ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವ್ಯಾಪಿ ಒಟಿಟಿಯಲ್ಲಿ ಹರಡೀತೆ ಕನ್ನಡದ ಕಂಪು?

Last Updated 7 ಜುಲೈ 2020, 1:17 IST
ಅಕ್ಷರ ಗಾತ್ರ

ಒಟಿಟಿ ವೇದಿಕೆಗಳಿಗೆ ಚಂದಾದಾರರಾಗಿರುವ ಭಾರತೀಯರು ಪ್ರತಿದಿನ ಸರಾಸರಿ 70 ನಿಮಿಷಗಳನ್ನು ಆ ವೇದಿಕೆಗಳ ಮೇಲೆ ವಿನಿಯೋಗಿಸುತ್ತಿದ್ದಾರೆ ಎಂದು ಈ ವರ್ಷದ ಫೆಬ್ರುವರಿಯಲ್ಲಿ ಬಿಡುಗಡೆಯಾದ ವರದಿಯೊಂದು ಹೇಳಿದೆ. ಲಾಕ್‌ಡೌನ್‌ ಅವಧಿಯಲ್ಲಿ ದೇಶದ ಒಟಿಟಿ ವೇದಿಕೆಯೊಂದರ ಚಂದಾದಾರರ ಪ್ರಮಾಣದಲ್ಲಿ ಶೇಕಡ 80ರಷ್ಟು ಹೆಚ್ಚಳ ಆಗಿದ್ದಿದೆ ಎಂದು ಫೋಬ್ಸ್‌ ಪತ್ರಿಕೆ ವರದಿ ಮಾಡಿದೆ.

2020ರ ಅಂತ್ಯದ ವೇಳೆಗೆ ದೇಶದ ಒಟಿಟಿ ಚಂದಾದಾರರ ಸಂಖ್ಯೆಯು 50 ಕೋಟಿಗೆ ತಲುಪಬಹುದು ಎಂದು ಅರ್ನ್ಸ್ಟ್‌ & ಯಂಗ್ ವರದಿ ಅಂದಾಜಿಸಿದೆ. 2023ರ ವೇಳೆಗೆ ದೇಶದ ಒಟಿಟಿ ಮಾರುಕಟ್ಟೆ ಗಾತ್ರವು ₹ 13 ಸಾವಿರ ಕೋಟಿ ಆಗಬಹುದು ಎಂದು ಕೆಪಿಎಂಜಿ ವರದಿ ಅಂದಾಜಿಸಿದೆ.

‘ಇಂದು ಅಮೆಜಾನ್‌ ಪ್ರೈಮ್‌ನಲ್ಲಿ ಲವ್ ಮಾಕ್ಟೇಲ್‌ ನೋಡಿದೆ, ಜೀ5ನಲ್ಲಿ ಕುರುಕ್ಷೇತ್ರ ವೀಕ್ಷಿಸಿದೆ’ ಎಂಬ ಮಾತುಗಳನ್ನು ಲಾಕ್‌ಡೌನ್‌ ಅವಧಿಯಲ್ಲಿ ಬಹಳಷ್ಟು ಜನ ಹೇಳಿರಬಹುದು, ಕೇಳಿರಬಹುದು. ಇವೆಲ್ಲವೂ ದೇಶದ ಒಟಿಟಿ ಮಾರುಕಟ್ಟೆ ಅದೆಷ್ಟು ಅಗಾಧವಾಗಿ ಬೆಳೆದಿದೆ, ಬೆಳೆಯುತ್ತಿದೆ ಎಂಬುದನ್ನು ಹೇಳುತ್ತಿವೆ.

ಆದರೆ, ಇಷ್ಟು ದೊಡ್ಡದಾದ ಮಾರುಕಟ್ಟೆಯಲ್ಲಿ ಕನ್ನಡದ ಕಲರವ ಮಾತ್ರ ಆಶಾದಾಯಕವಾಗಿ ಇಲ್ಲ. ಒಟಿಟಿ ವೇದಿಕೆಗಳು ಮುಖ್ಯವಾಗಿ ಎರಡು ರೀತಿಗಳಲ್ಲಿ ವೀಕ್ಷಕರಿಗೆ ಮನರಂಜನಾ ಕಾರ್ಯಕ್ರಮ ನೀಡುತ್ತವೆ. 1) ಸಿನಿಮಾ ಅಥವಾ ವೆಬ್ ಸರಣಿಗಳನ್ನು ತಾವೇ ಸಿದ್ಧಪಡಿಸಿ ವೀಕ್ಷಕರ ಮುಂದಿರಿಸುವುದು. 2) ಅದಾಗಲೇ ಸಿನಿಮಂದಿರಗಳಲ್ಲಿ ಬಿಡುಗಡೆ ಕಂಡ ಸಿನಿಮಾಗಳ ಡಿಜಿಟಲ್ ಹಕ್ಕು ಖರೀದಿಸಿ, ಆ ಸಿನಿಮಾವನ್ನು ತಮ್ಮ ಮೂಲಕ ವೀಕ್ಷಕರಿಗೆ ತಲುಪಿಸುವುದು.

ಸಿನಿಮಾ ಮಂದಿರಗಳ ಮೂಲಕ ಬಿಡುಗಡೆ ಆದ ಸಿನಿಮಾಗಳನ್ನು ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್, ಜೀ5ನಂತಹ ಒಟಿಟಿ ವೇದಿಕೆಗಳು ತಮ್ಮ ಮೂಲಕ ವೀಕ್ಷಕರಿಗೆ ತಲುಪಿಸುವ ಕೆಲಸ ಮಾಡುತ್ತಿವೆ. ಆದರೆ, ವೆಬ್ ಒರಿಜಿನಲ್ (ಒಟಿಟಿ ವೇದಿಕೆಗಳಿಗಾಗಿಯೇ ಸಿದ್ಧಪಡಿಸಿದ) ಸಿನಿಮಾಗಳು ಅಥವಾ ವೆಬ್ ಸರಣಿಗಳು ಕನ್ನಡದಲ್ಲಿ ತೀರಾ ಕಡಿಮೆ. ಇದಕ್ಕೆ ಕಾರಣಗಳು ಹಲವು.

‘ಕನ್ನಡದಲ್ಲಿ ಒಟಿಟಿ ವೇದಿಕೆಗಳಿಗಾಗಿ ಸಿದ್ಧಪಡಿಸಿದ ವೆಬ್ ಸರಣಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.ಸಖತ್ ಸ್ಟುಡಿಯೊ ಸೇರಿದಂತೆ ಕೆಲವು ಆಸಕ್ತರ ಗುಂಪುಗಳು ಕನ್ನಡದಲ್ಲಿ ಒಂದಿಷ್ಟು ವೆಬ್ ಸರಣಿಗಳನ್ನು ಮಾಡಿಯೂಟ್ಯೂಬ್‌ ಮೂಲಕ ಉಚಿತವಾಗಿ ವೀಕ್ಷಕರಿಗೆ ನೀಡಿವೆ’ ಎನ್ನುತ್ತಾರೆ ನಿರ್ದೇಶಕ ಬಿ.ಎಂ. ಗಿರಿರಾಜ್. ಇವರು ನಿರ್ದೇಶಿಸಿದ ‘ರಕ್ತಚಂದನ’ ವೆಬ್ ಸರಣಿಯು ಕನ್ನಡದ ಆರಂಭಿಕ ವೆಬ್ ಒರಿಜಿನಲ್‌ಗಳಲ್ಲಿ ಒಂದು.

‘ಕನ್ನಡದಲ್ಲಿ ವೆಬ್ ಒರಿಜಿನಲ್‌ಗಳ ನಿರ್ಮಾಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಣ ಹೂಡಿಕೆ ಆಗುತ್ತಿಲ್ಲ. ಇದಕ್ಕೆ ಒಂದು ಕಾರಣ, ಕನ್ನಡದಲ್ಲಿ ವೆಬ್ ಒರಿಜಿನಲ್ ವೀಕ್ಷಿಸುವವರಿಂದ ಹೆಚ್ಚಿನ ಆದಾಯ ಇಲ್ಲದಿರುವುದು. ಕನ್ನಡದಲ್ಲಿ ಕಾಸು ಕೊಟ್ಟು ಒಳ್ಳೆಯ ಮನರಂಜನಾ ಕಾರ್ಯಕ್ರಮ ವೀಕ್ಷಿಸುವ ದೊಡ್ಡ ವರ್ಗ ಇಲ್ಲ. ₹ 20 ಲಕ್ಷ ಖರ್ಚು ಮಾಡಿ ಕನ್ನಡದಲ್ಲಿ ವೆಬ್ ಒರಿಜಿನಲ್ ನಿರ್ಮಾಣ ಮಾಡಿ, ಅದರಿಂದ ₹ 30 ಲಕ್ಷ ಅಥವಾ ₹ 50 ಲಕ್ಷ ಸಂಪಾದಿಸುವುದಕ್ಕಿಂತ, ₹ 10 ಕೋಟಿ ಖರ್ಚು ಮಾಡಿ ಅಷ್ಟೇ ಶ್ರಮ ವಹಿಸಿ ಹಿಂದಿಯಲ್ಲಿ ವೆಬ್ ಸರಣಿ ರೂಪಿಸಿದರೆ ದೊಡ್ಡ ಮಟ್ಟದಲ್ಲಿ ಲಾಭ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಒಟಿಟಿ ವೇದಿಕೆಗಳ ಬಳಿ ಇರುತ್ತವೆ’ ಎಂದು ಗಿರಿರಾಜ್ ವಿವರಿಸುತ್ತಾರೆ.

ಒಳ್ಳೆಯ ಕಾರ್ಯಕ್ರಮಗಳನ್ನು ವೀಕ್ಷಿಸುವ ಅಭಿರುಚಿ ಇರುವವರ ದೊಡ್ಡ ಬಳಗ ಕನ್ನಡದಲ್ಲಿ ಸೃಷ್ಟಿಯಾದರೆ, ಕನ್ನಡದಲ್ಲಿ ವೆಬ್ ಒರಿಜಿನಲ್ ಸಿದ್ಧಪಡಿಸಲು ನಿರ್ಮಾಪಕರು ಮುಂದೆ ಬರಬಹುದು.

ಕನ್ನಡದ ಮೊದಲ ವೆಬ್ ಒರಿಜಿನಲ್‌ ಸಿನಿಮಾ ‘ಭಿನ್ನ’. ಆದರ್ಶ್ ಈಶ್ವರಪ್ಪ ನಿರ್ದೇಶನದ ಈ ಸಿನಿಮಾ ಜೀ5 ಮೂಲಕ ಬಿಡುಗಡೆ ಆಗಿದ್ದು 2019ರ ಅಕ್ಟೋಬರ್‌ನಲ್ಲಿ. ‘ನಾನು ಸಿನಿಮಾ ಮಾಡಿದ್ದು ಸಿನಿಮಾ ಮಂದಿರಗಳ ಮೂಲಕ ಬಿಡುಗಡೆ ಮಾಡಲು. ಆದರೆ ಒಟಿಟಿ ವೇದಿಕೆಯಿಂದ ಬೇಡಿಕೆ ಬಂದ ಕಾರಣ, ಅದರ ಮೂಲಕವೇ ಬಿಡುಗಡೆ ಮಾಡಿದೆ. ಆಗ ಸಿನಿಮಾ ಉದ್ಯಮದ ಹಲವರು ನನಗೆ ಕರೆ ಮಾಡಿ, ತಾವೂ ಸಿನಿಮಾಗಳನ್ನು ಒಟಿಟಿ ಮೂಲಕ ಬಿಡುಗಡೆ ಮಾಡಲು ಉತ್ಸುಕರಾಗಿರುವುದಾಗಿ ಹೇಳಿದ್ದರು’ ಎಂದು ಆದರ್ಶ್ ನೆನಪಿಸಿಕೊಳ್ಳುತ್ತಾರೆ.

ಕನ್ನಡದ ವೀಕ್ಷಕರು ಒಟಿಟಿ ವೇದಿಕೆಗಳ ಮೂಲಕ ತೆಲುಗು, ತಮಿಳು ಕಾರ್ಯಕ್ರಮಗಳನ್ನು ಜಾಸ್ತಿ ವೀಕ್ಷಿಸುತ್ತಾರೆ. ಹಾಗಾಗಿ, ಕನ್ನಡದ ಕಾರ್ಯಕ್ರಮಗಳ ಮೇಲೆ ಹೆಚ್ಚಿನ ಹೂಡಿಕೆ ಆಗುತ್ತಿಲ್ಲ ಎಂಬ ಮಾತು ಸಿನಿಮಾ ಉದ್ಯಮದವರಿಂದಲೇ ಬಂದಿದ್ದಿದೆ.‘ಕನ್ನಡದಲ್ಲಿ ವೆಬ್ ಒರಿಜಿನಲ್ಸ್‌ಗಳಿಗೆ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ ಎಂದು ಹೇಳಬಾರದು. ಒಟಿಟಿ ವೇದಿಕೆಗಳು ಕನ್ನಡದಲ್ಲಿ ಒಂದಿಷ್ಟು ವೆಬ್ ಒರಿಜಿನಲ್ಸ್ ಸಿದ್ಧಪಡಿಸಿ, ಜನರ ಮುಂದಿರಿಸಬೇಕು. ಆಗ ಅವರಿಗೆ ಇಲ್ಲಿ ವೀಕ್ಷಕರು ಎಷ್ಟಿದ್ದಾರೆ ಎಂಬುದು ಗೊತ್ತಾಗುತ್ತದೆ’ ಎನ್ನುತ್ತಾರೆ ಆದರ್ಶ್.

ಲಾಕ್‌ಡೌನ್‌ ಆರಂಭಕ್ಕೂ ಮೊದಲು ಚಿತ್ರಮಂದಿರಗಳಲ್ಲಿ ಇದ್ದ ಸಿನಿಮಾಗಳಲ್ಲಿ ‘ಲವ್‌ ಮಾಕ್ಟೇಲ್‌’ ಕೂಡ ಒಂದಾಗಿತ್ತು. ಇದು ಚೆನ್ನಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಎಲ್ಲರಿಗೂ ಇದನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಇದು ಅಮೆಜಾನ್‌ ಪ್ರೈಮ್‌ ಮೂಲಕ ವೀಕ್ಷಣೆಗೆ ಲಭ್ಯವಾದಾಗ ಇನ್ನಷ್ಟು ಜನ ನೋಡಿದರು. ಇದೇ ಮಾತನ್ನು ‘ದಿಯಾ’ ಚಿತ್ರದ ವಿಚಾರದಲ್ಲಿಯೂ ಹೇಳಬಹುದು – ಸಿನಿಮಂದಿರಗಳ ಮೂಲಕ ಹೆಚ್ಚಿನ ಜನರನ್ನು ತಲುಪದಿದ್ದ ‘ದಿಯಾ’, ಅಮೆಜಾನ್ ಪ್ರೈಮ್ ಮೂಲಕ ದೊಡ್ಡ ಸಂಖ್ಯೆಯಲ್ಲಿ ವೀಕ್ಷಕರನ್ನು ತಲುಪಿತು.

‘ಒಟಿಟಿಗಳಿಂದಾಗಿಸಿನಿಮಾ ಉದ್ಯಮಕ್ಕೆ ಒಳ್ಳೆಯದೇ ಆಗುತ್ತದೆ. ಹೆಚ್ಚು ಜನರನ್ನು ತಲುಪಲು ಬಹಳ ಒಳ್ಳೆಯ ಮಾಧ್ಯಮ ಒಟಿಟಿ’ ಎನ್ನುವುದು ಕಾರ್ಯಕಾರಿ ನಿರ್ಮಾಪಕ ಕೂಡ ಆಗಿರುವ ನಟ ಪ್ರಮೋದ್ ಶೆಟ್ಟಿ ಅವರ ಅಭಿಮತ. ‘ಒಟಿಟಿಗಳು ಎಷ್ಟೇ ಜನಪ್ರಿಯ ಆದರೂ ಸಿನಿಮಂದಿರಗಳ ಬಾಗಿಲು ಮುಚ್ಚುವುದಿಲ್ಲ. ಸಿನಿಮಾ ಮಂದಿರಕ್ಕೆ ಬಂದು ಸಿನಿಮಾ ನೋಡುವವರು ಬಂದೇ ಬರುತ್ತಾರೆ. ಅಲ್ಲಿಗೆ ಬರಲು ಆಗದಿದ್ದವರು ಒಟಿಟಿ ಮೂಲಕ ಸಿನಿಮಾ ನೋಡುತ್ತಾರೆ. ಒಟ್ಟಿನಲ್ಲಿ, ಸಿನಿಮಾ ವೀಕ್ಷಕರ ನೆಲೆ ವಿಸ್ತಾರ ಆಗುತ್ತದೆ. ಆದರೆ, ಒಟಿಟಿ ವೇದಿಕೆಗಳು ಕನ್ನಡದಂತಹ ಪ್ರಾದೇಶಿಕ ಭಾಷೆಯ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎನ್ನುತ್ತಾರೆ ಶೆಟ್ಟಿ.

‘ಒಟಿಟಿ ವೇದಿಕೆಗಳು ಎಲ್ಲರ ಕೈಗೂ ಸಿಕ್ಕಿವೆ ಎನ್ನುವ ಭಾವನೆಯಲ್ಲಿ ನಾವು ಇದ್ದೇವೆ. ಮಧ್ಯಮ ವರ್ಗದವರಿಗೆ ಅದು ದಕ್ಕಿರಬಹುದು. ಆದರೆ, ಮಧ್ಯಮ ವರ್ಗವೊಂದೇ ಎಲ್ಲವೂ ಅಲ್ಲ. ಎಲ್ಲರೂ ಒಟ್ಟಾಗಿ ಸಿನಿಮಾ ವೀಕ್ಷಿಸಿದಾಗ ಸಿಗುವ ಖುಷಿಯನ್ನು ಒಟಿಟಿ ನೀಡಲು ಸಾಧ್ಯವಿಲ್ಲ. ಒಟಿಟಿ ಇರುವುದು ಖಾಸಗಿ ವೀಕ್ಷಣೆಗೆ ಮಾತ್ರ. ಒಟಿಟಿಗಳು ಸಿನಿಮಾ ಮಂದಿರಗಳಿಗೆ ಪರ್ಯಾಯವಲ್ಲ; ಅವು ಪೂರಕ ವೇದಿಕೆಗಳು ಮಾತ್ರ’ ಎಂಬ ಅಭಿಪ್ರಾಯವನ್ನು ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ಈ ಹಿಂದೆ ‘ಪ್ರಜಾವಾಣಿ’ ಜೊತೆ ವ್ಯಕ್ತಪಡಿಸಿದ್ದರು.

ಎರಡು ಸಿನಿಮಾಗಳು
ಪುನೀತ್ ರಾಜ್‌ಕುಮಾರ್‌ ನಿರ್ಮಾಣದ ಎರಡು ಸಿನಿಮಾಗಳು (ಲಾ ಮತ್ತು ಫ್ರೆಂಚ್ ಬಿರಿಯಾನಿ) ಅಮೆಜಾನ್‌ ಪ್ರೈಮ್‌ ಮೂಲಕ ನೇರವಾಗಿ ತೆರೆಗೆ ಬರುತ್ತಿವೆ. ಇವು ಬಿಡುಗಡೆ ಆದ ನಂತರ, ಕನ್ನಡದಲ್ಲಿ ಒಟ್ಟು ಮೂರು ಸಿನಿಮಾಗಳು ನೇರವಾಗಿ ಒಟಿಟಿ ಮೂಲಕ ತೆರೆಗೆ ಬಂದಂತೆ ಆಗುತ್ತದೆ.

ಶಿವರಾಜ್‌ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್‌ ಕುಮಾರ್ ನಿರ್ಮಾಣದ ‘ಹೇಟ್ ಯೂ ರೋಮಿಯೊ’ ವೆಬ್ ಸರಣಿ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಇದಲ್ಲದೆ, ‘ಬೈ ಮಿಸ್ಟೇಕ್’ ಮತ್ತು ‘ಹನಿಮೂನ್’ ಎಂಬ ಸರಣಿಗಳು ಸಿದ್ಧವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT