಶಿಸಿದೆ. ಬೆಂಗಳೂರಿನಲ್ಲಿ ಅಭಿನಯ ತರಂಗ ಸಂಸ್ಥೆಯಲ್ಲಿ ಒಂದು ವರ್ಷ ರಂಗಭೂಮಿಯ ತರಬೇತಿ ಸಿಕ್ಕಿತು. ಸಾಕಷ್ಟು ಬೀದಿ ನಾಟಕ, ಸ್ಟೇಜ್‌ ಷೋಗಳನ್ನು ಮಾಡಿ ಆಳವಾದ ತರಬೇತಿಯ ಬಳಿಕ ಸಿನಿಮಾ ಪ್ರವೇಶ ಪಡೆದೆ.

‘ಹಳ್ಳಿ ಮೇಷ್ಟ್ರ’ ಮಗನ ರೊಮ್ಯಾನ್ಸ್‌ ಪಾಠ ಹೇಗಿದೆ?

ಅವರಷ್ಟು (ತಂದೆ ರವಿಚಂದ್ರನ್‌ ಅವರಷ್ಟು) ರೊಮ್ಯಾನ್ಸ್‌ ಮಾಡುವುದಿಲ್ಲ. ಆದರೆ, ಪಾತ್ರ ಏನನ್ನು ಬಯಸುತ್ತದೋ ಅದನ್ನು ಮಾಡುತ್ತೇನೆ. ಆಯಾ ಸನ್ನಿವೇಶಕ್ಕೆ ತಕ್ಕಂತೆ ಅಭಿನಯಿಸಬೇಕು. ಮೇಲಿಂದ ಬೀಳು ಅಂದ್ರೂ ಸರಿ. ಬೀಳುತ್ತೇನೆ.

‘ಮುಗಿಲ್‌ಪೇಟೆ’ಗೆ ತಯಾರಿ ಹೇಗಿತ್ತು?

ಮುಗಿಲ್‌ಪೇಟೆ ಮೊದಲ ಹಂತದ 50 ದಿನಗಳ ಚಿತ್ರೀಕರಣದ ನಂತರ ಲಾಕ್‌ಡೌನ್‌ ಆಯಿತು. ಹಾಗಾಗಿ ನಮಗೆ ಈ ಸಿನಿಮಾದ ಸುಧಾರಣೆಗೆ ಸಾಕಷ್ಟು ಸಮಯ ಸಿಕ್ಕಿತು. ಲಾಕ್‌ಡೌನ್‌ ಅವಧಿಯಲ್ಲೆಲ್ಲಾ ಚಿತ್ರೀಕರಣದ ವಿಡಿಯೊಗಳನ್ನು ನೋಡುತ್ತಲೇ ಸಾಕಷ್ಟು ಸುಧಾರಣೆಯ ಅಂಶಗಳನ್ನು ಹಾಕಿಕೊಂಡೆವು. ಇದೆಲ್ಲಾ ಆದ ಮೇಲೆ ಎರಡನೇ ಹಂತದ ಚಿತ್ರೀಕರಣಕ್ಕೆ ಹೋದೆವು. ಸರಿಯಾಗಿ ಯೋಜನೆ ಹಾಕಿಕೊಂಡೇ ಇಲ್ಲಿ ಕೆಲಸ ಮಾಡಿದ್ದೇವೆ.

ಏನಿದು ‘ಮುಗಿಲ್‌ಪೇಟೆ’?

ಚಿತ್ರದ ಕಥೆ ಆರಂಭ ಹಾಗೂ ಅಂತ್ಯ ಆಗುವುದು ಮುಗಿಲ್‌ಪೇಟೆಯಲ್ಲೇ. ಇದರಲ್ಲೇ ಎಲ್ಲ ಭಾವಗಳೂ ಇವೆ. ಲೊಕೇಷನ್‌, ಕಥೆ, ಪ್ರೇಮ, ರೊಮ್ಯಾನ್ಸ್‌, ಹಾಸ್ಯ, ನೋವು ಎಲ್ಲವೂ ಇದೆ. ಕುಟುಂಬ ಸಮೇತ ಎಲ್ಲರೂ ನೋಡಬಹುದಾದ ಚಿತ್ರ.

‘ಮುಗಿಲ್‌ಪೇಟೆ’ಯಲ್ಲಿ ನಿಮ್ಮ ಮತ್ತು ರಂಗಾಯಣ ರಘು ಅವರ ದೀರ್ಘ ಪ್ರಯಾಣ ಇದೆಯಲ್ಲಾ?

ಹೌದು. ಈ ಕಥೆ ಶುರುವಾಗುವುದೇ ನನ್ನ ಮತ್ತು ರಂಗಾಯಣ ರಘು ಅವರ ಪ್ರಯಾಣದಿಂದ. ಮುಗಿಲ್‌ಪೇಟೆಯಿಂದ, ಸಕಲೇಶಪುರ, ತೀರ್ಥಹಳ್ಳಿ, ಕುಂದಾಪುರ ಹೀಗೆ ಎಲ್ಲ ಕಡೆ ಹೋಗುತ್ತೇವೆ. ಕಥೆಯ ಕೊನೆಯಲ್ಲಿ ರಘು ಮತ್ತು ನನ್ನ ಪಾತ್ರಗಳು ತಂದೆ ಮಗನ ಬಾಂಧವ್ಯದವರೆಗೆ ತಿರುಗುತ್ತದೆ. ಹೀಗೆ ತುಂಬಾ ಗಾಢವಾದ ಭಾವ ಇದರಲ್ಲಿದೆ.

‘ಮುಗಿಲ್‌ಪೇಟೆ’ಯ ಪ್ರಚಾರದ ದೃಶ್ಯದಲ್ಲಿ ಪ್ರೇಮಲೋಕ ಚಿತ್ರದ ಯಥಾವತ್‌ ದೃಶ್ಯವೊಂದು ಬಂದಿದೆಯಲ್ಲಾ?

ಚಿತ್ರದಲ್ಲಿ ನಾಯಕ – ನಾಯಕಿಗೆ ಒಂದು ಪಂಚ್‌ ಇರುವ ದೃಶ್ಯ ಬೇಕು ಅಂದಾಗ ‘ಪ್ರೇಮಲೋಕ’ದ ಪ್ರಾಸ (ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದೃಶ್ಯ) ತರೋಣ ಎಂದು ನಮ್ಮ ನಿರ್ದೇಶಕರು ಹೇಳಿದರು. ನಾನು ಹಳೆಯ ಚಿತ್ರಗಳ ದೃಶ್ಯಗಳ ಮರುಸೃಷ್ಟಿ ಮಾಡುವುದನ್ನು ಒಪ್ಪುವುದಿಲ್ಲ. ಆದರೆ ಇಲ್ಲಿ ಎಲ್ಲರೂ ಒತ್ತಾಯಿಸಿದರು. ಹಾಗಾಗಿ 1987ರ ‘ಪ್ರೇಮಲೋಕ’ವನ್ನು ನೆನಪಿಸೋಣ ಎಂದು ಪ್ರಯತ್ನಿಸಿದೆವು. ಈಗ ಜನರ ಪ್ರತಿಕ್ರಿಯೆ ಒಂದಕ್ಕಿಂತ ಒಂದು ಬೇರೆಬೇರೆಯಾಗಿ ಬರುತ್ತಿವೆ. ಹಾಗಾಗಿ ಈ ದೃಶ್ಯವನ್ನು ಚಿತ್ರದಲ್ಲಿ ಬಳಸಬೇಕೇ ಬೇಡವೇ ಎಂಬುದನ್ನು ಇನ್ನು ನಿರ್ಧರಿಸಬೇಕಿದೆ.

ಕಯಾದು ಲೋಹರ್‌ ಅವರನ್ನು ನಾಯಕಿಯಾಗಿಸಿದ ಗುಟ್ಟು ಏನು?

ನಮಗೆ ಇಲ್ಲಿನ ನಾಯಕಿಯರ ದಿನಾಂಕಗಳು ಸಿಗಲಿಲ್ಲ. ನಮಗೆ ದೀರ್ಘಾವಧಿಗೆ ಅವರ ಪಾಲ್ಗೊಳ್ಳುವಿಕೆ ಬೇಕಿತ್ತು. ಹಾಗಾಗಿ ನಾವು ಕಯಾದು ಅವರನ್ನು ಇಲ್ಲಿ ತೊಡಗಿಸಿಕೊಳ್ಳಬೇಕಾಯಿತು. ಕೊನೆಯಲ್ಲಿ ಆಯ್ಕೆಯಾದ ಹೊಸ ಪ್ರತಿಭೆ ಕಯಾದು. ಅವರೂ ಚೆನ್ನಾಗಿ ಹೊಂದಿಕೊಂಡಿದ್ದಾರೆ.

ನಿರ್ದೇಶನದ ಕನಸು ಏನಾದರೂ?

ಖಂಡಿತಾ ಇಲ್ಲ. ನಿರ್ದೇಶನ ಏನಿದ್ದರೂ ತಂದೆಯವರು ಮತ್ತು ನನ್ನ ತಮ್ಮನದ್ದು. ನಾನು ನಟನಾಗಿಯೇ ಮುಂದುವರಿಯುವ ಆಸೆ ಇದೆ. ಕಥೆಗಳನ್ನು ಕೇಳುತ್ತಿದ್ದೇನೆ. ಅಪ್ಪನಿಗೂ ತುಂಬಾ ಖುಷಿಯಾಗಿದೆ. ಟೀಸರ್‌, ಹಾಡುಗಳನ್ನು ಇಷ್ಟಪಟ್ಟಿದ್ದಾರೆ. ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನೋಡೋಣ. ಇನ್ನೂ ಕೆಲವು ದಿನಗಳಿವೆಯಲ್ಲಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT