ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ–2’ ಬಿಡುಗಡೆ

Published 2 ನವೆಂಬರ್ 2023, 23:30 IST
Last Updated 2 ನವೆಂಬರ್ 2023, 23:30 IST
ಅಕ್ಷರ ಗಾತ್ರ
ರಕ್ಷಿತ್‌ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೊದಲ ಭಾಗ(ಸೈಡ್‌–ಎ) ಸೆಪ್ಟೆಂಬರ್‌ 1ರಂದು ತೆರೆಕಂಡಿತ್ತು. ಇದೀಗ ಸಿನಿಮಾದ ಎರಡನೇ ಭಾಗವನ್ನು ಏಕಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ರಿಲೀಸ್‌ ಮಾಡಲು ತಂಡ ಸಜ್ಜಾಗಿದೆ.

ಚಂದನವನದ ಸಿಂಪಲ್‌ ಸ್ಟಾರ್ ರಕ್ಷಿತ್‌ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಎರಡನೇ ಭಾಗ ರಿಲೀಸ್‌ಗೆ ಸಜ್ಜಾಗುತ್ತಿದೆ. ನ.17ರಂದು ಸಿನಿಮಾದ ಸೈಡ್‌–ಬಿ ಬಿಡುಗಡೆಯಾಗುತ್ತಿದ್ದು, ತೆಲುಗು ಪ್ರಾಂತ್ಯಗಳಿಂದ ಸಿನಿಮಾಗೆ ಭಾರಿ ಬೇಡಿಕೆ ಬಂದಿದೆ.   

ಹೇಮಂತ್‌ ಎಂ.ರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೊದಲ ಭಾಗ(ಸೈಡ್‌–ಎ) ಸೆಪ್ಟೆಂಬರ್‌ 1ರಂದು ತೆರೆಕಂಡಿತ್ತು. ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ರಕ್ಷಿತ್‌ ಶೆಟ್ಟಿ–ರುಕ್ಮಿಣಿ ವಸಂತ್‌ ಜೋಡಿ ತೆರೆಯಲ್ಲಿ ಮೋಡಿ ಮಾಡಿತ್ತು. ಕನ್ನಡದಲ್ಲಷ್ಟೇ ಮೊದಲು ಬಿಡುಗಡೆಗೊಂಡ ಈ ಸಿನಿಮಾ ನಂತರದ ದಿನಗಳಲ್ಲಿ ತೆಲುಗು, ತಮಿಳು ಭಾಷೆಗೆ ಡಬ್‌ ಆಗಿ ಕೊನೆಯಲ್ಲಿ ಪ್ರೈಂನಲ್ಲಿ ಎಲ್ಲ ಭಾಷೆಗಳಲ್ಲೂ ರಿಲೀಸ್‌ ಆಯಿತು. ಇದೀಗ ಸಿನಿಮಾದ ಎರಡನೇ ಭಾಗವನ್ನು ಏಕಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ರಿಲೀಸ್‌ ಮಾಡಲು ತಂಡ ಸಜ್ಜಾಗಿದೆ. ಹೀಗಾಗಿಯೇ ಎರಡನೇ ಭಾಗದ ಟೀಸರ್‌ನಲ್ಲಿ ಹೊಸ ಪ್ರಯೋಗವೊಂದನ್ನು ಮಾಡಲಾಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಂಭಾಷಣೆಗಳನ್ನು ಟೀಸರ್‌ನಲ್ಲಿ ಬಳಸಿಕೊಳ್ಳಲಾಗಿದೆ. 

ಸಿನಿಮಾ ಬಿಡುಗಡೆ ಎರಡು ಬಾರಿ ಮುಂದಕ್ಕೆ ಹೋದ ಕುರಿತು ಮಾಹಿತಿ ನೀಡಿದ ನಿರ್ದೇಶಕ ಹೇಮಂತ್‌, ‘ಸಿನಿಮಾದ ಮೊದಲ ಭಾಗ ಒಟಿಟಿಯಲ್ಲಿ ಬಿಡುಗಡೆಯಾದ ಬಳಿಕ ಬೇರೆ ಭಾಷೆಗಳಿಂದ ಸಿನಿಮಾದ ಎರಡನೇ ಭಾಗಕ್ಕೆ ಹೆಚ್ಚಿನ ಬೇಡಿಕೆ ಬಂತು. ಇದರ ಸಿದ್ಧತೆಗಾಗಿಯೇ ಸೈಡ್‌–ಬಿ ಬಿಡುಗಡೆ ಮುಂದಕ್ಕೆ ಹಾಕಿದೆವು. ತೆಲುಗು ಮಾರುಕಟ್ಟೆಯಿಂದ ಬೇಡಿಕೆ ಹೆಚ್ಚಿತ್ತು. ಅಲ್ಲಿಯೂ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ಬೇಡಿಕೆ ಬಂದವು. ದಸರಾ ಸಂದರ್ಭದಲ್ಲಿ ಚಿತ್ರಮಂದಿರಕ್ಕೆ ಬರುವ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಆ ಸಂದರ್ಭದಲ್ಲಿ ತಮಿಳು, ತೆಲುಗು, ಕನ್ನಡದಲ್ಲಿ ದೊಡ್ಡ ಸಿನಿಮಾಗಳಿದ್ದವು. ಇದರೊಳಗೆ ಕಳೆದುಹೋಗುವುದು ಬೇಡ ಎಂಬ ಕಾರಣಕ್ಕೆ ಸಿನಿಮಾ ಬಿಡುಗಡೆ ಮುಂದೂಡಿದೆವು. ಇದೀಗ ತೆಲುಗಿನಲ್ಲಿ ಸೈಡ್‌–ಬಿ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ ಮಾರುಕಟ್ಟೆ ಒಂದು ರೀತಿ ವಿಚಿತ್ರವಾಗಿದೆ. ಅಲ್ಲಿ ದೊಡ್ಡ ಮಟ್ಟದಲ್ಲಿ ಮಾರ್ಕೆಟಿಂಗ್‌ ಮಾಡಬೇಕು. ಹೀಗಾಗಿ ಹಿಂದಿಯಲ್ಲಿ ಬಿಡುಗಡೆ ಮಾಡುತ್ತಿಲ್ಲ. ಬೇಡಿಕೆ ಬಂದರೆ ನಂತರದಲ್ಲಿ ಯೋಚನೆ ಮಾಡುತ್ತೇವೆ. ಆರಂಭದಲ್ಲಿ ಮೊದಲ ಭಾಗ ಬಿಡುಗಡೆಯಾಗಿ 7–12 ವಾರಗಳ ಅಂತರದಲ್ಲಿ ಎರಡನೇ ಭಾಗ ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದೆವು’ ಎನ್ನುತ್ತಾರೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT