ಸೋಮವಾರ, ಮೇ 23, 2022
30 °C
'ಕೆಜಿಎಫ್‌' ನಿರ್ಮಿಸಿದ್ದ 'ಹೊಂಬಾಳೆ ಫಿಲಂಮ್ಸ್‌'ನ ಸಿನಿಮಾ

ಪ್ರಭಾಸ್‌ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರಕ್ಕೆ ನಾಳೆ ಮುಹೂರ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಂಬಾಳೆ ಫಿಲಂಸ್ ಬ್ಯಾನರ್‌ನ ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ ‘ಸಲಾರ್’ ಸೆಟ್ಟೇರುವುದಕ್ಕೂ ಮೊದಲೇ ದೇಶದಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಮುಹೂರ್ತ ನೆರವೇರಿಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ಹೈದರಾಬಾದ್‌ನಲ್ಲಿ ಜ. 15ರಂದು (ಶುಕ್ರವಾರ) ಬೆಳಿಗ್ಗೆ 11 ಗಂಟೆಗೆ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರ ದಂಡೇ ಸೇರುವ ನಿರೀಕ್ಷೆ ಇದೆ. ರಾಜ್ಯದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ‘ರಾಕಿಂಗ್ ಸ್ಟಾರ್’ ಯಶ್, ಟಾಲಿವುಡ್‌ನ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ವಿಜಯ್ ಕಿರಗಂದೂರು  ಭಾಗವಹಿಸಲಿದ್ದಾರೆ.

‘ಕೆಜಿಎಫ್‌’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮತ್ತು ಟಾಲಿವುಡ್‌ನ ಖ್ಯಾತನಟ ಪ್ರಭಾಸ್‌ ನಟನೆಯ ಚಿತ್ರವಿದು. ಫಸ್ಟ್ ಲುಕ್, ಪೋಸ್ಟರ್ ಮೂಲಕವೇ ‘ಸಲಾರ್’ ಚಿತ್ರ ಈಗಾಗಲೇ ದೇಶವ್ಯಾಪಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರಭಾಸ್ ಲುಕ್ ಸಹ ಅಷ್ಟೇ ಕುತೂಹಲವನ್ನು ಕೆರಳಿಸಿದೆ.

ತಮ್ಮ ಲುಕ್ ಬಗ್ಗೆಯೂ ಮಾತನಾಡಿರುವ ಪ್ರಭಾಸ್, ‘ಈ ಸಿನಿಮಾದ ಮುಹೂರ್ತ ಮತ್ತು ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ನಾನು ತುಂಬ ಕೌತುಕನಾಗಿದ್ದೇನೆ. ನನ್ನ ಲುಕ್ ಹೇಗಿರಲಿದೆ ಎಂಬುದನ್ನು ಅಭಿಮಾನಿಗಳಿಗೆ ತೋರಿಸಲು ಅಷ್ಟೇ ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.

ಈ ತಿಂಗಳಾಂತ್ಯಕ್ಕೆ ಚಿತ್ರೀಕರಣ ಆರಂಭಿಸುವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ ಚಿತ್ರತಂಡ. ಇನ್ನುಳಿದ ಪಾತ್ರವರ್ಗದ ಮಾಹಿತಿಯನ್ನು ಸದ್ಯದಲ್ಲೇ ರಿವೀಲ್‌ ಮಾಡುವುದಾಗಿಯೂ ಚಿತ್ರತಂಡ ಹೇಳಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು