ಶುಕ್ರವಾರ, ಆಗಸ್ಟ್ 7, 2020
25 °C

ಸಿನಿಮಾ ಹಕ್ಕುಗಳು: ನಿರ್ಮಾಪಕರ ಸಂಘದ ಕಾನೂನು ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಸಿನಿಮಾಗಳ ಉಪಗ್ರಹ ಹಕ್ಕುಗಳನ್ನು ಪಡೆದುಕೊಂಡು, ಅದೇ ಸಿನಿಮಾಗಳನ್ನು ಒಟಿಟಿ ವೇದಿಕೆಗಳ ಮೂಲಕ ಪ್ರಸಾರ ಮಾಡುತ್ತಿರುವ ಸಂಸ್ಥೆಗಳ ವಿರುದ್ಧ ನಿರ್ಮಾಪಕ ಸಂಘ ಗರಂ ಆಗಿದೆ. ಈ ರೀತಿ ಮಾಡುವವರ ವಿರುದ್ಧ ಸಂಘವು ಕಾನೂನು ಸಮರ ಸಾರಿದೆ. ಹಾಗೆಯೇ, ಹಕ್ಕುಗಳನ್ನು ಖರೀದಿಸದೆಯೇ ಕನ್ನಡ ಸಿನಿಮಾಗಳನ್ನು ಪ್ರಸಾರ ಮಾಡುತ್ತಿರುವ ಕೆಲವು ಟಿ.ವಿ. ವಾಹಿನಿಗಳ ವಿರುದ್ಧವೂ ಸಂಘ ಆಕ್ರೋಶ ಹೊರಹಾಕಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಸಂಘದ ಸದಸ್ಯರು, ‘ಹಕ್ಕುಗಳನ್ನು ಖರೀದಿ ಮಾಡದೆಯೇ ಸಿನಿಮಾಗಳನ್ನು ಪ್ರಸಾರ ಮಾಡುವವರ ವಿರುದ್ಧ ದೂರು ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಒಟಿಟಿ ವೇದಿಕೆಗಳ ಮೂಲಕ ಸಿನಿಮಾಗಳನ್ನು ಪ್ರಸಾರ ಮಾಡುವುದು ಈಚಿನ ವರ್ಷಗಳಲ್ಲಿ ಆಗುತ್ತಿರುವ ಬೆಳವಣಿಗೆ. ಒಟಿಟಿ ಮೂಲಕ ಸಿನಿಮಾ ಪ್ರಸಾರ ಮಾಡಲು ಸಿನಿಮಾಗಳ ಡಿಜಿಟಲ್ ಹಕ್ಕುಗಳನ್ನು ಖರೀದಿಸಿರಬೇಕು. ಆದರೆ, ಕೆಲವು ಸಂಸ್ಥೆಗಳು ತಾವು ಹಿಂದೆಯೇ ಖರೀದಿಸಿದ್ದ ಉಪಗ್ರಹ ಹಕ್ಕುಗಳನ್ನು (ಟಿ.ವಿ. ವಾಹಿನಿಗಳ ಮೂಲಕ ಸಿನಿಮಾ ಪ್ರಸಾರ ಮಾಡುವ ಹಕ್ಕು) ಬಳಸಿಕೊಂಡು, ಒಟಿಟಿ ಮೂಲಕವೂ ಸಿನಿಮಾ ಪ್ರಸಾರ ಮಾಡುತ್ತಿವೆ. ಇದು ಕಾನೂನಿನ ಉಲ್ಲಂಘನೆ ಎನ್ನುವುದು ನಿರ್ಮಾಪಕರ ಸಂಘದ ನಿಲುವು.

‘ನಾವು ನಿರ್ಮಾಣ ಮಾಡಿದ ಹಲವು ಸಿನಿಮಾಗಳ ಹಾಡುಗಳನ್ನು ಕೆಲವು ಕಂಪನಿಗಳು ಮೊಬೈಲ್‌ ರಿಂಗ್‌ಟೋನ್‌ ಆಗಿ ಬಳಸುತ್ತಿವೆ. ಹಾಗೆ ಬಳಕೆ ಮಾಡಿಕೊಳ್ಳುವ ಹಕ್ಕುಗಳನ್ನು ನಾವು ನೀಡಿಯೇ ಇರಲಿಲ್ಲ. ಆದರೂ, ಈ ರೀತಿ ಮಾಡಿ ಅವು ಹಣ ಸಂಪಾದಿಸುತ್ತಿವೆ. ಇಂತಹ ಕೃತ್ಯಗಳ ವಿರುದ್ಧವೂ ಕಾನೂನು ಸಮರ ನಡೆಸಲಾಗುವುದು’ ಎಂದು ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹೇಳಿದರು.

ಸೂಕ್ತವಾದ ಹಕ್ಕುಗಳನ್ನು ಪಡೆದುಕೊಂಡು ಸಿನಿಮಾ ಪ್ರಸಾರ ಮಾಡುತ್ತಿರುವ ಟಿ.ವಿ. ವಾಹಿನಿಗಳು ಅಥವಾ ಒಟಿಟಿ ವೇದಿಕೆಗಳ ವಿಚಾರದಲ್ಲಿ ತಕರಾರು ಇಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ನಿರ್ಮಾಪಕರ ಅನುಮತಿಯೇ ಇಲ್ಲದೆ ಸಿನಿಮಾ ಪ್ರಸಾರ ಆಗಿದ್ದಿದೆ. ಈ ಪ್ರಕ್ರಿಯೆಯಲ್ಲಿ ಒಂದಿಷ್ಟು ಜನ ಮಧ್ಯವರ್ತಿಗಳು ಹಣ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸಂಘ ನೀಡಿದ ವಿವರಣೆ.

ಈ ವಿಚಾರವಾಗಿ ಸಂಘ ಆರಂಭಿಸಿರುವ ಕಾನೂನು ಹೋರಾಟದಲ್ಲಿ ವಕೀಲ ಸಿ.ಎಂ. ಧನಂಜಯ ಅವರು ಸಂಘದ ಪರ ವಾದ ಮಂಡಿಸಿದ್ದವರು. ‘ಸೂಕ್ತ ಹಕ್ಕುಗಳು ಇಲ್ಲದೆ ಸಿನಿಮಾ ಪ್ರಸಾರ ಮಾಡುವಂತೆ ಇಲ್ಲ ಎನ್ನುವ ಮಧ್ಯಂತರ ತಡೆಯಾಜ್ಞೆಯನ್ನು ಬೆಂಗಳೂರಿನ ನ್ಯಾಯಾಲಯ ನೀಡಿದೆ’ ಎಂದು ಧನಂಜಯ ತಿಳಿಸಿದರು.

‘ಕೆಲವರು ಕನ್ನಡ ಸಿನಿಮಾಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕವೂ ಹಂಚಿಕೊಳ್ಳುತ್ತಿದ್ದಾರೆ. ಇವರ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ ತಿಳಿಸಿದರು. ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್‌ಮನ್’ ಸಿನಿಮಾವನ್ನು ಕನಿಷ್ಠ ಎರಡು ಫೇಸ್‌ಬುಕ್‌ ಪುಟಗಳ ಮೂಲಕ ಪ್ರಸಾರ ಮಾಡಲಾಗಿತ್ತು. ಇದನ್ನು ಲಕ್ಷಾಂತರ ಜನ ವೀಕ್ಷಿಸಿದ್ದರು.

**

ಸಿನಿಮಾಗಳ ಹಾಡುಗಳನ್ನು ಕೆಲವು ಕಂಪನಿಗಳು ಮೊಬೈಲ್‌ ರಿಂಗ್‌ಟೋನ್‌ ಆಗಿ ಬಳಸುತ್ತಿವೆ. ಈ ಹಕ್ಕುಗಳನ್ನು ನಾವು ನೀಡಿಯೇ ಇಲ್ಲ. ಇದರ ವಿರುದ್ಧವೂ ಕಾನೂನು ಸಮರ ನಡೆಸುತ್ತೇವೆ.
–ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು