ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಟಿ ನವರಸಗಳ ಧ್ಯಾನದಲ್ಲಿ ಮಣಿರತ್ನಂ

Last Updated 8 ಜುಲೈ 2021, 19:30 IST
ಅಕ್ಷರ ಗಾತ್ರ

‘ನವರಸ’ ಎಂಬ ಒಂಬತ್ತು ಕಥೆಗಳ ಗುಚ್ಛದ ತಮಿಳು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಾಣಲು ಸಿದ್ಧವಾಗಿದೆ. ಮಣಿರತ್ನಂ ಇದರ ನಿರ್ಮಾಪಕರಲ್ಲೊಬ್ಬರು ಎನ್ನುವುದು ವಿಶೇಷ. ಅವರು ಹಾಗೂ ಇನ್ನೊಬ್ಬ ನಿರ್ಮಾಪಕ ಜಯೇಂದ್ರ ಪಂಚಪಕೇಸನ್ ಈ ಯೋಜನೆ ಕುರಿತು ‘ಸಿನಿಮಾ ರಂಜನೆ’ ಜತೆ ಮಾತನಾಡಿದರು. ಅದರ ಸಾರ ಇಲ್ಲಿದೆ.

ಕೋವಿಡ್ ಒಡ್ಡಿರುವ ಸವಾಲುಗಳ ಕಾರಣದಿಂದ ಇಂತಹ ಕಥಾಗುಚ್ಛಗಳ ಸಿನಿಮಾಗಳು ಒಟಿಟಿಯಲ್ಲಿ ಹೆಚ್ಚಾಗಿ ಬರುತ್ತಿವೆಯೇ ಎಂಬ ಪ್ರಶ್ನೆಗೆ ಮಣಿರತ್ನಂ ಹೇಳಿದ್ದಿಷ್ಟು: ‘ಹಾಗೇನೂ ಇಲ್ಲ. ಒಟಿಟಿ ವೇದಿಕೆಯಲ್ಲಿ ಸಣ್ಣ ಸಣ್ಣ ಅವಧಿಯ ಹಲವು ಕಥಾನಕಗಳನ್ನು ಹೇಳಿದರೆ ಕ್ಲಿಕ್ ಆಗುತ್ತದೆ ಎನ್ನುವುದು ಗೊತ್ತಾಗಿದೆ. ಕೋವಿಡ್‌ ಪೂರ್ವದಲ್ಲೇ ಇಂತಹ ಪರಿಕಲ್ಪನೆ ಶುರುವಾಗಿತ್ತು. ಅದು ಕೋವಿಡ್‌ ಕಾಲದಲ್ಲಿ ತೆರೆಕಾಣತೊಡಗಿತಷ್ಟೆ. ಅದರ ಮುಂದುವರಿಕೆಯೇ ನಮ್ಮ ಸಿನಿಮಾ’.

ಮಣಿರತ್ನಂ ಈ ಗುಚ್ಛದ ಯಾವ ಕಥೆಯನ್ನೂ ನಿರ್ದೇಶಿಸಿಲ್ಲ. ಆದರೆ ಸೃಜನಶೀಲತೆಯ ಕಾಣ್ಕೆ ಇದ್ದೇಇದೆ. ಒಂಬತ್ತು ಭಿನ್ನ ನಿರ್ದೇಶಕರು, ಬೇರೆ ಬೇರೆ ತಂಡಗಳನ್ನು ಒಂದು ತಂತುವಿಗೆ ಸೇರಿಸಿ, ಹೇಳಬೇಕಾದದ್ದನ್ನು ತೆರೆಗೆ ತರಲು ಮಾಡಿಕೊಂಡ ಸಿದ್ಧತೆಯಲ್ಲಿ ಅವರ ಅಭಿಪ್ರಾಯವೂ ಮುಖ್ಯವಾಗಿದೆ.

ಒಂಬತ್ತೂ ಕಥೆಗಳು ಬಗೆಬಗೆಯ ರಸಗಳ ದರ್ಶನ ಮಾಡಿಸಲಿವೆ. ಇದನ್ನು ‘ಆಂಥಾಲಜಿ ಜಾನರ್’ ಎಂದೇ ಮಣಿರತ್ನಂ ಬಣ್ಣಿಸುತ್ತಾರೆ. ಒಂದಕ್ಕೊಂದು ಸಂಬಂಧ ಇರಬೇಕೆಂದೇನೂ ಇಲ್ಲ ಎನ್ನುವುದು ಅವರ ಪ್ರತಿಪಾದನೆ.

ಒಂಬತ್ತೂ ಕಥೆಗಳು ಸೇರಿ ನಾಲ್ಕೂವರೆ ತಾಸಿನಷ್ಟು ಅವಧಿಯ ಸಿನಿಮಾ ಇದಾಗಿರುವುದು ಕೂಡ ಒಟಿಟಿಯಲ್ಲಿ ಭಾರತದ ಮಟ್ಟಿಗೆ ಪ್ರಯೋಗವೇ. ಇಂತಹ ಸಿನಿಮಾ ತಯಾರು ಮಾಡಲು ಮಾಮೂಲು ಚಿತ್ರಕ್ಕೆ ಆಗುವಷ್ಟೇ ಬಜೆಟ್ ಬೇಕಾಗುತ್ತದೆ. ಸುಮಾರು 70 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸಣ್ಣ ಕಥೆಯಾದರೂ ಮಾನವ ಸಂಪನ್ಮೂಲ ಹಾಗೂ ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಜಯೇಂದ್ರ ಮಾಹಿತಿ ನೀಡಿದರು.

ತಮಿಳು ಚಿತ್ರರಂಗ ‘ಆಂಥಾಲಜಿ’ ಪ್ರಕಾರದಲ್ಲಿ ಒಟಿಟಿಯಲ್ಲಿ ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನು ಕೊಡುತ್ತಿರುವುದಕ್ಕೆ ನಿರ್ದಿಷ್ಟ ಕಾರಣವಿದೆಯೇ ಎನ್ನುವುದು ಮಣಿರತ್ನಂ ಅವರಿಗೆ ಗೊತ್ತಿಲ್ಲ. ಆದರೆ, ದಕ್ಷಿಣ ಭಾರತದಲ್ಲಿ ತಮಿಳಿನಲ್ಲಿ ಇಂತಹ ಪ್ರಯೋಗ ನಡೆಯುತ್ತಿರುವುದರ ಅರಿವಿದೆ. ಒಟಿಟಿ ನಡೆಸುವವರು ಟಾರ್ಗೆಟ್ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂತಹ ಅವಕಾಶಗಳನ್ನು ನೀಡುತ್ತಿರಬಹುದೆನ್ನುವುದು ಅವರ ಅನಿಸಿಕೆ. ಕನ್ನಡದಲ್ಲಿ ತಮ್ಮ ಮೊದಲ ಚಿತ್ರ ನಿರ್ದೇಶಿಸಿದ ಅವರಿಗೆ ಈ ಭಾಷೆಯ ಚಿತ್ರಗಳಿಗೂ ಮುಂದೆ ಒಟಿಟಿಯಲ್ಲಿ ಅವಕಾಶಗಳು ಹೆಚ್ಚಾಗಲಿವೆ ಎನ್ನುವ ನಂಬಿಕೆ ಇದೆ.

‘ಯಾರಾದರೂ ಹೊಸ ಮನೆಯ ಕಿಟಕಿಗಳನ್ನು ತೆರೆಯಬೇಕಾಗುತ್ತದೆ. ಎಲ್ಲ ಭಾಷೆಗಳವರೂ ತೆರೆಯತೊಡಗಿದ್ದಾರೆ. ತಮಿಳಿನಲ್ಲಿ ಮೊದಲು ತೆರೆದಿರಬೇಕಷ್ಟೆ. ಮುಂದೆ ಒಟಿಟಿಯಲ್ಲಿ ಹಲವು ಪ್ರಯೋಗಗಳು ಕಾಣಸಿಗಲಿವೆ ಎಂದು ನಾನು ಆಶಾವಾದಿಯಾಗಿರುವೆ’ ಎಂದು ಅವರು ಅಭಿಪ್ರಾಯಪಟ್ಟರು.

ವೆಬ್‌ ಸರಣಿಗಳಲ್ಲಾದರೆ ಅವೇ ಪಾತ್ರಗಳನ್ನು ಇಟ್ಟುಕೊಂಡು ಕಥೆ ಬೆಳೆಸಿರುತ್ತಾರೆ. ಅವುಗಳಿಗೀಗ ಸಾಕಷ್ಟು ಪ್ರೇಕ್ಷಕರು ಒಗ್ಗಿಕೊಂಡಿದ್ದಾರೆ. ‘ಆಂಥಾಲಜಿ’ ಅದಕ್ಕೆ ಹೊರತಾದ ಕಥೆಗಳ ಗುಚ್ಛದ ದರ್ಶನ ಕ್ರಮ. ಇದನ್ನೂ ನೋಡಿಸುತ್ತಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಎದುರಲ್ಲಿದೆ ಎನ್ನುವ ಮಣಿರತ್ನಂ ಮಾತನ್ನು ಜಯೇಂದ್ರ ಕೂಡ ಒಪ್ಪುತ್ತಾರೆ.

ಬದಲಾದ ಸಿನಿಮಾ ವೇದಿಕೆಗಳಿಗೆ ಎಲ್ಲ ಸೃಜನಶೀಲ ಮನಸ್ಸುಗಳೂ ತೆರೆದುಕೊಳ್ಳುತ್ತಿವೆ ಎನ್ನುವುದಕ್ಕೆ ‘ನವರಸ’ ತಾಜಾ ಉದಾಹರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT