ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ನಿಲ್ದಾಣದ ಪಯಣಿಗರು

Last Updated 13 ಆಗಸ್ಟ್ 2019, 11:33 IST
ಅಕ್ಷರ ಗಾತ್ರ

ರಾಧಿಕಾ ನಾರಾಯಣ್, ಅನನ್ಯಾ ಕಶ್ಯಪ್ ಮತ್ತು ಪ್ರವೀಣ್ ತೇಜ್ ಅಭಿನಯದ ‘ಮುಂದಿನ ನಿಲ್ದಾಣ’ ಚಿತ್ರದ ‍ಪೋಸ್ಟರ್‌ ಅನಾವರಣಗೊಂಡಿದೆ. ಅಷ್ಟೇ ಅಲ್ಲ, ಪೋಸ್ಟರ್‌ ಜೊತೆಯಲ್ಲೇ ಈ ಮೂವರ ಪಾತ್ರಗಳ ಕಿರು ಪರಿಚಯ ಕೂಡ ಆಗಿದೆ.

ರಾಧಿಕಾ ಇದರಲ್ಲಿ ಮೀರಾ ಶರ್ಮಾ ಎನ್ನುವ ಆರ್ಟ್‌ ಕ್ಯುರೇಟರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ‘ಅರ್ಥ ಮಾಡಿಕೊಳ್ಳುವ ವ್ಯಕ್ತಿ ಸಿಕ್ಕಿದರೆ ಮದುವೆ ಆಗಬಹುದೇನೋ’ ಎನ್ನುವ ಧೋರಣೆ ಮೀರಾಳದ್ದು. ಅಹನಾ ಎಂಬ ವೈದ್ಯೆಯ ಪಾತ್ರ ಅನನ್ಯಾ ಅವರದ್ದು. ಪ್ರವೀಣ್ ಅವರು ಈ ಚಿತ್ರದಲ್ಲಿ, ಛಾಯಾಗ್ರಹಣದಲ್ಲಿಆಸಕ್ತಿ ಇರುವ ಸಾಫ್ಟ್‌ವೇರ್‌ ಎಂಜಿನಿಯರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ‍ಪಾತ್ರದ ಹೆಸರು ಪಾರ್ಥ.

‘ಮುಂದಿನ ನಿಲ್ದಾಣ’ ಚಿತ್ರವು ಈಗ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿ ಇದೆ. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸಿನಿತಂಡ ಚಿಕ್ಕ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ‘ನಾವೆಲ್ಲರೂ ಸಿನಿಮಾ ಲೋಕಕ್ಕೆ ಹೊಸಬರು. ಹೊಸ ಬಗೆಯ ಸಿನಿಮಾವೊಂದನ್ನು ಕನ್ನಡಿಗರಿಗೆ ಕೊಡುವ ಯತ್ನ ಮಾಡುತ್ತಿದ್ದೇವೆ’ ಎಂದರು ನಿರ್ಮಾಪಕ ತಾರಾನಾಥ ರೈ.

ಚಿತ್ರದ ನಿರ್ದೇಶನ ವಿನಯ್ ಭಾರದ್ವಾಜ್ ಅವರದ್ದು. ರಾಧಿಕಾ ಅವರನ್ನು ಮನಸ್ಸಿನಲ್ಲಿ ಇರಿಸಿಕೊಂಡೇ ಮೀರಾ ಪಾತ್ರವನ್ನು ಸೃಷ್ಟಿಸಿದರು. ಈ ಚಿತ್ರ ಇರುವುದು ಮೂವರು ವ್ಯಕ್ತಿಗಳು ಬಂಧನದಿಂದ ಬಿಡುಗಡೆಯತ್ತ ಸಾಗುವ ಪಯಣದ ಬಗ್ಗೆ.

‘ಚಿತ್ರದ ಮೂರೂ ಪ್ರಮುಖ ಪಾತ್ರಗಳು ಮಿಲೆನಿಯಲ್ (ಹೊಸ ಕಾಲದ ಯುವಕರು) ವ್ಯಕ್ತಿಗಳನ್ನು ಪ್ರತಿನಿಧಿಸುತ್ತವೆ. ಹೊಸ ತಲೆಮಾರಿನ ಹುಡುಗರ ಜೀವನದಲ್ಲಿ ಏನೆಲ್ಲ ಆಗುತ್ತವೋ, ಅವು ಈ ಮೂವರ ಜೀವನದಲ್ಲೂ ಆಗುತ್ತವೆ’ ಎಂದರು ವಿನಯ್.

ಚಿತ್ರದಲ್ಲಿ ಒಟ್ಟು ಏಳು ಹಾಡುಗಳು ಇವೆ. ಏಳೂ ಹಾಡುಗಳಿಗೆ ಬೇರೆ ಬೇರೆ ಸಂಗೀತ ನಿರ್ದೇಶಕರು ಸಂಗೀತ ನೀಡಿದ್ದಾರೆ ಎಂಬ ಸುದ್ದಿ ಇದೆ. ಬೆಂಗಳೂರು, ಸಕಲೇಶಪುರ, ಕೋಲಾರ, ಹಿಮಾಚಲ ಪ್ರದೇಶ, ನೆದರ್ಲೆಂಡ್‌ಗಳಲ್ಲಿ ಚಿತ್ರೀಕರಣ ನಡೆದಿದೆ.

‘ನನ್ನ ಪಾತ್ರ ಇಂದಿನ ತಲೆಮಾರಿನ ಸಾಫ್ಟ್‌ವೇರ್‌ ಎಂಜಿನಿಯರ್‌ಗಳನ್ನು ಪ್ರತಿನಿಧಿಸುತ್ತದೆ. ಈ ತಲೆಮಾರಿನವರು ಎಂಜಿನಿಯರಿಂಗ್‌ ಕೆಲಸ ಮಾತ್ರವೇ ಮಾಡುತ್ತಿಲ್ಲ; ಬೇರೆ ಬೇರೆ ಹವ್ಯಾಸಗಳನ್ನು ಕೂಡ ಬೆಳೆಸಿಕೊಂಡವರು’ ಎಂದರು ಪ್ರವೀಣ್ ತೇಜ್.

ರಾಧಿಕಾ, ಪ್ರವೀಣ್, ಅನನ್ಯಾ ಮಾತ್ರವೇ ಅಲ್ಲದೆ ಇನ್ನೂ ಕೆಲವು ಪ್ರಮುಖ ಪಾತ್ರಗಳು ಸಿನಿಮಾದಲ್ಲಿ ಇವೆ. ಆ ಪಾತ್ರಗಳನ್ನು ನಿಭಾಯಿಸಿರುವವರು ಯಾರು ಎಂಬುದನ್ನು ಕೆಲವು ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದಿದೆ ಚಿತ್ರತಂಡ.

ಪಾತ್ರವೇ ನಾನಾಗಬೇಕಿತ್ತು...

‘ರಂಗಿತರಂಗ’ದ ಚೆಲುವೆ ರಾಧಿಕಾ ಚೇತನ್‌ ಈ ಚಿತ್ರದ ಮೂಲಕ ರಾಧಿಕಾ ನಾರಾಯಣ ಆಗಿ ಬದಲಾಗುತ್ತಿದ್ದಾರೆ. ಈ ಬದಲಾವಣೆಗೆ ಕಾರಣ ಏನೆಂಬುದನ್ನು ರಾಧಿಕಾ ತೀರಾ ಸ್ಪಷ್ಟವಾಗಿ ತಿಳಿಸಲಿಲ್ಲ.

‘ನನ್ನ ಪಾತ್ರದ ಹೆಸರು ಮೀರಾ ಶರ್ಮಾ. ಪಾತ್ರವನ್ನು ಅಭಿನಯಿಸುತ್ತಾ, ನಾನೇ ನಿಜ ಜೀವನದಲ್ಲೂ ಆ ಪಾತ್ರ ಆಗಿರಬಾರದಿತ್ತೇ ಎಂದು ಅನಿಸಿದ್ದಿದೆ’ ಎಂದರು ರಾಧಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT