ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆದ್ರೊ ನೋಡಲು ಕೇರಳ ಚಿತ್ರೋತ್ಸವಕ್ಕೆ ಬನ್ನಿ: ರಿಷಬ್‌ ಶೆಟ್ಟಿ

Last Updated 7 ಮಾರ್ಚ್ 2022, 9:23 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ(ಐಎಫ್‌ಎಫ್‌ಕೆ) ನಟೇಶ್‌ ಹೆಗಡೆ ನಿರ್ದೇಶನದ ಕನ್ನಡ ಸಿನಿಮಾ ‘ಪೆದ್ರೊ’ ಆಯ್ಕೆಯಾಗಿದೆ.

ಇದರ ಬೆನ್ನಲ್ಲೇ ‘ಪೆದ್ರೊ ನೋಡಲು ಹಾಗೂ ಸಿನಿಮಾವನ್ನು ಸಂಭ್ರಮಿಸಲು ಕೇರಳ ಚಿತ್ರೋತ್ಸವಕ್ಕೆ ಬನ್ನಿ’ ಎಂದು ಚಿತ್ರದ ನಿರ್ಮಾಪಕ, ನಟ ರಿಷಬ್‌ ಶೆಟ್ಟಿ ಟ್ವೀಟ್‌ ಮೂಲಕ ಆಹ್ವಾನಿಸಿದ್ದಾರೆ. ತಿರುವನಂತಪುರದಲ್ಲಿ ಮಾರ್ಚ್‌ 18ರಿಂದ 25ರವರೆಗೆ ಐಎಫ್‌ಎಫ್‌ಕೆ ಆಯೋಜಿಸಲಾಗಿದ್ದು, ‘ವಲ್ಡ್‌ ಸಿನಿಮಾ’ ವಿಭಾಗದಡಿ ‘ಪೆದ್ರೊ’ ಪ್ರದರ್ಶನಗೊಳ್ಳಲಿದೆ.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಪೆದ್ರೊ’ ಸಿನಿಮಾವನ್ನು ಆಯ್ಕೆ ಮಾಡದೇ ಇರುವುದರ ಕುರಿತು ಇತ್ತೀಚೆಗಷ್ಟೇ ರಿಷಬ್‌ ಶೆಟ್ಟಿ ಅಸಮಾಧಾನ ಹೊರಹಾಕಿದ್ದರು. ‘ಜಗತ್ತಿನ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದು ವಿಮರ್ಶಕರಿಂದ ಪ್ರಶಂಸೆ ಪಡೆದ ಪೆದ್ರೊ ನಮ್ಮ ಬೆಂಗಳೂರಿನ ಚಿತ್ರೋತ್ಸವಕ್ಕೆ ಯಾಕೋ ರುಚಿಸಿಲ್ಲ. ಕೆಲವೊಮ್ಮೆ ಕಹಿ ಗುಳಿಗೆಯನ್ನೂ ನುಂಗಬೇಕು ಆರೋಗ್ಯದ ದೃಷ್ಟಿಯಿಂದ. ಸಿನಿಮಾ ಎಂಬ ನದಿಗೆ ಎಲ್ಲ ತೊರೆಗಳೂ ಬಂದು ಸೇರಬೇಕು. ನಮ್ಮಲ್ಲಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ ತಡೆಗಾಲು ಒಡ್ಡುವ ಪ್ರಯತ್ನ ಮಾಡಿದ್ದಾರೆ. ಒಂದು ಸಿನಿಮಾವನ್ನು ಜನರಿಗೆ ತಲುಪುವುದನ್ನು ತಪ್ಪಿಸುತ್ತೇವೆ ಎಂದುಕೊಂಡರೆ ನೀರನ್ನು ಹಿಮ್ಮುಖ ಹರಿಸುತ್ತೇವೆ ಎಂದುಕೊಂಡಂತೆ’ ಎಂದು ಪತ್ರಮುಖೇನ ರಿಷಬ್‌ ಹೇಳಿದ್ದರು.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ನಟೇಶ್‌ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ‘ಪೆದ್ರೊ’ ಮಧ್ಯಮ ವರ್ಗದ ಎಲೆಕ್ಟ್ರಿಷಿಯನ್‌ ಒಬ್ಬನ ಕಥೆಯಾಗಿದ್ದು, ತನ್ನ ಪ್ರೀತಿಯನ್ನು ನಾಯಿಯನ್ನು ಕೊಂದ ಹಂದಿಯನ್ನು ಹೊಡೆಯಲು ಹೋದ ಸಂದರ್ಭದಲ್ಲಿ ಆದ ಅನಾಹುತ ಚಿತ್ರದ ಕಥೆಯ ಎಳೆಯಾಗಿದೆ. ರಿಷಬ್‌ ಶೆಟ್ಟಿ ನಿರ್ಮಾಣದ ಈ ಚಿತ್ರವನ್ನು ಖ್ಯಾತ ನಿರ್ದೇಶಕ ವೆಟ್ರಿಮಾರನ್‌ ಅವರು ಪ್ರಸ್ತುತಪಡಿಸುತ್ತಿದ್ದಾರೆ. ನಟ ರಾಜ್‌ ಬಿ.ಶೆಟ್ಟಿ ಅವರು ಈ ಚಿತ್ರದಲ್ಲಿ ಬಣ್ಣಹಚ್ಚಿದ್ದು, ಮುಖ್ಯಭೂಮಿಕೆಯಲ್ಲಿ ನಟೇಶ್‌ ಅವರ ತಂದೆ ಗೋಪಾಲಕೃಷ್ಣ ಹೆಗಡೆಯವರೇ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT