ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ತೆಲುಗಿನ ದಲಿತ ಕಥಾನಕ ‘ಪಲಾಸ’

ಅಕ್ಷರ ಗಾತ್ರ
ADVERTISEMENT
""

ದಲಿತರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಇಂದಿನ ವ್ಯವಸ್ಥೆ ಹೇಗೆ ಕಸಿದುಕೊಳ್ಳುತ್ತಿದೆ ಎನ್ನುವುದನ್ನೂ ‘ಪಲಾಸ’ ಸಿನಿಮಾ ಹೇಳುತ್ತದೆ. ಅಂಬೇಡ್ಕರ್‌ ತೋರಿಸಿದ ಮಾರ್ಗದಲ್ಲಿ ನಡೆಯುವ ಅಗತ್ಯವನ್ನು ಹೇಳುತ್ತಲೇ ಪ್ರತೀಕಾರ, ಸಹಬಾಳ್ವೆಯ ಅನಿರ್ವಾಯತೆಯನ್ನೂ ಪ್ರತಿಪಾದಿಸುತ್ತದೆ.

‘ಕತ್ತರಿಸಿದ ವಿನಾಯಕನ ತಲೆಯನ್ನು ಮತ್ತೆ ಜೋಡಿಸೋಕೆ ದೇವರೇ ಬರ್ತಾನೆ. ಏಕಲವ್ಯ ಕತ್ತರಿಸಿಕೊಂಡ ಬೆರಳು ಜೋಡಿಸೋಕೆ ಯಾವ ದೇವರೂ ಬರಲಿಲ್ಲವೇಕೆ ಅನ್ನೋದು ನಿಮಗೆ ಅರ್ಥವಾದಾಗ ನಿಮ್ಮಲ್ಲಿ ಬದಲಾವಣೆ ಸಾಧ್ಯ...’

-ಹೆಂಡತಿ ಹಾಗೂ ಅಣ್ಣನನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುವ ಹಠಕ್ಕೆ ಬಿದ್ದ ದಲಿತ ಯುವಕ ಮೋಹನರಾವ್‌ ಮತ್ತು ಅದೇ ವರ್ಗದಿಂದ ಬಂದ ಪೊಲೀಸ್‌ ಅಧಿಕಾರಿ ಸೆಬಾಸ್ಟಿನ್‌ ನಡುವೆ ನಡೆಯುವ ಈ ಸಂಭಾಷಣೆ ಇತ್ತೀಚೆಗೆ ಬಿಡುಗಡೆ ಆಗಿರುವ ‘ಪಲಾಸ 1978’ ಹೆಸರಿನ ತೆಲುಗು ಸಿನಿಮಾದ್ದು.

‘ಪಲಾಸ’ ಭಾರತೀಯ ಜಾತಿ ವ್ಯವಸ್ಥೆಯ ಕ್ರೂರ ಮುಖಗಳನ್ನು, ಅದು ಆಗಾಗ ಪಡೆದುಕೊಳ್ಳುವ ಹೊಸ ತಿರುವುಗಳನ್ನು, ಅದಕ್ಕೆ ಬಲಿಯಾಗುವ ಕೆಳವರ್ಗದ ಜನರ ನೋವುಗಳನ್ನು ಕಟ್ಟಿಕೊಡುವ ಸಿನಿಮಾ. ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ‘ಪಲಾಸ’ ಬಿಡುಗಡೆ ಆಗಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಈ ಸಿನಿಮಾ ದೊಡ್ಡಮಟ್ಟದಲ್ಲಿ ಜನರ ಗಮನಕ್ಕೆ ಬಂದಂತಿಲ್ಲ. ಅದರ ಬಗ್ಗೆ ಹೆಚ್ಚಿನ ಚರ್ಚೆಯೂ ಆದಂತಿಲ್ಲ.

ದಲಿತರ ಶೋಷಣೆ, ಜಾತಿ ತಾರತಮ್ಯದ ಕಥಾವಸ್ತುವಿನ ಹತ್ತಾರು ಸಿನಿಮಾಗಳು ತೆಲುಗು ಮಾತ್ರವಲ್ಲದೆ ಹಲವು ಭಾರತೀಯ ಭಾಷೆಗಳಲ್ಲಿ ಬಂದಿವೆ. ‘ಪಲಾಸ’, ಅಂಬೇಡ್ಕರ್‌ ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಮಾತ್ರವೇ ಕೆಳವರ್ಗದ ಜನರ ಉದ್ಧಾರ ಸಾಧ್ಯ ಎಂಬ ಆಶಯವನ್ನು ಪರಿಣಾಮಕಾರಿಯಾಗಿ ಧ್ವನಿಸುತ್ತದೆ.

‘ಪಲಾಸ’ ಆಂಧ್ರದ ಕರಾವಳಿ ಜಿಲ್ಲೆ ಶ್ರೀಕಾಕುಳಂನ ಒಂದು ಊರು. ಈ ಊರಲ್ಲಿ 1978ರಿಂದ 2018ರ ಅವಧಿಯಲ್ಲಿ ನಡೆದ ರಾಜಕೀಯ ವಿದ್ಯಮಾನಗಳು, ಅಧಿಕಾರಕ್ಕೆ ಬರಲು ಪಟ್ಟಭದ್ರರು ನಡೆಸುವ ಕುತಂತ್ರಗಳು, ಕೆಳವರ್ಗದ ಜನರನ್ನೇ ಬಳಸಿಕೊಂಡು ನಂತರ ಅವರನ್ನು ತುಳಿಯುವ ಹುನ್ನಾರಗಳು, ಅದಕ್ಕೆ ಬಲಿಯಾಗಿ ನಲುಗುವ ಅಮಾಯಕರ ದುರಂತಗಳನ್ನು ಈ ಸಿನಿಮಾ ಸರಳವಾಗಿ ನಿರೂಪಿಸುತ್ತದೆ.

ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹಾಡುತ್ತ, ಕುಣಿಯುತ್ತ ಜನರನ್ನು ರಂಜಿಸುವ ಪಲಾಸದ ಮೋಹನರಾವ್‌, ರಂಗರಾವ್‌ ಎಂಬ ದಲಿತ ಸೋದರರು ತಮ್ಮ ಮನೆಯ ಹೆಣ್ಣುಮಕ್ಕಳನ್ನು ಕೆಣಕಿದ ಸಾವುಕಾರನ ಮಗನ ಮೇಲೆ ಕೈಮಾಡಿ, ಕಾನೂನು ಕೊಡುವ ಶಿಕ್ಷೆ ಮತ್ತು ಸಾವುಕಾರನ ಸಿಟ್ಟಿನಿಂದ ಪಾರಾಗಲು ಇನ್ನೊಬ್ಬ ಸಾವುಕಾರನ ಆಶ್ರಯ ಪಡೆಯುತ್ತಾರೆ. ರಾಜಕೀಯ ಅಧಿಕಾರ ಪಡೆಯಲು ಈ ಇಬ್ಬರೂ ಒಬ್ಬೊಬ್ಬ ಸಾವುಕಾರರ ಆಶ್ರಯ ಪಡೆಯುತ್ತಾರೆ.

ಅವರು ರಾಜಕೀಯ ಆಧಿಕಾರ ಪಡೆಯಲು ಹಲವು ಕೊಲೆ, ಕ್ರಿಮಿನಲ್‌ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಶಿಕ್ಷೆ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡು ಬದುಕುವಂತಹ ಪರಿಸ್ಥಿತಿಯನ್ನು ತಂದುಕೊಳ್ಳುತ್ತಾರೆ. ಅವರ ದುರಂತ ಬದುಕನ್ನು ಹೇಳುತ್ತಲೇ, ಅವರು ಪ್ರತಿನಿಧಿಸುವ ವರ್ಗಗಳ ಜನರ ಕೆಲ ಸಂತಸ ಕ್ಷಣಗಳನ್ನು, ಸಂಕಟಗಳ ಸರಮಾಲೆಗಳನ್ನು ಅನಾವರಣಗೊಳಿಸುತ್ತ ನೋಡುಗರಲ್ಲಿ ಗಾಢ ವಿಷಾದವನ್ನು ಈ ಸಿನಿಮಾ ಹುಟ್ಟಿಸಿ ಬಿಡುತ್ತದೆ.

ದಲಿತರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಇಂದಿನ ವ್ಯವಸ್ಥೆ ಹೇಗೆ ಕಸಿದುಕೊಳ್ಳುತ್ತಿದೆ ಎನ್ನುವುದನ್ನೂ ಈ ಸಿನಿಮಾ ಹೇಳುತ್ತದೆ. ವ್ಯವಸ್ಥೆಯ ಕ್ರೂರ ಹಿಡಿತದಿಂದ ಅವರು ಹೊರಬರುವ ದಾರಿಗಳನ್ನು ಅನೇಕ ಸಿನಿಮಾಗಳು ಸೂಚಿಸಿವೆ. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಆದರೆ, ‘ಪಲಾಸ’ ಸಿನಿಮಾ ಅಂಬೇಡ್ಕರ್‌ ತೋರಿಸಿದ ಮಾರ್ಗದಲ್ಲಿ ನಡೆಯುವ ಅಗತ್ಯವನ್ನು ಹೇಳುತ್ತಲೇ ಪ್ರತೀಕಾರ ಮತ್ತು ಸಹಬಾಳ್ವೆಯ ಅನಿರ್ವಾಯತೆಯನ್ನೂ ಪ್ರತಿಪಾದಿಸುತ್ತದೆ.

ಈ ಸಿನಿಮಾ ಇಷ್ಟವಾಗುವುದು ಅದರ ಸರಳ, ಸಹಜ ನಿರೂಪಣೆಯಿಂದ. ಶ್ರೀಕಾಕುಳಂ ಭಾಗದ ಜನರು ಆಡುವ ದೇಸಿ ತೆಲುಗು, ಜನಪದ ಹಾಡುಗಳನ್ನೇ ಸಿನಿಮಾದಲ್ಲಿ ಬಳಸಲಾಗಿದೆ. ತೆಲುಗು ಸಿನಿಮಾಗಳಲ್ಲಿ ಢಾಳಾಗಿ ಕಾಣುವ ಅದ್ದೂರಿತನ, ಹಿಂಸೆಯ ವೈಭವೀಕರಣ ಇಲ್ಲ. ಕೊಲೆ, ಹೊಡೆದಾಟದ ದೃಶ್ಯಗಳಿದ್ದರೂ ಅವು ಅಸಹಜ ಅನ್ನಿಸುವುದಿಲ್ಲ.

ಇದರಲ್ಲಿ ನಟಿಸಿರುವ ಕಲಾವಿದರೆಲ್ಲ ಹೊಸಬರು. ಹೊಸಬರನ್ನೇ ಬಳಸಿಕೊಂಡು ನೋಡುಗರಿಗೆ ಸಹ್ಯವಾಗುವ ಸಿನಿಮಾ ನಿರ್ಮಿಸುವುದು ನಿರ್ದೇಶಕನಿಗೆ ದೊಡ್ಡ ಸವಾಲು. ಕರುಣಾ ಕುಮಾರ್‌ ಆ ಸವಾಲನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಇದು ಅವರ ಮೂರನೇ ಸಿನಿಮಾ.

ದಲಿತರ ಮೇಲಿನ ದೌರ್ಜನ್ಯಗಳನ್ನು ವಸ್ತುವಾಗಿಟ್ಟುಕೊಂಡು ನಿರ್ಮಾಣವಾದ ಹಲವು ಸಿನಿಮಾಗಳಿಗೆ ಹೋಲಿಸಿದರೆ ‘ಪಲಾಸ’ ಭಿನ್ನವಾಗಿ ನಿಲ್ಲುತ್ತದೆ. ಸಿನಿಮಾ ಆಪ್ತವಾಗುವುದು ಕೊನೆಯ ಇಪ್ಪತ್ತು ನಿಮಿಷಗಳ ಅವಧಿಯಲ್ಲಿ ಅದು ಕಟ್ಟಿಕೊಡುವ ಸಂದೇಶ ರೂಪದ ದೃಶ್ಯ, ಸನ್ನಿವೇಶಗಳಿಂದ. ಅದರಿಂದಾಗಿ ಸಿನಿಮಾಕ್ಕೆ ಹೊಸತನ ದಕ್ಕಿದೆ. ಚಿತ್ರದ ನಾಯಕ ಮೋಹನರಾವ್‌ ಮತ್ತು ಪೊಲೀಸ್‌ ಅಧಿಕಾರಿ ಸೆಬಾಸ್ಟಿನ್‌ ನಡುವೆ ನಡೆಯುವ ಮಾತುಕತೆಗಳು ಸಿನಿಮಾ ಸಂಭಾಷಣೆಗಳು ಅನ್ನಿಸದೆ ಅವರ ನೋವಿನ ನಿಟ್ಟುಸಿರುಗಳಾಗಿ ಬಿಡುತ್ತವೆ.

‘ನಮ್ಮ ಕಷ್ಟಗಳನ್ನು ಕೇಳೋಕೆ, ನಮ್ಮ ಕುಲದಲ್ಲಿ ಹುಟ್ಟಿದ ಒಬ್ಬ ದೇವರೂ ಇಲ್ಲ’ ಎಂದು ಮೋಹನರಾವ್‌ ಹತಾಶೆಯಿಂದ ಹೇಳುತ್ತಾನೆ.

‘ಊರೊಳಗೆ ಇರೋ ಜನರೆಲ್ಲ ಒಂದಾಗೋದಾದರೆ, ಊರ ಹೊರಗೆ ಬದುಕುವ ನಾವು ಒಂದಾಗೋದರಲ್ಲಿ ತಪ್ಪಿಲ್ಲ... ನನ್ನ ಅಪ್ಪ, ಅಮ್ಮ ಇಬ್ಬರೂ ಊರವರ ಮಲವನ್ನು ತಲೆಯ ಮೇಲೆ ಹೊತ್ತು ಸಾಗಿಸಿದವರು. ನಾನೂ ಅದೇ ಕೆಲಸ ಮಾಡಬಾರದೆಂದು ಅಪ್ಪ ನನ್ನನ್ನು ಕೈಹಿಡಿದು ತಂದು ಶಾಲೆಗೆ ಬಿಟ್ಟ. ಓದಿನಿಂದ ಬಲ ಬರುತ್ತದೆ ಅಂದ. ಶಾಲೆಗೆ ಹೋಗುವಾಗ ದಾರಿಯಲ್ಲಿ ನಿತ್ಯವೂ ಒಬ್ಬ ಮಹಾನುಭಾವನ ಪ್ರತಿಮೆ ನೋಡುತ್ತಿದ್ದೆ. ಅವರು ನಮಗಿಂತ ಹೆಚ್ಚು ಅವಮಾನಗಳನ್ನು ಸಹಿಸಿದರಂತೆ. ಒಂದು ಕೈಯಲ್ಲಿ ಪುಸ್ತಕ ಹಿಡಿದು, ಮುಂದೆ ನಡೆಯಬೇಕಾದ ದಾರಿಯನ್ನು ನಮಗೆ ತೋರಿಸುತ್ತಿದ್ದಾರೆ. ನಾನು ಅದೇ ದಾರಿಯಲ್ಲಿ ನಡೆದೆ. ನೀನೂ ಅದೇ ದಾರಿಯಲ್ಲಿ ಸಾಗು. ಓದು, ನಮ್ಮ ಜನರನ್ನೆಲ್ಲ ಸಂಘಟಿಸು’ ಎಂದು ಸೆಬಾಸ್ಟಿನ್‌, ಮೊಹನ ರಾವ್‌ಗೆ ಹೇಳುವ ಮಾತುಗಳು ಅಂಬೇಡ್ಕರ್‌ ವಿಚಾರಗಳನ್ನು ಧ್ವನಿಸುತ್ತವೆ. ಆದರೆ, ಎಲ್ಲೂ ಅಂಬೇಡ್ಕರ್‌ ಹೆಸರಿನ ಪ್ರಸ್ತಾಪ
ಇಲ್ಲ.

‘ಪಲಾಸ’ದ ದಲಿತರು ತಾರತಮ್ಯದ ಪರಿಸರದಲ್ಲಿ ಆಗುವ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ಬದುಕುವ ಅನಿರ್ವಾಯತೆಗಳನ್ನು ನಿರ್ದೇಶಕ ಕರುಣಾ ಕುಮಾರ್ ಸಿನಿಮಾ ಚೌಕಟ್ಟಿಗೆ ಒಗ್ಗಿಸಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೂ ಅವರದೇ. ಶ್ರೀಕಾಕುಳಂನ ಸುಂದರ ಕರಾವಳಿ, ಅಲ್ಲಿನ ಉಪ್ಪು ತಯಾರಿಕೆ, ಗೇರು ಬೀಜದ ಸಂಸ್ಕರಣೆ ಮಾಡುವ ಕಾರ್ಖಾನೆಗಳು. ಅವುಗಳಲ್ಲಿ ದುಡಿಯುವ ಜನ. ಅವರ ಹಾಡು, ಕುಣಿತಗಳು ಇತ್ಯಾದಿಗಳಿಂದಾಗಿ ಸಿನಿಮಾಕ್ಕೆ ಸಹಜತೆ ದಕ್ಕಿದೆ. ಕಮರ್ಷಿಯಲ್‌ ಸಿನಿಮಾಗಳನ್ನು ನೋಡಿ ಬೇಸತ್ತವರಿಗೆ ‘ಪಲಾಸ’ ಒಂದು ರಿಲೀಫ್‌.

ದಲಿತರ ಸಂಕಟಗಳನ್ನು ಕಟ್ಟಿಕೊಡುತ್ತ ಅವರ ಬಿಡುಗಡೆಯ ದಾರಿಯನ್ನೂ ಸೂಚಿಸುವ ಸಿನಿಮಾ ಆಗಿ ಈ ಸಿನಿಮಾ ಇಷ್ಟವಾಗುತ್ತದೆ.

‘ಪಲಾಸ’ ಚಿತ್ರದ ಪೋಸ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT