ಗುರುವಾರ , ಮಾರ್ಚ್ 4, 2021
19 °C

ಶಿವಣ್ಣಗೆ ಆ್ಯಕ್ಷನ್‌ ಕಟ್‌– ಅಪ್ಪು ಮನದಾಸೆ

ಸಂದರ್ಶನ: ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

ಅದು ಬೆಂಗಳೂರಿನ ಸ್ಯಾಂಕಿ ಕೆರೆಯ ಕೂಗಳತೆಯ ದೂರದಲ್ಲಿರುವ ಕಚೇರಿ. ಪುನೀತ್‌ ರಾಜ್‍ಕುಮಾರ್‌ ಅವರ ಆಗಮನದ ನಿರೀಕ್ಷೆಯಲ್ಲಿ ಕೂತವರನ್ನು ಥಟ್ಟನೆ ಸೆಳೆದಿದ್ದು ಅಣ್ಣಾವ್ರು ಮತ್ತು ಅಪ್ಪು ಮನದುಂಬಿ ನಗುತ್ತಿರುವ ಫೋಟೊ. ಮೈಸೂರಿನ ಪವರ್ ಗ್ರೂಪ್‌ನವರು ನೀಡಿದ್ದ ಫೋಟೊವದು. ಅದರ ಮೂಲೆಯಲ್ಲಿ ‘ನಗುವಿನ ಸಾಹುಕಾರರು’ ಎಂದು ಬರೆದಿತ್ತು. ಕಚೇರಿಯಲ್ಲಿ ಅಭಿಮಾನಿಗಳ ಪ್ರೀತಿ ಚೌಕಟ್ಟಿನೊಳಗೆ ಬಣ್ಣತಳೆದು ಬೆಚ್ಚಗೆ ಕುಳಿತಿತ್ತು.

ಪುನೀತ್‌ ಕಚೇರಿಗೆ ಬರುತ್ತಿರುವ ಸುಳಿವು ಅವರ ಸಹಾಯಕರ ಚಲನವಲನದಿಂದಲೇ ಅರ್ಥವಾಯಿತು. ಕಾರಿನಿಂದ ಇಳಿದು ಕಚೇರಿಯ ಒಳಹೊಕ್ಕ ಅಪ್ಪು ಗೋಡೆಯ ಮೇಲಿದ್ದ ರಾಜ್‍ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರ ಫೋಟೊಕ್ಕೆ ನಮಿಸಿದರು. ಬಳಿಕ ಸಂದರ್ಶಕರತ್ತ ತಿರುಗಿ ಮುಗುಳು ನಕ್ಕರು.

ಸಂದರ್ಶನಕ್ಕೆಂದು ಎದುರಿಗೆ ಕುಳಿತಾಗ ಅವರ ಮೊಗದಲ್ಲಿ ‘ನಟಸಾರ್ವಭೌಮ’ನ ನಗು. ಕ್ಷಣಕಾಲ ಲ್ಯಾಪ್‌ಟಾ‍ಪ್‌ ಪರದೆ ಹೊಕ್ಕಿದರು. ಬಳಿಕ ಮಾತು ಶುರುವಾದುದು ಅಪ್ಪಾಜಿ, ಅಮ್ಮನ ಮೂಲಕವೇ. ‘ಒಂದೊಳ್ಳೆ ತಂಡ ಇದ್ದರೆ ಉತ್ತಮ‌ ಚಿತ್ರ ಮೂಡುತ್ತದೆ. ಅದಕ್ಕೆ ನಟ ಸಾರ್ವಭೌಮ ಸಿನಿಮಾವೇ ನಿದರ್ಶನ’ ಎಂದರು.

ಪುನೀತ್‌ ಅವ‌ರ ಪ್ರಧಾನ ಆಸಕ್ತಿಗಳಲ್ಲಿ ಛಾಯಾಗ್ರಹಣವೂ ಮುಖ್ಯವಾದುದು. ‘ನಟ ಸಾರ್ವಭೌಮ’ ಚಿತ್ರದಲ್ಲಿ ಅವರದು ಫೋಟೊ ಜರ್ನಲಿಸ್ಟ್ ಪಾತ್ರ. ಸಿನಿಮಾ ಬಗ್ಗೆ ಉತ್ಸಾಹದಿಂದಲೇ ಮಾತನಾಡಿದ ಅವರು, ನಿರ್ದೇಶನದ ಹಾದಿಗೆ ಹೊರಳಿದರು. ‘ಮೊದಲಿನಿಂದಲೂ ಸಿನಿಮಾ‌ ನಿರ್ದೇಶಿಸಬೇಕೆಂಬ ಆಸೆ ಮನದಲ್ಲಿ ಗಟ್ಟಿಯಾಗಿ ಕೂತಿದೆ. ಇನ್ನೊಂದೆಡೆ ಕೆಲಸದ ಒತ್ತಡವೂ ಹೆಚ್ಚುತ್ತಿದೆ. ಶಿವಣ್ಣ(ಶಿವರಾಜ್‌ಕುಮಾರ್)ನ ಸಿನಿಮಾ ನಿರ್ದೇಶಿಸುವ ಆಸೆಯಿದೆ.‌ ಕಾಲ ಕೂಡಿಬಂದರೆ ಅಣ್ಣನ ಸಿನಿಮಾಕ್ಕೆ ಆ್ಯಕ್ಷನ್ ಕಟ್‌ ಹೇಳುತ್ತೇನೆ’ ಎಂದು ತನ್ನ ಮನದಾಸೆಯನ್ನು ಬಿಚ್ಚಿಟ್ಟರು. ಅವರೊಟ್ಟಿಗೆ ನಡೆಸಿದ ಮಾತುಕತೆಯ ಅಕ್ಷರರೂಪ ಇಲ್ಲಿದೆ.

* ‘ಪವರ್‌ ಸ್ಟಾರ್’ ಹಿಂದಿರುವ ಪವರ್‌ ಎಂತಹದ್ದು?

ನನಗೂ ನಿಜಕ್ಕೂ ಗೊತ್ತಿಲ್ಲ. ಮನೆಯಲ್ಲಿ ಮೊದಲು ಹಾಕಿಕೊಟ್ಟ ಅಡಿಪಾಯವೇ ಇದರ ಹಿಂದಿರುವ ಗುಟ್ಟು. ಅಪ್ಪಾಜಿ, ಅಮ್ಮ ನಿರ್ಮಿಸಿದ ಚಿತ್ರಗಳೇ ನನಗೆ ಪ್ರೇರಕ ಶಕ್ತಿ. ಅಪ್ಪಾಜಿಯ ಸಿನಿಮಾಗಳಿಗೆ ಕೌಟುಂಬಿಕ ಕಥನವೇ ಜೀವಾಳ. ಜನರ ಬದುಕಿನೊಂದಿಗೆ ಬೆಸೆಯುವ ಶಕ್ತಿ ಅವುಗಳಿಗಿದೆ. ನೋಡುಗರಿಗೆ ಪರಿಚಿತವಾದ ಸ್ಥಳಗಳಲ್ಲಿಯೇ ಶೂಟಿಂಗ್‌ ನಡೆಯುತ್ತಿತ್ತು. ಚಿತ್ರದ ಸನ್ನಿವೇಶಗಳು ಬದುಕಿಗೆ ಹೊಂದಾಣಿಕೆಯಾಗುತ್ತಿದ್ದವು. ಹಾಗಾಗಿಯೇ, ಚಿತ್ರಮಂದಿರಕ್ಕೆ ಕೌಟುಂಬಿಕ ಪ್ರೇಕ್ಷಕವರ್ಗವನ್ನು ಸೆಳೆಯುವ ಶಕ್ತಿ ಇತ್ತು. ಮನೆಯಲ್ಲಿ ಎಲ್ಲರೂ ಕುಳಿತು ನೋಡುವ ಸಿನಿಮಾ ಮಾಡಬೇಕು. ನನ್ನದು ಅದೇ ಹಾದಿಯ ಪಯಣ.

* ನಿಮ್ಮ ವೃತ್ತಿಬದುಕಿನಲ್ಲಿ ‘ನಟಸಾರ್ವಭೌಮ’ ಸಿನಿಮಾದ ಮಹತ್ವವೇನು?

ನಾನು ನಟಿಸಿರುವ ಎಲ್ಲ ಸಿನಿಮಾಗಳು ನನಗಿಷ್ಟ. ಇದರಲ್ಲಿ ಯಾವುದೇ ಭೇದಭಾವವಿಲ್ಲ. ಕಥೆಯೇ ನಟಸಾರ್ವಭೌಮ ಚಿತ್ರದ ಹೈಲೈಟ್‌. ನನ್ನ ಪ್ರಕಾರ ಸಿನಿಮಾದ ಹೀರೊ ನಾಯಕ ನಟನಲ್ಲ. ನಿಜವಾದ ಹೀರೊ ಅಂದ್ರೆ ಸ್ಕ್ರಿಪ್ಟ್‌. ನನ್ನ ಮೈಮೇಲೆ ಆತ್ಮ ಬರುತ್ತದೋ ಅಥವಾ ಇಲ್ಲವೋ ಎನ್ನುವುದನ್ನು ಸಿನಿಮಾ ನೋಡಿದರೆ ಗೊತ್ತಾಗುತ್ತದೆ. ಟೀಸರ್‌, ಟ್ರೇಲರ್‌ನಲ್ಲಿ ಸಿನಿಮಾ ಕುರಿತು ಹೇಳಲು ಸಣ್ಣ ತುಣುಕುಗಳಿರುತ್ತವೆ ಅಷ್ಟೇ. ಅದರ ಸಂಪೂರ್ಣ ಚಿತ್ರಣಕ್ಕೆ ಸಿನಿಮಾವನ್ನೇ ನೋಡಬೇಕು. ನೋಡುಗರಿಗೆ ಮನರಂಜನೆ ನೀಡುವುದಷ್ಟೇ ಮುಖ್ಯ ಗುರಿ. ಪ್ರೇಕ್ಷಕರಿಗೆ ಈ ಚಿತ್ರ ಆ ಖುಷಿ ನೀಡಲಿದೆ. ಕನ್ನಡ ಸಿನಿಮಾಗಳಲ್ಲಿ ಒಂದು ಭಾವನಾತ್ಮಕ ನಂಟು ಇರುತ್ತದೆ. ಇಲ್ಲಿಯ ನೇಟಿವಿಟಿಗೆ ತಕ್ಕಂತೆ ಚಿತ್ರ ಅದನ್ನು ಕಟ್ಟಿಕೊಡುತ್ತದೆ. ಕಾಮಿಡಿಯ ಜೊತೆಗೆ ಹಾರರ್‌ ಅಂಶವೂ ಮಿಳಿತವಾಗಿವೆ.

* ದೆವ್ವದ ಕಲ್ಪನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? 

ದೇವರನ್ನು ನಾನು ನಂಬುತ್ತೇನೆ. ದೆವ್ವ ಇದೆಯೋ, ಇಲ್ಲವೋ ಎಂದು ಹೇಳಲಾರೆ. ನಾನಂತೂ ಹೆದರುವುದಿಲ್ಲ. ಚಿಕ್ಕಂದಿನಿಂದಲೂ ನನಗೆ ಮೊಂಡ ಧೈರ್ಯ ಜಾಸ್ತಿ. ದೆವ್ವಗಳು ಇವೆ ಎಂಬ ಅನುಭವವೇ ನನಗೆ ಆಗಿಲ್ಲ. ಆದರೆ, ಬಾಲ್ಯದಲ್ಲಿ ಹಾರರ್‌, ಕ್ರೌರ್ಯ ಮೇಳೈಸಿದ ಸಿನಿಮಾ ನೋಡಿದಾಗ ಭಯವಾಗುತ್ತಿತ್ತು. ಸಿನಿಮಾಗಳಲ್ಲಿ ಕಿಡ್ನಾಪ್‌ ದೃಶ್ಯ ನೋಡಿದಾಗಲೂ ಭಯಪಡುತ್ತಿದ್ದೆ. ಚಿಕ್ಕವನಿದ್ದಾಗ ಮನೆಯಲ್ಲಿ ಸಾಕಷ್ಟು ಗಲಾಟೆ ಮಾಡುತ್ತಿದ್ದೆ. ಆಗ ಗಲಾಟೆ ಮಾಡಿದರೆ ಕಿಡ್ನಾಪ್‌ ಮಾಡುತ್ತಾರೆಂದು ಮನೆಯ ಸದಸ್ಯರು ಹೇಳಿದಾಗ ಹೆದರಿಕೆಯಾಗುತ್ತಿತ್ತು. 

* ಸಿನಿಮಾದ ಪಾತ್ರಕ್ಕೆ ಸಿದ್ಧತೆ ಹೇಗಿತ್ತು?

ಫೋಟೊ ಜರ್ನಲಿಸ್ಟ್‌ ಪಾತ್ರ ನನಗೆ ಹೊಸ ಅನುಭವ. ಪಾತ್ರಕ್ಕಾಗಿ ವಿಶೇಷ ಸಿದ್ಧತೆ ಮಾಡಿಕೊಂಡಿಲ್ಲ. ಛಾಯಾಚಿತ್ರ ತೆಗೆಯುವ ಹವ್ಯಾಸವೂ ನನಗಿದೆ. ಚಿಕ್ಕಂದಿನಿಂದಲೂ ಪತ್ರಕರ್ತರನ್ನು ನೋಡಿಕೊಂಡೇ ಬೆಳೆದಿದ್ದೇನೆ. ಇದು ನಟನೆಗೆ ಸಹಕಾರಿಯಾಯಿತು.   

* ನಿರ್ದೇಶಕ ‍ಪವನ್ ಒಡೆಯರ್‌ ಅವರೊಟ್ಟಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಪವನ್‌ ಜೊತೆಗೆ ಇದು ನನ್ನ ಎರಡನೇ ಸಿನಿಮಾ. ಕಥೆಯಲ್ಲಿ ಅವರ ಪಾಲುದಾರಿಕೆ, ಕೊಡುಗೆ ದೊಡ್ಡದು. ಅವರು ಎರಡು ವರ್ಷದಿಂದ ಈ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಥೆ ತೆರೆಯ ಮೇಲೆ ದೃಶ್ಯರೂಪ ತಳೆಯುತ್ತಿರುವ ಹಿಂದೆ ನಿರ್ದೇಶನ ಚೇತನ್, ಜನಾರ್ದನ್‌ ಅವರ‍ ಪಾತ್ರವೂ ದೊಡ್ಡದಿದೆ.  

* ಸ್ಟಾರ್‌ ನಟರು ವರ್ಷಕ್ಕೊಂದು ಸಿನಿಮಾ ಮಾಡಿದರೆ ಚಿತ್ರಮಂದಿರದ ಮಾಲೀಕರ ಪಾಡೇನು?

ಈ ನಿಟ್ಟಿನಲ್ಲಿ ನಮ್ಮೆಲ್ಲರ ತಪ್ಪು ಇರುವುದನ್ನು ಒಪ್ಪುತ್ತೇನೆ. ಎಲ್ಲ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕಿದೆ. ನಾನು ಈ ಹಾದಿಯಲ್ಲಿಯೇ ಇದ್ದೇನೆ. ಎಲ್ಲ ನಟರಿಗೂ ಹೆಚ್ಚು ಸಿನಿಮಾಗಳನ್ನು ಮಾಡುವ ಆಸೆ ಇರುತ್ತದೆ. ಇದರ ನಡುವೆ ಗುಣಮಟ್ಟಕ್ಕೂ ಒತ್ತು ನೀಡಬೇಕಿದೆ. ಈ ವರ್ಷ ‘ಯುವರತ್ನ’ ಸೇರಿದಂತೆ ಮೂರು ಸ್ಕ್ರಿ‍ಪ್ಟ್ ಒಪ್ಪಿಕೊಂಡಿರುವೆ. ಫೆ. 14ರಿಂದ ‘ಯುವರತ್ನ’ದ ಶೂಟಿಂಗ್‌ ಆರಂಭವಾಗಲಿದೆ. ಇದರ ನಡುವೆಯೇ ಮತ್ತೊಂದು ಸಿನಿಮಾ ಮಾಡುವ ಆಲೋಚನೆಯೂ ಇದೆ. 

* ಹೊಸಬರ ಸಿನಿಮಾಗಳ ಬಗ್ಗೆ ನಿಮ್ಮ ಅನಿಸಿಕೆ ಏನು?

ಹೊಸಬರು ಚಿತ್ರರಂಗ ಪ್ರವೇಶಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಗುಣಮಟ್ಟದ ಚಿತ್ರಗಳ ಮೂಲಕ ಪ್ರವೇಶಿಸುವುದು ಉತ್ತಮ. ಇದು ಚಿತ್ರರಂಗದ ಅಭಿವೃದ್ಧಿಗೂ ಪೂರಕ. ಒಳ್ಳೆಯ ಸ್ಕ್ರಿಪ್ಟ್‌ಗೆ ಒತ್ತು ನೀಡುವುದು ಒಳಿತು. ನಾವು ಮಾಡುವ ಕೆಲಸದಲ್ಲಿ ಬದ್ಧತೆ ಇರಬೇಕು. ಆಗ ಯಶಸ್ಸು ಸುಲಭವಾಗಿ ದಕ್ಕುತ್ತದೆ. ವರ್ಷಕ್ಕೆ ಸಿನಿಮಾಗಳ ಸಂಖ್ಯೆ ದ್ವಿಶತಕ ದಾಟುತ್ತಿದೆ. ಸಿನಿಮಾವೊಂದು ಯಶಸ್ಸು ಕಂಡಾಗ ಅದರ ಅನುಕರಣೆ ಅರಿವಿಲ್ಲದೆ ನಡೆಯುವುದು ಸಹಜ. ಎಲ್ಲ ಇಂಡಸ್ಟ್ರಿಯಲ್ಲೂ ಈ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇದು ಸರಿ ಅಥವಾ ತಪ್ಪು ಎಂದು ಹೇಳಲಾರೆ. ಆದರೆ, ತಂತ್ರಜ್ಞರಿಗೆ ಕೈತುಂಬ ಕೆಲಸ ಲಭಿಸುತ್ತದೆ. ಇದರೊಟ್ಟಿಗೆ ಗುಣಮಟ್ಟದ ಸಿನಿಮಾಗಳಿಗೂ ಒತ್ತು ನೀಡುವ ಜವಾಬ್ದಾರಿಯನ್ನೂ ಮರೆಯಬಾರದು.

* ಅಣ್ಣಾವ್ರ(ಡಾ.ರಾಜ್‌ಕುಮಾರ್) ಬಯೋಪಿಕ್‌ ಮಾಡುವ ಆಸೆ ಇದೆಯೇ?

ಅಪ್ಪಾಜಿಯ ಬಯೋಪಿಕ್‌ ಮಾಡುವ ಆಸೆ ಇದೆ. ಅದೊಂದು ದೊಡ್ಡ ಪ್ರಾಜೆಕ್ಟ್‌. ಅದಕ್ಕೊಂದು ಯೋಜನೆ ರೂಪುಗೊಳ್ಳಬೇಕು. ಸದ್ಯಕ್ಕೆ ಆ ಯೋಜನೆ ಜೀವ ತಳೆದಿಲ್ಲ. ಅಂತಹ ಅವಕಾಶ ಲಭಿಸಿದರೆ ಖಂಡಿತ ಹಿಂದೆ ಸರಿಯುವುದಿಲ್ಲ. 

* ‘ಪಿಆರ್‌ಕೆ’ (ಪಾರ್ವತಮ್ಮ, ರಾಜಕುಮಾರ್ ಪ್ರೊಡಕ್ಷನ್) ಪ್ರೊಡಕ್ಷನ್ ಬಗ್ಗೆ ಹೇಳಿ.

ಒಳ್ಳೆಯ ಪ್ರತಿಭೆಗಳಿಗೆ ಅವಕಾಶ ನೀಡುವುದೇ ಪ್ರೊಡಕ್ಷನ್‌ನ ಮೂಲ ಗುರಿ. ಉತ್ತಮ ಕಥಾವಸ್ತುಗಳಿಗೆ ಮೊದಲ ಆದ್ಯತೆ. ಪ್ರೊಡಕ್ಷನ್‌ ಅಡಿ ನಿರ್ಮಾಣಗೊಂಡಿರುವ ‘ಕವಲುದಾರಿ’ ಬಿಡುಗಡೆಗೆ ಸಿದ್ಧವಾಗಿದೆ. ‘ಮಾಯಾಬಜಾರ್’ ಚಿತ್ರದ ಎರಡು ದಿನದ ಶೂಟಿಂಗ್‌ ಅಷ್ಟೇ ಬಾಕಿಯಿದೆ. ನಮ್ಮ ಪ್ರೊಡಕ್ಷನ್‌ ಮೂಲಕವೇ ರಾಗಿಣಿ ಪ್ರಜ್ವಲ್‌ ನಾಯಕಿಯಾಗಿ ಚಂದನವನ ಪ್ರವೇಶಿಸುತ್ತಿದ್ದಾರೆ. ಧಾರಾವಾಹಿ, ವೆಬ್‌ ಸೀರಿಸ್‌ಗಳನ್ನೂ ಮಾಡುವ ಆಲೋಚನೆ ಇದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು