ಶುಕ್ರವಾರ, ಡಿಸೆಂಬರ್ 9, 2022
20 °C

ಫಹಾದ್‌ ಫಾಸಿಲ್‌ಗೆ ಪವನ್‌ ಕುಮಾರ್‌ ನಿರ್ದೇಶನ?

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮಾಲಿಕ್‌ ಚಿತ್ರದಲ್ಲಿ ಫಹಾದ್‌

ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್‌ಕುಮಾರ್‌ ಮಲಯಾಳಗೆ ಕಾಲಿಟ್ಟಿದ್ದಾರೆ. ಹೊಂಬಾಳೆ ಫಿಲಂಸ್‌ ನೂತನ ಚಿತ್ರ ‘ಧೂಮಂ’ಚಿತ್ರದ ಟೈಟಲ್‌ ಹಾಗೂ ಪೋಸ್ಟರ್‌ ಇಂದು ಬಿಡುಗಡೆಗೊಂಡಿದೆ. ಅದನ್ನು ಪವನ್‌ಕುಮಾರ್‌ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೂಲಗಳ ಪ್ರಕಾರ ಪವನ್‌, ಮಲಯಾಳದ ಜನಪ್ರಿಯ ನಟ ಫಹಾದ್‌ ಫಾಸಿಲ್‌ಗೆ ಈ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಒಟಿಟಿಗಾಗಿ ವೆಬ್‌ ಸಿರಿಸ್‌ ನಿರ್ದೇಶಿಸಿದ್ದ ಪವನ್‌ ಕುಮಾರ್‌, ಫಹಾದ್‌ಗೆ ಚಿತ್ರ ನಿರ್ದೇಶಿಸುವ ವದಂತಿ ಬಹಳ ಕಾಲದಿಂದಲೂ ಇತ್ತು. ಪವನ್‌ ಹಾಗೂ ಫಹಾದ್‌ ಸ್ನೇಹವೂ ಇದಕ್ಕೆ ಕಾರಣವಿರಬಹುದು. ಧೂಮಂ ಮಲಯಾಳ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆಗೆ ಬರಲಿದೆ.

 

ಲೂಸಿಯಾ, ಯೂಟರ್ನ್‌ ನಂತರ ನಿರ್ದೇಶಕ ಪವನ್‌ಕುಮಾರ್‌ ಪುನಿತ್‌ ರಾಜ್‌ಕುಮಾರ್‌ಗೆ ದ್ವಿತ್ವ ಮಾಡಬೇಕಿತ್ತು. ಹೊಂಬಾಳೆ ಫಿಲಂಸ್‌ ನಿರ್ಮಾಣದ ಚಿತ್ರದ ಟೈಟಲ್‌, ಪೋಸ್ಟರ್‌ ಎಲ್ಲವೂ ಬಿಡುಗಡೆಗೊಂಡಿತ್ತು. ದುರಾದೃಷ್ಟವಶಾತ್‌ ಪುನೀತ್‌ ರಾಜ್‌ಕುಮಾರ್‌ ಹೃದಯಘಾತದಿಂದ ತೀರಿಕೊಂಡರು. ಬಳಿಕ ದ್ವಿತ್ವದ ಅಪ್‌ಡೇಟ್‌ ಇರಲಿಲ್ಲ. ಪವನ್‌ಕುಮಾರ್‌ ಗಾಳಿ‍ಪಟ–2 ನಟನೆಯಲ್ಲಿ ಮಗ್ನರಾದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಪ್ರತಿಭಾವಂತ ನಟ ಫಹಾದ್‌. ಮಲಯಾಳ ಹೊರತುಪಡಿಸಿ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ಫಹಾದ್‌ ಮಿಂಚುತ್ತಿದ್ದಾರೆ. ಪುಷ್ಪ, ವಿಕ್ರಂ ಸಿನಿಮಾಗಳಲ್ಲಿ ಅಬ್ಬರಿಸಿರುವ ಫಹಾದ್‌ ಸದ್ಯಕ್ಕೆ ಅತ್ಯಂತ ಬೇಡಿಕೆಯ ನಟ. ಮಲಯಾಳದಲ್ಲಿ ಅವರ ಕಾಲ್‌ಶೀಟ್‌ ಸಿಗುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಅಂತಹ ಪ್ರತಿಭಾವಂತ ನಟನಿಗೆ ನಿರ್ದೇಶಿಸುವ ಅವಕಾಶ ಕನ್ನಡದ ಪವನ್‌ ಸಿಕ್ಕಿದೆ ಎಂಬ ಮಾಹಿತಿ ಇದೆ.

ದ್ವಿತ್ವವನ್ನು ಕನ್ನಡ, ತೆಲುಗಿನಲ್ಲಿ ಪುನಿತ್‌, ಮಲಯಾಳ, ತಮಿಳಿನಲ್ಲಿ ಫಹಾದ್‌ ಮಾಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಧೂಮಂ ಬೇರೆಯದೇ ಕಥೆಯೇ ಅಥವಾ ದ್ವಿತ್ವವನ್ನೇ ಧೂಮಂ ಆಗಿ ತೆರೆಗೆ ತರಲಾಗುತ್ತಿದೆಯೇ ಎಂಬ ಕುರಿತು ಚಿತ್ರತಂಡದಿಂದ ಯಾವುದೇ ಸ್ಪಷ್ಟನೆ ದೊರೆತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು