ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡತಿ ಉತ್ಸವ’ ನೋಡಿ

Me30-ಕನ್ನಡತಿ ಉತ್ಸವ
Last Updated 30 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ದಿನದಿಂದ ದಿನಕ್ಕೆ ಮಹಿಳಾ ಧ್ವನಿ ಗಟ್ಟಿಗೊಳ್ಳುತ್ತಲೇ ಸಾಗಿದೆ. ಕವಿತೆ, ಕತೆ, ಕಾದಂಬರಿಗಳಂತೆ ಆಧುನಿಕ ಯುಗದಲ್ಲಿ ಸಿನಿಮಾ, ಕಿರುಚಿತ್ರಗಳಲ್ಲಿ ಮಹಿಳಾ ಸಂವೇದನೆ ಹೆಚ್ಚು ಬಿರುಸುಗೊಂಡಿದೆ.

ಮಿ–ಟೂ ಆಭಿಯಾನ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ ‘ಅವಳ ಹೆಜ್ಜೆ’ ಎಂಬ ಸಂಸ್ಥೆ ‘ಕನ್ನಡತಿ ಉತ್ಸವ’ ಹೆಸರಿನ ಕಿರು ಚಿತ್ರೋತ್ಸವ ಆಯೋಜಿಸಿದೆ. ಕಿರು ಚಿತ್ರಗಳ ಪ್ರದರ್ಶನದ ಜೊತೆಗೆ ಚಿತ್ರರಂಗದಲ್ಲಿ ಮಹಿಳೆಯರ ತೊಡಗಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಚರ್ಚೆ ಕೂಡಾ ಆಯೋಜನೆಗೊಂಡಿದೆ.

ನವೆಂಬರ್ 3ರಂದು ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿಭವನದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕನ್ನಡತಿ ಉತ್ಸವ ನಡೆಯಲಿದೆ. ‘ಜನಪ್ರಿಯ ಪ್ರಾದೇಶಿಕ ಮಾಧ್ಯಮ ಮತ್ತು ಸ್ತ್ರೀ’ ವಿಷಯದ ಚರ್ಚೆಯಲ್ಲಿ ನಿರ್ದೇಶಕಿ ಕವಿತಾ ಲಂಕೇಶ್‌, ರಂಗಕರ್ಮಿ ಮಲ್ಲಿಕಾ ಪ್ರಸಾದ್‌, ಲೇಖಕ ಜೋಗಿ ಭಾಗವಹಿಸುವರು. ‘ಪರಿಕ್ರಮಣೆ: ಕತೆಯಿಂದ ಪರದೆಯವರೆಗೆ’ ಚರ್ಚೆಯಲ್ಲಿ ಸಿನಿಮಾ ನಿರ್ಮಾಪಕಿಯರಾದ ಅನನ್ಯಾ ಕಾಸರವಳ್ಳಿ, ರೂಪಾ ರಾವ್‌, ಸಂಜ್ಯೋತಿ ವಿ.ಕೆ, ಪದ್ಮಲತಾ ರವಿ ಭಾಗವಹಿಸುವರು.

ಮಹಿಳಾ ಧ್ವನಿಯನ್ನು ಪ್ರತಿನಿಧಿಸುವುದೇ ‘ಅವಳ ಹೆಜ್ಜೆ’ ಸಂಸ್ಥೆಯ ಉದ್ದೇಶ. ಮಹಿಳೆಯರ ಕತೆಯನ್ನೂ ಪುರುಷರೇ ಹೇಳುತ್ತಿದ್ದಾರೆ. ಆದರೆ, ಅವಳ ಕತೆಯನ್ನು ಅವಳೇ ಹೇಳುವಂತಾದರೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತದೆ. ಸಿನಿಮಾ ಒಂದು ಪರಿಣಾಮಕಾರಿ ಮಾಧ್ಯಮ. ಭಾರತೀಯ ಚಿತ್ರರಂಗದಲ್ಲಿ ನಿರ್ಮಾಪಕಿಯರು, ನಿರ್ದೇಶಕಿಯರು ಸಾಕಷ್ಟು ಮಂದಿ ಇದ್ದಾರೆ. ಆದರೆ, ಒಂದಿಡೀ ತಂಡವನ್ನು ಮುನ್ನಡೆಸುವ ಸಂದರ್ಭ ಬಂದಾಗ ಆಕೆಯ ಮಾತುಗಳಿಗೆ ಬೆಲೆ ಸಿಗದಿರುವುದೇ ಹೆಚ್ಚು. ತಾಂತ್ರಿಕ ವಿಭಾಗಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಕನ್ನಡದಲ್ಲಿ ಅನೇಕ ಮಹಿಳೆಯರು ದೊಡ್ಡ ಚಿತ್ರ ಮತ್ತು ಕಿರು ಚಿತ್ರಗಳನ್ನು ನಿರ್ದೇಶನ, ನಿರ್ಮಾಣ ಮಾಡುತ್ತಿದ್ದಾರೆ. ಅವರೆಲ್ಲರನ್ನೂ ಒಂದುಗೂಡಿಸಿ ಚರ್ಚಿಸುವ ಮೂಲಕ ಸಮಾಜದಲ್ಲಿ ಹೊಸದೊಂದು ಸಂಭಾಷಣೆ ಹುಟ್ಟು ಹಾಕುವುದು ನಮ್ಮ ಉದ್ದೇಶ ಎಂದು ‘ಅವಳ ಹೆಜ್ಜೆ’ ಸ್ಥಾಪಕಿ ಶಾಂತಲಾ ದಾಮ್ಲೆ ಹೇಳುತ್ತಾರೆ.

ಈ ಕಿರುಚಿತ್ರ ಪ್ರದರ್ಶನಕ್ಕೆ ಬೇರೆಬೇರೆ ಮಹಿಳಾ ಸಂಘಟನೆಗಳು, ಲೇಖಕಿಯರ ಸಂಘ, ಮಹಿಳಾ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗೆ ಆಹ್ವಾನ ನೀಡಿದ್ದೇವೆ. ಇಲ್ಲಿನ ನಡೆಯುವ ಒಂದಷ್ಟು ಸಂವಾದ, ಚರ್ಚೆಗಳನ್ನು ಆಲಿಸಿದ ಮಹಿಳೆಯರು ಮುಂದೆ ಸಿನಿಮಾರಂಗ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆಯಾಗಬೇಕು ಎಂಬುದು ನಮ್ಮ ಆಶಯ ಎಂದು ಅವರು ವಿವರಿಸುತ್ತಾರೆ.

ಯಾವ್ಯಾವ ಕಿರುಚಿತ್ರ ನೋಡಬಹುದು?: ಸುಗಂಧಿ ಗದಾಧರ ಅವರು ರಚನೆ ಮತ್ತು ನಿರ್ದೇಶನದ ‘ದರೋಜಿ’, ಮಹಿಮಾಗೌಡ, ಅನುಶ್ರೀ ಭಾರದ್ವಾಜ್‌, ಹರಿಪ್ರಿಯಾ, ಶ್ರದ್ಧಾ ಸುಮನ್‌ ನಿರ್ಮಾಣದ ‘ಬೆಳ್ಳಿ ತಂಬಿಗೆ’, ಸವಿತಾ ಇನಾಂದಾರ್‌ ರಚನೆ ಮತ್ತು ನಿರ್ದೇಶನದ ‘ಜೀವನ ರೇಖೆ’, ಐಶಾನಿ ಶೆಟ್ಟಿ ರಚನೆ ಮತ್ತು ನಿರ್ಮಾಣದ ‘ಕಾಜಿ’, ಮೇದಿನಿ ಕೆಳಮನೆ ನಿರ್ದೇಶನದ ‘ದಾಳಿ’, ಸಂಜ್ಯೋತಿ ನಿರ್ದೇಶನದ ‘ಅನಲ‘ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ.ಅವಳ ಹೆಜ್ಜೆ ಸಂಸ್ಥೆಯ ಕ್ರಿಯೇಟಿವ್‌ ಡೈರೆಕ್ಟರ್‌ ಲೇಖಾ ನಾಯ್ಡು ಈ ಉತ್ಸವವನ್ನು ರೂಪಿಸಿದ್ದಾರೆ. ಪ್ರವೇಶ ಉಚಿತ.

‘ಕಾಜಿ’ ಕಿರುಚಿತ್ರದ ದೃಶ್ಯ
‘ಕಾಜಿ’ ಕಿರುಚಿತ್ರದ ದೃಶ್ಯ


ಲಿಂಗ ಸಮಾನತೆಯತ್ತ...
ಸಾಮಾಜಿಕ ಚರ್ಚೆಗೆ ಒಂದು ರೂಪುರೇಷೆ ಒದಗಿಸುವಲ್ಲಿ ಮತ್ತು ಬದಲಾವಣೆಗೆ ಪ್ರೇರೇಪಿಸುವುದರಲ್ಲಿ ಚಲನಚಿತ್ರಗಳು ಮತ್ತು ಕಿರುಚಿತ್ರಗಳು ಮಹತ್ವದ ಪಾತ್ರ ವಹಿಸುತ್ತವೆ. ಇಷ್ಟಾದರೂ, ಚಿತ್ರನಿರ್ಮಾಣ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ತೀರಾ ಕಡಿಮೆ.

‘ಮಹಿಳಾಕೇಂದ್ರಿತ’ ಎಂದು ಕರೆಸಿಕೊಳ್ಳುವ ಚಿತ್ರಗಳೂ ಹೆಚ್ಚಾಗಿ ಪುರುಷನಿರ್ಮಿತ ಮತ್ತು ಪಿತೃಪ್ರಧಾನ ದೃಷ್ಟಿಕೋನವನ್ನು ಬಿಂಬಿಸುವಂತಹವೇ ಆಗಿವೆ. ಕಥಾಹಂದರದಲ್ಲಿ ಮಹಿಳೆಯರ ಒಳನೋಟ ವ್ಯಕ್ತವಾಗಬೇಕಿದ್ದಲ್ಲಿ, ಸ್ತ್ರೀ ವೀಕ್ಷಕರ ದೃಷ್ಟಿಕೋನ ಮತ್ತು ಅಭಿರುಚಿಗೆ ತಕ್ಕ ಚಿತ್ರಗಳು ಹೆಚ್ಚಾಗಬೇಕಿದ್ದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಾವು ಕಂಡ ಅಥವಾ ಅನುಭವಿಸಿದ ಕಥೆಗಳನ್ನು ಚಿತ್ರಮಾಧ್ಯಮದ ಮೂಲಕ ತಾವೇ ವ್ಯಕ್ತಪಡಿಸುವ ಅನಿವಾರ್ಯತೆಯಿದೆ. ಲಿಂಗ ಸಮಾನತೆಯತ್ತ ಸಮಾಜದ ಪ್ರಯಾಣದಲ್ಲಿ ‘ಸ್ತ್ರೀ ನೋಟ’ದ ಗುರುತುಗಳನ್ನು ಒಪ್ಪಿಕೊಳ್ಳುವುದು ಒಂದು ಅಗತ್ಯ ಮತ್ತು ನಿರ್ಣಾಯಕ ಹಂತವೆನ್ನಬಹುದು.
–ಶಾಂತಲಾ ದಾಮ್ಲೆ, ‘ಅವಳ ಹೆಜ್ಜೆ’ ಸ್ಥಾಪಕಿ

ಹೆಚ್ಚಿನ ಮಾಹಿತಿಗೆ–82172 97238

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT