ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕಂಗನಾ ಅತ್ಯುತ್ತಮ ನಟಿ

'ಅಕ್ಷಿ' ಕನ್ನಡದ ಅತ್ಯುತ್ತಮ ಚಿತ್ರ | ಅತ್ಯುತ್ತಮ ನಟ ಪ್ರಶಸ್ತಿಗೆ ಮನೋಜ್‌ ಬಾಜ್‌ಪೆಯ್‌, ಧನುಷ್‌ ಆಯ್ಕೆ
Last Updated 22 ಮಾರ್ಚ್ 2021, 20:04 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಕಾರಣದಿಂದಾಗಿ ಒಂದು ವರ್ಷ ವಿಳಂಬವಾಗಿದ್ದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ‘ಭೋಸ್ಲೆ’ ಚಿತ್ರದಲ್ಲಿನ ನಟನೆಗಾಗಿ ಬಾಲಿವುಡ್‌ ನಟ ಮನೋಜ್‌ ಬಾಜ್‌ಪೆಯ್‌ ಹಾಗೂ ‘ಅಸುರನ್‌’ ಚಿತ್ರದಲ್ಲಿನ ನಟನೆಗಾಗಿ ತಮಿಳು ನಟ ಧನುಷ್‌ ಜಂಟಿಯಾಗಿ ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ಮಣಿಕರ್ಣಿಕಾ’ ಹಾಗೂ ‘ಪಂಗಾ’ ಚಿತ್ರದಲ್ಲಿನ ನಟನೆಗಾಗಿ ನಟಿ ಕಂಗನಾ ರನೌತ್‌ ಅತ್ಯುತ್ತಮ ನಟಿ ಪ್ರಶಸ್ತಿಗಳಿಸಿದ್ದಾರೆ.

ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಗುರುತಿಸಲಾದ ಭಾಷೆಗಳಲ್ಲಿನ ಚಲನಚಿತ್ರ ವಿಭಾಗದಲ್ಲಿ ಕನ್ನಡದ‘ಅಕ್ಷಿ’ ಚಿತ್ರಕ್ಕೆ ಅತ್ಯುತ್ತಮ ಕನ್ನಡಚಲನಚಿತ್ರ ಪ್ರಶಸ್ತಿದೊರಕಿದೆ. ಕಲಾದೇಗುಲ ಸ್ಟೂಡಿಯೋ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಮನೋಜ್‌ ಕುಮಾರ್‌ ಕಥೆ,ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿನ ಸಾಹಸ ನಿರ್ದೇಶನಕ್ಕಾಗಿ ವಿಕ್ರಮ್‌ ಮೋರ್‌ ಅವರಿಗೆ ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ ದೊರಕಿದೆ.

ಪಿ.ಆರ್‌.ರಾಮದಾಸ ನಾಯ್ಡು ಅವರು ಬರೆದ ಕನ್ನಡ ಸಿನಿಮಾ: ಜಾಗತಿಕ ಸಿನಿಮಾ; ವಿಕಾಸ, ಪ್ರೇರಣೆ, ಪ್ರಭಾವ ಕೃತಿಗೆ ಸಿನಿಮಾ ಕುರಿತ ಉತ್ತಮ ಕೃತಿ ಪ್ರಶಸ್ತಿ ದೊರೆತಿದೆ. ಅಮೋಘವರ್ಷ ಜೆ.ಎಸ್‌. ನಿರ್ಮಿಸಿರುವ ‘ವೈಲ್ಡ್‌ ಕರ್ನಾಟಕ’ವು ಅತ್ಯುತ್ತಮ ಎಕ್ಸ್‌ಪ್ಲೊರೇಷನ್‌ ಚಿತ್ರಕ್ಕೆ ಆಯ್ಕೆಯಾಗಿದೆ.

ಮಲಯಾಳಂ ಚಿತ್ರ ನಿರ್ದೇಶಕ ಪ್ರಿಯದರ್ಶನ್‌ ಅವರ ‘ಮರಕ್ಕರ್‌; ಅರಬ್ಬಿಕಡಲಿಂಡೆ ಸಿಂಹಂ’ ಚಲನಚಿತ್ರವು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿದ್ದು, ‘ಬಹತ್ತರ್‌ ಹೂರೈ’ ಚಿತ್ರಕ್ಕಾಗಿ ನಿರ್ದೇಶಕ ಸಂಜಯ್‌ ಪೂರನ್‌ ಸಿಂಗ್‌ ಚೌಹಾಣ್‌ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ ಎಂದು ಚಿತ್ರನಿರ್ಮಾಪಕ ಎನ್‌.ಚಂದ್ರ ನೇತೃತ್ವದ ಜ್ಯೂರಿ ಸೋಮವಾರ ಘೋಷಿಸಿತು.

ದಿವಂಗತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಟನೆಯ ‘ಚಿಚೋರೆ’ ಚಿತ್ರವು ಅತ್ಯುತ್ತಮ ಹಿಂದಿ ಚಿತ್ರವೆಂದು ಘೋಷಣೆಯಾಗಿದೆ. ಮರಾಠಿ ಚಿತ್ರವಾದ ‘ಆನಂದಿ ಗೋಪಾಲ್‌’ ಸಾಮಾಜಿಕ ಸಮಸ್ಯೆಯ ಮೇಲೆ ಚಿತ್ರೀಕರಿಸಲಾದಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ‘ತಾಜ್‌ಮಹಲ್‌’ ಚಿತ್ರಕ್ಕೆ ನರ್ಗೀಸ್‌ ದತ್‌ ಪ್ರಶಸ್ತಿ, ನಟ ಮಹೇಶ್‌ ಬಾಬು ನಟನೆಯ ತೆಲುಗು ಚಿತ್ರ ‘ಮಹರ್ಷಿ’ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ಪಡೆದಿದೆ. ಮೊದಲ ಚಿತ್ರಕ್ಕಾಗಿ ನೀಡುವ ಇಂದಿರಾ ಗಾಂಧಿ ಪ್ರಶಸ್ತಿಯನ್ನು ಮಾತುಕುಟ್ಟಿ ಕ್ಸೇವಿಯರ್‌ ನಿರ್ದೇಶನದ ಮಲಯಾಳಂನ ‘ಹೆಲನ್‌’ ಚಲನಚಿತ್ರವು ಪಡೆದಿದೆ.

ಸಂವಿಧಾನದ 8ನೇ ಪರಿಚ್ಛೇದದಲ್ಲಿ ಇರದ ಇತರೆ ಭಾಷೆಗಳಲ್ಲಿನ ಚಲನಚಿತ್ರ ವಿಭಾಗದಲ್ಲಿ ತುಳುಭಾಷೆಯ ‘ಪಿಂಗಾರ’ ಚಿತ್ರಕ್ಕೆ ಅತ್ಯುತ್ತಮತುಳುಚಲನಚಿತ್ರ ಪ್ರಶಸ್ತಿ ದೊರೆತಿದೆ. ಇದನ್ನು ಡಿಎಂಕೆ ಪ್ರೊಡಕ್ಷನ್ಸ್‌ ನಿರ್ಮಿಸಿದ್ದು, ಆರ್‌.ಪ್ರೀತಂ ಶೆಟ್ಟಿ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT