ನವದೆಹಲಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ(2021) ಶುಕ್ರವಾರ ಘೋಷಣೆಯಾಗಿದ್ದು, ಕನ್ನಡ ಭಾಷೆ ವಿಭಾಗದಲ್ಲಿ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. 2021ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಯನ್ನು ತೀರ್ಪುಗಾರರ ಮಂಡಳಿಯ ಅಧ್ಯಕ್ಷ, ನಿರ್ದೇಶಕ ಕೇತನ್ ಮೆಹ್ತಾ ಘೋಷಿಸಿದರು.
ಈ ಮೂಲಕ ಚೊಚ್ಚಲ ನಿರ್ದೇಶನಕ್ಕೇ ಕಿರಣ್ ರಾಜ್ ಕೆ. ಅವರು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿಯು ರಜತ ಕಮಲ ಹಾಗೂ ₹1 ಲಕ್ಷ ನಗದು ಒಳಗೊಂಡಿದೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ ನಟಿ ಭಾರತಿ ವಿಷ್ಣುವರ್ಧನ್ ಅವರ ಜೀವನದ ಕುರಿತ ‘ಬಾಳೆ ಬಂಗಾರ’ಕ್ಕೆ ಅನಿರುದ್ಧ ಜತ್ಕರ್ ತೀರ್ಪುಗಾರರ ಮೆಚ್ಚುಗೆ ಪಡೆದಿದ್ದಾರೆ. ಕನ್ನಡ ಸಿನಿಮಾ ಪತ್ರಕರ್ತರಾದ ಸುಬ್ರಹ್ಮಣ್ಯ ಬಾಡೂರು (ಬಿ.ಎನ್.ಸುಬ್ರಹ್ಮಣ್ಯ) ಅತ್ಯುತ್ತಮ ಸಿನಿಮಾ ವಿಮರ್ಶಕ (ವಿಶೇಷ ಉಲ್ಲೇಖ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿರುವ ಜೇಕಬ್ ವರ್ಗೀಸ್ ನಿರ್ದೇಶನದ ‘ಆಯುಷ್ಮಾನ್’ ಸಿನಿಮಾ, ಅತ್ಯುತ್ತಮ ಅನ್ವೇಷಣೆ/ಅಡ್ವೆಂಚರ್ ಸಿನಿಮಾ ಪ್ರಶಸ್ತಿ ಪಡೆದಿದೆ.
Caught the moment in the camera❤️ Amma’s excitement says it all☺️❤️
— Kiranraj K (@Kiranraj61) August 24, 2023
#777Charlie #NationalFilmAwards2023 pic.twitter.com/NsWLMFivPk
ಅಲ್ಲು ಅರ್ಜುನ್ ಅತ್ಯುತ್ತಮ ನಟ: ಆರ್.ಮಾಧವನ್ ನಟಿಸಿ, ನಿರ್ದೇಶಿಸಿರುವ ರಾಕೆಟ್ರಿ–ದಿ ನಂಬಿ ಎಫೆಕ್ಟ್ ಅತ್ಯುತ್ತಮ ಫೀಚರ್ ಫಿಲ್ಮ್ ಪ್ರಶಸ್ತಿ ಪಡೆದಿದೆ. ‘ಪುಷ್ಪ’ ಚಿತ್ರದಲ್ಲಿನ ನಟನೆಗಾಗಿ ನಟ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿನ ನಟನೆಗಾಗಿ ಆಲಿಯಾ ಭಟ್ ಹಾಗೂ ‘ಮಿಮಿ’ ಚಿತ್ರದಲ್ಲಿನ ನಟನೆಗಾಗಿ ಕೃತಿ ಸೆನನ್ ಅತ್ಯುತ್ತಮ ನಟಿ ಪ್ರಶಸ್ತಿ ಹಂಚಿಕೊಂಡಿದ್ದಾರೆ.
ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ರಾಷ್ಟ್ರೀಯ ಭಾವೈಕ್ಯ ಸಾರುವ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾ ಆರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್, ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿಗಳೂ ಇದರಲ್ಲಿ ಒಳಗೊಂಡಿವೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಐದು ಪ್ರಶಸ್ತಿಗಳನ್ನು ಪಡೆದಿದೆ. ಪ್ರಶಸ್ತಿಗಾಗಿ 28 ಭಾಷೆಗಳಿಂದ 280 ಫೀಚರ್ ಸಿನಿಮಾಗಳು ಬಂದಿದ್ದವು.
ಇದನ್ನು ದೇವರ ಅನುಗ್ರಹ ಎಂದು ಭಾವಿಸುತ್ತೇನೆ. ನನ್ನ ಮೂರು ವರ್ಷಗಳ ಪರಿಶ್ರಮ ಇದು. ನೂರಕ್ಕೂ ಹೆಚ್ಚು ಅಮ್ಮನ ಸಿನಿಮಾಗಳನ್ನು ನೋಡಿ ಇದನ್ನು ಸಿದ್ಧಪಡಿಸಿದ್ದೆ. ಕಲಾವಿದರೊಬ್ಬರ ಬಗ್ಗೆ ಇರುವ ಸುದೀರ್ಘ ಸಾಕ್ಷ್ಯಚಿತ್ರವಿದು. ಹೀಗಾಗಿಯೇ ಮೂರು ದಾಖಲೆಗಳು ಇದರ ಮೇಲಿದೆ. ನಮ್ಮಲ್ಲಿ ಸಾಕಷ್ಟು ಕಲಾವಿದರು ಪ್ರತಿಭೆಗಳಿದ್ದಾರೆ. ಇವರ ಬಗ್ಗೆ ಇಂತಹ ಒಂದು ದಾಖಲೆ ಸಿದ್ಧಪಡಿಸಲು ನನ್ನ ಈ ಪ್ರಯತ್ನ ಒಂದು ನಾಂದಿಯಾಗಬೇಕು. ಇಂತಹ ಸಾಕ್ಷ್ಯಚಿತ್ರ ನಮ್ಮ ಹಿರಿಯರ ಬಗ್ಗೆ ಒಂದು ದಾಖಲೆ ಇದ್ದಂತೆ. ರಾಜ್ಯ ಪ್ರಶಸ್ತಿಯಲ್ಲಿ ಸಾಕ್ಷ್ಯಚಿತ್ರಕ್ಕೆ 30 ನಿಮಿಷ ಅವಧಿಯ ನಿಯಮವಿದೆ. ಇದರಿಂದಾಗಿ ಇಂತಹ ಸಾಕ್ಷ್ಯಚಿತ್ರಕ್ಕೆ ನ್ಯಾಯವೂ ಸಿಗುವುದಿಲ್ಲ. ವ್ಯಕ್ತಿ ವಿಷಯಕ್ಕೂ ನಿರ್ದೇಶಕನೊಬ್ಬ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ. ಈ ನಿಯಮವನ್ನು ರಾಜ್ಯ ಸರ್ಕಾರ ಬದಲಾಯಿಸಬೇಕು.- ಅನಿರುದ್ಧ ಜತ್ಕರ್ ನಟ
ನಮ್ಮ ಇಡೀ ತಂಡಕ್ಕೆ ‘777 ಚಾರ್ಲಿ’ ಒಂದು ವಿಶೇಷ ಸಿನಿಮಾವಾಗಿತ್ತು. ಐದು ವರ್ಷಗಳ ಪಯಣ ಇದು. ಉಳಿದ ಸಿನಿಮಾದ ತಯಾರಿಯಂತೆ ಈ ಸಿನಿಮಾದ ತಯಾರಿ ಇರಲಿಲ್ಲ. ಇಡೀ ತಂಡವೇ ನಾಲ್ಕೈದು ವರ್ಷ ಇದಕ್ಕಾಗಿ ವ್ಯಯಿಸಿತ್ತು. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾದಾಗಲೇ ನಮ್ಮ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿತ್ತು. ಇದೀಗ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ಅದಕ್ಕೊಂದು ಗರಿ. ನನ್ನ ಚೊಚ್ಚಲ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವುದಕ್ಕೆ ಖುಷಿ ಇದೆ. ಒಂದು ಗೌರವ ಸಿಕ್ಕಿದೆ. ಪರಂವಃ ಸ್ಟುಡಿಯೋಸ್ ರಕ್ಷಿತ್ ಶೆಟ್ಟಿ ಈ ಯಶಸ್ಸಿನ ಹಿಂದೆ ಇದ್ದಾರೆ. ಪ್ರಶಸ್ತಿಗಳು ನನ್ನ ಮುಂದಿನ ಜವಾಬ್ದಾರಿ ಹೆಚ್ಚಿಸಿವೆ. ಈ ರಾಷ್ಟ್ರ ಪ್ರಶಸ್ತಿ ನನ್ನ ಮೇಲಿನ ಜವಾಬ್ದಾರಿಯನ್ನು ಬೆಟ್ಟದಷ್ಟು ಹೆಚ್ಚಿಸಿದೆ.–ಕಿರಣ್ ರಾಜ್ ಕೆ. ನಿರ್ದೇಶಕ
ಮೂರನೇ ಬಾರಿ ಪ್ರಶಸ್ತಿ ಕೋವಿಡ್ ಸಮಯದಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ನೋಡಿದ್ದೇವೆ. ಕ್ರೀಡೆಯ ಮೂಲಕ ಈ ಸಮಸ್ಯೆಗಳಿಂದ ಹೇಗೆ ಹೊರಬರಬಹುದು ಎನ್ನುವುದನ್ನು ‘ಆಯುಷ್ಮಾನ್’ ಮುಖೇನ ತಿಳಿಸುವ ಪ್ರಯತ್ನ ಮಾಡಿದ್ದೇವೆ. ನಾನು ಪುನೀತ್ ರಾಜಕುಮಾರ್ ಅವರ ಜತೆ ಸಿನಿಮಾ ಮಾಡಬೇಕಿತ್ತು. ಚಿತ್ರ ಇನ್ನೇನು ಘೋಷಣೆ ಮಾಡಬೇಕು ಎನ್ನುವಷ್ಟರಲ್ಲಿ ಅವರು ನಿಧನರಾದರು. ಹೀಗಾಗಿ ನಾನು ಸಿನಿಮಾಗಳಿಂದ ಕೆಲ ತಿಂಗಳ ಕಾಲ ದೂರ ಹೋದೆ. ವಾಪಸ್ಸಾದಾಗ ಮಾಡಿದ ಸಿನಿಮಾ ‘ಆಯುಷ್ಮಾನ್’. ಇದು ನನ್ನ ಮೂರನೇ ರಾಷ್ಟ್ರ ಪ್ರಶಸ್ತಿ ಎನ್ನುವ ಹೆಮ್ಮೆ ಇದೆ.- ಜೇಕಬ್ ವರ್ಗೀಸ್ ನಿರ್ದೇಶಕ.
ಈ ಸುದ್ದಿಯಿಂದ ಆಗಿರುವ ಸಂತೋಷವನ್ನು ಪದಗಳಲ್ಲಿ ಹೇಳಿ ಅದಕ್ಕೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ. ಇದು ಇಡೀ ಪರಂವಃ ಕುಟುಂಬಕ್ಕೆ ಹೆಮ್ಮೆಯ ಸಮಯ. ಕಿರಣ್‌ರಾಜ್‌ಗೆ ಅಭಿನಂದನೆ ಅವರ ಪರಿಶ್ರಮಕ್ಕೆ ಫಲ ಸಿಕ್ಕಿದೆ.–ರಕ್ಷಿತ್ ಶೆಟ್ಟಿ ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.