ನಟ ಕಿಚ್ಚ ಸುದೀಪ್ ಅವರ ಜನ್ಮದಿನದ ಸಂಭ್ರಮಾಚರಣೆ ಸಂದರ್ಭದಲ್ಲಿ ಅವರ ಪತ್ನಿ ಪ್ರಿಯಾ ಅವರು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಬಾಟ್‌ಲ್ಯಾಬ್ ಡೈನಾಮಿಕ್ಸ್ ಎಂಬ ಹೆಸರಿನ ಸಂಸ್ಥೆಯ ಜೊತೆಗೂಡಿ 500 ಡ್ರೋನ್‌ಗಳನ್ನು ಬಳಸಿ ಆಕಾಶದೆತ್ತರದಲ್ಲಿ ‘ಆರಡಿ ಕಟೌಟ್’ ನಿಲ್ಲಿಸಿದ್ದಾರೆ.
ಸುದೀಪ್ ಅವರ ಜನ್ಮದಿನಾಚರಣೆಯನ್ನು ಅಭಿಮಾನಿಗಳ ಸಮ್ಮುಖದಲ್ಲಿ ಪ್ರಿಯಾ ಹಾಗೂ ಸುದೀಪ್ ಅವರ ಸ್ನೇಹಿತರು ಶುಕ್ರವಾರ(ಶೆ.1) ರಾತ್ರಿ ನಂದಿ ಲಿಂಕ್ಸ್ ಮೈದಾನದಲ್ಲಿ ಅದ್ಧೂರಿಯಾಗಿ ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ 500 ಡ್ರೋನ್‌ಗಳನ್ನು ಬಳಸಿ ಸುದೀಪ್ ಅವರಿಗೆ ಜನ್ಮದಿನದ ಶುಭಾಶಯ ಕೋರಿರುವ ಪ್ರಿಯಾ, ಆಕಾಶದಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿನ ಸುದೀಪ್ ಅವರ ಶೈಲಿಯನ್ನು ಡ್ರೋನ್ ಮೂಲಕ ಕಟೌಟ್ ರೀತಿಯಲ್ಲಿ ನಿಲ್ಲಿಸಿದ್ದಾರೆ. ಇದನ್ನು ಕಂಡು ಸುದೀಪ್ ಅವರೂ ಒಂದು ಕ್ಷಣ ಆಶ್ಚರ್ಯಗೊಂಡಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸುದೀಪ್, ‘ಜನ್ಮದಿನದ ಆಚರಣೆಯನ್ನು ಪ್ರಿಯಾ ಮುಂದೆ ನಿಂತು ಮಾಡಿದ್ದಾಳೆ. ರಾತ್ರಿ ವೇಳೆ ಈ ರೀತಿ ಆಚರಣೆಯನ್ನು ಎಂದೂ ಮಾಡಿರಲಿಲ್ಲ. ಡ್ರೋನ್‌ಗಳಲ್ಲಿ ನನ್ನ ಸಿನಿಮಾಗಳ ಚಿತ್ರಗಳು ಬಂದಾಗ ಹಳೆಯ ಪಯಣ ನೆನಪಾಯಿತು. ಒಂದೊಂದು ಚಿತ್ರದ ಹಿಂದೆ ಸಾವಿರ ಕಥೆಗಳಿವೆ. ಇದೊಂದು ಅತ್ಯಂತ ಸುಂದರವಾದ ಉಡುಗೊರೆಯಾಗಿತ್ತು’ ಎಂದಿದ್ದಾರೆ.
‘ಮೂರು ಹೊಸ ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದೇನೆ. ನಾನು ಸುಮ್ಮನೆ ಕುಳಿತಿಲ್ಲ, ತಯಾರಿಯಾಗುತ್ತಿದ್ದೆ. ಕೋವಿಡ್ ಸಂದರ್ಭದಲ್ಲಿ ನನಗೆ ಎದುರಾದ ನನ್ನ ವೈಯಕ್ತಿಕ ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತಿದ್ದೆ. ಸಿನಿಮಾ ಮಾಡಲು ಯಾವುದೇ ತಯಾರಿ ಇಲ್ಲದೇ ಹೋಗುವವನು ನಾನಲ್ಲ. ಕೊಂಚ ಸಮಯ ತೆಗೆದುಕೊಂಡೆ ಅಷ್ಟೇ. ನಿರ್ದೇಶಕನಾಗಿ ನನ್ನ ಏಳನೇ ಸಿನಿಮಾ ಮಾಡಲಿದ್ದೇನೆ. ಒಂದು ಐಡಿಯಾ ಇತ್ತು. ಇದನ್ನು ಸಿನಿಮಾ ರೂಪಕ್ಕೆ ತರುವ ನಿರ್ಧಾರ ಮಾಡಿದೆವು. ನಂತರ ಕೆ.ಆರ್.ಜಿ. ಜೊತೆಯಾಯಿತು’ ಎನ್ನುತ್ತಾರೆ ಸುದೀಪ್.
‘ದರ್ಶನ್ ನೋಡಿ ಖುಷಿ ಆಯಿತು’: ಸುಮಲತಾ ಅವರ ಜನ್ಮದಿನದ ಸಂದರ್ಭದಲ್ಲಿ ನಟ ದರ್ಶನ್ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಸುದೀಪ್, ‘ಎಲ್ಲರೂ ಅಂದುಕೊಂಡಿರುವಂತೆ ನಾವು ಕಿತ್ತಾಡಿಕೊಂಡು ಇದ್ದಿದ್ದರೆ ನಾನು ಅವರ ಪರವಾಗಿ ಪತ್ರ ಬರೆಯುತ್ತಿರಲಿಲ್ಲ. ಅವರ ವಿರುದ್ಧ ನನಗೆ ಯಾವ ದ್ವೇಷವೂ ಇಲ್ಲ, ಸಿಟ್ಟೂ ಇಲ್ಲ. ಹೀಗೆಂದು ಕಾರ್ಯಕ್ರಮವೊಂದರಲ್ಲಿ ಭೇಟಿಯಾದ ತಕ್ಷಣವೇ ಎಲ್ಲ ಸರಿ ಹೋಗುತ್ತದೆ ಎಂದುಕೊಂಡಿದ್ದೀರಲ್ಲ? ಅದು ಹಾಗಲ್ಲ. ಅವರಲ್ಲೂ ಕೆಲ ಪ್ರಶ್ನೆಗಳಿರುತ್ತವೆ, ನನ್ನಲ್ಲೂ ಕೆಲ ಪ್ರಶ್ನೆಗಳಿರುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದಾಗಲೇ ಕೆಲವು ವಿಷಯಗಳು ಸರಿಹೋಗುತ್ತವೆ. ಇದಕ್ಕೆ ಕಾಲಾವಕಾಶವನ್ನು ಕೊಡಬೇಕು. ನಾವಿಬ್ಬರೂ ಒಬ್ಬರನ್ನೊಬ್ಬರು ಗೌರವಿಸುತ್ತೇವೆ. ಸುಮಾರು ಆರೇಳು ವರ್ಷದ ನಂತರ ನಾನು ನೇರವಾಗಿ ದರ್ಶನ್ ಅವರನ್ನು ನೋಡಿದ್ದು. ನನಗೂ ಖುಷಿ ಆಯಿತು’ ಎಂದರು ಸುದೀಪ್.
ಎಲ್ಲರ ಭೇಟಿ ಸಾಧ್ಯವಾಗಿಲ್ಲ: ‘ಮನೆ ಹತ್ತಿರ ಬಂದಿರುವ ಎಲ್ಲರನ್ನೂ ಭೇಟಿಯಾಗಬೇಕು ಎನ್ನುವ ಆಸೆ ನನ್ನದಾಗಿತ್ತು. ಬೆಳಗ್ಗಿನಿಂದಲೂ ನಾನು ಹಲವರನ್ನು ಭೇಟಿಯಾದೆ. ಆದರೆ ಜನದಟ್ಟಣೆ ಹೆಚ್ಚಾಗಿ ಬ್ಯಾರಿಕೇಡ್‌ಗಳು ಮುರಿದುಹೋದವು. ಇದರಿಂದಾಗಿ ಭದ್ರತೆಗೆ ಅಡಚಣೆಯಾಯಿತು. ಭದ್ರತಾ ದೃಷ್ಟಿಯಿಂದ ಭೇಟಿಯನ್ನು ಅರ್ಧಕ್ಕೆ ನಿಲ್ಲಿಸಿದೆ. ಇದಕ್ಕೆ ಕ್ಷಮೆ ಇರಲಿ. ಜನ್ಮದಿನಕ್ಕೆ ಶುಭಕೋರಿದ ಎಲ್ಲರಿಗೂ ಧನ್ಯವಾದ. ಮುಂದಿನ ವರ್ಷ ಇನ್ನಷ್ಟು ಸೂಕ್ತ ವ್ಯವಸ್ಥೆ ಮಾಡಿ, ಭೇಟಿಯಾಗುತ್ತೇನೆ’ ಎಂದು ಸುದೀಪ್ ‘ಎಕ್ಸ್’ನಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದಾರೆ.
Just for you ♥️ @KicchaSudeep pic.twitter.com/zI8t63fiYN
— Priya Sudeep/ಪ್ರಿಯ (@iampriya06) September 2, 2023
𝐓𝐇𝐄 𝐃𝐄𝐌𝐎𝐍 𝐖𝐀𝐑 𝐁𝐄𝐆𝐈𝐍𝐒😈#Kichcha46Teaser out now!
— Kichcha Sudeepa (@KicchaSudeep) July 2, 2023
🔗 https://t.co/nuVPnwIhJ3#Kichcha46 @theVcreations @Kichchacreatiin @saregamasouth @TSrirammt @shivakumarart @vijaykartikeyaa @shekarchandra71 @AJANEESHB @ganeshbaabu21 #SaregamaMusic @KRG_Connects #Kiccha46 pic.twitter.com/YW5NN9n4TQ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.