ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭಾವನೆಗಾಗಿ 6 ತಿಂಗಳು ಅಲೆದಿದ್ದೆ: ಕಷ್ಟದ ದಿನಗಳನ್ನು ನೆನೆದ ನಟ ಸಿದ್ದಿಕಿ

Last Updated 26 ಏಪ್ರಿಲ್ 2022, 11:30 IST
ಅಕ್ಷರ ಗಾತ್ರ

ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ ಅವರು ತಾವು ನಟನೆ ಆರಂಭಿಸಿದ ಆರಂಭದ ದಿನಗಳ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಖ್ಯಾತ ನಟಿರವೀನಾ ಟಂಡನ್‌, ಮನೋಜ್ ಬಾಜಪೇಯಿ ಅವರು ನಟಿಸಿದ್ದ 'ಶೂಲ್‌' ಸಿನಿಮಾ1999ರಲ್ಲಿ ತೆರೆಕಂಡಿತ್ತು. ಅದೇ ಸಿನಿಮಾದಲ್ಲಿ ತಾವು ನಿರ್ವಹಿಸಿದ್ದ ಸಣ್ಣ ಪಾತ್ರಕ್ಕೆ ಸಂಭಾವನೆಯೇಸಿಗಲಿಲ್ಲಎಂದು ಸಿದ್ದಿಕಿ ಬೇಸರ ವ್ಯಕ್ತಪಡಿಸಿದ್ದಾರೆ.

'ಬಾಲಿವುಡ್‌ ಬಬ್ಬಲ್‌' ವೆಬ್‌ಸೈಟ್‌ಗೆ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಸಿನಿಪಯಣದ ಆರಂಭದ ದಿನಗಳ ಬಗ್ಗೆ ಮೆಲುಕು ಹಾಕಿರುವ ಅವರು, 'ನನಗೆ ಹಣದ ಅಗತ್ಯ ಅಪಾರವಾಗಿತ್ತು. ಆ ಸಂದರ್ಭದಲ್ಲಿ ನಾನು ಉಳಿಯುವುದೇ ಅಸಾಧ್ಯವೆನಿಸಿತ್ತು. ಬದುಕಿಗಾಗಿಯೇ ಎಲ್ಲವನ್ನೂ ಮಾಡುತ್ತಿದ್ದೆ. ಅದರಂತೆ'ಶೂಲ್‌' ಸಿನಿಮಾದಲ್ಲಿ ವೇಯ್ಟರ್‌ ಪಾತ್ರ ಮಾಡಿದ್ದೆ. ರವೀನಾ ಟಂಡನ್‌ ಮತ್ತು ಮನೋಜ್ ಬಾಜಪೇಯಿ ಅವರು ಟೇಬಲ್‌ನಲ್ಲಿ ಕುಳಿತಿದ್ದ ವೇಳೆ ಅವರಿಂದ ಆರ್ಡರ್‌ ಪಡೆಯುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದೆ' ಎಂದು ಹೇಳಿದ್ದಾರೆ.

ಮುಂದುವರಿದು, 'ಆ ಪಾತ್ರಕ್ಕಾಗಿ ನನಗೆ ₹ 2,500 ನೀಡುವುದಾಗಿ ಹೇಳಿದ್ದರು. ಆದರೆ, ಆ ಹಣಕ್ಕಾಗಿ ನಾನು 6–7 ತಿಂಗಳು ಕಚೇರಿಗೆ ಅಲೆದಿದ್ದೆ. ಆದಾಗ್ಯೂ ನನಗೆ ಆ ಹಣ ಸಿಗಲಿಲ್ಲ. ಆದರೆ, ಅಲ್ಲಿ ಊಟವಂತೂ ಸಿಗುತ್ತಿತ್ತು. ಅದಾದ ನಂತರ ನಾನು ಬುದ್ದಿವಂತಿಕೆಯಿಂದ ಊಟದ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಹೋಗುತ್ತಿದ್ದೆ. ನನ್ನ ಸ್ಥಿತಿಯನ್ನು ನೋಡಿ ಅಲ್ಲಿನವರು 'ಊಟ ಆಯ್ತಾ? ನಿನಗೆ ಹಣ ಸಿಗೋದಿಲ್ಲ. ಆದರೆ, ಊಟ ಮಾಡು' ಎನ್ನುತ್ತಿದ್ದರು. ಹಾಗಾಗಿ ನಾನು ಒಂದೂವರೆ ತಿಂಗಳವರೆಗೆ ಅಲ್ಲಿ ಊಟ ಮಾಡಿದೆ. ನನ್ನ ಹಣವನ್ನು ಆ ರೀತಿ ಭರಿಸಿಕೊಂಡೆ' ಎಂದು ನೆನಪಿಸಿಕೊಂಡಿದ್ದಾರೆ.

ರಾಷ್ಟ್ರೀಯ ನಾಟಕ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಸಿದ್ದಿಕಿ, 'ಶೂಲ್‌' ಸಿನಿಮಾಗೂ ಮುನ್ನ ಅಮೀರ್‌ ಖಾನ್‌ ಅಭಿನಯದ 'ಸರ್ಫರೋಶ್‌'ಸಿನಿಮಾದಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದರು. ಅದಾದ ಬಳಿಕ ಸಂಜಯ್‌ ದತ್‌ ನಟನೆಯ 'ಮುನ್ನಾ ಭಾಯ್‌ ಎಂಬಿಬಿಎಸ್‌' ನಂತಹ ಮತ್ತಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ಅವುಗಳಲ್ಲಿ ತಾವು ನಟಿಸಿರುವ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸದ್ಯ ಸಿದ್ದಿಕಿ, ಹಾಸ್ಯ ಪ್ರಧಾನ ಚಿತ್ರ 'ಜೋಗಿರಾ ಸಾರಾ ರಾ ರಾ'ದಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ಅವರು 'ಸೀರಿಯಸ್‌ ಮೆನ್‌' ಸಿನಿಮಾದಲ್ಲಿನ ನಟನೆಗಾಗಿ 'ಅತ್ಯುತ್ತಮ ನಟ' ವಿಭಾಗದಲ್ಲಿ ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT