ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ. 21ರಂದು ಗಂಧದಗುಡಿಗಾಗಿ ‘ಪುನೀತಪರ್ವ’

Last Updated 19 ಅಕ್ಟೋಬರ್ 2022, 8:22 IST
ಅಕ್ಷರ ಗಾತ್ರ

ಬೆಂಗಳೂರು: ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಪಾಲ್ಗೊಂಡಿದ್ದ ಡಾಕ್ಯುಚಿತ್ರ ‘ಗಂಧದಗುಡಿ’ಯ ಬಿಡುಗಡೆ ಪೂರ್ವ ಕಾರ್ಯಕ್ರಮ (ಪ್ರಿ ರಿಲೀಸ್‌ ಈವೆಂಟ್‌) ಅಕ್ಟೋಬರ್‌ 21ರಂದು ಸಂಜೆ 6.30ಕ್ಕೆ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ.

‘ಅಪ್ಪು (ಪುನೀತ್‌) ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡ ಈ ಚಿತ್ರದಲ್ಲಿ ಕರ್ನಾಟಕದ ಪ್ರಕೃತಿ, ಪರಿಸರ, ಜೀವ ವೈವಿಧ್ಯ ಎಲ್ಲವೂ ಚಿತ್ರಣಗೊಂಡಿವೆ. ಅ. 29ಕ್ಕೆ ಪುನೀತ್‌ ನಿಧನರಾಗಿ ಒಂದು ವರ್ಷ ಆಗುತ್ತದೆ. ಇದೇ ಹೊತ್ತಿನಲ್ಲಿ ಅವರನ್ನು ಮತ್ತೆ ತೆರೆಯ ಮೇಲೆ ತರಲು ನಮ್ಮ ಕುಟುಂಬ ಹಾಗೂ ಚಿತ್ರರಂಗದ ಎಲ್ಲರೂ ಒಂದಾಗಿದ್ದೇವೆ’ ಎಂದು ಪುನೀತ್‌ ಸಹೋದರ, ನಟ ರಾಘವೇಂದ್ರ ರಾಜ್‌ಕುಮಾರ್‌ ಹೇಳಿದರು.

ಪಿಆರ್‌ಕೆ ಪ್ರೊಡಕ್ಷನ್ಸ್‌ ಅಡಿ ಪುನೀತ್‌ ಪತ್ನಿ ಅಶ್ವಿನಿ ಅವರ ನೇತೃತ್ವದಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಈ ಚಿತ್ರದಲ್ಲಿ ಪುನೀತ್‌ ಸಾಮಾನ್ಯನಾಗಿಯೇ ಕಾಣಿಸಿಕೊಂಡಿದ್ದಾರೆ. ಅವರ ಆಸೆಯಂತೆ ಈ ಚಿತ್ರವನ್ನು ನಾಡಿನ ಜನತೆ ವೀಕ್ಷಿಸಿ ಸಂಭ್ರಮಿಸುವಂತಾಗಬೇಕು ಎಂದು ಅವರು ಕೋರಿದರು.

ಏನೇನಿರಲಿದೆ?

‘ಮುಖ್ಯಮಂತ್ರಿ, ವಿವಿಧ ಸಚಿವರು, ಅಧಿಕಾರಿಗಳು, ಚಿತ್ರರಂಗದ ಪ್ರಮುಖ ಗಣ್ಯರು, ನಟರು ಭಾಗವಹಿಸಲಿದ್ದಾರೆ. ಯಶ್‌, ಸೂರ್ಯ, ರಾಣಾ ದಗ್ಗುಬಾಟಿ, ಕುನಾಲ್‌ ಗಾಂಜಾವಾಲಾ, ಬಾಲಯ್ಯ ಸೇರಿದಂತೆ ಹಲವಾರು ಮಂದಿ ಬರಲಿದ್ದಾರೆ. ಶಿವರಾಜ್‌ಕುಮಾರ್‌, ಪ್ರಭುದೇವ, ರಮ್ಯಾ ಅವರ ನೃತ್ಯ ಕಾರ್ಯಕ್ರಮವಿದೆ. ಒಟ್ಟಿನಲ್ಲಿ ಹಾಡು, ಮನೋರಂಜನೆಯ ಉತ್ಸವ ಇದಾಗಿರಲಿದೆ. ಅಪ್ಪು ಅವರಿಗೆ ಊಟ ಅತ್ಯಂತ ಪ್ರಿಯವಾಗಿತ್ತು. ಆದ್ದರಿಂದ ವಿವಿಧ ಹೋಟೆಲ್‌ನವರು ಆಹಾರ ಮೇಳವನ್ನೂ ಹಮ್ಮಿಕೊಂಡಿದ್ದಾರೆ’ ಎಂದರು.

ಚಿತ್ರದ ನಿರ್ದೇಶಕ ಅಮೋಘವರ್ಷ ಮಾತನಾಡಿ, ‘ಈ ಚಿತ್ರ ಈಗಾಗಲೇ ಅನೇಕ ವಿಶೇಷತೆಗಳನ್ನು ಒಳಗೊಂಡಿದೆ. ಇನ್ನೂ ಒಂದು ಕುತೂಹಲ ಉಳಿದಿದೆ. ಪುನೀತಪರ್ವ ಕಾರ್ಯಕ್ರಮದಲ್ಲಿ ಅದನ್ನು ಅನಾವರಣ ಮಾಡಲಾಗುವುದು’ ಎಂದರು.

ಕಾರ್ಯಕ್ರಮಕ್ಕಾಗಿ ಅರಮನೆ ಮೈದಾನದಲ್ಲಿ (ಕೃಷ್ಣ ವಿಹಾರ ಗೇಟ್‌ ನಂ 1) ಬೃಹತ್‌ ವೇದಿಕೆ ಹಾಕಲಾಗಿದೆ. ಧ್ವನಿ, ಬೆಳಕಿನ ಸಂಯೋಜನೆ, ಆಸನ, ಭದ್ರತಾ ವ್ಯವಸ್ಥೆ ಭರದಿಂದ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT