ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ–2 | ‘ಅತ್ಯುತ್ತಮ ಪೋಷಕ ನಟ’ ವಿಭಾಗದ ನಾಮನಿರ್ದೇಶಿತರು

Published 6 ಜೂನ್ 2024, 18:09 IST
Last Updated 6 ಜೂನ್ 2024, 18:09 IST
ಅಕ್ಷರ ಗಾತ್ರ

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿ ಸಮಾರಂಭ ಶೀಘ್ರದಲ್ಲೇ ನಡೆಯಲಿದ್ದು, 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರು ಮತ್ತು ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ಅತ್ಯುತ್ತಮ ಪೋಷಕ ನಟ’ ವಿಭಾಗದಲ್ಲಿ ನಾಮನಿರ್ದೇಶಿತಗೊಂಡವರ ಪರಿಚಯಿಸುವ ಸಮಯ. ಇನ್ನಷ್ಟು ಮಾಹಿತಿಗಳಿಗಾಗಿ ವೆಬ್‌ಸೈಟ್‌ ನೋಡಿ. prajavani.net/cinesamman/season2

ರಂಗಾಯಣ ರಘು

ರಂಗಾಯಣ ರಘು

‘ಕನ್ನಡ ಚಿತ್ರರಂಗದಲ್ಲಿ ಹಾಸ್ಯ, ಪೋಷಕ ನಟನಾಗಿ ಮೂರೂವರೆ ದಶಕಗಳನ್ನು ಪೂರೈಸಿರುವ ರಂಗಾಯಣ ರಘು ‘ಟಗರು ಪಲ್ಯ’ ಚಿತ್ರದ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. ಈ ತನಕ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು, 1988 ರಿಂದ ಬಿ.ವಿ.ಕಾರಂತ ಅವರ ರಂಗತಂಡದಲ್ಲಿದ್ದರು. 1995ರಲ್ಲಿ ‘ಸುಗ್ಗಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. 2007ರಲ್ಲಿ ‘ದುನಿಯಾ’ ಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಕನ್ನಡದ ಈಗಿನ ಎಲ್ಲ ಪ್ರಮುಖ ನಟನರೊಂದಿಗೆ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ‘ರಂಗ ಸಮುದ್ರ’, ‘ಶಾಖಾಹಾರಿ’ ಮೊದಲಾದ ಚಿತ್ರಗಳಲ್ಲಿ ಇವರೇ ಕಥಾನಾಯಕನಾಗಿಯೂ ಅಭಿನಯಿಸಿ ಗಮನ ಸೆಳೆದಿದ್ದಾರೆ. 

ರಮೇಶ್‌ ಇಂದಿರಾ

ರಮೇಶ್‌ ಇಂದಿರಾ

ಕಿರುತೆರೆ ಜನಪ್ರಿಯ ನಿರ್ದೇಶಕ ರಮೇಶ್‌ ಇಂದಿರಾ ‘ಸಪ್ತಸಾಗರದಾಚೆ ಎಲ್ಲೋ ಸೈಡ್‌–ಎ’ ಚಿತ್ರದ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. ‘ನಮ್ಮಮ್ಮ ಶಾರದೆ’, ‘ದೇವಿ’, ‘ಮಹಾದೇವಿ’, ‘ಯಾರೇ ನೀ ಮೋಹಿನಿ’ ಮೊದಲಾದ ಜನಪ್ರಿಯ ಧಾರಾವಾಹಿಗಳನ್ನು ನೀಡಿರುವ ಇವರು ಬರಹಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಶೃತಿ ನಾಯ್ಡು ಚಿತ್ರ ಪ್ರೊಡಕ್ಷನ್ ಮೂಲಕ ಧಾರಾವಾಹಿ ನಿರ್ಮಾಣದ ಜೊತೆಗೆ ನಟನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ‘ಪ್ರೀಮಿಯರ್ ಪದ್ಮಿನಿ’ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದರು. ‘ಕೆಜಿಎಫ್ ಚಾಪ್ಟರ್‌–1’ರಲ್ಲಿ ಖಳನಾಯಕನಾಗಿ ಗಮನ ಸೆಳೆದಿದ್ದರು.

<div class="paragraphs"><p>ಜೆ.ಪಿ.ತುಮ್ಮಿನಾಡು</p></div>

ಜೆ.ಪಿ.ತುಮ್ಮಿನಾಡು

ನಟ ಜೆ.ಪಿ.ತುಮ್ಮಿನಾಡು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. ತುಳು ರಂಗಭೂಮಿ ನಟರಾಗಿರುವ ಇವರು, ಶಾರದಾ ಆರ್ಟ್ಸ್‌ ಮಂಜೇಶ್ವರ ರಂಗತಂಡದೊಂದಿಗೆ 2011ರಲ್ಲಿ ನಟನೆ ಪ್ರಾರಂಭಿಸಿದರು. ಇದೇ ತಂಡದಲ್ಲಿ ನಿರ್ದೇಶಕ, ಬರಹಗಾರರೂ ಆಗಿದ್ದಾರೆ. ತುಳುವಿನಲ್ಲಿ ‘ರಂಗ್‌’ ಮೂಲಕ ಚಿತ್ರರಂಗ ಪ್ರವೇಶಿಸಿದರು. ‘ಕಟಪಾಡಿ ಕಟ್ಟಪ್ಪ’ ಎಂಬ ತುಳು ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಕನ್ನಡದಲ್ಲಿ ಇವರ ಮೊದಲ ಚಿತ್ರ. ‘ಗರುಡ ಗಮನ ವೃಷಭ ವಾಹನ’, ‘ಕಥಾಸಂಗಮ’, ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರಗಳಲ್ಲಿ ಪೋಷಕ ನಟನಾಗಿ ಗಮನ ಸೆಳೆದಿದ್ದಾರೆ. ಸದ್ಯ ಕನ್ನಡ ಸಿನಿಮಾವೊಂದರ ನಿರ್ದೇಶನದ ತಯಾರಿಯಲ್ಲಿದ್ದು, ತುಳು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಾಗಭೂಷಣ

ನಾಗಭೂಷಣ

‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ನಟನೆಗಾಗಿ ನಾಗಭೂಷಣ ನಾಮನಿರ್ದೇಶನಗೊಂಡಿದ್ದಾರೆ. ಮೈಮ್ ರಮೇಶ್ ಅವರ ಹವ್ಯಾಸಿ ರಂಗಭೂಮಿ ತಂಡದಿಂದ ಬಂದ ಇವರು ಹಾಸ್ಯನಟನಾಗಿ ಗುರುತಿಸಿಕೊಂಡಿದ್ದಾರೆ. ನಟನೆಗಾಗಿ ‌‌ಸರ್ಕಾರಿ ಕೆಲಸ ತ್ಯಜಿಸಿದರು. 2016ರಲ್ಲಿ ಸ್ನೇಹಿತರೊಂದಿಗೆ ಕರ್ನಾಟಕ ಎಂಟರ್‌ಟೈನ್‌ಮೆಂಟ್ ಬೋರ್ಡ್ ಎಂಬ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಸಾಕಷ್ಟು ಹಾಸ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ‘ಬದ್ಮಾಶ್’ ಚಿತ್ರದಲ್ಲಿ ಪೋಷಕ ನಟನಾಗಿ ಚಿತ್ರರಂಗ ಪ್ರವೇಶಿಸಿದ ಇವರು ‘ಸಂಕಷ್ಟಕರ ಗಣಪತಿ’ ಚಿತ್ರದಲ್ಲಿ ನಾಯಕನ ಸ್ನೇಹಿತನಾಗಿ ನಟಿಸಿದರು. ‘ಹನಿಮೂನ್’ ಎಂಬ ವೆಬ್ ಸರಣಿಗೆ ಕಥೆ ಬರೆದು, ಸಂಜನಾ ಆನಂದ್ ಅವರೊಂದಿಗೆ ನಟಿಸಿದರು. ಹಾಸ್ಯಮಯ ‘ಇಕ್ಕಟ್‌’ ಚಿತ್ರದೊಂದಿಗೆ ನಾಯಕರಾದರು. ನಟ ಧನಂಜಯ ಅವರ ಆಪ್ತ ಸ್ನೇಹಿತರಾಗಿರುವ ಇವರು ‘ಬಡವ ರಾಸ್ಕಲ್‌’ನಲ್ಲಿ ಕಾಣಿಸಿಕೊಂಡರು. ‘ಟಗರು ಪಲ್ಯ’ ಇವರು ನಾಯಕನಾಗಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡ ಮೊದಲ ಚಿತ್ರ. ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟನಾಗಿ ಕಾಣಿಸಿಕೊಂಡಿರುವ ಇವರು ಸದ್ಯ ‘ವಿದ್ಯಾಪತಿ’ ಚಿತ್ರದಲ್ಲಿ ನಾಯಕನಾಗಿ, ‘ಅಣ್ಣ From Mexico’ ಚಿತ್ರದಲ್ಲಿ ಪೋಷಕ ನಟನಾಗಿ ನಟಿಸುತ್ತಿದ್ದಾರೆ. 

ಪೂರ್ಣಚಂದ್ರ ಮೈಸೂರು

ಪೂರ್ಣಚಂದ್ರ ಮೈಸೂರು

‘ಡೇರ್‌ ಡೆವಿಲ್‌ ಮುಸ್ತಾಫಾ’ ಚಿತ್ರದ ನಟನೆಗಾಗಿ ಪೂರ್ಣಚಂದ್ರ ಮೈಸೂರು ನಾಮನಿರ್ದೇಶನಗೊಂಡಿದ್ದಾರೆ. ಕಿರುಚಿತ್ರಗಳಿಂದ  ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಇವರು ‘ಟಗರು’, ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’, ‘ಬ್ಯಾಡ್‌ ಮ್ಯಾನರ್ಸ್’, ಟಗರು ಪಲ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಆರ್ಕೆಸ್ಟ್ರಾ ಮೈಸೂರು’ ಚಿತ್ರದ ಮೂಲಕ ನಾಯಕನಾದರು. ಈಗ ಅವರು ‘ಮರ್ಯಾದೆ ಪ್ರಶ್ನೆ’, ‘ನಿಮಿತ್ತ ಮಾತ್ರ’, ‘ಫ್ಯಾಮಿಲಿ ಡ್ರಾಮಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ವಿಜಯ್‌ ಶೋಭರಾಜ್‌

ವಿಜಯ್‌ ಶೋಭರಾಜ್‌

ನಟ ವಿಜಯ್‌ ಶೋಭರಾಜ್‌ ಪಾವೂರು ‘ಡೇರ್‌ ಡೆವಿಲ್‌ ಮುಸ್ತಾಫಾ’ ಚಿತ್ರದಲ್ಲಿ ತಮ್ಮ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. ತುಳು ರಂಗಭೂಮಿಯಿಂದ ಬಂದ ಇವರು ಕನ್ನಡ ಕಿರುತೆರೆ ಜಗತ್ತಿನಲ್ಲಿ ಜನಪ್ರಿಯ. ದೇವದಾಸ್ ಕಾಪಿಕಾಡ್ ಅವರ ತಂಡದಲ್ಲಿ ಇದ್ದ ವಿಜಯ್ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ಏಸ’, ‘ಡಿಕೆ ಬೋಸ್‌’ ಎಂಬ ತುಳು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಧಾರಾವಾಹಿ, ಸಿನಿಮಾಗಳ ನಟನೆಯಲ್ಲಿ ಮಗ್ನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT