ಗುರುವಾರ , ಜುಲೈ 29, 2021
23 °C

ತೆರೆಯ ಮೇಲೆ ‘ಮಾನ್ವಿತಾ 2.0’

ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

‘ಟಗರು ಪುಟ್ಟಿ’ ಎಂದೇ ಖ್ಯಾತಿ ಪಡೆದಿರುವ ನಟಿ ಮಾನ್ವಿತಾ ಕಾಮತ್‌ ಲಾಕ್‌ಡೌನ್‌ನಲ್ಲಿ ತಮ್ಮ ಬರವಣಿಗೆ ಹವ್ಯಾಸವನ್ನು ಒರೆಗೆ ಹಚ್ಚಿದ್ದು, ನಾಲ್ಕೈದು ಕಥೆಗಳ ಸಾರಾಂಶವನ್ನು ಸಿದ್ಧಪಡಿಸಿಕೊಂಡಿದ್ದಾರೆ. ಜೊತೆಗೆ 8 ತಿಂಗಳು ವೈಟ್‌ ಟ್ರೈನಿಂಗ್‌, ಪಥ್ಯಕ್ರಮದ ಮುಖಾಂತರ ತೂಕ ಇಳಿಸಿಕೊಂಡು, ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳಿಗೆ ಸಜ್ಜಾಗಿದ್ದಾರೆ ‘ಮಾನ್ವಿತಾ 2.0’. ಇವೆಲ್ಲವನ್ನೂ ವಿವರಿಸುತ್ತಾ ಲಾಕ್‌ಡೌನ್‌ ಅನುಭವ, ಸಿನಿಮಾ ಪಯಣದ ಕುರಿತು ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದರು.

***

ಲಾಕ್‌ಡೌನ್‌ನಲ್ಲಿ ಮಾನ್ವಿತಾ ಏನ್ಮಾಡುತ್ತಿದ್ದಾರೆ?

ಚಿತ್ರೀಕರಣವೆಲ್ಲ ಸ್ಥಗಿತವಾಗಿದ್ದು, ಮನೆಯಲ್ಲೇ ಇದ್ದೇನೆ. ಬೆಳಗ್ಗೆ ಯೋಗ ಮತ್ತು ಒಂದಿಷ್ಟು ಫಿಸಿಕಲ್‌ ಆ್ಯಕ್ಟಿವಿಟೀಸ್‌. ಕಲಾವಿದರಿಗೆ, ನಮ್ಮಲ್ಲಿರುವ ಹವ್ಯಾಸಗಳನ್ನು ಮತ್ತಷ್ಟು ಒರೆಗೆ ಹಚ್ಚುವ ಅವಧಿ ಇದು. ಸುಮ್ಮನೆ ಕುಳಿತಿರುವುದಕ್ಕಿಂತ ಮುಂದಿನ ಸಿನಿಮಾ ಯೋಜನೆಗಳಿಗೆ ಸಿದ್ಧವಾಗುವುದು ಮುಖ್ಯ. ಅದು ನಟನೆ ಆಗಿರಲಿ ಅಥವಾ ಚಿತ್ರಕಥೆಯೇ ಆಗಿರಲಿ. ಈ ಹಿಂದೆ ಚಿತ್ರೀಕರಣಕ್ಕೆ ಮುನ್ನ ಪೂರ್ವಸಿದ್ಧತೆಗೆ ಸಮಯ ಸಿಗುತ್ತಿರಲಿಲ್ಲ. ಇದೀಗ ಮುಂದಿನ ಸಿನಿಮಾ ಪ್ರೊಜೆಕ್ಟ್‌ಗಳಿಗಾಗಿ ನನ್ನನ್ನು ನಾನು ಸಿದ್ಧಪಡಿಸಿಕೊಂಡಿದ್ದೇನೆ.

ಹಲವು ಭಾಷೆಯ ಸಿನಿಮಾಗಳನ್ನು ನೋಡುತ್ತಿದ್ದೇನೆ. ಇದರ ಪ್ರೇರಣೆಯನ್ನು ತೆಗೆದುಕೊಳ್ಳುತ್ತಿದ್ದೇನೆ. ಒಟಿಟಿಯಲ್ಲಿ ಕನ್ನಡ ಕಂಟೆಂಟ್‌ಗಳೇ ಇಲ್ಲ. ಕನ್ನಡ ಚಿತ್ರರಂಗಕ್ಕೆ ಕೆಜಿಎಫ್‌ ಚಿತ್ರ ಒಳ್ಳೆಯ ಹೆಸರು ತಂದುಕೊಟ್ಟಿತು. ಒಳ್ಳೆಯ ವೇದಿಕೆಯನ್ನು ಈ ಚಿತ್ರ ಒದಗಿಸಿದೆ. ನಾವು ಮುಂದೆ ಯಾವ ಮಾದರಿಯ ಕಂಟೆಂಟ್‌ ಅಭಿವೃದ್ಧಿಪಡಿಸಬಹುದು ಎನ್ನುವುದನ್ನು ಯೋಚನೆ ಮಾಡುವುದು ಮುಖ್ಯ. ಮಲಯಾಳಂನಲ್ಲಿ ಅತ್ಯುತ್ತಮ ಸಿನಿಮಾಗಳು ಬರುತ್ತಿವೆ. ಅವರಿಗೆ ಚಿತ್ರಕಥೆಯೇ ಹೀರೋ. ಒಟಿಟಿಗಳಲ್ಲಿ ಬೇರೆ ಭಾಷೆಯ ಹಳೆಯ ಸಿನಿಮಾಗಳ ಸಂಗ್ರಹ ಇದ್ದರೂ, ಕನ್ನಡದ ಹಳೆಯ ಸಿನಿಮಾಗಳು ಹೆಚ್ಚು ಇಲ್ಲ. ಕನ್ನಡದ ಎಲ್ಲ ಹಳೆಯ ಸಿನಿಮಾಗಳೂ ಒಟಿಟಿಯಲ್ಲಿ ಲಭ್ಯವಾಗಬೇಕು. ನಾವು ಪ್ರಿಪ್ರೊಡಕ್ಷನ್‌ಗೆ ಹೆಚ್ಚಿನ ಒತ್ತು ನೀಡುತ್ತಿರಲಿಲ್ಲ. ಈ ಅವಧಿಯನ್ನು ಅದಕ್ಕಾಗಿ ವಿನಿಯೋಗಿಸಬೇಕು. ವೆಬ್‌ ಮುಂದಿನ ಭವಿಷ್ಯ ಎನ್ನುತ್ತಿದ್ದಾರೆ. ಇದಕ್ಕಾಗಿ ಯಾವ ರೀತಿ ವಿಷಯಗಳನ್ನು ಅಭಿವೃದ್ಧಿಪಡಿಸಬೇಕು ಎನ್ನುವುದನ್ನೂ ಯೋಚಿಸುತ್ತಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿಲ್ಲ.

ಮಾನ್ವಿತಾ ಬದಲಾಗಿದ್ದಾರೆ. ಏನಿದರ ಹಿಂದಿನ ಗುಟ್ಟು?

ಪರಿವರ್ತನೆ ಎಲ್ಲರಿಗೂ ಅಗತ್ಯ. ನಮ್ಮನ್ನು ನಾವು ಅಪ್‌ಗ್ರೇಡ್‌ ಮಾಡಿಕೊಳ್ಳುವುದು ಮುಖ್ಯ. ಇದಾಗದಿದ್ದರೆ ಸಿನಿಮಾ ರಂಗದಲ್ಲಿ ಬೆಳೆಯಲು ಸಾಧ್ಯವಿಲ್ಲ. ವೈಟ್‌ ಟ್ರೈನಿಂಗ್‌, ಪಥ್ಯಕ್ರಮದ ಮುಖಾಂತರ ತೂಕ ಇಳಿಸಿಕೊಂಡಿದ್ದೇನೆ. ಈಗ ಚಿತ್ರರಂಗಕ್ಕೆ ಬರುವ ಕಲಾವಿದರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೇ ಬರುತ್ತಿದ್ದಾರೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಜ್ಜಾಗಿರುತ್ತಾರೆ. ಪ್ರತಿ ಸಿನಿಮಾದಲ್ಲೂ ಒಂದೊಂದು ಲುಕ್‌. ‘ಕೆಂಡಸಂಪಿಗೆ’ಯಲ್ಲಿ ಇದ್ದ ಹಾಗೆ ನಾನು ‘ಟಗರು’ ಚಿತ್ರದಲ್ಲಿ ಇರಲಿಲ್ಲ. ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಸಿನಿಮಾದಲ್ಲಿ ಇದ್ದಂತೆಯೇ ಮುಂದಿನ ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲು ನನಗೆ ಇಷ್ಟವಿಲ್ಲ. ‘ಅಪ್‌ಗ್ರೇಡೆಡ್‌ ವರ್ಷನ್‌ ಆಫ್‌’ ಮಾನ್ವಿತಾ ನೋಡಬೇಕು. ಆ್ಯಪ್‌ಗಳು ಅಪ್‌ಡೇಟ್‌ ಆಗುತ್ತಿರುವಂತೆ ನಾವೆಲ್ಲರೂ ಅಪ್‌ಡೇಟ್‌ ಆಗಬೇಕು. ದೈಹಿಕವಾಗಿ ಫಿಟ್‌ ಆಗಿ ಕಾಣಿಸಬೇಕು ಎಂದರೆ ಊಟದಿಂದ ಹಿಡಿದು ವರ್ಕ್‌ಔಟ್‌ನಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.     

ಚಿತ್ರಕಥೆ ಬರೆಯುತ್ತಿದ್ದೀರಂತೆ?

ಒಬ್ಬ ಕಲಾವಿದೆಯಾಗಿ, ನನ್ನೊಳಗಿನ ಬರಹಗಾರ್ತಿಯನ್ನು ನಾನು ಕಂಡುಕೊಳ್ಳುತ್ತಿದ್ದೇನೆ. ಬರವಣಿಗೆಗೆ ಅಂತ್ಯವಿಲ್ಲ. ನನಗೆ ಸಿನಿಮಾ ಎಂದರೆ ಪ್ರೀತಿ. ಇದಕ್ಕಾಗಿ ಯಾವುದಾದರೂ ಕೊಡುಗೆ ನೀಡಬೇಕು. ಯಾವ ರೀತಿಯ ಚಿತ್ರಕಥೆ ಮಾಡಬಹುದು, ಪಾತ್ರಗಳು ಯಾವ ರೀತಿ ಇರಬೇಕು ಎನ್ನುವುದನ್ನು ಶೋಧನೆ ಮಾಡುತ್ತಿದ್ದೇನೆ. ಹೀರೋ ಕೇವಲ ಪೊಲೀಸ್‌ ಅಧಿಕಾರಿ, ವೈದ್ಯ, ಉದ್ಯಮಿಯಾಗಿರಬೇಕಿಲ್ಲ. ಆತ ನಮ್ಮ ಅಕ್ಕಪಕ್ಕದಲ್ಲೇ ಇರುವ ಒಬ್ಬ ಬ್ಯಾಂಕ್‌ ನೌಕರ, ಪತ್ರಕರ್ತ ಆಗಿರಬಹುದು. ನಾಲ್ಕೈದು ಚಿತ್ರಕಥೆಗಳ ಸಾರಾಂಶವನ್ನು ಬರೆದಿದ್ದೇನೆ. ಪೂರ್ಣ ಪ್ರಮಾಣದ ಚಿತ್ರಕಥೆ ಬರೆಯುವಷ್ಟು ಸಾಮರ್ಥ್ಯ ನನಗಿಲ್ಲ. ಚಿತ್ರಕಥೆ ಬರೆಯಲು ಹಲವು ಆ್ಯಪ್‌ ಇದೆ ಎನ್ನುತ್ತಾರೆ. ಆದರೆ, ಇದನ್ನು ಬಳಸಿದರೆ ನಮ್ಮ ಸ್ವಂತಿಕೆ ಏನೂ ಇರುವುದಿಲ್ಲ. ಲಾಕ್‌ಡೌನ್‌ ಮುಗಿದ ಬಳಿಕ, ಒಂದು ತಂಡ ಮಾಡಿಕೊಂಡು, ಒಂದಿಷ್ಟು ನಿರ್ದೇಶಕರನ್ನು ಮಾತನಾಡಿಸಿ, ಈ ಕುರಿತು ಚರ್ಚೆ ನಡೆಸಬೇಕಾಗಿದೆ.

‘ಶಿವ 143’ಯಲ್ಲಿ ನಿಮ್ಮ ಪಾತ್ರದ ಬಗ್ಗೆ?

ನಟಿಯಾಗಿ ಈ ಚಿತ್ರದಲ್ಲಿನ ಪಾತ್ರ ನನಗೆ ಬಹಳ ಸವಾಲಿನದ್ದಾಗಿತ್ತು. ಬೋಲ್ಡ್‌, ಡೇರಿಂಗ್‌ ಪಾತ್ರವಿದು, ಮಾನ್ವಿತಾ ಈ ರೀತಿಯ ಪಾತ್ರವನ್ನು ನಿಭಾಯಿಸಿದ್ದಾಳಾ ಎಂದು ಪ್ರೇಕ್ಷಕರೇ ಪ್ರಶ್ನಿಸಿಕೊಳ್ಳುವ ರೀತಿಯಲ್ಲಿದೆ. ಕ್ಲೈಮ್ಯಾಕ್ಸ್‌ನಲ್ಲಿ ಸ್ವಲ್ಪ ನೆಗೆಟಿವ್‌ ಶೇಡ್‌ ಕೂಡಾ ಈ ಪಾತ್ರಕ್ಕಿದೆ. ನಟಿಯಾಗಿ ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ. ಜನರು ಹೇಗೆ ತೆಗೆದುಕೊಳ್ಳುತ್ತಾರೆ ನೋಡಬೇಕು. ಈ ಚಿತ್ರದ ಚಿತ್ರೀಕರಣ, ಡಬ್ಬಿಂಗ್‌ ಎಲ್ಲವೂ ಮುಗಿದಿದೆ. ಲಾಕ್‌ಡೌನ್‌ ಆದ ಕಾರಣ, ಚಿತ್ರಮಂದಿರಗಳೆಲ್ಲವೂ ಮುಚ್ಚಿವೆ. ರಾಜ್‌ಕುಮಾರ್‌ ಅವರ ಮೊಮ್ಮಗನಾಗಿರುವ ಧೀರೇನ್‌ ಅವರ ಚೊಚ್ಚಲ ಚಿತ್ರವಾಗಿರುವ ಕಾರಣ ತಂಡವು ಚಿತ್ರಮಂದಿರದಲ್ಲೇ ಚಿತ್ರ ಬಿಡುಗಡೆಗೆ ಕಾಯುತ್ತಿದೆ.

ವಿಭಿನ್ನ ಪಾತ್ರಗಳನ್ನು ಮಾಡುವ ಆಸೆ ನನಗಿದೆ. ‘ರಾಜಸ್ಥಾನ್‌ ಡೈರೀಸ್‌’ ಚಿತ್ರದ ಚಿತ್ರೀಕರಣವೂ ಮುಗಿದಿದ್ದು, ಇದು ದ್ವಿಭಾಷಾ ಚಿತ್ರ. ಈ ಚಿತ್ರದ ತಂಡವೂ ಚಿತ್ರಮಂದಿರದಲ್ಲೇ ಚಿತ್ರ ಬಿಡುಗಡೆ ಮಾಡಲು ಕಾಯುತ್ತಿದೆ. ಇದೀಗ ಈ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಕುರಿತೂ ಚರ್ಚೆ ನಡೆಯುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು