ಗುರುವಾರ , ಮೇ 13, 2021
16 °C

ಆಸ್ಕರ್‌ ಪುರಸ್ಕೃತೆ, ಹಿರಿಯ ನಟಿ ಒಲಿಂಪಿಯಾ ಡುಕಾಕಿಸ್‌ ನಿಧನ

ಎಪಿ Updated:

ಅಕ್ಷರ ಗಾತ್ರ : | |

Prajavani

ಮೇಪಲ್‌ವುಡ್‌ (ಅಮೆರಿಕ): ರಂಗಭೂಮಿ ಮತ್ತು ಹಾಲಿವುಡ್‌ನ ಬೆಳ್ಳಿತೆರೆಯ ಹಿರಿಯ ನಟಿ ಒಲಿಂಪಿಯಾ ಡುಕಾಕಿಸ್‌ (89) ಅವರು ಶನಿವಾರ ನ್ಯೂಯಾರ್ಕ್‌ನಲ್ಲಿ ನಿಧನರಾದರು. ಕೆಲವು ತಿಂಗಳುಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಮೆಸಾಚುಸೆಟ್ಸ್‌ನ ಲೋವೆಲ್‌ನಲ್ಲಿ ಜನಿಸಿದ್ದ ಡುಕಾಕಿಸ್‌, ಬಾಲ್ಯದಿಂದಲೂ ತಾವು ನಟಿ ಆಗಬೇಕು, ಅದೇ ಶಿಕ್ಷಣ ಪಡೆಯಬೇಕು ಎಂದು ಹಂಬಲಿಸಿದ್ದರು. ನ್ಯಾಷನಲ್ ಫೌಂಡೇಶನ್ ಫಾರ್ ಇನ್ಫಾಂಟೈಲ್ ಪ್ಯಾರಾಲಿಸಿಸ್‌ ಸಂಸ್ಥೆಯಿಂದ ಪಡೆದ ವಿದ್ಯಾರ್ಥಿವೇತನದಿಂದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಫಿಸಿಕಲ್‌ ಥೆರಪಿ ಕೋರ್ಸನ್ನು ಅಧ್ಯಯನ ಮಾಡಿದರು.

ಸ್ನಾತಕೋತ್ತರ ಪದವಿ ಬಳಿಕ ಅವರು ಪಶ್ಚಿಮ ವರ್ಜೀನಿಯಾದ ಮಾರ್ಮೆಟ್‌ನಲ್ಲಿರುವ ಆಸ್ಪತ್ರೆಯಲ್ಲಿ ಮತ್ತು ಬೋಸ್ಟನ್‌ನಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದರು.

ಎರಡು ದಶಕಗಳ ಕಾಲ ನ್ಯೂಜೆರ್ಸಿ ಮೋಂಟ್‌ಕ್ಲೇರ್‌ನಲ್ಲಿ‌ ನಾಟಕ ಕಂಪನಿಯನ್ನು ನಡೆಸಿದ್ದರು.

ರೊಮ್ಯಾಂಟಿಕ್‌ ಹಾಸ್ಯ ಪ್ರಧಾನ ಚಿತ್ರ ‘ಮೂನ್‌ ಸ್ಟ್ರಕ್’ನಲ್ಲಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕಾಗಿ ಅವರಿಗೆ ಆಸ್ಕರ್‌ ಪ್ರಶಸ್ತಿ ಒಲಿದಿತ್ತು. ಹೆಚ್ಚಾಗಿ ತಾಯಿ, ಪೋಷಕ ಪಾತ್ರಗಳ ಮೂಲಕವೇ ಅವರು ಗಮನ ಸೆಳೆದಿದ್ದರು. ಸುಮಾರು 62 ಚಿತ್ರಗಳು, 51 ಟಿವಿ ಸರಣಿ, ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದರು. 

ಡುಕಾಕಿ ಅವರಿಗೆ ಆಸ್ಕರ್‌ ದೊರೆತ ಹಿನ್ನೆಲೆ ಹಲವು ಅಚ್ಚರಿಯ ಘಟನೆಗಳಿಂದ ಕೂಡಿದೆ. ಲೇಖಕ ನೋರಾ ಎಫ್ರಾನ್ ಅವರು ಎಫ್ರಾನ್ ಅವರ ಪುಸ್ತಕ ‘ಹಾರ್ಟ್ ಬರ್ನ್’ ಚಿತ್ರದಲ್ಲಿ ಮೆರಿಲ್ ಸ್ಟ್ರೀಪ್ ಅವರ ತಾಯಿಯಾಗಿ ನಟಿಸಬೇಕೆಂದು ಶಿಫಾರಸು ಮಾಡಿದ್ದರು. ಡುಕಾಕಿಸ್‌ ಅವರು ಆ ಚಿತ್ರದಲ್ಲಿ ಪಾತ್ರವನ್ನೇನೋ ಪಡೆದರು. ಆದರೆ ಅಂತಿಮವಾಗಿ ಆ ದೃಶ್ಯಗಳನ್ನೇ ತೆಗೆದುಹಾಕಲಾಯಿತು.

ನಿರ್ದೇಶಕ ಮೈಕ್ ನಿಕೋಲ್ಸ್ ಅವರ ಹಿಟ್‌ ಚಿತ್ರ ‘ಸೋಷಿಯಲ್‌ ಸೆಕ್ಯುರಿಟಿ’ಯಲ್ಲಿ ಅಭಿನಯಿಸಿದರು. ಆ ಅಭಿನಯವನ್ನು ಕಂಡ ನಿರ್ದೇಶಕ ನಾರ್ಮನ್ ಜ್ಯೂಸಿಸನ್ ಅವರಿಗೆ ‘ಮೂನ್‌ಸ್ಟ್ರಕ್’ನಲ್ಲಿ ನಟಿಸಲು ಅವಕಾಶ ಕೊಟ್ಟರು. ಈ ಪಾತ್ರಕ್ಕೆ 1988ರಲ್ಲಿ ಆಸ್ಕರ್‌ ಪ್ರಶಸ್ತಿ ಒಲಿದಿತ್ತು.

ಅವರು ಈ ಗೆಲುವನ್ನು ‘ಡುಕಾಕಿಯ ವರ್ಷ’ ಎಂದು ಉಲ್ಲೇಖಿಸಿದ್ದರು. ಆ ಅವಧಿಯಲ್ಲಿ ಮೆಸಾಚುಯೆಟ್ಸ್‌ನ ಗವರ್ನರ್‌ ಆಗಿದ್ದವರು ಒಲಿಂಪಿಯಾ ಅವರ ಸೋದರ ಸಂಬಂಧಿ ಮೈಕೆಲ್‌ ಡುಕಾಕಿಸ್‌. ಆಗ ಡೆಮಾಕ್ರೆಟಿಕ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದರು.

ಆಸ್ಕರ್‌ ಪ್ರಶಸ್ತಿಯ ಸ್ಮರಣಿಕೆ (ಪ್ರತಿಮೆ)ಯನ್ನು 1989ರಲ್ಲಿ ಕಳವು ಮಾಡಿದ ಘಟನೆಯೂ ನಡೆದಿತ್ತು.

ಆಡಂಬರವಿಲ್ಲದ ಸರಳ ಜೀವನ ನಮ್ಮದು. ನಾವು ಆ ಪ್ರಶಸ್ತಿಯನ್ನು ಅಡುಗೆ ಮನೆಯಲ್ಲಿ ಇಟ್ಟಿದ್ದೆವು ಎಂದು ಅವರ ‍ಪತಿ, ನಟ ಲೂಯಿಸ್ ಜೋರಿಕ್‌ ಹೇಳಿದ್ದರು. ಜೋರಿಕ್‌ ಅವರು 2018ರಲ್ಲಿ ನಿಧನರಾಗಿದ್ದರು. ಜೋರಿಕ್‌ – ಡುಕಾಕಿಸ್‌ ದಂಪತಿಗೆ ಮೂವರು ಮಕ್ಕಳು ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು