ಗುರುವಾರ , ಅಕ್ಟೋಬರ್ 29, 2020
19 °C

‘ಕೆಜಿಎಫ್ ಚಾಪ್ಟರ್‌ 2’ಗೆ ಪ್ರಕಾಶ್‌ರಾಜ್‌ ಎಂಟ್ರಿ; ಮೋದಿ ಬೆಂಬಲಿಗರು ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಕಾಶ್‌ ರಾಜ್‌ ಮತ್ತು ಪ್ರಶಾಂತ್‌ ನೀಲ್‌

ಪ್ಯಾನ್‌ ಇಂಡಿಯಾ ಚಿತ್ರವಾಗಿ ಮೂಡಿಬಂದ ಕನ್ನಡದ ‘ಕೆಜಿಎಫ್ ಚಾಪ್ಟರ್ 1’ ಸಿನಿಮಾ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಚಿತ್ರ ಎನಿಸಿತ್ತು.

ಈ ಚಿತ್ರದ ಯಶಸ್ಸಿನ ನಂತರ ‘ಕೆಜಿಎಫ್ ಚಾಪ್ಟರ್‌ 2’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ ಕೈಗೆತ್ತಿಕೊಂಡಿದ್ದು, ಕೋವಿಡ್‌ 19 ಲಾಕ್‌ಡೌನ್‌ ಕಾರಣಕ್ಕೆ ಸ್ಥಗಿತಗೊಂಡಿದ್ದ ಚಿತ್ರದ ಚಿತ್ರೀಕರಣ ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಹಾಕಿರುವ ಸೆಟ್‌ನಲ್ಲಿ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಈಗ ವಿವಾದವೂ ಹುಟ್ಟಿಕೊಂಡಿದೆ.

ಕಾರಣ ಬಹುಭಾಷಾ ನಟ ಪ್ರಕಾಶ್‌ ರಾಜ್‌ ವಿಶೇಷ ಪಾತ್ರದಲ್ಲಿ ನಟಿಸಲು ‘ಕೆಜಿಎಫ್ ಚಾಪ್ಟರ್‌ 2’ ಚಿತ್ರತಂಡ ಕೂಡಿಕೊಂಡಿರುವುದಕ್ಕೆ ಬಲಪಂತೀಯ ಸಂಘಟನೆಗಳ ಸದಸ್ಯರು ಮತ್ತು ಮೋದಿ ಬೆಂಬಲಿಗರು ಕೆಂಡಾಮಂಡಲರಾಗಿದ್ದಾರೆ.

ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ #boycott_kgf_chapter_2 ಹ್ಯಾಷ್‌ಟ್ಯಾಗ್‌ ಆರಂಭಿಸಿದ್ದು, ಪ್ರಕಾಶ್‌ ರಾಜ್‌ ಅವರನ್ನು ಚಿತ್ರತಂಡದಿಂದ ಕೈಬಿಡುವಂತೆ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರನ್ನು ಒತ್ತಾಯಿಸಿ, ಅಭಿಯಾನವನ್ನೇ ಶುರು ಮಾಡಿದ್ದಾರೆ.

‘ಕೆಜಿಎಫ್ ಚಾಪ್ಟರ್ 1’ರಲ್ಲಿ ಅನಂತ್ ನಾಗ್ ನಿರ್ವಹಿಸಿದ್ದ ಪಾತ್ರವನ್ನು ಪ್ರಕಾಶ್ ರಾಜ್‌ಗೆ ನೀಡಿರುವುದು ಸರಿಯಲ್ಲ. ಪ್ರಕಾಶ್ ರಾಜ್ ತುಕ್ಡೆ ಗ್ಯಾಂಗ್ ಜೊತೆ ಸೇರಿ ದೋಶದ್ರೋಹಿಯಾಗಿದ್ದಾರೆ. ರಾಮನನ್ನು ಹೀಯಾಳಿಸಿದ್ದಾರೆ. ಹೀಗಾಗಿ ನಾವು ಕೆಜಿಎಫ್ -2 ಸಿನಿಮಾ ಬಹಿಷ್ಕರಿಸುತ್ತಿದ್ದೇವೆ’ ಎಂದು ಜಾಲತಾಣಿಗರು ಫೇಸ್‌ಬುಕ್‌ ಮತ್ತು ಟ್ವಿಟರ್‌ಗಳಲ್ಲಿ ಕಿಡಿಕಾರಿದ್ದಾರೆ.

ನಿರ್ದೇಶಕ ಪ್ರಶಾಂತ್ ನೀಲ್ ಅವರು ಪ್ರಕಾಶ್‌ ರಾಜ್‌ ಅವರನ್ನು ಚಿತ್ರತಂಡಕ್ಕೆ ಸೇರಿಸಿಕೊಂಡಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ‘ರಾಕಿ ಭಾಯ್‌’ ಖ್ಯಾತಿಯ ಯಶ್‌ ಜತೆಗೆ ಈ ಚಿತ್ರದಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್‌, ನಟಿ ರವೀನಾ ಟಂಡನ್‌, ಟಾಲಿವುಡ್‌ ನಟ ರಾವ್‌ ರಮೇಶ್‌ ಕೂಡ ನಟಿಸುತ್ತಿದ್ದಾರೆ. ಈಗ ಪ್ರಕಾಶ್‌ ರಾಜ್‌ ಹೊಸ ಸೇರ್ಪಡೆಯಾಗಿದ್ದು, ಅವರು ನಿಭಾಯಿಸುತ್ತಿರುವ ಪಾತ್ರ ಯಾವುದು ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

‘ಕೆಜಿಎಫ್‌ ಚಾಪ್ಟರ್‌ 1’ರಲ್ಲಿ ನಟ ಅನಂತ‌ನಾಗ್‌ ಅವರು ಪತ್ರಕರ್ತ ಆನಂದ್‌ ಇಂಗಳಗಿ ಪಾತ್ರದಲ್ಲಿ ನಟಿಸಿದ್ದರು. ಮಾಳವಿಕಾ ಎದುರು ರಾಕಿ ಭಾಯ್‌ ಕಥೆ ನಿರೂಪಿಸಿದ್ದರು. ಅನಂತನಾಗ್ ಮತ್ತು ಚಿತ್ರತಂಡದ ನಡುವಿನ ಹೊಂದಾಣಿಕೆಯ ಕೊರತೆ ಪರಿಣಾಮ ಅವರು‌ ಕೆಜಿಎಫ್‌ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳಗಳ ಹಿಂದೆ ಹಬ್ಬಿತ್ತು. ಆದರೆ, ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಯಾವುದೇ ಸ್ಪಷ್ಟನೆಯನ್ನು ನೀಡಿರಲಿಲ್ಲ.

ಆ ವೇಳೆ ಸಾಮಾಜಿಕ ಜಾಲತಾಣದಲ್ಲಿ ಎದ್ದಿದ್ದ ಸುದ್ದಿಗಳಿಗೆ ಪ್ರಕಾಶ್‌ ರಾಜ್‌ ಈಗ ಹಂಚಿಕೊಂಡಿರುವ ಫೋಟೊಗಳು ಉತ್ತರ ನೀಡುತ್ತಿವೆ. ಮಾಳವಿಕಾ ಅವಿನಾಶ್‌ ಕೂಡ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಆನಂದ್‌ ಇಂಗಳಗಿ ಪಾತ್ರದಲ್ಲಿ ಪ್ರಕಾಶ್‌ ರಾಜ್‌ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಚಿತ್ರತಂಡ ಮಾತ್ರ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು