ಸೋಮವಾರ, ಮಾರ್ಚ್ 30, 2020
19 °C

‘ಸೈಕೋ’ ನಿರ್ದೇಶಕರ ಹೊಸ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನದು ಮೌಖಿಕ ಕಾವ್ಯ ಪರಂಪರೆ. ಕನ್ನಡ ಚಿತ್ರರಂಗದಲ್ಲಿ ಇಂದಿಗೂ‌‌‌ ಮಾದಪ್ಪನ‌ ಮಹಿಮೆ ಸಾರುವ ಹಲವು ಹಾಡುಗಳನ್ನು ಬಳಸಲಾಗಿದೆ. ಒಂದು ದಶಕದ‌ ಹಿಂದೆ ತೆರೆಕಂಡ ‘ಸೈಕೋ’ ಚಿತ್ರದಲ್ಲಿ ರಘು ದೀಕ್ಷಿತ್ ಕಂಠಸಿರಿಯಲ್ಲಿ ಮೂಡಿಬಂದ ‘ನಿನ್ನ ಪೂಜೆಗೆ ಬಂದೇ ಮಾದೇಶ್ವರ...’ ಹಾಡು ಮೋಡಿ ಮಾಡಿತ್ತು.

ಅಂದಹಾಗೆ ಈ ಚಿತ್ರ‌ ನಿರ್ದೇಶಿಸಿದ್ದು ವಿ. ದೇವದತ್ತ. ಈ ಚಿತ್ರದ ಬಳಿಕ ಅವರು ನಿರ್ದೇಶನದಿಂದ ಬಿಡುವು ಪಡೆದಿದ್ದರು. ಈಗ ‘s’ ಎಂಬ ಶೀರ್ಷಿಕೆಯ‌ ಚಿತ್ರದ ಮೂಲಕ ಮತ್ತೆ‌ ನಿರ್ದೇಶನದ ಹಾದಿಗೆ ಹೊರಳಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅವರೇ‌ ನಿಭಾಯಿಸಿದ್ದಾರೆ. ಇದು ಯೂತ್ ಫುಲ್ ಲವ್ ಸ್ಟೋರಿಯ ಕಥಾನಕ. ಏಪ್ರಿಲ್‌ನಲ್ಲಿ ಸಿನಿಮಾದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ನಿರ್ಧರಿಸಿದೆ. ಆದರೆ, ಕೊರೊನಾ ಸೋಂಕಿನ‌ ಭೀತಿ ಕಡಿಮೆಯಾದ ಬಳಿಕವಷ್ಟೇ ಶೂಟಿಂಗ್ ಆರಂಭಿಸುವ ಸಾಧ್ಯತೆಯಿದೆ.

ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರದ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ಪೂರ್ಣಗೊಳಿಸುವ ಇರಾದೆ ಚಿತ್ರತಂಡದ್ದು. ಸಿನಿಮಾದಲ್ಲಿ ಎರಡು ಹಾಡುಗಳಿದ್ದು, ಮಡಿಕೇರಿ ಹಾಗೂ ಚಿಕ್ಕಮಗಳೂರಿನಲ್ಲಿ ಇವುಗಳ ಚಿತ್ರೀಕರಣಕ್ಕೆ ಯೋಜನೆ ರೂಪಿಸಿದೆ. ಇತ್ತೀಚೆಗೆ ತೆರೆಕಂಡ ‘ಒಂದು ಶಿಕಾರಿಯ ಕಥೆ’ ಚಿತ್ರದಲ್ಲಿ ನಟಿಸಿದ್ದ ಅಭಿಮನ್ಯು ಪ್ರಜ್ವಲ್ ಅವರೇ ಇದರ ನಾಯಕ. ಅದ್ವಿತಿ ಶೆಟ್ಟಿ ಅವರಿಗೆ ಜೋಡಿಯಾಗಿದ್ದಾರೆ. ಶ್ರೀಮಹಾಬಲ ಕ್ರಿಯೇಷನ್ಸ್ ಮೂಲಕ ನಾಗರಾಜು ಕೆ.ವಿ. ಇದಕ್ಕೆ ಬಂಡವಾಳ ಹೂಡಿದ್ದಾರೆ. ಸಭಾಕುಮಾರ್ ಅವರ ಕ್ಯಾಮೆರಾ ಕೈಚಳಕ‌ ಇರಲಿದೆ. ಪ್ರದೀಪ್ ವರ್ಮ ಸಂಗೀತ ಸಂಯೋಜಿಸಲಿದ್ದಾರೆ‌. ಬಿ.ಎಸ್. ಕೆಂಪರಾಜು ಅವರು ಸಂಕಲನ ನಿರ್ವಹಿಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)