ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿ ಸಮ್ಮಾನ: ತಾಂತ್ರಿಕ ತೀರ್ಪುಗಾರರ ಮಂಡಳಿ ತಜ್ಞರ ಪ್ರತಿಕ್ರಿಯೆ

Published 4 ಮೇ 2023, 16:06 IST
Last Updated 4 ಮೇ 2023, 16:08 IST
ಅಕ್ಷರ ಗಾತ್ರ

ಸ್ಪಷ್ಟವಾಗಿ ವಿವರಿಸಿದ್ದರು

ಆಯ್ಕೆ ಪ್ರಕ್ರಿಯೆ ಖುಷಿಯ ಅನುಭವ ನೀಡಿದೆ. ನಾವು ಹೆಚ್ಚಿನ ಸಮಯ ತಾಂತ್ರಿಕವಾಗಿ ಸಿನಿಮಾ ನೋಡುತ್ತೇವೆ. ಕಲರ್‌ ಗ್ರೇಡ್‌ ಮಾಡುವಾಗ ಧ್ವನಿಯಿಲ್ಲದೆ ಸಿನಿಮಾ ನೋಡಿರುತ್ತೇವೆ. ಆದರೆ ಇಲ್ಲಿ ಯಾವೆಲ್ಲ ಅಂಶಗಳನ್ನು ಪರಿಗಣಿಸಬೇಕೆಂದು ಸ್ಪಷ್ಟವಾಗಿ ವಿವರಿಸಿದ್ದರು. ಯಾವ ವಿಭಾಗವನ್ನು ಹೇಗೆ ಆಯ್ಕೆ ಮಾಡಬೇಕೆಂದು ಹೇಳಿದ್ದರು. ಒಟ್ಟಾರೆಯಾಗಿ ಚೆನ್ನಾಗಿತ್ತು. ನೋಡಿಲ್ಲದ ಅನೇಕ ಸಿನಿಮಾಗಳನ್ನು ನೋಡಿದಾಗ ಖುಷಿಯಾಯ್ತು. ತಾಂತ್ರಿಕವಾಗಿಯೂ ಎಲ್ಲ ಆಯಾಮದಿಂದಲೂ ಸಿನಿಮಾ ನೋಡಬೇಕಾಗುತ್ತದೆ. ಆ ಪ್ರಕ್ರಿಯೆ ಇಲ್ಲಿ ನಡೆದಿದೆ.

– ಸುನಿಲ್‌ ಕಾಮತ್‌, ತಂತ್ರಜ್ಞ

ಉತ್ತಮವಾದ ಪ್ರಕ್ರಿಯೆ

ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಪ್ರಜಾವಾಣಿ ಕುರಿತು ಗೌರವ ಹೊಂದಿರುವೆ. ಕನ್ನಡದ ಸಾಕ್ಷಿಪ್ರಜ್ಞೆಯಿದು. ಮೌಲ್ಯಯುತವಾದ ಸಂಸ್ಥೆ. ಇಂಥ ಸಂಸ್ಥೆ ಪ್ರಶಸ್ತಿ ನೀಡುತ್ತಿರುವುದು ಸಾಮಾನ್ಯವಾಗಿ ನಿರೀಕ್ಷೆ ಮತ್ತು ಮೌಲ್ಯ ಹೆಚ್ಚಿಸುತ್ತದೆ. ಮೌಲ್ಯಯುತ ಸಿನಿಮಾ ಗುರುತಿಸುವ, ಚಿತ್ರರಂಗಕ್ಕೆ ಉತ್ತೇಜನ ನೀಡುವ ಪ್ರಕ್ರಿಯೆ. ಇಲ್ಲಿ ಪ್ರಶಸ್ತಿ ಪಡೆಯದೇ ಇದ್ದವರಿಗೂ ಮುಂದಿನ ವರ್ಷಗಳಲ್ಲಿ ಶ್ರಮ ಹಾಕಲು ಉತ್ತೇಜನ ನೀಡುತ್ತದೆ. ಆಯ್ಕೆ ಪ್ರಕ್ರಿಯೆ ಮತ್ತು ಆಯ್ಕೆ ಮಾಡಿದ ತಂಡ ತುಂಬ ವಿಶೇಷವಾಗಿದೆ. ಇಡೀ ಪ್ರಕ್ರಿಯೆ ಚಿತ್ರರಂಗಕ್ಕೆ ಇನ್ನಷ್ಟು ಜವಾಬ್ದಾರಿ, ಉತ್ತೇಜನ ನೀಡುತ್ತದೆ. ಪತ್ರಿಕೆಯ ಪ್ರಯತ್ನಕ್ಕೆ ಅಭಿನಂದನೆಗಳು. 

–ಎಚ್‌.ಎಂ.ರಾಮಚಂದ್ರ, ಛಾಯಾಗ್ರಾಹಕ

ಪಾರದರ್ಶಕ ಪ್ರಕ್ರಿಯೆ

ಇಡೀ ಆಯ್ಕೆ ಪ್ರಕ್ರಿಯೆಯಲ್ಲಿ ಒಳ್ಳೆಯ ಸಿನಿಮಾ, ಕೆಟ್ಟ ಸಿನಿಮಾ, ಸುಮಾರಾಗಿರುವ ಸಿನಿಮಾಗಳನ್ನೂ ನೋಡಿರುವೆ. ಇದರಿಂದ ಕನ್ನಡ ಚಿತ್ರರಂಗ ಯಾವ ದಿಕ್ಕಿನತ್ತ ಹೋಗುತ್ತಿದೆ ಎಂಬ ಚಿತ್ರಣ ದೊರೆಯಿತು. ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿದೆ. ತೀರ್ಪುಗಾರರಿಗೆ ಪರಸ್ಪರ ಪರಿಚಯವೇ ಇರಲಿಲ್ಲ. ಹೀಗಾಗಿ ಯಾವುದೇ ಶಿಫಾರಸು, ಸ್ವ ಹಿತಾಸಕ್ತಿಗಳಿಗೆ ಅವಕಾಶ ಇರಲಿಲ್ಲ. ತುಂಬ ನ್ಯಾಯಯುತವಾದ ಆಯ್ಕೆ ನಡೆಯುತ್ತದೆ ಎಂಬದನ್ನು ಇಲ್ಲಿನ ಪ್ರತಿ ಹಂತದ ಆಯ್ಕೆ ಹೇಳುತ್ತಿದೆ. ‘ಪ್ರಜಾವಾಣಿ’ಗೆ ಕೆಲಸಕ್ಕೆ ಸೇರಬೇಕೆಂಬ ನನ್ನ ಬಹಳ ಹಿಂದಿನ ಆಸೆ ಈ ಮೂಲಕವಾದರೂ ನೆರವೇರಿದಂತಾಗಿದೆ!

–ವಿ.ಮನೋಹರ್‌, ಸಂಗೀತ ನಿರ್ದೇಶಕ

ಒಬ್ಬರದ್ದೇ ಅಭಿಪ್ರಾಯವಿಲ್ಲ

ಇಡೀ ಆಯ್ಕೆಯ ಕಸರತ್ತು ಬಹಳ ವೃತ್ತಿಪರವಾಗಿದೆ. ಪ್ರಕ್ರಿಯೆ ವಿಸ್ತೃತವಾಗಿದೆ. ಯೋಚನೆ ಮಾಡಿ ಶೆಡ್ಯೂಲ್‌ ಮಾಡಿದ್ದಾರೆ ಅನ್ನಿಸಿತು. ಎಲ್ಲರಿಗೂ ನ್ಯಾಯಯುತವಾಗಿ ಸ್ಕೋರಿಂಗ್‌ ಆಗುವ ರೀತಿಯಲ್ಲಿತ್ತು. ತೀರ್ಪುಗಾರರ ಮಂಡಳಿಯಲ್ಲಿ ಕೂಡ ಒಬ್ಬರ ಅಭಿಪ್ರಾಯದಿಂದ ಫಲಿತಾಂಶ ವ್ಯತ್ಯಾಸವಾಗುವುದಕ್ಕೆ ಅವಕಾಶವಿಲ್ಲ. ಎಲ್ಲರೂ ನೀಡಿದ ಅಂಕಗಳಿಂದ ಆಯ್ಕೆ ಆಗುವ ರೀತಿಯಲ್ಲಿ ಪ್ರಕ್ರಿಯೆ ರೂಪಿಸಲಾಗಿದೆ. ಇದು ಉತ್ತಮ ಹೆಜ್ಜೆ. ತುಂಬಾ ಶಿಸ್ತಿನಿಂದ ಕೂಡಿದೆ.

–ಎಂ.ಡಿ.ಪಲ್ಲವಿ, ಸ್ವರ ಸಂಯೋಜಕಿ,ಗಾಯಕಿ.

ವಿಶ್ವಾಸಾರ್ಹತೆ ಮುಖ್ಯವಾಗುತ್ತದೆ

ಆಯ್ಕೆ ಪ್ರಕ್ರಿಯೆ ತುಂಬ ಚೆನ್ನಾಗಿದೆ. ನಿಷ್ಪಕ್ಷಪಾತವಾಗಿದೆ. ಕಣ್ಣುತಪ್ಪಿನಿಂದಲೋ, ಯಾರೋ ಒಬ್ಬರ ಆಲೋಚನೆಯಿಂದಲೋ ಯಾವುದೇ ಪ್ರತಿಭೆಗೆ ಅನ್ಯಾಯವಾಗುವ ಪ್ರಮೇಯವೇ ಇಲ್ಲ. ಮೊದಲ ಹೆಜ್ಜೆಯಲ್ಲಿಯೇ ಈ ರೀತಿ ಪ್ರಕ್ರಿಯೆ ಆಯ್ಕೆ ಮಾಡಿಕೊಂಡಿರುವುದು ಸ್ವಾಗತಾರ್ಹ. ಪ್ರಶಸ್ತಿಗಳೇ ನಾಯಿಕೊಡೆಗಳಾಗಿರುವಂತಹ ದಿನದಲ್ಲಿ ಪ್ರಶಸ್ತಿ ನೀಡುವ ಸಂಸ್ಥೆಯ ವಿಶ್ವಾಸಾರ್ಹತೆ ಕೂಡ ಮುಖ್ಯವಾಗುತ್ತದೆ. ಕೊಡುವವರ ವಿಶ್ವಾಸಾರ್ಹತೆ ಮೇಲೆ ಪ್ರಶಸ್ತಿ ಮೌಲ್ಯ ನಿರ್ಧಾರವಾಗುತ್ತದೆ. ಆ ದಿಸೆಯಲ್ಲಿ ‘ಪ್ರಜಾವಾಣಿ’ ದಿಟ್ಟ ಹೆಜ್ಜೆ ಇಟ್ಟಿದೆ.

– ಕವಿರಾಜ್‌, ಗೀತ ಸಾಹಿತಿ

ಬಹಳ ಸ್ಪಷ್ಟತೆ ಇದೆ

ಆಯ್ಕೆ ಕಸರತ್ತಿನಲ್ಲಿ ಬಹಳ ಸ್ಪಷ್ಟತೆಯಿದೆ ಅನ್ನಿಸಿತು. ನಮಗೆ ಸಿನಿಮಾ ತೋರಿಸುವ ಮೊದಲು ನೀವು ಯಾವ ವಿಭಾಗದಲ್ಲಿ ಆಯ್ಕೆ ಮಾಡಬೇಕೆಂಬ ನಿಖರವಾದ ನಿರ್ದೇಶನ ನೀಡಿದ್ದರು. ಸಿನಿಮಾ ಲಿಂಕ್‌ ಓಪನ್‌ ಆಗದೆ ಸ್ವಲ್ಪ ಅಡಚಣೆಯಾಯಿತು. ಆದರೆ ಅದನ್ನು ತಕ್ಷಣ ಸರಿಪಡಿಸಿದರು. ಸಿನಿಮಾದಲ್ಲಿ ಸಂಗೀತ ಎಂದರೆ ಹಾಡು ಮಾತ್ರವಲ್ಲ, ಹಿನ್ನೆಲೆ ಸಂಗೀತವೂ ಸೇರುತ್ತದೆ. ಅದನ್ನು ಪರಿಗಣಿಸಬೇಕೆಂದು ಮುಂದಿನ ಹಂತದ ತೀರ್ಪುಗಾರರಿಗೆ ಮನವಿ ಮಾಡುತ್ತೇನೆ. ಪ್ರಕ್ರಿಯೆ ತುಂಬ ಅಚ್ಚುಕಟ್ಟಾಗಿದೆ. ಒಂದು ರೀತಿ ಅಕಾಡೆಮಿ ಆಯ್ಕೆಯ ಅನುಭವ ನೀಡಿದೆ.

–ಜಯತೀರ್ಥ, ಚಲನಚಿತ್ರ ನಿರ್ದೇಶಕರು

ಹೊಸತನದಿಂದ ಕೂಡಿದೆ

ನನ್ನ ಪಾಲಿಗೆ ಬಂದ ಎಲ್ಲ ಚಿತ್ರಗಳನ್ನೂ ನೋಡಿದೆ. ಅದರಲ್ಲಿ ಕೆಲವೇ ಕೆಲವು ಗುಣಮಟ್ಟದ ಸಿನಿಮಾಗಳು ಸಿಕ್ಕವು. ಅತ್ಯುತ್ತಮವಾಗಿದ್ದು ಮಾತ್ರ ಅಂತಿಮವಾಗಿ ಉಳಿದುಕೊಳ್ಳುತ್ತವೆ. ಇಡೀ ಆಯ್ಕೆ ಪ್ರಕ್ರಿಯೆ ಹೊಸತನದಿಂದ ಕೂಡಿದೆ. ಬೇರೆ ಕೆಲ ಪ್ರಶಸ್ತಿ ನೋಡಿರುವೆ. ಯಾರೋ ಶಿಫಾರಸು ಮಾಡುತ್ತಾರೆ. ಇಲ್ಲಿ ಸಿನಿಮಾ ನೋಡಿ ಪಟ್ಟಿ ಕಳುಹಿಸಿದ ನಂತರವೂ ಒಬ್ಬ ತೀರ್ಪುಗಾರನಿಗೆ ಇನ್ನೊಬ್ಬ ತೀರ್ಪುಗಾರನ ಬಗ್ಗೆ ಗೊತ್ತಿರಲಿಲ್ಲ. ಪರಸ್ಪರ ಕರೆ ಮಾಡಿ, ಶಿಫಾರಸು ಮಾಡುವ ಪ್ರಮೇಯವೇ ಇರಲಿಲ್ಲ. ಒಳ್ಳೆಯ ಪ್ರಕ್ರಿಯೆ. ಪ್ರಾಮಾಣಿಕವಾಗಿ ಕೆಲಸ ಮಾಡಲು ಮುಕ್ತ ಅವಕಾಶ. ಚೆನ್ನಾಗಿಲ್ಲದ ಸಿನಿಮಾಗಳನ್ನು ಮುಲಾಜಿಲ್ಲದೆ ಹೊರಗಿಟ್ಟಿದ್ದೇವೆ.

–ಎಂ.ಎನ್‌.ಸ್ವಾಮಿ, ಸಿನಿಮಾ ಸಂಕಲನಕಾರರು

ಬೇರೆಯವರಿಗೂ ಮಾದರಿ

ಇಡೀ ಆಯ್ಕೆ ಪ್ರಕ್ರಿಯೆ ತುಂಬ ಮೃದುವಾಗಿತ್ತು ಮತ್ತು ವೃತ್ತಿಪರವಾಗಿತ್ತು. ಡೆಡ್‌ಲೈನ್‌ ಸ್ವಲ್ಪ ಬಿಗಿಯಾಗಿತ್ತು. ನಾನು 2-3 ಬೇರೆ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕೆಲಸ ಮಾಡಿರುವೆ. ಆದರೆ ಈ ರೀತಿ 3 ಸ್ತರದಲ್ಲಿ ಆಯ್ಕೆ ನೋಡಿದ್ದು ಭಾರತದಲ್ಲಿಯೇ ಇದೇ ಮೊದಲು. ಇಲ್ಲಿ ಯಾರಿಗೂ ಅನ್ಯಾಯ ಆಗುವುದಿಲ್ಲ. ಹಂತ ಹಂತವಾಗಿ ಫಿಲ್ಟರ್‌ ಆಗುತ್ತದೆ. ಬೇರೆ ಪ್ರಶ್ತಸ್ತಿಗಳಿಗೂ ಮಾದರಿಯಾಗಬಲ್ಲ ಆಯ್ಕೆ ಪ್ರಕ್ರಿಯೆ. ವಿಸ್ತೃತವಾಗಿದೆ. ಆಯ್ಕೆ ನಿರ್ವಹಣೆ ರೀತಿಯೇ ಪ್ರಶಸ್ತಿ ಮೌಲ್ಯ ಮತ್ತು ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

–ರೂಪಾ ರಾವ್‌, ಚಲನಚಿತ್ರ ನಿರ್ದೇಶಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT