ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಗರು: ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿದ ನಿರ್ದೇಶಕ ನಂದಕಿಶೋರ್‌

Last Updated 23 ಫೆಬ್ರುವರಿ 2021, 12:05 IST
ಅಕ್ಷರ ಗಾತ್ರ

ಬೆಂಗಳೂರು: ಕೊನೆಗೂ ಪೊಗರು ಚಿತ್ರದ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ದೇಶಕ ನಂದಕಿಶೋರ್‌ ಒಪ್ಪಿದ್ದಾರೆ. ನಾಳೆಯೊಳಗೆ ಈ ದೃಶ್ಯಗಳನ್ನು ತೆಗೆದುಹಾಕುವುದಾಗಿ ಅವರು ತಿಳಿಸಿದರು.

ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ಸುಮಾರು 14 ದೃಶ್ಯಗಳಿದ್ದು, ಅವುಗಳನ್ನು ತೆಗೆದುಹಾಕಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದ ಮೂರ್ತಿ ಆಗ್ರಹಿಸಿದ್ದರು.

ಮಂಗಳವಾರ ಸಚ್ಚಿದಾನಂದ ಮೂರ್ತಿ ಅವರ ಜೊತೆಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಂದಕಿಶೋರ್‌, ‘ಆ ದೃಶ್ಯಗಳ ಸಂಕಲನವನ್ನು ಶುರು ಮಾಡಿದ್ದೇವೆ. ಇದಕ್ಕೆ ಕನಿಷ್ಠ 48 ಗಂಟೆಗಳ ಸಮಯಾವಕಾಶ ಬೇಕು. ಈ ಪ್ರಕ್ರಿಯೆ ಮುಗಿದು ಸೆನ್ಸಾರ್‌ ಮಾಡಿ ಮತ್ತೆ ಅದನ್ನು ಪ್ರದರ್ಶನ ವೇದಿಕೆಗಳಿಗೆ (ಉಪಗ್ರಹ ಮೂಲಕ ಚಿತ್ರಮಂದಿರಗಳಿಗೆ ಪ್ರಸಾರವಾಗುವ ವ್ಯವಸ್ಥೆ) ಅಪ್‌ಲೋಡ್‌ ಮಾಡಬೇಕಾಗುತ್ತದೆ. ಸೆನ್ಸಾರ್‌ ಮಂಡಳಿಗೂ ಮರು ಸೆನ್ಸಾರ್‌ನ್ನು ಕ್ಷಿಪ್ರವಾಗಿ ಮಾಡಿಕೊಡುವಂತೆ ಕೋರುತ್ತೇನೆ’ ಎಂದು ಅವರು ಹೇಳಿದರು.

ಮತ್ತೊಮ್ಮೆ ಬ್ರಾಹ್ಮಣ ಸಮುದಾಯದ ಕ್ಷಮೆಯಾಚಿಸಿದ ನಂದಕಿಶೋರ್‌, ‘ಯಾರನ್ನೂ ಅವಮಾನಿಸಿ ಅದರಿಂದ ಹಣಗಳಿಸುವ ಉದ್ದೇಶ ನಮ್ಮದಾಗಿರಲಿಲ್ಲ. ಆ ಕಥೆಯ ಪ್ರಕಾರ, ಪೂಜೆ, ಹೋಮ ಹವನ ನಡೆಸುವವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನೂ ಹೇಳಬೇಕಿತ್ತು. ಕಥೆಗೆ ಪೂರಕವಾದ ಅಂಶವಾಗಿತ್ತೇ ವಿನಃ ನೋಯಿಸುವ ಉದ್ದೇಶ ಇರಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.‘ನಾನು ಶಂಕರಾಚಾರ್ಯರನ್ನು ಅನುಸರಿಸುವವನು. ಹೊಸ ಚಿತ್ರ ಸೆಟ್ಟೇರಿದಾಗ ಕಾಲಡಿಗೆ (ಶಂಕರಾಚಾರ್ಯರ ಮೂಲ ಸ್ಥಳ) ಹೋಗಿ ಕಾಣಿಕೆ ಹಾಕಿ ಸಿನಿಮಾದ ಕೆಲಸ ಆರಂಭಿಸುವವನು. ಅಂಥವನು ಒಂದು ಸಮುದಾಯವನ್ನು ಅವಮಾನಿಸುವವನಲ್ಲ. ಈಗ ಸಮಸ್ಯೆ ಆಗಿದೆ. ತಪ್ಪಾಗಿದೆ ಎಂಬುದನ್ನು ಒಪ್ಪಿಕೊಂಡು ಕ್ಷಮೆ ಕೇಳುತ್ತಿದ್ದೇನೆ. ಇನ್ನೇನು ಮಾಡಲು ಸಾಧ್ಯ ಹೇಳಿ’ ಎಂದು ಪ್ರಶ್ನಿಸಿದರು.

ಪ್ರತಿಭಟನೆ: ಸುದ್ದಿಗೋಷ್ಠಿಗೂ ಮುನ್ನ ಬ್ರಾಹ್ಮಣ ಸಂಘಟನೆಗಳ ಬ್ರಾಹ್ಮಣ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಚಿತ್ರದಲ್ಲೇ ಏನಿದೆ?

ಚಿತ್ರದ ಆರಂಭದಲ್ಲೇ ಯಜ್ಞ ಮಾಡುತ್ತಿದ್ದ ಪುರೋಹಿತರ ಮೇಲೆ ಖಳನಾಯಕನ ತಂಡದ ವ್ಯಕ್ತಿಯೊಬ್ಬ ಕಾಲಿಟ್ಟ ದೃಶ್ಯವಿದೆ. ನಾಯಕನೇ ಬ್ರಾಹ್ಮಣರನ್ನು ಅವಹೇಳನ ಮಾಡುವ ಪದಗಳನ್ನು ಬಳಸಿದ್ದಾರೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT