ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ 2024: ಯಾರಿಗೆ ಯಾವ ಪ್ರಶಸ್ತಿ? ಕಾರ್ಯಕ್ರಮದ ಹೈಲೈಟ್ಸ್

ಪ್ರಜಾವಾಣಿ ಸಿನಿ ಸಮ್ಮಾನ 2024
Published 28 ಜೂನ್ 2024, 19:07 IST
Last Updated 28 ಜೂನ್ 2024, 19:07 IST
ಅಕ್ಷರ ಗಾತ್ರ

ಸಿನಿ ಸಮ್ಮಾನ 2024 ಪ್ರಶಸ್ತಿಗಳು

ಜನಮೆಚ್ಚಿದ ವಿಭಾಗದ ಪ್ರಶಸ್ತಿ

l ಜನಮೆಚ್ಚಿದ ಸಿನಿಮಾ: ಕಾಟೇರ

l ಜನಮೆಚ್ಚಿದ ನಟ: ರಕ್ಷಿತ್‌ ಶೆಟ್ಟಿ, ಚಿತ್ರ: ಸಪ್ತ ಸಾಗರದಾಚೆ ಎಲ್ಲೋ

l ಜನಮೆಚ್ಚಿದ ನಟಿ: ರುಕ್ಮಿಣಿ ವಸಂತ್‌, ಚಿತ್ರ: ಸಪ್ತ ಸಾಗರದಾಚೆ ಎಲ್ಲೋ

l ಜನಮೆಚ್ಚಿದ ಸಂಗೀತ: ಸಪ್ತ ಸಾಗರದಾಚೆ ಎಲ್ಲೋ

ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು

l ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ: ಪಿಂಕಿ ಎಲ್ಲಿ?

l ಅತ್ಯುತ್ತಮ ನಿರ್ಮಾಣ ವಿನ್ಯಾಸ: 19.20.21

l ಅತ್ಯುತ್ತಮ ವಿಎಫ್‌ಎಕ್ಸ್‌, ಪೋಸ್ಟ್‌ ಪ್ರೊಡಕ್ಷನ್‌ ಹಾಗೂ ಆ್ಯನಿಮೇಷನ್‌: ಕಬ್ಜ

l ಅತ್ಯುತ್ತಮ ಧ್ವನಿಗ್ರಹಣ ಹಾಗೂ ಶಬ್ದವಿನ್ಯಾಸ: ಸಪ್ತ ಸಾಗರದಾಚೆ ಎಲ್ಲೋ

ಕಲಾವಿದೆ ಸರೋಜಾ ದೇವಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ

ಬೆಂಗಳೂರು: ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಎರಡನೇ ಆವೃತ್ತಿ ಸಮಾರಂಭದಲ್ಲಿ ಹಿರಿಯ ಕಲಾವಿದೆ ಬಿ. ಸರೋಜಾದೇವಿ ಅವರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ, ಪುರಸ್ಕರಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ದಿ ಪ್ರಿಂಟರ್ಸ್‌ ಮೈಸೂರು ಪ್ರೈ.ಲಿ. ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ತಿಲಕ್‌ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸರೋಜಾ ದೇವಿ, ಕಲಾವಿದರಿಗೆ ಎಲ್ಲರನ್ನೂ ಪ್ರೀತಿಸುವ ಗುಣವಿದ್ದರೆ ಯಶಸ್ಸು ಒಲಿಯುತ್ತದೆ. ತಾಳ್ಮೆ, ಪರಿಶ್ರಮ ಕಲಾವಿದರ ಮೂಲ ಮಂತ್ರವಾಗಬೇಕು. ಆಗ ದೊಡ್ಡ ನಟ, ನಟಿಯರಾಗಲು ಸಾಧ್ಯ. ಅಂತಹ ಕಲಾವಿದರಿಗೆ ವೃತ್ತಿ ಬದುಕಿನಲ್ಲೂ ನೆಮ್ಮದಿ ದೊರಕುತ್ತದೆ ಎಂದರು.

‘ನಾನೇನು ಹೆಸರು ಮಾಡಿದ್ದೆನೋ ಅದೆಲ್ಲವೂ ದೇವರ ಇಚ್ಛೆ, ಅನುಗ್ರಹ. ನನ್ನದು ಎನ್ನುವುದು ಏನೂ ಇಲ್ಲ, ಅದನ್ನೆಲ್ಲ ಆ ಭಗವಂತ ಮಾಡಿದ್ದಾನೆ. ನಾವೆಲ್ಲ ನೆಪಮಾತ್ರ ಅಷ್ಟೆ’ ಎಂದು ಹೇಳಿದರು.

‘ನಿಮ್ಮ ನೆಚ್ಚಿನ ನಾಯಕ ನಟರು ಯಾರು’ ಎಂಬ ನಿರೂಪಕಿ ಅನುಶ್ರೀ ಅವರ ಪ್ರಶ್ನೆಗೆ,‘ರಾಜ್‌ಕುಮಾರ್, ಶಿವಾಜಿ ಗಣೇಶನ್, ಎಂ.ಜಿ. ರಾಮಚಂದ್ರನ್‌’ ಎಂದು ಉತ್ತರಿಸಿದರು. ಮತ್ತೆ ಚಿತ್ರರಂಗಕ್ಕೆ ಬನ್ನಿ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ಕೋರಿಕೆಯನ್ನು ನಯವಾಗಿ ತಳ್ಳಿಹಾಕಿದ ಅವರು, ‘ಮತ್ತೆ ಚಿತ್ರಗಳಿಗೆ ಬಣ್ಣ ಹಚ್ಚಲಾರೆ’ ಎಂದು ಪ್ರತಿಕ್ರಿಯಿಸಿದರು.

ತಾರಾ ಸಮಾಗಮ, ನೃತ್ಯ ಸಂಭ್ರಮ

ಚಂದನವನದ ತಾರೆಯರು ಸಿನಿ ಸಾಧನೆಗೆ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದರೆ, ನಟ-ನಟಿಯರು ಅದ್ದೂರಿ ವೇದಿಕೆಯಲ್ಲಿ ನೃತ್ಯದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಬಹು ನಿರೀಕ್ಷಿತ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಎರಡನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆಯಿತು. ಜೀವಮಾನ ಸಾಧನೆ ಸೇರಿ 28 ವಿಭಾಗಗಳಲ್ಲಿ ಸಿನಿ ಸಾಧಕರಿಗೆ ಚಿತ್ರರಂಗದ ಜತೆಗೆ ಸಾಹಿತ್ಯ, ರಾಜಕೀಯ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಜೆ 4 ಗಂಟೆಗೆ ಕೆಂಪು ಹಾಸಿನ ಮೇಲೆ ಮಂದಹಾಸದೊಂದಿಗೆ ಕೈಬಿಸುತ್ತ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಳ್ಳಲು ಕಾತರರಾಗಿದ್ದರು. ನಟ ರಮೇಶ್ ಹಾಗೂ ಅನುಶ್ರೀ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿದರೆ, ನಟಿ ಆಶಿಕಾ ರಂಗನಾಥ್ ಮತ್ತು ತಂಡದವರು ‘ರಾಗ ತಾಳ ನಾಟ್ಯಂ’ ಗೀತೆಗೆ ನೃತ್ಯದ ಮೂಲಕ ಚಾಲನೆ ನೀಡಿದರು. ‘ಜೀವಮಾನ ಸಾಧನೆ ಪ್ರಶಸ್ತಿ’ಗೆ ಭಾಜನರಾದ ಬಿ. ಸರೋಜಾದೇವಿ ಅವರು ವೇದಿಕೆಗೆ ಏರುತ್ತಿದ್ದಂತೆಯೇ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು. ಪ್ರಶಸ್ತಿ ಪ್ರದಾನ ಆಗುತ್ತಿದ್ದಂತೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಕೈ ಸೇರುತ್ತಿದ್ದಂತೆ ಕೆಲವರು ಭಾವುಕರಾದರೆ, ಇನ್ನೂ ಕೆಲವರಲ್ಲಿ ಸಾರ್ಥಕತೆಯ ಭಾವ ಮೂಡಿತ್ತು. ಈ ವೇಳೆ ತಮಗೆ ಅವಕಾಶ ನೀಡಿದ ನಿರ್ದೇಶಕ, ನಿರ್ಮಾಪಕರು ಸೇರಿ ಚಿತ್ರ ತಂಡದ ಸದಸ್ಯರನ್ನು, ಚಿತ್ರೀಕರಣದ ವೇಳೆ ನಡೆದ ಘಟನೆಗಳನ್ನು ಸ್ಮರಿಸಿಕೊಂಡರು. ಪ್ರಶಸ್ತಿ ಕೈ ತಪ್ಪಿದರೂ ಉಪಸ್ಥಿತರಿದ್ದ ನಾಮ ನಿರ್ದೇಶಿತ ಸದಸ್ಯರು ಸಹ ನಟ-ನಟಿಯರಿಗೆ ಶುಭ ಹಾರೈಸಿದರು.

ಚಿತ್ರರಂಗದ ಪ್ರಮುಖರಾದ ಶಿವರಾಜ್ ಕುಮಾರ್, ಪ್ರಕಾಶ್ ರಾಜ್, ಖುಷ್ಬೂ, ಡಾಲಿ ಧನಂಜಯ್, ರುಕ್ಮಿಣಿ ವಸಂತ್, ದೊಡ್ಡಣ್ಣ, ತರುಣ್ ಸುಧೀರ್, ವಿ. ಮನೋಹರ್, ಹರಿಕೃಷ್ಣ, ಶಮಿತಾ ಮಲ್ನಾಡ್, ದತ್ತಣ್ಣ, ಚೈತ್ರಾ ಆಚಾರ್, ಪೂಜಾ ಗಾಂಧಿ, ಮಂಡ್ಯ ರಮೇಶ್, ಟಿ.ಎನ್. ಸೀತಾರಾಮ್, ಪಿ. ಶೇಷಾದ್ರಿ, ‘ಮುಖ್ಯಮಂತ್ರಿ’ ಚಂದ್ರು, ನಾಗತಿಹಳ್ಳಿ ಚಂದ್ರಶೇಖರ್, ಎಸ್. ನಾರಾಯಣ್, ಭಾ.ಮ. ಹರೀಶ್, ಉಮೇಶ್ ಬಣಕಾರ್, ಆರ್. ಚಂದ್ರು, ವಿಜಯ ಪ್ರಕಾಶ್, ಗುರುಕಿರಣ್‌ ಸೇರಿ ಹಲವರು ಪಾಲ್ಗೊಂಡಿದ್ದರು.

ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರದವರೂ ಸಮಾರಂಭಕ್ಕೆ ಸಾಕ್ಷಿಯಾದರು. ಸಂಸದ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಚಿವರಾದ ರಾಮಲಿಂಗಾರೆಡ್ಡಿ, ಶಿವರಾಜ ಎಸ್‌. ತಂಗಡಗಿ, ಸಾಹಿತ್ಯ ಕ್ಷೇತ್ರದ ಪ್ರಮುಖರಾದ ಚಂದ್ರಶೇಖರ ಕಂಬಾರ, ದೊಡ್ಡರಂಗೇಗೌಡ, ಎಸ್.ಜಿ. ಸಿದ್ಧರಾಮಯ್ಯ ಮೊದಲಾದವರು ಉಪಸ್ಥಿತರಿದ್ದರು.

ಒಂಬತ್ತು ದಶಕದ ಮೆಲುಕು

ಕನ್ನಡ ಚಿತ್ರರಂಗವು 90 ವರ್ಷಗಳನ್ನು ಪೂರೈಸಿದ್ದು, ಕಾರ್ಯಕ್ರಮದಲ್ಲಿ ಒಂಬತ್ತು ದಶಕಗಳ ಸಿನಿಯಾನವನ್ನು ಸ್ಮರಿಸಲಾಯಿತು.

ನಟಿಯರಾದ ಶ್ರುತಿ, ಶ್ರುತಿ ಹರಿಹರನ್, ಭಾವನಾ ರಾವ್, ರೂಪಿಕಾ ಹಾಗೂ ಸಿಂಧು ಲೋಕನಾಥ್ ಅವರು ನೃತ್ಯದ ಮೂಲಕ ಅಂದಿನಿಂದ ಇಂದಿನವರೆಗಿನ ಆಯ್ದ ಜನಪ್ರಿಯ ಗೀತೆಗಳಿಗೆ ಹೆಜ್ಜೆ ಹಾಕಿದರು. ಈ ನೃತ್ಯವು ನೆರೆದಿದ್ದವರನ್ನು ಆಯಾ ಕಾಲಘಟ್ಟಕ್ಕೆ ಕರೆದೊಯ್ದಿತು. ಇದೇ ವೇಳೆ, ಕನ್ನಡ ಚಿತ್ರರಂಗ ಸಾಗಿ ಬಂದ ಹಾದಿಯನ್ನು ಡಿಜಿಟಲ್ ಪರದೆಯಲ್ಲಿ ಪ್ರದರ್ಶಿಸಲಾಯಿತು. ಚಿತ್ರರಂಗದ ತೆರೆಮರೆಯ ನಾಯಕರಿಗೆ ಪ್ರೇಕ್ಷಕರು ಎದ್ದು ನಿಂತು ಗೌರವಿಸಿದರು.

90 ವರ್ಷಗಳ ಸಿನಿ ಪಯಣದ ಬಗ್ಗೆ ನಟ ರಮೇಶ್ ಅರವಿಂದ್ ಹಾಗೂ ನಟಿ ಶ್ರುತಿ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಟಗರು ಹಾಡಿಗೆ ಶಿವಣ್ಣ ನೃತ್ಯ

‘ಕನ್ನಡ ಸಿನಿ ಧ್ರುವತಾರೆ ಪ್ರಶಸ್ತಿ’ಗೆ ಭಾಜನರಾದ ನಟ ಶಿವರಾಜ್ ಕುಮಾರ್ ಅವರು ವೇದಿಕೆ ಏರುತ್ತಿದ್ದಂತೆ ‘ಟಗರು ಬಂತು ಟಗರು’ ಗೀತೆ ಮೊಳಗಿತು. ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಅವರು ಸ್ವಯಂಪ್ರೇರಿತರಾಗಿ ನೃತ್ಯ ಮಾಡಿದರು. ಶಿವಣ್ಣ ಅವರ ಎನರ್ಜಿಗೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು.

‘ನೃತ್ಯಕ್ಕೆ ವಯಸ್ಸು ಅಡ್ಡ ಬರುವುದಿಲ್ಲ. ನಾವು ಎಲ್ಲೆ ಇದ್ದರೂ ರಂಜಿಸಬೇಕು’ ಎಂದರು.

ಆತ್ಮಾವಲೋಕನ ಅಗತ್ಯ: ಪ್ರಕಾಶ್‌ ರಾಜ್‌

ಈಚಿನ ವರ್ಷಗಳಲ್ಲಿ ಸಿನಿ ಸನ್ಮಾನದ ಸಂಭ್ರಮ ಕಡಿಮೆ ಆಗಿದೆ. ಆ ಕೊರತೆಯನ್ನು ‘ಪ್ರಜಾವಾಣಿ’ ನೀಗಿಸುತ್ತಿದೆ ಎಂದು ನಟ ಪ್ರಕಾಶ್‌ ರಾಜ್‌ ಹೇಳಿದರು.

ಸಿನಿಮಾ ರಂಗದಲ್ಲಿ ಹಿಂದೆ ವ್ಯಾಪಾರ ಇರಲಿಲ್ಲ. ಈಗಿನ ಬಹುತೇಕ ಚಿತ್ರಗಳ ಗುಣಮಟ್ಟ, ಅಭಿರುಚಿ ಕುರಿತು ಚಿತ್ರರಂಗ ಹಾಗೂ ಪ್ರೇಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಲಾವಿದ ಚಿತ್ರರಂಗದಲ್ಲಿ ಬೆಳೆಯಲು ಒಳಗಿನ ಶ್ರೀಮಂತಿಕೆ ಮುಖ್ಯ. ಭಾಷೆ, ಮಾತು, ಗ್ರಹಿಕೆ ಚಿತ್ರರಂಗವನ್ನು ಶ್ರೀಮಂತ ಮಾಡುತ್ತದೆ. ಪ್ರತಿಭೆಗಿಂತ ಜನರ ಪ್ರೀತಿ, ನಂಬಿಕೆ ಕಲಾವಿದನಿಗೆ ಹೆಚ್ಚಿನ ಮೌಲ್ಯ ತಂದುಕೊಡುತ್ತದೆ ಎಂದರು.

ಚಿತ್ರರಂಗ ಸಂಕಷ್ಟದಲ್ಲಿದೆ ಡಿ.ಕೆ. ಶಿವಕುಮಾರ್

‘ಸಿನಿಮಾ ಕ್ಷೇತ್ರ ಪ್ರಸ್ತುತ ಸನ್ನಿವೇಶದಲ್ಲಿ ಸಂಕಷ್ಟದಲ್ಲಿದೆ. ಎಷ್ಟೋ ಸಿನಿಮಾಗಳಿಗೆ ಚಿತ್ರಮಂದಿರಗಳಿಗೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಚಿತ್ರರಂಗದ ಎಲ್ಲರಿಗೂ ದೊಡ್ಡ ಶಕ್ತಿ ಸಿಗಬೇಕಿದೆ. ಉಳಿದು, ಇನ್ನಷ್ಟು ಬೆಳೆಯಬೇಕಿದೆ. ‘ಪ್ರಜಾವಾಣಿ ಸಿನಿ ಸಮ್ಮಾನ’ ಕಾರ್ಯಕ್ರಮ ಚಿತ್ರರಂಗದ ಜವಾಬ್ದಾರಿ ಹೆಚ್ಚಿಸಿದೆ’ ಎಂದರು.

‘ಯಾವುದೇ ಕ್ಷೇತ್ರವಿರಲಿ ನಂಬಿಕೆಗಿಂತ ದೊಡ್ಡದು ಯಾವುದು ಇಲ್ಲ. ಪತ್ರಿಕಾ ಕ್ಷೇತ್ರದಲ್ಲಿ ಅಂತಹ ನಂಬಿಕೆಗೆ ಮತ್ತೊಂದು ಹೆಸರು ‘ಪ್ರಜಾವಾಣಿ’. ಸರ್ಕಾರಗಳನ್ನು ಸದಾ ಎಚ್ಚರಿಸುವ ಕೆಲಸ ಮಾಡುತ್ತಾ ಬಂದಿದೆ. ಜನರಿಗಾಗಿಯೇ ಜನ್ಮ ತಾಳಿದ ಪತ್ರಿಕೆ’ ಎಂದು ಬಣ್ಣಿಸಿದರು.

ಸಿನಿಮಾ ರಂಗಕ್ಕೂ ‘ಪ್ರಜಾವಾಣಿ’ಗೂ ದಶಕಗಳ ನಂಟಿದೆ.

ಕನ್ನಡದ ಪ್ರತೀಕ, ನಾನು ಪತ್ರಿಕೆ ಓದದ ದಿನವೇ ಇಲ್ಲ. ಈಚೆಗೆ ನಮ್ಮ ಬಗ್ಗೆ ಏನು ಟೀಕೆ ಬಂದಿದೆ ಎನ್ನುವುದಕ್ಕಾದರೂ ಓದುತ್ತೇನೆ. ನಂತರ ಬೇರೆ ಪತ್ರಿಕೆಯತ್ತ ಗಮನ ಹರಿಸುವೆ. ಸಿನಿಮಾ ರಂಗಕ್ಕೂ ‘ಪ್ರಜಾವಾಣಿ’ಗೂ ದಶಕಗಳ ನಂಟಿದೆ.

–ಬಸವರಾಜ ಬೊಮ್ಮಾಯಿ, ಸಂಸದ.

–––––––––––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT