ಗುರುವಾರ , ಮೇ 19, 2022
20 °C

ದಾವಣಗೆರೆ: ಗಾಜಿನಮನೆಯಲ್ಲಿ ‘ಮರಳಿ ಮನಸಾಗಿದೆ’ ಸಿನಿಮಾ ಚಿತ್ರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದಾವಣಗೆರೆಯ ನವೀನ್‌ ಕುಮಾರ್‌ ನಿರ್ಮಿಸುತ್ತಿರುವ ‘ಮರಳಿ ಮನಸಾಗಿದೆ’ ಸಿನಿಮಾದ ಚಿತ್ರೀಕರಣವು ನಗರದಲ್ಲಿ ಮೂರು ದಿನಗಳಿಂದ ಭರದಿಂದ ಸಾಗುತ್ತಿದೆ. ನಗರದ ಗಾಜಿನಮನೆಯಲ್ಲಿ ಗುರುವಾರ ಸಂಜೆ ಚಿತ್ರೀಕರಣ ನಡೆಸಲಾಯಿತು.

ಗಾಜಿನಮನೆಯಲ್ಲಿ ಗುರುವಾರ ಸಿನಿಮಾದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ನಾಗರಾಜ್‌ ಶಂಕರ್‌, ‘ಮರಳಿ ಮನಸಾಗಿದೆ ಸಂಗೀತ ಪ್ರಧಾನ ಪ್ರೇಮ ಕಥೆಯನ್ನು ಒಳಗೊಂಡಿದೆ. ವ್ಯಕ್ತಿಯ ಕೊನೆಯವರೆಗೂ ಭಾವನೆ ಇರುತ್ತದೆ ಎಂಬುದನ್ನು ತೋರಿಸುತ್ತಿದ್ದೇವೆ. ಒಂಬತ್ತು ಹಾಡುಗಳಿವೆ. ಮೇ 3ರಿಂದ ದಾವಣಗೆರೆಯಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಗುರುವಾರ ಹಾಗೂ ಶುಕ್ರವಾರ ರಾತ್ರಿ ಗಾಜಿನಮನೆಯಲ್ಲಿ ದೀಪಾಲಂಕಾರದ ನಡುವೆ ಚಿತ್ರೀಕರಣ ಮಾಡಲಾಗುತ್ತಿದೆ. ಬೆಂಗಳೂರು, ದಾವಣಗೆರೆ, ಕಳಸ, ಕಾರವಾರದಲ್ಲಿನ ಪ್ರಕೃತಿ ಸೌಂದರ್ಯವನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ’ ಎಂದು ಹೇಳಿದರು.

‘ಈ ಮೊದಲು ಹಲವು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದೆ. ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಚಿತ್ರಕಥೆಯನ್ನೂ ನಾನೇ ಬರೆದಿದ್ದೇನೆ’ ಎಂದು ಹೇಳಿದರು.

ನಾಯಕ ನಟ ಮನೋಜ್‌, ‘ರಂಗಾಯಣದಲ್ಲಿ ಅಭಿನಯದ ತರಬೇತಿಯನ್ನು ಪಡೆದಿದ್ದೆ. ಇದುವರೆಗೆ 8 ಸಿನಿಮಾಗಳಲ್ಲಿ ಅಭಿನಯಿಸಿದ್ದು, ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ವಿದ್ಯಾರ್ಥಿಯ ಪಾತ್ರದಲ್ಲಿ ಅಭಿನಯಿಸಿದ್ದೇನೆ’ ಎಂದರು.

ಸಿನಿಮಾದ ನಾಯಕಿ ನಿರೀಕ್ಷಾ ಶೆಟ್ಟಿ, ‘ಇದಕ್ಕೂ ಮೊದಲು ನಾಲ್ಕು ತುಳು ಹಾಗೂ ಎರಡು ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಸಿನಿಮಾದಲ್ಲಿನ ಪ್ರತಿ ಪಾತ್ರವೂ ನಿಜ ಜೀವನದ ಜೊತೆಗೆ ಬಾಂಧವ್ಯ ಹೊಂದಿರುವಂತೆ ಭಾಸವಾಗುತ್ತದೆ’ ಎಂದು ಹೇಳಿದರು.

ದಾವಣಗೆರೆಯವರೇ ಆಗಿರುವ ಸಿನಿಮಾದ ನಿರ್ಮಾಪಕ ನವೀನ್‌ ಕುಮಾರ್‌, ‘ಇದೊಂದು ಪ್ರೇಮಕಥೆ, ಫ್ಯಾಮಿಸಿ ಸೆಂಟಿಮೆಂಟ್‌ವುಳ್ಳ ಕಮರ್ಷಿಯಲ್‌ ಸಿನಿಮಾ ಆಗಿದೆ. ನವೆಂಬರ್‌ ಒಳಗೆ ಚಿತ್ರೀಕರಣ ಪೂರ್ಣಗೊಳಿಸಿ, ಮುಂದಿನ ವರ್ಷ ಮಾರ್ಚ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಉದ್ದೇಶಿಸಿದ್ದೇವೆ’ ಎಂದು ತಿಳಿಸಿದರು.

ಕ್ಯಾಮೆರಾಮನ್‌ ಜಯ ಆನಂದ್‌, ಪ್ರೊಡಕ್ಷನ್‌ನ ಮಹೇಶ್‌ ಹಾಗೂ ಚಿತ್ರತಂಡದ ಕಲಾವಿದರು ಹಾಗೂ ತಂತ್ರಜ್ಞರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.