ಸೋಮವಾರ, ಏಪ್ರಿಲ್ 19, 2021
23 °C

ಚಿತ್ರಮಂದಿರ ಶೇ 100 ರಷ್ಟು ಭರ್ತಿ: ಚರ್ಚಿಸಿ ತೀರ್ಮಾನ ಎಂದ ಸಚಿವ ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಚಿತ್ರಮಂದಿರಗಳಲ್ಲಿ ಏ. 7ರ ನಂತರವೂ ಶೇ 100ರಷ್ಟು ಪ್ರೇಕ್ಷಕರಿಗೆ (ಆಸನಗಳ ಭರ್ತಿ) ಅವಕಾಶ ನೀಡಬೇಕೆಂಬ ಚಿತ್ರ ನಿರ್ಮಾಪಕರ ಸಂಘದ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಸಚಿವರನ್ನು ಮಂಗಳವಾರ ಭೇಟಿ ಮಾಡಿದ ಚಿತ್ರ ನಿರ್ಮಾಪಕ ಸಂಘದ ಸದಸ್ಯರು, ‘ಏ. 7ರವರೆಗೆ ಮಾತ್ರ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಚಿತ್ರ ನಿರ್ಮಾಪಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಆ ನಂತರವೂ ಪೂರ್ಣ ಪ್ರಮಾಣದಲ್ಲಿ ಆಸನಗಳ ಭರ್ತಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸುಧಾಕರ್‌, ‘ಚಿತ್ರಮಂದಿರಗಳಲ್ಲಿ ಮುಂಗಡ ಟಿಕೆಟ್‌ ಬುಕ್ಕಿಂಗ್ ಪಡೆಯಲಾಗಿರುತ್ತದೆ‌. ಬುಕ್ಕಿಂಗ್ ಹಣ ವಾಪಸು ಕೊಡಲೂ‌ ಆಗುವುದಿಲ್ಲ. ಹೀಗಾಗಿ, ಏ. 7ರವರೆಗೆ ಅವಕಾಶ ಕೊಡಿ ಎಂದು ಈ ಹಿಂದೆ ಚಿತ್ರ ನಿರ್ಮಾಪಕರು ಒತ್ತಾಯಿಸಿದ್ದರು. ಆ ನಂತರವೂ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಬೇಕೆಂಬ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಿ ತಿಳಿಸುತ್ತೇನೆ. ತಾಂತ್ರಿಕ‌ ಸಲಹಾ ಸಮಿತಿಯ ಸಲಹೆ ಪಡೆಯುತ್ತೇವೆ’ ಎಂದರು.

ಚಿತ್ರ ನಿರ್ಮಾಪಕರ ಸಂಘದ ಕಾರ್ಯದರ್ಶಿ ಕೆ. ಮಂಜು ಮಾತನಾಡಿ, ‘ಸಿನಿಮಾ ಬಿಡುಗಡೆಯ ಮೊದಲ ದಿನ ‘ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಭರ್ತಿ ಆಗಬಹುದು. ನಂತರ ಶೇ 40ರಿಂದ 50ರಷ್ಟು ಮಾತ್ರ ಇರುತ್ತಾರೆ. ಹೀಗಾಗಿ, ಶೇ 50 ಸೀಟುಗಳಿಗೆ ನಿರ್ಬಂಧ ಮಾಡಬೇಡಿ. ನೀವು ಖುದ್ದಾಗಿ ಚಿತ್ರಮಂದಿರಗಳಿಗೆ ಬಂದು ನೋಡಿ’ ಎಂದು ಸಚಿವರಲ್ಲಿ ಮನವಿ ಮಾಡಿದರು.

ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ಪದಾಧಿಕಾರಿಗಳಾದ ರಮೇಶ್ ಯಾದವ್, ರಾಮಮೂರ್ತಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು