ಸೋಮವಾರ, ಅಕ್ಟೋಬರ್ 25, 2021
24 °C

ಅಶ್ಲೀಲ ಚಿತ್ರ ನಿರ್ಮಾಣ: ನನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದ ಕುಂದ್ರಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಅವುಗಳನ್ನು ವಿವಿಧ ಆ್ಯಪ್‌ಗಳಿಗೆ ಅಪ್ಲೋಡ್ ಮಾಡಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಉದ್ಯಮಿ ರಾಜ್ ಕುಂದ್ರಾ ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಮುಂಬೈ ಪೊಲೀಸರು ಸಲ್ಲಿಸಿರುವ ಪೂರಕ ದೋಷಾರೋಪಪಟ್ಟಿಯಲ್ಲಿ ರಾಜ್‌ ಕುಂದ್ರಾ ವಿರುದ್ಧ ಒಂದು ಚಿಕ್ಕ ಸಾಕ್ಷಿಯೂ ಇಲ್ಲ. ವಿನಾಕಾರಣ ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಕುಂದ್ರಾ ಪರ ವಕೀಲರು ವಾದಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಂಬೈನ ಅಪರಾಧ ವಿಭಾಗವು ಇತ್ತೀಚೆಗೆ ಕುಂದ್ರಾ ಮತ್ತು ಇತರ ಮೂವರ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿತ್ತು.

ಆ ಬಳಿಕ ಮುಂಬೈ ಮೆಟ್ರೋಪಾಲಿಟನ್ ಕೋರ್ಟ್‌ ಮೆಟ್ಟಿಲೇರಿರುವ ಕುಂದ್ರಾ ಪರ ವಕೀಲರು, ವಾಸ್ತವವಾಗಿ ಪ್ರಕರಣದ ತನಿಖೆಯು ಸಂಪೂರ್ಣ ಮುಗಿದಿದೆ. ಹಾಗಾಗಿ, ಜಾಮೀನು ನೀಡಬಹುದು ಎಂದು ಮನವಿ ಮಾಡಿದ್ದಾರೆ.

ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರ ನಿರ್ಮಾಣ ಆರೋಪದಡಿ ಜುಲೈ 19ರಂದು ಬಂಧಿಸಲಾಗಿತ್ತು. ಕುಂದ್ರಾ ವಿರುದ್ಧ ನಿಷೇಧಿತ ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಸಂಬಂಧಿತ ಐಪಿಸಿ ಸೆಕ್ಷನ್ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ತನಿಖಾ ಸಂಸ್ಥೆಯ ಪ್ರಕಾರ, ಆರೋಪಿಗಳು ಅಶ್ಲೀಲ ಚಿತ್ರದ ವಿಡಿಯೊಗಳನ್ನುಅಪ್ಲೋಡ್ ಮತ್ತು ಸ್ಟ್ರೀಮಿಂಗ್ ಮಾಡಲು ಹಾಟ್ ಶಾಟ್ಸ್ ಆ್ಯಪ್ ಅನ್ನು ಬಳಸುತ್ತಿದ್ದರು.

ಆದರೆ, ಅಶ್ಲೀಲ ಚಿತ್ರ ನಿರ್ಮಾಣದಲ್ಲಿ ಕುಂದ್ರಾ ಸಕ್ರಿಯವಾಗಿ ತೊಡಗಿಕೊಂಡಿರುವ ಬಗ್ಗೆ ಯಾವುದೇ ಚಿಕ್ಕ ಸಾಕ್ಷಿಯೂ ಪೂರಕ ಚಾರ್ಜ್‌ಶೀಟ್‌ನಲ್ಲಿ ಇಲ್ಲ ಎಂದು ಜಾಮೀನು ಅರ್ಜಿಯಲ್ಲಿ ವಾದಿಸಲಾಗಿದೆ. ವಾಸ್ತವವಾಗಿ, ಹಾಟ್‌ಶಾಟ್ಸ್ ಆ್ಯಪ್‌ಗೆ ತಮ್ಮ ಕಂಟೆಂಟ್‌ಗಳನ್ನು ಅಪ್‌ಲೋಡ್ ಮಾಡುವುದು ಕಲಾವಿದರ ವೈಯಕ್ತಿಕ ವಿವೇಚನೆಯಾಗಿದೆ. ಹಾಗಾಗಿ, ರಾಜ್ ಕುಂದ್ರಾ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಅವರ ಅಪರಾಧ ಸಾಬೀತುಪಡಿಸುವ ಯಾವುದೇ ಸಾಕ್ಷ್ಯ ಚಾರ್ಜ್‌ಶೀಟ್‌ನಲ್ಲಿಲ್ಲ ಎಂದೂ ವಾದಿಸಲಾಗಿದೆ.

ಎಫ್‌ಐಆರ್‌ನಲ್ಲಿ ಅವರ ಹೆಸರಿಲ್ಲ. ಆದರೂ ಪೊಲೀಸರು ಅವರನ್ನು ಎಳೆದು ತಂದಿದ್ದಾರೆ. ಅವರನ್ನು ವಿನಾಕಾರಣ ‘ಬಲಿಪಶು’ಮಾಡಲಾಗುತ್ತಿದೆ ಎಂದು ವಕೀಲರು ಹೇಳಿದ್ದಾರೆ. ಇಲ್ಲಿಯವರೆಗಿನ ತನಿಖೆಯಲ್ಲಿ ಕುಂದ್ರಾ ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು